You are currently browsing the tag archive for the ‘Purandaradasa’ tag.

(ಕೆಲವು ವರ್ಷಗಳ ಹಿಂದೆ ನಾನು ಬರೆದಿದ್ದ ಕಥೆಯಿದು. ಇಂದು ಬರುವ ಪುಷ್ಯ ಬಹುಳ ಅಮಾವಾಸ್ಯೆಯ ಪುರಂದರ ದಾಸರ ಆರಾಧನೆಯ ನಿಮಿತ್ತ, ಮತ್ತೊಮ್ಮೆ ಇಲ್ಲಿ  ಕೆಲವು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಹಾಕುತ್ತಿದ್ದೇನೆ)

Captureಗಂಟೆ ಹನ್ನೊಂದಾಗುವ ಮೊದಲು ಅಂತೂ ಪೂಜೆ ಮುಗಿಸಿ ಎದ್ದಳು ಸರಸ್ವತಿ. ಇವತ್ತು ಮಂಗಳಾರತಿ ಮಾಡುವಾಗ ಜೋರಾಗಿಯೇ ಹಾಡನ್ನು ಹೇಳಿದ್ದಳು. ಗಂಡ ಮನೆಯಲ್ಲಿದ್ದಾಗ ಅವಳ ಹಾಡು ಕೇವಲ ಗುನುಗಾಗಿ, ಬರೀ ಅವಳ ಕಿವಿಗೆ ಮಾತ್ರ ಕೇಳುವಂತಾಗಿಬಿಡುತ್ತಿತ್ತು. ಹಾಗೇನೂ ಕೆಟ್ಟದಾಗಿ ಅವಳು ಹಾಡುತ್ತಿರಲಿಲ್ಲ. ಅವಳಿಗೂ ಚಿಕ್ಕ ವಯಸ್ಸಿನಲ್ಲಿ ಸಂಗೀತ ಪಾಠವಾಗಿತ್ತು. ಆದರೆ, ಅವಳ ಗಂಡ ಎಷ್ಟಾದರೂ ಸಂಗೀತದಲ್ಲಿ ನುರಿತವನು. ಅವನಿಗೆ ಕೇಳುವಂತೆ ಹಾಡುವುದಕ್ಕೆ ಇವಳಿಗೇ ಸ್ವಲ್ಪ ಹಿಂಜರಿಕೆ. ಏನಾದರೂ ತಪ್ಪು ಹಾಡಿದರೆ, ಅವನು ಕೂಡಲೆ ಹೀಗಲ್ಲ ಹಾಗೆ ಎಂದು ತಿದ್ದುವನು. ವೇಳೆಯಿದ್ದರೆ ಮೂಲೆಯಲ್ಲಿಟ್ಟ ತಂಬೂರಿಯನ್ನೂ ತಂದೇಬಿಡುವನು. ಹೀಗೆ ಹಾಡಿದರೆ ಇನ್ನೂ ಸೊಗಸು ಎಂದು ಹೊಸ ಸಂಗತಿಗಳನ್ನು ತೋರುವನು. ಹಾಗಾಗಿ ಇಷ್ಟು ವರ್ಷವಾದರೂ, ಸರಸ್ವತಿಗೆ ಅವನ ಮುಂದೆ ಹಾಡಲು ಏನೋ ಆತಂಕ. ಅವಳ ಕಂಠಕ್ಕೆ ಧ್ವನಿ ಬರಬೇಕಿದ್ದರೆ, ಗಂಡ ಹೊರಕ್ಕೆ ಹೋಗಿರಲೇಬೇಕು. ಜೀವನಕ್ಕೆ ಬೇರೆ ವ್ಯಾಪಾರವಿಲ್ಲದಿದ್ದರೆ ಅವನು ಸಂಗೀತವನ್ನೇ ವೃತ್ತಿ ಮಾಡಿಕೊಂಡುಬಿಡುತ್ತಿದ್ದನೋ ಏನೋ ಎಂದು ಸರಸ್ವತಿಗೆ ಹಲವು ಬಾರಿ ಅನ್ನಿಸಿದ್ದು ನಿಜವೇ. ಹಾಗಾಗಿದ್ದರೂ ಚೆನ್ನಿತ್ತೇನೋ? ಅವನು ಹಾಡುವುದನ್ನು ನೆಮ್ಮದಿಯಿಂದ ಕೇಳಿಯೇ ಎಷ್ಟೋ ತಿಂಗಳಾಗಿಹೋಗಿರಬೇಕು. ಅವನು ಹಾಡುತ್ತಾ ಕುಳಿತರೆ, ಆ ಸ್ವರ್ಗವೇ ಇಳಿದು ಬರುತ್ತದೆಯೋ? ಅಥವ ಆ ಕೃಷ್ಣನ ಬೃಂದಾವನವೇ ಈ ಕ್ಷೇಮಪುರಕ್ಕೆ** ಬಂದುಬಿಡುವುದೋ? ಮದುವೆಯ ಮರುದಿವಸ ಅವನು ಹಾಡುತ್ತಿದ್ದನ್ನು ಕೇಳಿದ ಗೆಳತಿಯರಿಗೆಲ್ಲ ತನ್ನನ್ನು ಕಂಡರೆ ಹೊಟ್ಟೆಕಿಚ್ಚಾಗಿತ್ತಲ್ಲ? ಇವರಷ್ಟು ಚೆನ್ನಾಗಿ ಹಾಡುತ್ತಿದ್ದವರು ಅಂದರೆ ನಮ್ಮೂರಿನಲ್ಲಿ ಮನೆ ಮುಂದೆ  ಬರುತ್ತಿದ್ದೊಬ್ಬ ಹರಿದಾಸರು. ಅವರನ್ನ ಬಿಟ್ಟರೆ ಇನ್ಯಾರೂ ಅಷ್ಟು ಸೊಗಸಾದ ಕಂಠದವರನ್ನು ಕಂಡೇ ಇಲ್ಲ ತಾನು ಅನ್ನುವುದು ನೆನಪಾಯಿತು ಅವಳಿಗೆ.

