You are currently browsing the tag archive for the ‘amaruka’ tag.

ಭಾರತೀಯರಿಗೆ ಇತಿಹಾಸ ಪ್ರಜ್ಞೆ ಕಡಿಮೆ ಎಂಬ ಒಂದು ಆರೋಪ ಆಗೀಗ ಕೇಳಿ ಬರುತ್ತದೆ. ಆದರೆ ಮಹಾಭಾರತದಂತಹ ಕಾವ್ಯವನ್ನು ಇತಿಹಾಸ ಎಂದು ಕರೆದಿರುವಾಗ, ಪುರಾಣಗಳಲ್ಲಿ ರಾಜರ ವಂಶಾವಳಿಗಳನ್ನು ಹೇಳಿರುವ ಸಂದರ್ಭಗಳನ್ನು ನೋಡಿದಾಗ, ಈ ಮಾತು ಪೂರ್ತಿ ಸರಿಯಲ್ಲ ಎಂಬುದು ಮನದಟ್ಟಾಗುತ್ತದೆ.   ಇಲ್ಲಿ ಗಮನಿಸಬೇಕಾದ ಒಂದು ವಿಶೇಷವೆಂದರೆ  ಐತಿಹಾಸಿಕ ಸಂಗತಿಗಳು ಭಾರತೀಯ ಕಾವ್ಯಗಳಲ್ಲಿ ಬರೀ ಘಟನೆಗಳ ಸರಮಾಲೆಯಾಗಿರದೇ, ಕಥಾಸಂದರ್ಭಕ್ಕೆ ಹೊಂದಿಕೊಂಡು ಬರುವುದು. ಇದರ ಜೊತೆಗೆ, ಪೂರ್ತಿ ಕಾಲ್ಪನಿಕವಾದ ಕಥೆಯಾಗಿದ್ದರೂ ಅದರಲ್ಲಿ ಕವಿಯ ಅನುಭವಗಳು, ಆತನ ಅಥವಾ ಆಕೆಯ ಬರವಣಿಗೆಯಲ್ಲಿ ಕಂಡು ಬರುವುದೂ ತಿಳಿದ ವಿಷಯವೇ. ಕಾಳಿದಾಸನ ಮೇಘದೂತದಲ್ಲಿ ಬರುವ ಉಜ್ಜಯನೀ ನಗರದ ವರ್ಣನೆ, ಮೃಚ್ಛಕಟಿಕ ನಾಟಕದಲ್ಲಿ ಬರುವ ಉಜ್ಜಯನೀ ವರ್ಣನೆಗಳನ್ನು ನಾವು ಇಲ್ಲಿ ಉದಾಹರಣೆಗೆ ತೆಗೆದುಕೊಳ್ಳಬಹುದು. ಕಾಳಿದಾಸನ ರಘುವಂಶದಲ್ಲಿ ಬರುವ ದಿಗ್ವಿಜಯಗಳೂ ಕೂಡ ಆತನು ನೋಡಿದ್ದಿರಬಹುದಾದ (ಅಥವಾ ಅವನ ಸಮಯಕ್ಕೆ ಹತ್ತಿರವಾಗಿದ್ದ) ಸಮುದ್ರಗುಪ್ತನ ದಿಗ್ವಿಜಯದಿಂದ ಪ್ರೇರಿತವೆನ್ನಲಾಗಿದೆ. ಇನ್ನು ಕರ್ನಾಟಕದವನೇ ಆದ ಬಿಲ್ಹಣನ ವಿಕ್ರಮಾಂಕದೇವಚರಿತ, ಕಲ್ಹಣನ ರಾಜತರಂಗಿಣಿ ಮೊದಲಾದುವುಗಳೂ  ಒಂದು ಮಟ್ಟಿಗೆ ರಾಜರ ಇತಿಹಾಸದ ವಿವರಗಳನ್ನು ಕೊಡುವ ಕಾವ್ಯಗಳೇ.

ಇವೆಲ್ಲ ರಾಜಮಹಾರಾಜರ ಕಥೆಗಳಾದುವು. ಆದರೆ, ಜನಸಾಮಾನ್ಯರ ಜೀವನ ಚಿತ್ರಗಳನ್ನೂ ನಮಗೆ ತೋರುವಂತಹ ಕಾವ್ಯಗಳೂ ಇರುವುದು ಒಂದು ಸಮಾಧಾನ ತರುವ ಸಂಗತಿ. ಇಂತಹ ಕಾವ್ಯಗಳಲ್ಲಿ ಒಂದು ಅಮರುಕ ಕವಿಯ ಅಮರುಶತಕ ಅಥವಾ ಅಮರುಕಶತಕ. ಇದು ಸಾಮಾನ್ಯ ಜನಗಳ ಜೀವನದಲ್ಲಿರುವಂತಹ ಪ್ರೀತಿ ಪ್ರೇಮಗಳ ಹಲವು ಚಿತ್ರಗಳನ್ನು ಕೊಡುವಂತಹ ಒಂದು ಮುಕ್ತಕ ಕಾವ್ಯ.  ಮುಕ್ತಕ ಕಾವ್ಯವೆಂದರೆ ಇದರಲ್ಲಿ ಪ್ರತಿಯೊಂದು ಪದ್ಯವನ್ನೂ ತಂತಾನೇ ಸ್ವಯಂಪೂರ್ಣ. ಒಂದೇ ಪದ್ಯವನ್ನು ಓದಿದರೂ, ಅದು ಒಂದು ಪೂರ್ಣ ಅನುಭವವನ್ನು ಕೊಡುತ್ತದಾದ್ದರಿಂದ  ಈ ಹೆಸರು, ಮುತ್ತು ಒಂಟಿಯಾಗಿದ್ದರೂ, ಸರವಾಗಿ ಕೋದರೂ ಅದು ಸೊಗಸೇ ತಾನೇ? ಹಾಗಾಗಿ ಇಂತಹ ಕಾವ್ಯಗಳಿಗೆ ಈ ಹೆಸರು ಬಹಳ ಒಪ್ಪುತ್ತದೆ. ಅಮರುಕನ ಒಂದೊಂದು ಪದ್ಯವೂ ನೂರು ಕಾವ್ಯಗಳ ರಸಾನುಭವವನ್ನು ಕೊಡುತ್ತದೆಂದು ಅವನ ನಂತರದ ಲಾಕ್ಷಣಿಕರು ಹೇಳಿರುವುದುಂಟು. ಗಂಡು ಹೆಣ್ಣಿನ ನಡುವಿನ ನವಿರಾದ ಪ್ರೇಮ ವಿರಹ ದುಗುಡ ಮೊದಲಾದ ಎಲ್ಲ ಭಾವನೆಗಳನ್ನು ಚಿತ್ರಿಸುವುದರಲ್ಲಿ ಅಮರುಕನಿಗೆ ಅವನೇ ಸಾಟಿ.