ಈ ಊರಿಗೆ ಬಂದು ಇಪ್ಪತ್ತು ವರ್ಷಕ್ಕೂ ಹೆಚ್ಚಾದರೂ, ಇನ್ನೂ ನನ್ನೂರು, ನನ್ನೂರು ಎನ್ನುತ್ತೇನಲ್ಲ! ಇದು ಎಂತಹ ವೈಪರೀತ್ಯ ಅನ್ನಿಸುವಾಗಲೇ ತವರು ಮನೆಗೆ ಹೋಗಿ ಆಗಲೇ ವರ್ಷಗಳೇ ಕಳೆದಿವೆ ಅನ್ನುವ ಸತ್ಯ ಖೇದವನ್ನು ಹೆಚ್ಚಿಸಿತು. ಮದುವೆಯಾಗಿ ಎಷ್ಟು ವರುಷವಾದರೂ, ಹೆಣ್ಣಿಗೆ ತವರ ಬಯಕೆ ಕರಗುವುದೇ ಇಲ್ಲವಲ್ಲ! ಮೊದಲಿಗೆ ಮಲೆನಾಡಿನ ಮೂಲೆಯ ಈ ಊರಿಗೆ ತನ್ನನ್ನು ಮದುವೆಮಾಡಿಕಳಿಸಿಕೊಡುವ ಮಾತು ಬಂದಾಗ ಅವಳಿಗೆ ಬಹಳ ಯೋಚನೆಯಾಗಿತ್ತು. ತನ್ನ ತವರೂರು ಎಷ್ಟು ಚೆಂದ? ಊರಿನ ನಟ್ಟನಡುವೆ ಮುನ್ನೂರಕ್ಕೂ ಹೆಚ್ಚು ವರ್ಷ ಹಳೆಯದಾದ ಚೆನ್ನಕೇಶವನ ಗುಡಿ. ಪ್ರತಿನಿತ್ಯ ಒಂದಲ್ಲ ಒಂದು ಉತ್ಸವ! ಆದರೇನು? ಮದುವೆಯಾದ ಹೆಣ್ಣಿಗೆ ಗಂಡನೂರೇ ತನ್ನೂರಾಗಬೇಕಲ್ಲ? ಇಲ್ಲಿಗೆ ಬಂದ ಹೊಸತರಲ್ಲಿ ಅವಳಿಗೆ ಇಲ್ಲಿನ ಹಸಿರು ಕಂಡು ಬಹಳ ಹಿತವೆನಿಸಿತ್ತು. ಆದರೆ, ಮಳೆಗಾಲದಲ್ಲಿ ಧೋ ಎಂದು ಸುರಿಯುವ ಮಳೆಗೆ ಅವಳು ಹೆದರಿ ಹೋಗಿದ್ದಳು! ಇಲ್ಲಿ ಮಳೆಗಾಲವೋ, ವರ್ಷಕ್ಕೆ ನಾಲ್ಕು ತಿಂಗಳಿಗಿಂತ ಹೆಚ್ಚೇ. ಮಳೆ ಬಂತೆಂದರೆ, ನೆಲವೆಲ್ಲೋ, ನೀರೆಲ್ಲೋ ತಿಳಿಯಲಾರದಂತಹ ಪರಿಸ್ಥಿತಿ. ಆದರೂ, ಮಳೆಗಾಲ ಬಂದರೆ ಗಂಡ ವ್ಯಾಪಾರದ ಚಿಂತೆ ಬಿಟ್ಟು ಕೆಲವು ತಿಂಗಳು ಮನೆಯಲ್ಲಿ ಸಂಗೀತಸಾಧನೆ ಮಾಡುವುದನ್ನು ಕೇಳುತ್ತಿರಬಹುದು. ಆಷಾಢ ಬೇಗ ಬರಬಾರದೇ? ಎಂದುಕೊಳ್ಳುತ್ತಾ ಅವಳು ಅಡುಗೆ ಕೋಣೆ ಹೊಕ್ಕಳು.

*********

ಒಳಗಿನಿಂದ ನಾಗಾಚಾರಿ ತಂದ ನವರತ್ನದ ಪದಕವನ್ನು ನೋಡಿದ ಶ್ರೀನಿವಾಸ. ಪರವಾಗಿಲ್ಲ. ಹೇಳಿದಂತೆಯೇ ಮಾಡಿದ್ದಾನೆ. ಆದರೆ, ಇಲ್ಲಿ ಒಂದು ಕಡೆ ಪಚ್ಚೆ ಕಲ್ಲುಗಳು ತುಸು ಹೆಚ್ಚಾದುವು ಎನ್ನಿಸಿತು. ಸರಿ, ಸರದಲ್ಲಿ ಅದಕ್ಕೆ ಸಮತೂಗಿಸುವಂತೆ ವಿನ್ಯಾಸ ಮಾಡಿದರಾಯಿತು ಎಂದು ಹೊಸ ನಕಾಸೆ ಬರೆಯತೊಡಗಿದ. ಇದು ಅರಮನೆಯವರಿಗೆ ಹಬ್ಬದೊಳಗೆ ತಲುಪಬೇಕು, ಸ್ವಲ್ಪ ಹೆಚ್ಚು ಹೊತ್ತು ಕೆಲಸ ಮಾಡು ಎಂದು ನಾಗಾಚಾರಿಗೆ ಹೇಳಿ, ಮತ್ತೊಂದು ಒಡವೆಯ ಚಿತ್ರ ಬರೆಯತೊಡಗಿದವನಿಗೆ, ಅಪ್ಪ ಹೋದ ಮೇಲೆ, ತನ್ನ ದಿನ ಪೂರ್ತಿ ಅಂಗಡಿಯಲ್ಲೇ ಹೋಗುತ್ತಿದೆ ಅನ್ನುವುದು ನೆನಪಾಯಿತು. ಈಗಾಗಲೇ ಹೇಬಣನಿಗೆ ಹದಿನೆಂಟಾಯಿತು. ಅವನಿಗೊಂದು ಮದುವೆ ಮಾಡಿ, ಅವನಿಗೂ ಚೆನ್ನಾಗಿ ಕೆಲಸ ಕಲಿಸಿಕೊಟ್ಟು, ಜವಾಬ್ದಾರಿಯಲ್ಲಿ ಅವನಿಗೂ ಪಾಲಿತ್ತರೆ, ಮತ್ತೆ ಸ್ವಲ್ಪವಾದರೂ ಸಂಗೀತಸಾಧನೆಗೆ ತೊಡಗಬಹುದು ಅನ್ನಿಸಿತು.