ಅಮರುಕನ ಬಗ್ಗೆ ನಮಗೆ ತಿಳಿದಿರುವುದು ಕಡಿಮೆಯೇ. ಈತ ಎಂಟನೇ ಶತಮಾನದಲ್ಲಿದ್ದನೆಂಬುದು ಖಚಿತವಾಗಿ ಹೇಳಬಹುದಾದ ವಿಷಯ. ಈಗ ಕಾಶ್ಮೀರದ ರಾಜನೆಂದೂ,  ಮಾಹಿಷ್ಮತಿಯ ರಾಜನೆಂದೂ ದಂತ ಕಥೆಗಳಿವೆ. ಇವನು ಅಮರುಶತಕ ವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವ ಒಂದು ನೂರು ಪದ್ಯಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾನೆ. ಈ ಪದ್ಯಗಳ ವಿಷಯವೆಂದರೆ ಗಂಡು ಹೆಣ್ಣಿನ ನಡುವಿನ ಪ್ರೇಮ. ಅಮರುಕನ ಒಂದೊಂದು ಬಿಡಿಪದ್ಯವೇ ಒಂದೊಂದು ಕಾವ್ಯದಷ್ಟು  ರಸವತ್ತಾಗಿರುತ್ತದೆಂದು ನಂತರದ ಕವಿಗಳು, ವಿಮರ್ಶಕರು ಹೊಗಳಿದ್ದಾರೆ.  ಈಗ ದೊರಕಿರುವ ಬೇರೆ ಬೇರೆ ಅಮರುಕ ಶತಕದ ಟೀಕೆಗಳಲ್ಲಿ, ಮತ್ತೆ ಇತರ ಕಾವ್ಯಗಳಲ್ಲಿ ಅಮರುಕನ ಹೆಸರಲ್ಲಿ ಕೊಟ್ಟಿರುವ ಪದ್ಯಗಳನ್ನೂ ಸೇರಿಸಿದರೆ, ಶತಕವೆಂದರೆ ನೂರು ಪದ್ಯವಿರಬೇಕಾದರೂ ಸುಮಾರು ೧೬೦ ಪದ್ಯಗಳು ಅಮರುಕನದ್ದೆಂದು ಬಳಕೆಯಲ್ಲಿವೆ. ಅಮರುಕನ ಪದ್ಯಗಳು ಅವುಗಳ ಲಾಲಿತ್ಯಕ್ಕೆ ಹೆಸರುವಾಸಿ.
ಈತನ ಬಗ್ಗೆ ಇನ್ನೊಂದು ಕಥೆಯೂ ಇದೆ. ಮಂಡನಮಿಶ್ರರ ಹೆಂಡತಿ ಉಭಯಭಾರತಿಯ ಜೊತೆ  ಆದಿಶಂಕರರ ವಾದ ನಡೆಯುತ್ತಿದ್ದಾಗ ಆಕೆ ಸಾಂಸಾರಿಕ ಜೀವನದ ಬಗ್ಗೆ ಪ್ರಶ್ನೆ ಮಾಡಲು, ಬಾಲ ಸನ್ಯಾಸಿಯಾಗಿದ್ದ ಶಂಕರರು ತಮ್ಮ ಅನುಭವದಿಂದಲೇ ಆ ಪ್ರಶ್ನೆಗೆ ಉತ್ತರಿಸಬೇಕೆಂದು, ಅಕಾಲದಲ್ಲಿ ಸತ್ತು ಹೋಗಿದ್ದ ಅಮರುಕ ರಾಜನ ದೇಹದಲ್ಲಿ  ಪರಕಾಯ ಪ್ರವೇಶಮಾಡಿದ್ದರೆಂದೂ, ಆ ಸಮಯದಲ್ಲಿ ಅವರು ಬರೆದ ಪದ್ಯಗಳೇ ಈ ಅಮರುಶತಕವೆಂದೂ ಕೆಲವು ಶಂಕರ ವಿಜಯ ಕಾವ್ಯಗಳು ಹೇಳುತ್ತವೆ. ಇವುಗಳನ್ನು ಅತಿಶಯೋಕ್ತಿಯೆಂದೆನ್ನಬಹುದೇ ಹೊರತು, ಇವುಗಳಿಗೆ ಸತ್ಯವನ್ನು ಆರೋಪಿಸಬೇಕಾಗಿಲ್ಲ.

ಈ ಕಥೆ ಹಾಗಿರಲಿ. ಆದರೆ ಅಮರುಕ ಶತಕದಲ್ಲಿರುವ ಪದ್ಯಗಳಿಂದ ಸುಮಾರು ೮ನೇ ಶತಮಾನದಲ್ಲಿದ್ದ ಜನಜೀವನವನ್ನು ನಾವು ಸ್ವಲ್ಪ ಮಟ್ಟಿಗೆ ಅರಿತುಕೊಳ್ಳಬಹುದು ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಕಾಲದಲ್ಲಿ ಭಾರತದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವ್ಯಾಪಾರಿಗಳ ತಂಡಗಳು “ಸಾರ್ಥ”ಗಳಲ್ಲಿ ಹೋಗುತ್ತಿದ್ದು ದೇಶಾಂತರ ವ್ಯಾಪಾರವನ್ನು ಮಾಡುತ್ತಿದ್ದವು. ಈ ರೀತಿಯ ತಂಡಗಳು ಭಾರತದಿಂದ ಹೊರದೇಶಗಳಿಗೂ ಹೋಗುತ್ತಿದ್ದುದುಂಟು. ಇಂತಹ ಸಾರ್ಥದಲ್ಲಿ ವ್ಯಾಪಾರಕ್ಕೆ ಹೋದವರು ತಮ್ಮ ಊರಿಗೆ ಮರಳುವುದಕ್ಕೆ ಹಲವಾರು ತಿಂಗಳುಗಳಾಗುತ್ತಿದ್ದವು. ಇಂತಹ ಸಂದರ್ಭದಲ್ಲಿ ಪತಿ ಪತ್ನಿಯರು ಒಬ್ಬರಿಂದೊಬ್ಬರು ದೂರವಾಗಿ, ಆ ವಿರಹದಿಂದ ಬಳಲುವ ಹಲವು ಚಿತ್ರಗಳನ್ನು ಅಮರುಕ ಶತಕದಲ್ಲಿ ಚಿತ್ರಿಸಿರುವುದನ್ನು ಕಾಣಬಹುದು. ನಾನು ಮಾಡಿರುವ ಅಮರುಕ ಶತಕದ ಅಂತಹ ಕೆಲವು ಪದ್ಯಗಳ ಅನುವಾದ, ಟಿಪ್ಪಣಿಯೊಂದಿಗೆ ಇಲ್ಲಿದೆ:

ಮೊದಲು, ಸಾರ್ಥದಲ್ಲಿ ಊರಿಂದ ಹೊರಹೋಗಿರುವವನೊಬ್ಬನ ಹೆಂಡತಿಯ ಪಾಡು ನೋಡಿ.

ತೊಟ್ಟ ಬಳೆಗಳು ಕೈಯ ತೊರೆದಿವೆ ಕಣ್ಣ ನೀರದು ಸುರಿದಿದೆ
ಧೈರ್ಯ ಚಣದಲೆ ಮಾಯವಾದುದೆ ಮನಸು ದೂರಕೆ ಓಡಿದೆ
ಗಟ್ಟಿ ಮನದಲೆ ನಲ್ಲ ತೆರಳಿರೆ ಜೊತೆಯಲೇ ಇವರೆಲ್ಲರೂ
ಹೊರಟು ಹೋದರೆ ಜೀವ ಗುಂಪನ್ನುಳಿದು ಉಳಿದಿಹೆಯೇತಕೆ?

ಸಂಸ್ಕೃತ ಮೂಲ:

ಪ್ರಸ್ಥಾನಂ ವಲಯೈಃ ಕೃತಂ ಪ್ರಿಯಸಖೈರಸ್ರೈರಜಸ್ರಂ ಗತಂ
ಧೃತ್ಯಾ ನ ಕ್ಷಣಮಾಸಿತಂ ವ್ಯವಸಿತಂ ಚಿತ್ತೇನ ಗಂತುಂ ಪುರಃ
ಗಂತುಂ ನಿಶ್ಚಿತಚೇತಸಿ ಪ್ರಿಯತಮೇ ಸರ್ವೇ ಸಮಂ ಪ್ರಸ್ಥಿತಾ
ಗಂತವ್ಯೇ ಸತಿ ಜೀವಿತಪ್ರಿಯ ಸುಹೃತ್ಸಾರ್ಥಃ ಕಿಮುತ್ಯಜ್ಯತೇ ॥

ಈ ನಾಯಕಿ ತನ್ನ ಪ್ರಿಯತಮ ಇನ್ನೂ ಊರಿಗೆ ಬಂದಿಲ್ಲ ಎಂದು ಎಷ್ಟು ಸೊರಗಿದ್ದಾಳೆಂದರೆ ಕೈಯಲ್ಲಿ ತೊಟ್ಟ ಬಳೆಗಳು ಜಾರಿಹೋಗಿವೆ. ಕಣ್ಣೀರು ಒಂದೇ ಸಮ ಸುರಿದಿದೆ. ಧೈರ್ಯವೂ ಮನಸ್ಸಿಂದ ದೂರವಾಗಿದೆ. ಇದನ್ನು ನೋಡಿದ ಆ ನಾಯಕಿ, “ಹೇ ಜೀವ, ನಿನ್ನ ಗೆಳೆಯರಾದ ಧೈರ್ಯ, ಕಣ್ಣೀರು ಎಲ್ಲವೂ ನನ್ನ ಬಿಟ್ಟು ದೂರ ಹೋದಮೇಲೆ, ಅವುಗಳ ’ಸಾರ್ಥ’ವನ್ನು ನೀನೇಕೆ ಬಿಟ್ಟೀಯ? ನೀನೂ ಹೊರಟುಹೋಗು ಎಂದು ಹೇಳುತ್ತಿದ್ದಾಳೆ.

ಈಗ ಇನ್ನೊಬ್ಬಳ ಸ್ಥಿತಿ ನೋಡೋಣ. ಇನ್ನೇನು ಮಳೆಗಾಲ ಬರುತ್ತಿದೆ. ವ್ಯಾಪಾರಕ್ಕೆಂದು ಹೋದ ಗಂಡ ಇಂದೋ ನಾಳೆಯೋ ಬರುತ್ತಾನೆಂಬ ನಿರೀಕ್ಷೆ ಇವಳದು. ಹಾಗಾಗಿ ಇವಳಿಗೆ ಮನೆಯೊಳಗೆ ನಿಲ್ಲಲೂ ಮನಸ್ಸಿಲ್ಲ. ಹೊರಗೇ ದಾರಿಯಲ್ಲಿ ನಿಂತು ಕಾಯುವಾಗ ರಾತ್ರಿಯಾದರೂ ಒಳಬರಲು ಮನಸ್ಸಿಲ್ಲ:

ಕಣ್ಣು ತೋರುವವರೆಗು ನಲ್ಲನಾ ಹಾದಿಯನೆ ಕಾಯ್ತು ಬೇಸತ್ತಾಗಲೆ
ದಾರಿಗರ ಸಪ್ಪಳವು ನಿಲ್ಲುತಿರೆ ಹೊರಗೆಲ್ಲ ಹಬ್ಬುತಿರೆ ಕಾರ್ಗತ್ತಲೆ
ಹೆಣ್ಣಿವಳು ಮನೆಯೆಡೆಗೆ ತಿರುಗುತ್ತ ಹಾಕಿರಲು ಹೆಜ್ಜೆಯೊಂದನ್ನಾಕಡೆ
ಕೂಡಲೆಯೆ ಬಂದನೇನೋಯೆನುತ ಕತ್ತನ್ನು ಮೆಲ್ಲ ಹೊರಳಿಸಿ ನೋಳ್ಪಳೆ

ಸಂಸ್ಕೃತ ಮೂಲ:

ಆದೃಷ್ಟಿ ಪ್ರಸರಾತ್ ಪ್ರಿಯಸ್ಯ ಪದವೀಂ ಉದ್ವೀಕ್ಷ್ಯ ನಿರ್ವಿಣ್ಣಯಾ
ವಿಚ್ಛಿನ್ನೇಶು ಪಥಿಶ್ವಃ ಪರಿಣತೌ ಧ್ವಾಂತೇ ಸಮುತ್ಸರ್ಪತಿ |
ದತ್ತೈಕಂ ಸಶುಚಾ ಗೃಹಂ ಪ್ರತಿ ಪದಮ್ ಪಾಂಥಃ ಸ್ತ್ರಿಯಾಸ್ಮಿನ್ ಕ್ಷಣೇ
ಮಾ ಭೂದಾಗತ ಇತ್ಯಾಮಂದವಲಿತಗ್ರೀವಂ ಪುನರ್ವೀಕ್ಷಿತಂ ||

ವ್ಯಾಪಾರಕ್ಕೆಂದು ಪ್ರಯಾಣಕ ಹೋದ ಪತಿ ಇಂದು ಬಂದೇ ಬಿಡಬಹುದೆಂದು ಅವಳು ಹಾದಿಯಲ್ಲೇ ನಿಂತು ಕಾಯುತ್ತಿದ್ದಾಳೆ. ಕತ್ತಲಾಗುತ್ತಿದೆ. ರಸ್ತೆಯಲ್ಲಿ ಓಡಾಡುವರೂ ಕಡಿಮೆಯಾಗುತ್ತಿದ್ದಾರೆ. ಇವಳು ನಿರಾಸೆಯಿಂದ ಮನೆಯ ಕಡೆಗೆ ಒಂದು ಹೆಜ್ಜೆ ಹಾಕಿದ ಕೂಡಲೆ, ಮತ್ತೆ ಅದೇ ಕ್ಷಣದಲ್ಲೇ ಆತ ಬಂದೇ ಬಿಟ್ಟ ನೇನೋ ಎಂದು ಮತ್ತೆ ತಿರುಗಿ ನೋಡಿದಳಂತೆ!