ಅಪ್ಪ ಚಿಕ್ಕಂದಿನಿಂದಲೇ ತನಗೆ ಕೆಲಸದ, ವ್ಯಾಪಾರದ ತರಪೇತಿ ಕೊಟ್ಟಿದ್ದರು. ಅರೆ, ನಾನು ಮಕ್ಕಳಿಗೆ ಅಂಗಡಿಗೆ ಬರೋದಕ್ಕೆ ಹೆಚ್ಚು ಹೇಳುತ್ತಲೇ ಇಲ್ಲವಲ್ಲ? ಈ ಕಿರಿಯವ ಮಧ್ವಪತಿ ಒಬ್ಬನಿಗೆ ಮಾತ್ರ ಅಂಗಡಿಗೆ ಬರುವುದಕ್ಕೆ ಉತ್ಸಾಹ. ಎಷ್ಟೋ ಬಾರಿ ಜೊತೆಗೆ ಬರುತ್ತಾನೆ. ಕುಳಿತು ನಾನು ಮಾಡುವ ಚಿತ್ತಾರಗಳನ್ನು ನೋಡುತ್ತಿರುತ್ತಾನೆ. ಅವನೂ ಸ್ವಲ್ಪ ಬರೆಯುತ್ತಾನೆ. ಈ ದೊಡ್ಡ ಇಬ್ಬರೂ ಅಮಾವಾಸ್ಯೆ ಹುಣ್ಣಿಮೆಗೂ ಬಂದರೆ ಬಂದರು, ಬಿಟ್ಟರೆ ಬಿಟ್ಟರು. ಸ್ವಲ್ಪ ಬಿಗಿ ಮಾಡಬೇಕು. ಇಲ್ಲದಿದ್ದರೆ ನಾಳೆ ವ್ಯಾಪಾರವನ್ನೇ ಕಡೆಗಣಿಸಿದರೆ ಎಂದು ಭಯವಾಯಿತು. ಆಮೇಲೆ, ಅಪ್ಪ ನನಗೂ ಅಂಗಡಿಗೆ ಬರಲು ಬಲವಂತ ಮಾಡುತ್ತಿರಲಿಲ್ಲ. ಆದರೂ, ನಾನೀಗ ಮೂರುಹೊತ್ತೂ ವ್ಯಾಪಾರದಲ್ಲೇ ಮುಳುಗಿಲ್ಲವೇ ಎನ್ನುವುದು ಹೊಳೆದು, ಭಯವಿಲ್ಲ ಅನ್ನಿಸಿತು. ಅಪ್ಪನಂತೂ, ತಾಯಿಯ ಬಳಿ “ಶೀನಪ್ಪ ಹಾಡಿಕೊಳ್ಳುತ್ತಿದ್ದರೆ ಅವನಿಗೆ ಕೆಲಸ ಕಾರ್ಯ ಅಂತ ತೊಂದರೆ ಮಾಡಬೇಡ, ಅವನ ಪಾಡಿಗವನನನ್ನ ಬಿಟ್ಟುಬಿಡು” ಅಂತ ಹೇಳಿಟ್ಟಿದ್ದರು. ಸಂಗೀತದಲ್ಲಿ ನನಗೆ ಗುರುಗಳು ಕಲಿಸಿದ್ದು ಒಂದಾದರೆ, ನಾನೇ ಶಾಸ್ತ್ರ ಗ್ರಂಥಗಳ ಹೊತ್ತಿಗೆಗಳನ್ನು ಓದಿ, ತಾನೇ ರೂಢಿಸಿಕೊಂಡು ಕಲಿತಿದ್ದು ಇನ್ನೆಷ್ಟೋ. ಚಿಕ್ಕಂದಿನಿಂದ ನಾನಾಗೇ ಸಂಗೀತದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ. ಒಮ್ಮೆ ಮಾತ್ರ ಅಪ್ಪ ಹೇಳಿದ್ದು ನೆನಪಿದೆ – “ಏನೇ ಆಗಲಿ ಶೀನಪ್ಪ, ಈ ನಮ್ಮ ಕಸುಬನ್ನ ಕೈ ಬಿಡಬೇಡ. ಸಂಗೀತ ಹಾಡುತ್ತೇನೆಂದು ಅರಮನೆಯವರ ಕಾಲು ಹಿಡಿಯುವುದು ಬೇಡ. ಹಾಡುವುದಾದರೆ, ನಿನಗೋಸ್ಕರ ಹಾಡಿಕೋ, ಅಷ್ಟೆ”. ನಾನೂ ಅದನ್ನ ಮೀರದೇ ನಡೆದೆ. ಅಷ್ಟಕ್ಕೂ ನಮ್ಮ ತಲೆತಲಾಂತರದ ರತ್ನಪಡಿ ವ್ಯಾಪಾರ ಇರುವಾಗ, ಪುರಂದರಪುರದ ಶ್ರೀನಿವಾಸನಾಯಕ ಎಂದರೆ ನವಕೋಟಿ ನಾರಾಯಣ ಎಂದೇ ಎಲ್ಲರೂ ಎನ್ನುವಾಗ, ರಾಜರಿಗೇ ಸಾಲಕೊಡುವಂತಹ ಶ್ರೀಮಂತಿಕೆ ನಮಗಿರುವಾಗ, ಅರಸರ ಬಾಗಿಲು ಕಾಯುವುದೇಕೆ? ಅಪ್ಪ ಹೇಳಿದ್ದೇ ಸರಿ. ಈಗ ನನಗೆ ನಾನೇ ಅರಸ. ಬೇಕಾದಾಗ ಹಾಡುವೆ. ಬೇಡವಾದಾಗ ಇಲ್ಲ ಎಂದುಕೊಳ್ಳುವಾಗಲೇ, ಎರಡು ಮೂರು ವಾರಗಳಿಂದ ತಂಬೂರಿ ಹಿಡಿದಿಲ್ಲ, ಮಕ್ಕಳಿಗೂ ಹೇಳಿಕೊಟ್ಟಿಲ್ಲವೆಂಬುದು ಹೊಳೆದು ಮನಸ್ಸಿಗೆ ಮೋಡ ಆವರಿಸಿದ್ದಾಗ ಒಳಗಿನಿಂದ ಮಧ್ವಪತಿ ಬಂದು, “ಅಪ್ಪ, ಈ ಚಿತ್ರ ನೋಡಿ – ಕಿವಿಯ ಓಲೆಗೆ ಈ ರೀತಿ ಮಾಡಿದರೆ ಚೆನ್ನಾಗಿರತ್ತೆ. ಅಲ್ವಾ?” ಎಂದು ಕೇಳಿದ್ದು ಶ್ರೀನಿವಾಸನ ಮನಸ್ಸು ಬೇರೆಡೆಗೆ ಹರಿಯಲು ಅನುವಾಯಿತು.

*********

ಅಭಿನವ ಸಂಗೀತ ಅಭ್ಯಾಸಕ್ಕೆ ಕೂತಿದ್ದ. ಅಪ್ಪ ಸಂಗೀತದ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಹೊಸ ಪಾಠ ಇರಲಿ, ಇಲ್ಲದೇ ಇರಲಿ ಅಭ್ಯಾಸ ಮಾತ್ರ ಪ್ರತಿ ನಿತ್ಯ ಮಾಡಲೇಬೇಕು. ಅಣ್ಣತಮ್ಮಂದಿರಲ್ಲ್ಲಿ ನನ್ನ ಧ್ವನಿ ಎಲ್ಲರಿಗಿಂತ ಚೆನ್ನಾಗಿರುವುದೆಂದು, ಅಪ್ಪ ತನ್ನ ಪಾಠದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ ಅನ್ನುವುದು ಬಾಯಿ ಬಿಟ್ಟು ಹೇಳದಿದ್ದರೂ, ಅಭಿನವನಿಗೆ ಎಷ್ಟೋ ದಿನದ ಹಿಂದೆ ತಿಳಿದಿತ್ತು. ಪ್ರತಿ ನಿತ್ಯ ವರಸೆಗಳನ್ನು ಮೂರು ಕಾಲದಲ್ಲೂ ಅಭ್ಯಾಸ ಮಾಡಲೇ ಬೇಕು! ವರ್ಷದ ಹಿಂದೆ ಒಂದು ದಿನ ಆಟದ ಬಯಲಲ್ಲಿ ಮೂಲೆ ಮನೆಯ ವೇಂಕಟೇಶ ಹಾಸ್ಯ ಮಾಡಿದ್ದು ನೆನಪಾಯಿತು. “ನಿಮ್ಮಪ್ಪ ಎಲ್ಲೂ ಇಲ್ಲದ ಪದ್ಧತಿಯಲ್ಲಿ ಪಾಠ ಮಾಡ್ತಾರಂತೆ! ಸರಿಯಾಗಿ ಒಬ್ಬ ಗುರು ಹತ್ತಿರ ಹೋಗದೇ ಇದ್ರೆ ನೀನು ಸಂಗೀತ ಕಲಿತಹಾಗೇ! ಉದ್ಧಾರ ಆದ ಹಾಗೇ!”. ಅಭಿನವನಿಗೆ ಒಂದು ಕಡೆ ಸಿಟ್ಟು, ಇನ್ನೊಂದು ಕಡೆ ಅಳು ಎರಡೂ ಒಟ್ಟಿಗೆ ಬಂದಿತ್ತು – ಎಲ್ಲರೆದುರು ಗೇಲಿ ಮಾಡಿದನಲ್ಲ ಎಂದು.