ಈ ಮೊದಲಿನ ಇಬ್ಬರೂ ನಾಯಕಿಯರು, ಪ್ರೇಮಿ ದೂರ ಹೋದ ಮೇಲೆ ಸೊರಗಿದವರು. ಕೊರಗಿದವರು. ಆದರೆ ಈಗ ಇನ್ನೊಬ್ಬಳ ಕಥೆ ನೋಡಿ. ಇವಳು ಅದೆಷ್ಟು ಕೋಮಲೆಯೆಂದರೆ, ಗಂಡ ಊರಿಗೆ ಹೊರಟನೆಂದರೆ ತಾನು ಮುಂದೆ ಬದುಕುವುದೇ ಅವಳಿಗೆ ಅನುಮಾನ

ಪಯಣ ಹೋದರೆ ಮತ್ತೆ ಬಾರದೆ ಇರುವುದುಂಟೇ ಸುಂದರಿ?
ಎನ್ನ ಸಲುವಿಗೆ ಚಿಂತೆಯೇತಕೆ? ಏತಕೀಪರಿ ಸೊರಗಿಹೆ?
ಒದ್ದೆಗಣ್ಣಲಿ ನಾನು ಕೇಳಲು ನಾಚಿ ತುಂಬಿದ ಕಣ್ಗಳ
ನೀರ ತಡೆದಳು! ನೋಡಿ ನಕ್ಕಳು! ತೋರಿ ಸಾವಿಗೆ ಕಾತರ!

ಸಂಸ್ಕೃತ ಮೂಲ:

ಯಾತಾಃ ಕಿಂ ನ ಮಿಲಂತಿ ಸುಂದರಿ ಪುನಶ್ಚಿಂತಾ ತ್ವಯೇ ಮತ್ಕೃತೇ
ನೋ ಕಾರ್ಯಾ ನಿತರಾಂ ಕೃಶಾಸಿ ಕಥಯತ್ಯೇವಂ ಸಬಾಷ್ಪೇ ಮಯಿ
ಲಜ್ಜಾಮಾಂಥರತಾರಕೇಣ ನಿಪತತ್ಪೀತಾಶ್ರುಣಾಂ ಚಕ್ಷುಷಾ
ದೃಷ್ಟ್ಚಾ ಮಾಂ ಹಸಿತೇನ ಭಾವಿಮರಣೋತ್ಸಾಹಸ್ತಯಾ ಸೂಚಿತಃ ||

ಇವಳು ತನ್ನ ಮಾತನ್ನು ಬಾಯಿ ಬಿಟ್ಟು ಹೇಳಲಾರಳು. ಕಣ್ಣೀರನ್ನೂ ತೋರಿಸದೇ ಅದನ್ನು ಸುಳ್ಳು ನಗೆಯಲ್ಲಿ ಮುಚ್ಚಲು ಇವಳಿಂದಾದರೂ, ಅವಳ ಕಣ್ಣುಗಳಲ್ಲಿ ತಾನು ಬದುಕಲಾರೆನೆಂಬ ಭಾವವನ್ನು ಮಾತ್ರ ತಡೆಯದೇ ಹೋದಳಂತೆ.

ಈಗ ಇನ್ನೊಬ್ಬಳ ಕಥೆ ನೋಡೋಣ. ಇವಳ ಗಂಡ ಊರಿಗೆ ಹೊರಟಿದ್ದಾನೆ. ಅವನು ವ್ಯಾಪಾರಕ್ಕೆ ಹೊರಟಿರುವ ಊರೋ ನೂರು ದಿನದ ಪ್ರಯಾಣ. ಆದರೆ, ಈ ಹೆಣ್ಣು ಎಷ್ಟು ಮುಗ್ಧಳೆಂದರೆ, ಅವನನ್ನು ನೀನು ಬರುವುದು ಯಾವಾಗ?  ಮಧ್ಯಾಹ್ನವಾಗುವುದೇ? ಸಂಜೆಯಾಗುವುದೇ? ಎಂದು ಕೇಳುತ್ತಿರುವುದು ಎಂತಹ ವಿಪರ್ಯಾಸ ?

ಗಂಟೆಹೊಡೆಯುವ ಮುನ್ನವೋ ನಡುಹಗಲಲೋ ತುಸುಬಳಿಕವೋ
ಅಲ್ಲದಿರಲಿಳಿಹೊತ್ತಿಗಲ್ಲವೆ ಇನಿಯ ನೀ ಬರುವುದೆನುತ
ನೂರು ದಿನಗಳ ದೂರ ಪಯಣಕೆ ಹೊರಟುನಿಂತಿಹ ನಲ್ಲನ
ಗಮನ ತಪ್ಪಿಸುತಿಹಳು ಹುಡುಗಿಯು ಬಿಕ್ಕುತಲಿ ಕಂಬನಿಯಲಿ

ಸಂಸ್ಕೃತ ಮೂಲ:

ಪ್ರಹರವಿರತೌ ಮಧ್ಯೇ ವಾಹನಸ್ತತೋsಪಿ ಪರೇsತಥಾ
ಕಿಮುತ ಸಕಲೇ ಜಾತೇ ವಾಹ್ನಿಪ್ರಿಯ ತ್ವಮಿಷೈಹ್ಯಸಿ
ಇತಿ ದಿನಶತಪ್ರಾಪ್ಯಂ ದೇಶಂ ಪ್ರಿಯಸ್ಯ ಯಿಯಾಸತೋ
ಹರತಿ ಗಮನಂ ಬಾಲಾಲಾಪೈಃ ಸಬಾಷ್ಪಗಲಜ್ಜಲೈಃ

ಈ ಮೇಲಿನ ನಾಲ್ಕೂ ಪದ್ಯಗಳಲ್ಲಿ ಬರೀ ಹೆಣ್ಣಿನ ಬೇಗೆಯಷ್ಟೇ ಚಿತ್ರಣವಾಗಿದೆ. ಹಾಗಿದ್ದರೆ, ವಿರಹವೆನ್ನುವುದು ಕೇವಲ ಹೆಣ್ಣಿಗೆ ಮಾತ್ರವೇ ಉಂಟೇ? ಪ್ರೀತಿ ಹೆಣ್ಣಿಗೂ ಗಂಡಿಗೂ ಇರುವಾಗ ವಿರಹದ ಚಿತ್ರವನ್ನು ಗಂಡಿನ ಬಗ್ಗೆ ಯಾಕೆ ಕೊಡಬಾರದು ಎಂದಿರಾ?  ಅಮರುಕ  ಈ ಚಿತ್ರಣವನ್ನೂ ಕೊಟ್ಟಿದ್ದಾನೆ!