ಮರುದಿನ ಪಾಠಕ್ಕೆ ಕೂತಾಗ ಅವನು ಕೇಳಿದ್ದ: “ಅಪ್ಪ, ನೀವು ಹೇಳಿಕೊಡೋ ಪಾಠದ ವಿಧಾನ ಎಲ್ಲೂ ಇಲ್ಲವಂತೆ…. ಎಲ್ಲ ಹುಡುಗರೂ ನನ್ನ ಹಾಸ್ಯ ಮಾಡ್ತಾರೆ”

“ನಾಕು ಮಂದಿ ಬಾಯಿ ಯಾರು ತಾನೇ ಮುಚ್ಚಿಸೋಕೆ ಸಾಧ್ಯ? ಹೌದು. ಈ ರೀತಿ ಸಾಧಕಗಳೆಲ್ಲ ಎಲ್ಲೂ ಇಲ್ಲ. ಇವೆಲ್ಲ ನಾನೇ ರಚನೆ ಮಾಡಿದ್ದು. ಅದಕ್ಕೇನೀಗ? ಮಕ್ಕಳಿಗೆ ಸಂಗೀತ ಕಲಿಯೋದಕ್ಕೆ ಹೊರಟಾಗ ಸ್ವರ ಹಿಡಿಯೋಕೆ, ಶ್ರುತಿ ಜ್ಞಾನ ಬರೋಕೆ, ಕಾಲಪ್ರಮಾಣ ಹೊಳೆಯೋಕೆ, ನಾಲಿಗೆ ಹೊರಳೋಕೆ ಅನುಕೂಲ ಆಗ್ಲಿ ಅಂತ ನಾನೇ ಯೋಚಿಸಿ ನಿಮಗೆಲ್ಲ ಹೀಗೇ ಹೇಳ್ಕೊಡ್ತಿದೀನಿ. ಅಪ್ಪ ಹಾಕಿದ ಆಲದ ಮರಕ್ಕೇ ನೇತು ಹಾಕ್ಕೋಬೇಕೇನು? ಯಾವ ರೀತಿ ಕಲಿತರೆ ಚೆನ್ನಾಗಿ ಹಾಡಬಹುದೋ ಹಾಗೆ ಕಲಿತರಾಯಿತು. ಈಗ ಅದೆಲ್ಲದರ ಯೋಚನೆ ಬಿಟ್ಟು, ಶ್ರೀ ಗಣನಾಥ ಹಾಡು ಮುಂದಿನ ಪಾಠಕ್ಕೆ ಮೊದಲು” ಎಂದಿದ್ದರು ಅಪ್ಪ.

“ಸುಮ್ಮನೆ ತಂಬೂರಿ ನುಡಿಸ್ತಾ ಇದೀಯಲ್ಲೋ? ಏನು ಹಾಡಬೇಕು ಅನ್ನೋದು ಮರೆತು ಹೋಯಿತಾ?” ಅಮ್ಮ ಕೇಳಿದರು.ಎಲ್ಲೋ ಯೋಚಿಸುತ್ತಿದ್ದ ಅಭಿನವ “ಏನೂ ಇಲ್ಲ” ಅನ್ನುತ್ತ, ದೇವಗಾಂಧಾರ ರಾಗದ ಪ್ರಬಂಧವನ್ನು ಹಾಡತೊಡಗಿದ.

**********

ಆಕಾಶದಲ್ಲಿ ಮೋಡಗಳು ಕವಿಯುತ್ತಿರಬೇಕು. ಒಳಗೆ ಆಗಲೇ ಕತ್ತಲಾಗುತ್ತಿದೆ ಎಂದೆನ್ನಿಸಿತು ಶ್ರೀನಿವಾಸನಿಗೆ. “ಏ, ಮಧ್ವಪತಿ, ದೀಪ ಹತ್ತಿಸಿ ತಾರೋ” ಎಂದು ಕೂಗು ಹಾಕಿದ. ಎರಡು ನಿಮಿಷವಾದರೂ ಅವನೇಕೋ ಬರಲಿಲ್ಲ. ಆದರೆ, ಅವನ ಧ್ವನಿ ಅಂಗಡಿಯ ಮುಂಭಾಗದಲ್ಲಿ ಸಣ್ಣಗೆ ಕೇಳುತ್ತಿತ್ತು. ಯಾರ ಹತ್ತಿರ ಮಾತಾಡುತ್ತಿದ್ದಾನೆ? ಕೊಲ್ಲೂರಿನ ದೇವಿಗೆ ಒಂದಷ್ಟು ಆಭರಣಗಳನ್ನ ಮಾಡಬೇಕಿದೆ ಎಂದು ನಾಯಕರ ಕಡೆಯವರು ಹೇಳಿಕಳಿಸಿದ್ದರು. ಅಲ್ಲಿಂದಲೇ ಯಾರಾದರೂ ಬಂದಿರಬಹುದೇ? ಈ ಹುಡುಗ ಏನಾದ್ರೂ ಅರೆಕೊರೆ ಹೇಳಿ ಕಳಿಸಿಬಿಟ್ಟರೆ ಕಷ್ಟವೆನ್ನಿಸಿ ಹೊರಗೆ ಧಾವಿಸಿದ ಶ್ರೀನಿವಾಸ.

“ನೋಡ್ರೀ, ಹಾಗೆ ಯಾವ್ಯಾವಾಗ್ಲೋ ಏನೂ ದಾನ ಮಾಡೋಕಾಗಲ್ಲ. ಹೊರಡಿ. ನಾಳೆ ಬನ್ನಿ ನೋಡೋಣ” ಎನ್ನುತ್ತಿದ್ದ ಮಧ್ವಪತಿ. ಪರವಾಗಿಲ್ಲ. ಅಪ್ಪನಿಗೆ ತಕ್ಕ ಮಗನೇ. ಇನ್ನೂ ಅಜ್ಜನಿಗೆ ತಕ್ಕ ಮೊಮ್ಮೊಗ ಅಂದರೆ ಇನ್ನೂ ಒಳ್ಳೆಯದು! ಅಜ್ಜನ ಮಾತನ್ನ ಚಾಚೂ ತಪ್ಪದೇ ಆಚರಿಸ್ತಿದಾನೆ!

ತಂದೆಯವರು ತೀರಾ ಆರೋಗ್ಯ ತಪ್ಪಿದಾಗ ತನಗೆ ಕೂರಿಸಿ ಬುದ್ಧಿ ಹೇಳಿದ್ದು ಶ್ರೀನಿವಾಸನಿಗೆ ಮನದ ಮುಂದೆ ಹಾದು ಹೋಯಿತು. ಅವತ್ತೂ ಮಧ್ವಪತಿ ನನ್ನ ಜೊತೆಯಲ್ಲೇ ಇದ್ದನಲ್ಲ.

“ಶೀನಪ್ಪ, ನೋಡು ನೀನು ಇಷ್ಟು ದಿನ ಅಂಗಡಿ ವ್ಯಾಪಾರದ ವಿಷಯ ತಲೆ ಕೆಡಿಸಿಕೊಂಡಿಲ್ಲ. ಇನ್ನು ನಾನು ಹೆಚ್ಚು ದಿನ ಉಳಿಯೋನಲ್ಲ. ಇನ್ನು ಮುಂದೆ ನೀನೇ ಎಲ್ಲ ನಿಂತು ನೋಡಿಕೋಬೇಕು. ದುಂದು ವೆಚ್ಚ ಮಾಡಬೇಡ. ಒಂದು ವರಹ ಉಳಿಸಿದ್ದು ಅಂದರೆ, ಒಂದು ವರಹ ಗಳಿಸಿದ್ದಕ್ಕಿಂತ ಹೆಚ್ಚು ಅನ್ನೋದನ್ನ ಮರೀಬೇಡ. ದೇವರುದಿಂಡರು ಅಂತ ಸುಮ್ಮಸುಮ್ಮನೆ ಹರಕೆ ಹಣ ವೆಚ್ಚ ಮಾಡಬೇಡ. ಕಾಯಕವೇ ಕೈಲಾಸ ಅಂತ ಹೇಳೋದು ಕೇಳಿಲ್ಲವೇ ನೀನು? ನಮ್ಮ ಕೆಲಸವನ್ನ ನಾವು ಶ್ರದ್ಧೆಯಿಂದ ಮಾಡಿದರೆ, ಹರನೇ ಆಗಲಿ, ಹರಿಯೇ ಆಗಲಿ ಅದನ್ನ ಮೆಚ್ಚುತ್ತಾರೆಯೇ ಹೊರತು, ನೀನ್ಯಾವ ಗುಡಿ ಸುತ್ತಿದೆ, ಗೋಪುರ ಹತ್ತಿದೆ ಅಂತ ಕೇಳೋರಲ್ಲ ಅವರು”.

“ಅಪ್ಪ, ಆದ್ರೂ, ನಮ್ಮ ಕೈಲಾದ್ದನ್ನು ಕೊಟ್ಟರೆ ಅದರಲ್ಲಿ ತಪ್ಪೇನು..” ಎಂದು ಹೊರಟ ಮಾತನ್ನು ಅರ್ಧಕ್ಕೇ ತುಂಡರಿಸಿದ್ದರು ಅವರು.

“ಆದರೂ ಇಲ್ಲ, ಗೀದರೂ ಇಲ್ಲ. ನಾವು ಕೆಟ್ಟು ಕಷ್ಟದಲ್ಲಿ ಬಿದ್ದರೆ ನೋಡೋರು ಯಾರು? ನೀನು ಚಿಕ್ಕವನಿದ್ದಾಗ ನಾನು ಅವರಿವರಿಗೆ ದಾನ -ಸಾಲ ಅದು ಇದು ಅಂತ ಕೊಟ್ಟು, ಬಹಳ ಕಷ್ಟದಲ್ಲಿದ್ದೆ. ನಿನಗೆ ನೆನಪಿಲ್ಲ. ಆ ಕಾಲದಲ್ಲಿ ನನಗೆ ಸಹಾಯ ಅಂತ ಮಾಡಿದವರು ಯಾರೂ ಇಲ್ಲ. ಆದರೂ ಹೇಗೋ ಎದೆಗುಂದದೆ ಮುಂದೆ ಬಂದೆ. ನಾನು ಪಟ್ಟ ಕಷ್ಟ ನೀನು ಪಡೋದು ಬೇಡ. ಅದಕ್ಕೂ ಹೆಚ್ಚು, ನಿನ್ನ ತಪ್ಪಿನಿಂದ, ಈ ವರದಪ್ಪನ ಮೊಮ್ಮೊಕ್ಕಳು ಬೀದಿಗೆ ಬರುವುದು ಬೇಡ. ದಾನಧರ್ಮದ ಮಾತಿನಿಂದ ಮೂರು ಮಾರು ದೂರ ಇರ್ತೀನಿ ಅಂತ ಮಾತು ಕೊಡು” ಎಂದಿದ್ದರು ಅಪ್ಪ.

ಅಪ್ಪನ ಮಾತು ಎಂದಿಗೂ ಮೀರದಿದ್ದ ಶ್ರೀನಿವಾಸ ಭಾಷೆ ಇತ್ತಿದ್ದ. ಗಂಟಲೊಣಗುತ್ತಿದ್ದರೂ, ಅಪ್ಪ ಮಾತು ಮುಂದುವರೆಸಿದ್ದರು:

“ನೋಡು ಶೀನಪ್ಪ. ’ಅನ್ನದಾನಂ ಪರಂ ದಾನಂ ವಿದ್ಯಾದಾನಮತ: ಪರಂ ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವಂಚ ವಿದ್ಯಯಾ’ ಅನ್ನೋ ಮಾತು ನಿನಗೆ ಗೊತ್ತಿದೆ. ಒಬ್ಬರಿಗೆ ಒಂದು ವರಹ ದಾನ ಮಾಡೋ ಬದಲು, ಒಂದು ವರಹ ಗಳಿಸೋ ದಾರಿ ತೋರಿಸಿಕೊಟ್ಟರೆ, ಅದು ಅವರ ಜೀವಮಾನ ಪೂರ್ತಿ ಅವರೊಡನೆ ಇರತ್ತೆ. ಹಣ ಕೊಟ್ಟರೆ, ಅದು ವೆಚ್ಚಮಾಡುವವರೆಗೆ ಮಾತ್ರ. ಅದರ ಬದಲು, ಹಣಗಳಿಸುವಂಥ ವಿದ್ಯೆ ಹೇಳಿಕೊಟ್ಟರೆ, ಅವರ ಜೀವನ ಪೂರ್ತಿ ಅದು ಅವರನ್ನ ಕಾಯುತ್ತೆ. ಅದಕ್ಕೆ, ನಿನಗೆ ಯಾರಿಗಾದರೂ ಸಹಾಯ ಮಾಡ್ಬೇಕಿದ್ದರೆ, ಅವರಿಗೆ ನಿನ್ನ ಚಿನಿವಾರಿಕೆಯನ್ನೋ, ನಿನ್ನ ಪ್ರೀತಿಯ ಸಂಗೀತಕಲೆಯನ್ನೋ ಹೇಳಿಕೊಡು. ಅದನ್ನ ಅವರು ರೂಢಿಸಿಕೊಂಡರೆ ಅವರವರ ಹಣೆಪಾಡು. ಅದಕ್ಕಿಂತ ಹೆಚ್ಚು ಮಾಡಲು ನೀನೇನು ಬ್ರಹ್ಮನೇ?”

ಹೊರಗೆ ಮಧ್ವಪತಿ ಇನ್ನೂ ಮಾತಾಡುತ್ತಿದ್ದ:

“ಇಲ್ಲ ಸ್ವಾಮೀ, ನೀವು ನಡೆಯಿರಿ. ಉಪನಯನವಾಗಲಿ, ಮದುವೆಯೇ ಆಗಲಿ, ನಮ್ಮ ತಂದೆ ಆದ್ರೂ ನಾನು ಹೇಳೋ ಉತ್ತರವನ್ನೇ ಹೇಳ್ತಾರೆ. ಯಾಕೆ ಸಮಯ ಹಾಳು ಮಾಡ್ಕೋತೀರಾ? ಇನ್ಯಾವಾಗ್ಲಾದರೂ ಬನ್ನಿ ನೋಡೋಣ”

ಶ್ರೀನಿವಾಸನಾಯಕ ಮುಂದಿನ ಹಜಾರಕ್ಕೆ ಬರುವುದಕ್ಕೂ, ಆ ಮುದುಕ ಹೊರಕ್ಕೆ ಹೋಗುವುದಕ್ಕೂ ಸರಿಯಾಯಿತು.

ಆದರೆ ಅವನು ಹೋಗಿದ್ದು ತತ್ಕಾಲಕ್ಕೆ ಎಂದು ಮರುದಿನವೇ ಗೊತ್ತಾಯಿತು. ಅಂಗಡಿ ತೆಗೆಯುವ ವೇಳೆಗೇ ಆ ಮುದುಕ ಅಲ್ಲಿ ಬಂದು ನಿಂತಿದ್ದ. ಶ್ರೀನಿವಾಸನನ್ನು ಕಂಡ ಕೂಡಲೆ, “ಅಯ್ಯ, ನಿಮ್ಮ ಮಗ ಮತ್ತೆ ಬರೋದಕ್ಕೆ ಹೇಳಿದ್ದ. ಮೊಮ್ಮೊಗನಿಗೆ ಉಪನಯನ ಮಾಡ್ಬೇಕು. ಏನಾದರೂ ದಾನ ಕೊಡಿ ಸ್ವಾಮೀ” ಎಂದ. ಈಗ ತಾನೇ ಅಂಗಡಿ ಬಾಗಿಲು ತೆಗೀತಾ ಇರೋದು ಕಾಣೋದಿಲ್ವೇ, ಆಮೇಲೆ ಸ್ವಲ್ಪ ವ್ಯಾಪಾರ ಆದ ಮೇಲೆ ಬಾ” ಎಂದಿದ್ದಕ್ಕೆ ಮುದುಕ “ಇಲ್ಲೇ ಕೂತಿರ್ತೀನಿ ಸ್ವಾಮೀ ಹಾಗೇ” ಎಂದು ಹೊರಗೇ ಕೂತುಕೊಂಡ. ಅವತ್ತೆಲ್ಲ ಶ್ರೀನಿವಾಸನಿಗೆ ಕೆಲಸದ ಭರಾಟೆ ಹೆಚ್ಚಾಗಿತ್ತು. ಕೆಳದಿಯ ನಾಯಕರ ಕಡೆಯವರು ಬಂದಾಗ ಅವರಿಗೆ ತಕ್ಕಂತೆ ಮರ್ಯಾದೆ ಮಾಡುವ ಗಲಭೆ ಕೂಡ ಇತ್ತು. ಇವೆಲ್ಲ ಸೇರಿ ಸಂಜೆ ಹೊರಡುವ ಸಮಯಕ್ಕೆ ಬಹಳ ಆಯಾಸವೂ ಆಗಿತ್ತು. ಹೊರಟಾಗ, ಮತ್ತೆ ಆ ಮುದುಕ ಪ್ರತ್ಯಕ್ಷನಾಗಬೇಕೇ? ಕಂಡರೂ ಕಾಣದ ಹಾಗೆ ಹೊರಟ ಶ್ರೀನಿವಾಸ. ಇದು ಇನ್ನೂ ಮೂರು ನಾಲ್ಕು ದಿವಸ ಮತ್ತೆ ಮತ್ತೆ ನಡೆಯಿತು. ಇದಲ್ಲದೇ, ಇನ್ನೂ ಒಂದೆರಡು ಸಲ ಮಧ್ವಪತಿ ಆ ಮುದುಕನನ್ನು ಗದರಿಸಿ ಕಳಿಸಿದ್ದು ಶ್ರೀನಿವಾಸನಿಗೆ ಕೇಳಿಯೂ ಇತ್ತು.