ಈ ಪದ್ಯದ ನಾಯಕ ಒಬ್ಬ ವ್ಯಾಪಾರಿ.  ನೂರಾರು ಹೊಳೆ ಕಾಡುಗಳನ್ನು ದಾಟಿ ದೂರದೇಶದಲ್ಲಿರುವ ಹಾದಿಗ. ಆದರೂ, ತನ್ನ ನಲ್ಲೆಯ ನೆನಪಲ್ಲೇ , ತನ್ನ ಊರಿನ ಕಡೆಯೇ ತಿರುಗಿ ತಿರುಗಿ ನೋಡುತ್ತಿದ್ದಾನಂತೆ.

detail-from-one-of-the-mu-011

(ಚಿತ್ರ: ಅಜಂತಾದ ಹತ್ತನೇ ಗುಹೆಯೊಂದರ ಭಿತ್ತಿ ಚಿತ್ರ. ಛಾಯಾಗ್ರಾಹಕ: ಪ್ರಸಾದ್ ಪವಾರ್)

ದೂರದೇಶದಿ ಕಾಡುಮಲೆಹೊಳೆನೂರು ದಾಟಿಹ ದಾರಿಗ
ತನ್ನ ದಿಟ್ಟಿಗೆ ನಲ್ಲೆ ನಿಲುಕಳು ಎಂಬುದನು ತಾನರಿತರೂ
ಕೊರಳ ನಿಲುಕಿಸಿ ಮೆಟ್ಟುಗಾಲಲಿ ನೀರು ತುಂಬಿದ ಕಣ್ಣಲಿ
ಏನನೋ ನೆನೆಯುತ್ತಲಾಕಡೆಯಲ್ಲೆ ನೋಡುತಲಿರುವನು !

ಸಂಸ್ಕೃತ ಮೂಲ:

ದೇಶೈರಂತರಿತಾ ಶತೈಶ್ಚ ಸರಿತಾಮುರ್ವೀಭೃತಾಂ ಕಾನನೈಃ
ಯತ್ನೇನಾಪಿ ನ ಯಾತಿ ಲೋಚನಪಥಂ ಕಾಂತೇತಿ ಜಾನನ್ನಪಿ |
ಉದ್ಗ್ರೀವಶ್ಚರಣಾರ್ಧರುದ್ಧವಸುಧಃ ಕೃತ್ಚಾಶ್ರುಪೂರ್ಣಂ ದೃಶಂ
ತಾಮಾಶಾಂ ಪಥಿಕಸ್ತಥಾಪಿ ಕಿಮಪಿಧ್ಯಾಯಶ್ಚಿರಂ ವೀಕ್ಷತೇ ||

ಹೀಗೆ ಅಮರುಕನು ಪ್ರತಿಪಾದಿಸಿರುವ ಪ್ರೇಮಿಗಳ ನಡುವೆ ಅಭಿನ್ನತೆಯೂ, ಆದಿಶಂಕರರು ಪ್ರತಿಪಾದಿಸಿದ ಜೀವಾತ್ಮ ಪರಮಾತ್ಮರ ನಡುವೆ ಅದ್ವೈತವೂ,  ಒಂದೇ ರೀತಿಯೆನಿಸಿ ಶಂಕರಾಚಾರ್ಯರೇ ಅಮರುಕನ ದೇಹದಲ್ಲಿ ಪರಕಾಯ ಪ್ರವೇಶ ಮಾಡಿದನೆಂಬ ಕಥೆಗಳು ಹುಟ್ಟಿಕೊಂಡಿರಬಹುದೇನೋ ಎನ್ನಿಸದಿರದು.

-ನೀಲಾಂಜನ

(೨೦೧೫ ರ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ವಾರ್ಷಿಕ ಸಾಹಿತ್ಯ ಸಂಚಿಕೆ – ಸ್ವರ್ಣಸೇತು ವಿನಲ್ಲಿ ಪ್ರಕಟವಾದ ಬರಹ )

For the last few years, I have been translating individual verses from Amaru Shataka randomly.  Amaruka Shataka is a Samskrta work from the 8th century.

Although there are some stories about Amaruka,  we know pretty little historically about him except for that he must have lived before ~800 AD.  However there is no doubt that his verses are considered top-class by the best exponents of Rasa theory.

For those of you interested, her is a recording of a talk I gave recently, about Amaruka’s poetry. Also, I have tried to classify the heroes and the heroines of these verses  based on the categorization seen in Bharata’s nAtya ShAstra.

I have used the original verses, and my own Kannada translations in this talk – The talk is in a mish-mash of English and Kannada, and so even if you do not understand Kannada, you might find something interesting in the talk:

 

-neelanjana

Ragini-Ragamala-HANDMADE-Painting-Rajasthani-India-Ethnic-Folk-Paper-Fine-Art-190775005906ಅಮರುಕ ಎಂಟನೇ ಶತಮಾನದಲ್ಲಿದ್ದ ಒಬ್ಬ ಸಂಸ್ಕೃತ ಕವಿ. ಈಗ ಕಾಶ್ಮೀರದ ರಾಜನೆಂದೂ,  ಮಾಹಿಷ್ಮತಿಯ ರಾಜನೆಂದೂ ಪ್ರತೀತಿಯಿದೆ. ಇವನು ಅಮರುಶತಕ ವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವ ಒಂದು ನೂರು ಪದ್ಯಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾನೆ. ಈ ಪದ್ಯಗಳ ವಿಷಯವೆಂದರೆ ಗಂಡು ಹೆಣ್ಣಿನ ನಡುವಿನ ಪ್ರೇಮ. ಅಮರುಕನ ಒಂದೊಂದು ಬಿಡಿಪದ್ಯವೇ ಒಂದೊಂದು ಕಾವ್ಯದಷ್ಟು  ರಸವತ್ತಾಗಿರುತ್ತದೆಂದು ನಂತರದ ಕವಿಗಳು, ವಿಮರ್ಶಕರು ಹೊಗಳಿದ್ದಾರೆ. ಗಂಡು ಹೆಣ್ಣಿನ ನಡುವಿನ ನವಿರಾದ ಪ್ರೇಮ ವಿರಹ ದುಗುಡ ಮೊದಲಾದ ಎಲ್ಲ ಭಾವನೆಗಳನ್ನು ಚಿತ್ರಿಸುವುದರಲ್ಲಿ ಅಮರುಕನಿಗೆ ಅವನೇ ಸಾಟಿ. ಇವನ ಕಾವ್ಯದ ಹಲವು ಹಸ್ತಪ್ರತಿಗಳು ದೊರತಿದ್ದು ಮುಖ್ಯವಾಗಿ ಮೂರು ಪಾಠಾಂತರಗಳಿವೆ – ಇವುಗಳಲ್ಲಿ ಇರುವ ಪದ್ಯಗಳೆಲ್ಲ ಎಲ್ಲವೂ ಒಂದೇ ಆಗಿಲ್ಲ. ಅಲ್ಲದೆ, ನಂತರದ ಕೆಲವು ಕವಿಗಳೂ ಅಮರುಕನದ್ದೆಂದು ಕೆಲವು ಪದ್ಯಗಳನ್ನು ತಮ್ಮ ಕಾವ್ಯಗಳಲ್ಲಿ ಉದಾಹರಿಸಿಯೂ ಇದ್ದಾರೆ. ಇವೆಲ್ಲಾ ಸೇರಿಸಿ, ಅಮರುಕನದ್ದೆಂದು ಹೇಳಲಾಗುವ ಸುಮಾರು ೧೬೦ ಪದ್ಯಗಳಿವೆ.

ಇವನ ಬಗ್ಗೆ ಇನ್ನೊಂದು ಕಥೆಯೂ ಇದೆ. ಮಂಡನಮಿಶ್ರರ ಹೆಂಡತಿ ಉಭಯಭಾರತಿಯ ಜೊತೆ  ಆದಿಶಂಕರರ ವಾದ ನಡೆಯುತ್ತಿದ್ದಾಗ ಆಕೆ ಸಾಂಸಾರಿಕ ಜೀವನದ ಬಗ್ಗೆ ಪ್ರಶ್ನೆ ಮಾಡಲು, ಬಾಲ ಸನ್ಯಾಸಿಯಾಗಿದ್ದ ಶಂಕರರು ತಮ್ಮ ಅನುಭವದಿಂದಲೇ ಆ ಪ್ರಶ್ನೆಗೆ ಉತ್ತರಿಸಲು ಅಕಾಲದಲ್ಲಿ ಸತ್ತು ಹೋಗಿದ್ದ ಅಮರುಕನ ದೇಹದಲ್ಲಿ  ಪರಕಾಯ ಪ್ರವೇಶಮಾಡಿದ್ದರೆಂದೂ, ಆ ಸಮಯದಲ್ಲಿ ಅವರು ಬರೆದ ಪದ್ಯಗಳೇ ಈ ಅಮರುಶತಕವೆಂದೂ ಕೆಲವು ಶಂಕರ ವಿಜಯ ಕಾವ್ಯಗಳು ಹೇಳುತ್ತವೆ. ಇವುಗಳ ಸತ್ಯಾಸತ್ಯತೆ ಹೇಗೇ ಇರಲಿ  – ಅಮರು ಬರೆದ ಪದ್ಯಗಳು ಸಾವಿರದಿನ್ನೂರು ವರ್ಷಗಳ ನಂತರವೂ ರಸಿಕರ ಮನ ಸೆಳೆಯುತ್ತಿವೆ. ಅಂದ ಹಾಗೆ , ಎಸ್ ಎಲ್ ಭೈರಪ್ಪ ಅವರ ’ಸಾರ್ಥ’ ಕಾದಂಬರಿಯನ್ನು ಓದಿದ್ದವರಿಗೆ ಅದರಲ್ಲಿ ಬರುವ ಅಮರುಕನ ಪಾತ್ರ ನೆನಪಾದರೂ ಆಗಬಹುದೇನೋ.

ಅಮರುಕನ ಪದ್ಯಗಳು ಅವುಗಳ ಲಾಲಿತ್ಯಕ್ಕೆ ಹೆಸರುವಾಸಿ. ಹಾಗಾಗಿ ಅವುಗಳ ಅನುವಾದ ಸ್ವಲ್ಪ ಕಷ್ಟವೇ ಆದರೂ, ಮನಸ್ಸಿಗೆ ಬಹಳ ತೃಪ್ತಿ ಕೊಡುವಂತಹವು. ನಾನು ಮಾಡಿರುವ ಅನುವಾದಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ.

****
ಯಾವಾಗಲೋ ಒಮ್ಮೆ ನಾಯಕಿ ತನ್ನ ನಲ್ಲನಲ್ಲಿ ಹುಸಿಮುನಿಸು ತೋರಿದಳು. ಆದರೆ ಅದು ಸುಳ್ಳು ಎಂದರಿಯದ ಅವನು ದೂರವಾಗಿಬಿಟ್ಟ. ಈಗ ಇವಳಿಗೆ ಉಳಿದಿದ್ದೇನು? ಬರೀ ಒಂಟಿತನ. ತನ್ನ ಕೊರಗನ್ನು ಹೇಳಿಕೊಳ್ಳುವುದಕ್ಕೆ ಒಬ್ಬ ಗೆಳತಿಯಿದ್ದಾಳಲ್ಲ, ಸದ್ಯ! ಇಲ್ಲದಿದ್ದರೆ ಇವಳ ಪಾಡು ಏನಾಗುತ್ತಿತ್ತೋ!  (ಅಮರುಶತಕ: ೧೫)

ಯಾವುದೋ ಹುಸಿಮುನಿಸಿನಲಿ ನಾ ಸುಮ್ಮನೇ ಹೋಗೆನ್ನಲು
ಕಲ್ಲು ಮನದಾ ನಲ್ಲ ತಟ್ಟನೆ ಸಜ್ಜೆ ಯಿಂದಲಿ ಎದ್ದು ತಾ
ಭರದಿ ಪ್ರೇಮವ ಗೆಳತಿ ಹೇವದಿ ಮುರಿಯುತಲಿ ದೂರಾದರೂ
ನಾಚದೀ ಮನವವನೆಡೆಗೆ ಹೋಗುವುದಕೇನನು ಮಾಡಲೇ?

ನಲ್ಲನಿಗೆ ತನ್ನಲ್ಲಿ ಮೊದಲಿದ್ದ ಪ್ರೇಮ ದೂರವಾಗಿದೆ ಎಂಬ ಅನಿಸಿಕೆ ಇವಳಲ್ಲಿ. ಆದರೆ ಅವನನ್ನೇ ನೆನೆವುದನ್ನೂ ಬಿಡಲಾರಳು. ತನ್ನ ಅಳಲನ್ನು ತನ್ನ ಗೆಳತಿಗಲ್ಲದೇ ಇನ್ನಾರಿಗೆ ತಾನೇ ಹೇಳುವಳು? (ಅಮರುಶತಕ – ೩೮)

ಒಲವಿನಾ ಕಟ್ಟುಗಳನೆಲ್ಲ  ಕಳಚಿ
ಬಲುದೂರವಾಗಿಸಿದ ಪ್ರೀತಿಯಾದರವ
ನಲುಮೆ ಭಾವಗಳನ್ನು ಹಿಂದೆ ಸರಿಸಿ
ಸಲೆ ಹೊಸಬನಂತವನು ದೂರ ಹೋದ!

ಕಣ್ಣಾರೆ ಕಂಡರೂ ಈ ಕಡೆಗಣಿಕೆಯನ್ನು
ಮುನ್ನದಾದಿನಗಳನೆ ಮತ್ತೆ ನೆನೆನೆನೆದೂ
ನುಚ್ಚುನೂರಾಗದೆಯೆ ಉಳಿಯಿತೇಕೆ
ಎನ್ನೆದೆಯು ಎಂಬುದನು ನಾನರಿಯೆ ಗೆಳತಿ!

ಆ ಗೆಳತಿಯೋ ಸ್ವಲ್ಪ ಲೋಕದ ರೀತಿ ನೀತಿಗಳನ್ನು ಅರಿತವಳು ಅಂತ ಕಾಣುತ್ತದೆ. ಅವಳು ಕೊಡುವ ಸಲಹೆಯೇನೋ ತಕ್ಕದ್ದೇ. ಆದರೆ, ಪ್ರೇಮದಲ್ಲಿ ಬಿದ್ದವಳಿಗೆ ಆ ಸಲಹೆ ಒಪ್ಪುತ್ತದೆಯೇ? ( ಅಮರುಶತಕ: ೭೦)

ಬಾಳನೆಲ್ಲವು ನೀನು ಮುಗುದೆತನದಲ್ಲಿಯೇ
ಹಾಳು ಮಾಡಲು ಹೊರಟಿರುವೆಯೇಕೆ ಹೆಣ್ಣೆ?
ಬಿಟ್ಟು ನೇರದ ದಾರಿ ತುಸುಸೆಡವು ತೋರಿಸುತ
ದಿಟ್ಟೆಯಾಗುವುದಿಂದು ನಿನಗೆ ಬಹು ಒಳಿತು!

ಮುದದಿ ಗೆಳತಿಯು ಹೀಗೆ ಕಿವಿಮಾತು ಹೇಳಿರಲು
ಬೆದರುಮೊಗದಲ್ಲೀಕೆ  ಮರುನುಡಿಯುತಿಹಳು
ಮೆಲ್ಲ ನುಡಿ ಸಖಿ ನೀನು! ಕೇಳಿಬಿಟ್ಟಾನವನು
ನಲ್ಲ ನೆಲೆನಿಂತಿರುವನೆನ್ನ ಎದೆಯಲ್ಲೆ!

ಕೋಪ ಕಳೆದು ಮತ್ತೆ ಬರುವನೇನೋ ಪ್ರಿಯಕರ ಎಂದು ಇವಳು ಕಾದದ್ದೇ ಬಂತು. ಅವನು ಬರಲೇ ಇಲ್ಲ. ಕೊನೆಗೆ ಕೋಪ ಮೀರಿ ಗೆಳತಿಗೆ ಈತನನ್ನು ಮರೆಯುತ್ತೇನೆಂದು ಅವಳು ಹೇಳಿದ್ದು ನಿಜವೇ? (ಅಮರುಶತಕ: ೭೩)

ಗೆಳತಿ! ನನ್ನೆದೆ
ಒಡೆದರೂ ಸರಿ ;
ಎನ್ನೊಡಲ ಆ ಮದನ
ಸೊರಗಿಸಿದರೂ ಸರಿ ;
ಒಂದೆಡೆ ನಿಲ್ಲದವನಲ್ಲಿ
ನಾನದೆಂತು ಒಲವನಿಡಲೇ?

ಹೀಗೆ ಸಿಟ್ಟಿನಲಿ
ಸೆಡವಿನಲಿ ನುಡಿಯುತ್ತಲೇ
ನಲ್ಲನ ದಾರಿಯ
ಕಳವಳದಲಿ
ಬಿಡದೇ ನೋಡಿದಳು
ಚಿಗರೆಗಣ್ಣಿ!

ಇವಳ ಪುಣ್ಯವೋ ಅವನ ಪುಣ್ಯವೋ, ಕೊನೆಗೂ ಪ್ರಿಯತಮ ತನ್ನಲ್ಲಿಗೆ ಮರಳುತಿದ್ದಾನೆಂಬ ಸಿಹಿ ಸುದ್ದಿ ಹೇಗೋ ಇವಳಿಗೆ ಮುಟ್ಟಿತು. ಆದರೆ ಬಂದವನನ್ನು ಹಾಗೇ ಕರೆದು ಅಪ್ಪಿಕೊಂಡುಬಿಟ್ಟರೆ ಅದು ಇವಳ ಅಭಿಮಾನಕ್ಕೆ ತಕ್ಕುದೇ? ಶಾಂತಂ ಪಾಪಂ! ಸರಿಯಾದ ತಯಾರಿಯನ್ನೇ ನಡೆಸಿದ್ದಾಳೆ ಈಕೆ. ಆದರೆ ಗೆಲುವು ಯಾರದ್ದು? ಕಾಯ್ದು ನೋಡುವುದೊಂದೇ ದಾರಿ (ಅಮರುಶತಕ: ೯೨)

ಹುಬ್ಬು ಗಂಟಿಕ್ಕಿದ್ದಾಯಿತು

ಬಹುಕಾಲ
ಕಣ್ಮುಚ್ಚಿರುವುದನು
ರೂಢಿಸಿದ್ದಾಯ್ತು

ಜೊತೆಗೆ ಅಳುವುದ
ಚೆನ್ನಾಗಿ ಕಲಿಸಿದ್ದಾಯಿತು
ನಗುವನೊತ್ತಾಯದಲಿ
ಮೌನದಲಿ ನಿಲಿಸಾಯ್ತು

ಮನಸ ಹೇಗೋ
ಗಟ್ಟಿ ಮಾಡುತ್ತ
ಕಡುದಿಟ್ಟತನದಲಿ
ಕಟ್ಟಿರಿಸಿದ್ದಾಯಿತು

ಹಮ್ಮು ಬಿಡದಿರಲಿಕೆ
ಎಲ್ಲ ಅಣಿಗೊಳಿಸಾಯ್ತು
ಇನ್ನು ಗೆಲುವನು
ದೇವರಿಗೇ ಬಿಟ್ಟಾಯ್ತು

ಅಂತೂ ಕಾತರದಿಂದ ಕಾಯುತ್ತಿದ್ದವಳಿಗೆ ನಲ್ಲ ಬಾಗಿಲಲ್ಲಿ ಬಂದುದು ಕಂಡಿತಲ್ಲ. ಏನು ಮಾಡುವಳು  ಅವಳೀಗ? ನೇರವಾಗಿ ಅವನನ್ನು ಒಪ್ಪುವಳೇ? ಅಪ್ಪುವಳೇ? ಮತ್ತೆ ಹುಸಿಮುನಿಸು ತೋರಬಾರದಲ್ಲವೇ? ( ಅಮರುಶತಕ: ೧೫)

ನಲ್ಲ ಬಂದುದ ನೋಡಿ ನಿಂತು ಸ್ವಾಗತಿಸುತ್ತ
ಪಕ್ಕದಲಿ ಕೂರುವುದ ತಪ್ಪಿಸಿದಳು ;
ತಾಂಬೂಲವನು ಕೊಡುವ ನೆವದಿಂದ ಒಳಹೋಗಿ
ಅಪ್ಪುಗೆಗೆ ಅಡ್ಡಿಯನು ತಂದಿಟ್ಟಳು ;
ಜೊತೆಯ ಪರಿಜನರೊಡನೆ ತೊಡಗುತ್ತ ಸೋಗಿನಲಿ
ಅವನ ಮಾತಿಗೆ ತಾನು  ಸಿಗದಿದ್ದಳು ;
ಮಾಡುವುಪಚಾರದಲಿ ಕೊರತೆಯನು ಕಾಣಿಸದೆ
ಚದುರೆ ಮನಸಿನ ಮುನಿಸ ಮೈವೆತ್ತಳು !

ಇಷ್ಟೆಲ್ಲಾ ನಡೆದರೆ ಅವನಿಗೆ ಪ್ರೇಯಸಿಯ ಅಂತರಂಗ ತಿಳಿಯದೇ ಹೋದೀತೇ? ಇವಳು ಏನು ಜಾಣತನ ಮಾಡಿದರೂ, ಅವನು ಬಳಿಗೆ ಬಾರದೇ ಹೋಗುವನೇ? ( ಅಮರುಶತಕ: ೪೪)

ದೂರದಿಂದಲಿ ಹುರುಪಿನಲಿ
ಬಂದರೆಲ್ಲಿಗೋ ಜಾರಿದವು
ಮಾತನಾಡಿಸಲು
ಥಟ್ಟನೇ ಬಿರಿದವು
ಅಪ್ಪಿಕೊಂಡರೆ
ಕೆಂಪಾದುವು
ಉಡುಗೆಯನು  ಹಿಡಿಯೆ
ಸಿಟ್ಟಿನಲಿ ಹುಬ್ಬ ಗಂಟಿಕ್ಕಿದವು

ಪಾದವೇ ಗತಿಯೆನುತ
ಅವಳಡಿಗೆ ಬೀಳಲು
ಚಣ ಮಾತ್ರದಲಿ
ನೀರು ತುಂಬಿದವು

ಹಾ! ಏನಚ್ಚರಿಯೊ!
ಇವಳ ಕಣ್ಣುಗಳು
ನಲ್ಲನ ತಪ್ಪಿಗೆ  ತಕ್ಕ
ಚತುರತೆಯ ತಾಳಿಹವು!

ಅಂತೂ ಅವನು ಇವಳ ಕಾಲಿಗೆ ಬಿದ್ದನಲ್ಲ? ಇನ್ನು ಮುನಿಸೇಕಿರುವುದು? ಅಂತೂ ಇಂತೂ ಕಥೆ ಸುಖಾಂತ!

(ಕೊ: ಅಮರುಶತಕದ ಪದ್ಯಗಳೆಲ್ಲ ಬಿಡಿಹೂಗಳಂತೆ, ಬಿಡಿಮುತ್ತುಗಳಂತೆ. ಅವುಗಳಿಗೆ ಮುಕ್ತಕಗಳೆಂದೇ ಹೆಸರು. ನಾನು ಕೆಲವನ್ನು ಒಂದಾದರೊಂದು ಬರುವಂದೆ ಸೇರಿಸಿ, ಒಂದು ಕಥೆಯಂತೆ ಹೇಳಿದ್ದೇನೆ ಅಷ್ಟೇ! )

Picture courtesy: http://www.artnindia.com/wp-content/uploads/imported/Ragini-Ragamala-HANDMADE-Painting-Rajasthani-India-Ethnic-Folk-Paper-Fine-Art-190775005906.jpg

(ಕಳೆದ ತಿಂಗಳು ನಿಲುಮೆ.ನೆಟ್ http://www.nilume.net/  ಗೆಂದು ಬರೆದ ಬರಹವನ್ನು, ಇಲ್ಲಿಯೂ ಇಂದು ಹಾಕಿದೆ)

 

 

Hits

  • 752,374

My book “Hamsanada” for iPad, iPhone or iPod

A Collection of  Samskrta Subhashitas, translated to Kannada

http://www.saarangamedia.com/product/hamsanada

My Book, on Google Play!

My Book Hamsanada, on Google Play

My Book Hamsanada, on Google Play

Enter your email address to follow this blog and receive notifications of new posts by email.

Join 9,609 other subscribers

ಅವಧಿಯಲ್ಲಿ ಹೀಗಂದರು:

"ಅಲ್ಲಿದೆ ನಮ್ಮ ಮನೆ…ಇಲ್ಲಿ ಬಂದೆ ಸುಮ್ಮನೆ… ಎಂಬ ಘೋಷ ವಾಕ್ಯದೊಂದಿಗೆ ಬ್ಲಾಗ್ ಮಂಡಲದಲ್ಲಿ ಕಾಣಿಸಿಕೊಂಡವರು ನೀಲಾಂಜನ. ಅಲ್ಲಿದೆ ನಮ್ಮ ಮನೆ ಕನ್ನಡದ ಪರಿಮಳವನ್ನು ಇಂಗ್ಲಿಷ್ ನಲ್ಲಿ ಹರಡುತ್ತಾ ಇದೆ. ಕನ್ನಡದ ವಚನಗಳು, ಸಂಸ್ಕೃತ ಸುಭಾಷಿತಗಳು ಜೊತೆಯಲ್ಲೇ ಸಂಗೀತ ಹೀಗೆ ಹಲವು ಲೋಕವನ್ನು ಈ ಬ್ಲಾಗ್ ಪರಿಚಯಿಸಿದೆ." ಅವಧಿ, ಮೇ ೧೫, ೨೦೦೮

ಇತ್ತೀಚಿನ ಟಿಪ್ಪಣಿಗಳು

Manjugouda police pa… ರಲ್ಲಿ Ugra Narasimha of Vijayan…
neelanjana ರಲ್ಲಿ Samasya Poornam – Part…
neelanjana ರಲ್ಲಿ Samasya Poornam – Part…
charukesha ರಲ್ಲಿ Where in the World is Mount…
ನೇಸರ್ ರಲ್ಲಿ Samasya Poornam – Part…
ಮೇ 2024
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

ಬಗೆ ಬಗೆ ಬರಹ

ಸಂಗ್ರಹಗಳು