ಅವತ್ತು ಹುಣ್ಣಿಮೆಯ ರಾತ್ರಿ ಶ್ರೀನಿವಾಸ ಅಂಗಡಿಯಿಂದ ಹೊರಡುವ ಸಮಯ. ಮಧ್ವಪತಿ ಸಂಜೆಗೆ ಮುಂಚೆಯೇ ಮನೆಗೆ ಹೋಗಿ ಆಗಿತ್ತು. ಸಂದೂಕವನ್ನೂ ಮುಚ್ಚಿದ್ದಾಗಿತ್ತು. ಅಷ್ಟರಲ್ಲೇ, ಆ ಮುದುಕ ಮತ್ತೆ”ನಮಸ್ಕಾರ ನಾಯಕರೇ” ಎನ್ನುತ್ತಾ ಬರಬೇಕೇ? ಹಾಗೇ ಓಡಿಸಬೇಕೆಂದಿದ್ದರೂ, ಶ್ರೀನಿವಾಸನಿಗೆ ತಾನು ಕುಳ್ಳಿರುವ ಹಾಸಿನ ಕೆಳಗೆ ವರಹವೊಂದು ಬಿದ್ದಿದ್ದು ಕಾಣಿಸಿತು. “ತೊಗೋ, ಇನ್ನೊಂದು ಸಲ ಮುಖ ತೋರಿಸಬೇಡ ಇಲ್ಲಿ” ಅಂತ ಮುದುಕನ ಕೈಗೆ ಹಾಕಿದಾಗ, ಆ ವರಹದ ಅಡಿಭಾಗ ಒದ್ದೆಯಾಗಿ, ಕಿಲುಬಿದ್ದು ಕಾಣಿಸಿತು, ಆದರೆ ಅವನಲ್ಲಿ ಮತ್ತೆ ಪೆಟ್ಟಿಗೆ ತೆಗೆದು ಒಂದು ಒಳ್ಳೇ ವರಹ ಕೊಡುವ ತಾಳ್ಮೆಯಿರಲಿಲ್ಲ. ಮುದುಕ ಮರುಮಾತಾಡದೇ ಹೋಗಿದ್ದು ನೋಡಿ “ಪಾಪ, ಮುದುಕನಿಗೋ, ಕಣ್ಣು ಕಾಣದೇನೋ? ಅದಕ್ಕೆ ನಾಣ್ಯ ಕಿಲುಬಿದ್ದು ಕಾಣಲಿಲ್ಲವೇನೋ? ಅದೇನಾದರೂ ಹಾಳಾಗಲಿ” ಎಂದುಕೊಳ್ಳುತ್ತಾ ಮನೆಗೆ ನಡೆದ.

**********

ನಡುಹಗಲು. ಅಡುಗೆಮನೆ ಕೆಲಸವೆಲ್ಲ ಮುಗಿಯುತ್ತ ಬಂದಿದೆ. ಹೇಬಣ ಮತ್ತು ಅಭಿನವ ಇಬ್ಬರೂ ಮೂರು ದಿನವಾಯಿತು ಊರಿಗೆ ಹೋಗಿ. ಇವತ್ತು ಸಂಜೆ ಬರಬೇಕು. ಸರಸ್ವತಿಗೆ ಯಾಕೋ ಆಯಾಸವಾದಂತಾಗಿ ಹತ್ತು ನಿಮಿಷ ಕೂರೋಣವೆನ್ನಿಸಿ ಹಜಾರದ ಉಯ್ಯಾಲೆಯ ಮೇಲೆ ಹಾಗೇ ಕುಳಿತಳು. ಅಷ್ಟರಲ್ಲೆ, ಬಾಗಿಲು ಬಡಿಯುವ ಶಬ್ದ. ಹೋಗಿ ಅಗುಳಿ ತೆಗೆದಳು. ಒಬ್ಬರು ವಯಸ್ಸಾದವರೊಬ್ಬರು ಬಾಗಿಲಲ್ಲಿ ನಿಂತಿದ್ದರು.

“ಒಳಗೇ ಬರಲೇ ಸರಸ್ವತಮ್ಮ?”

ಅವರನ್ನು ಸರಸ್ವತಿ ಯಾವತ್ತೂ ಕಂಡಿರಲಿಲ್ಲ. ಅವರಿಗೆ ತನ್ನ ಹೆಸರು ಹೇಗೆ ಗೊತ್ತಾಯಿತೋ? ಸ್ವಲ್ಪ ಉದ್ದವಾದ ಮೂಗು. ಮುಖದಲ್ಲಿ ಕಿರುನಗೆ. ತಲೆಯ ಮೇಲೆ ಸುತ್ತಿದ್ದ ಬಿಳೀ ದಟ್ಟಿ. ಯಾಕೋ ತನ್ನ ತಂದೆಯನ್ನೇ ನೋಡಿದಂತಾಯಿತು ಅವಳಿಗೆ.

“ಬನ್ನಿ” ಅಂದಳು ಅವಳು. ಆತ ಒಳಗೆ ಬಂದು, ನಾನೂ ಹಿಂದೆ ನಿಮ್ಮ ಬೇಲೂರಿನ ಕಡೆಯವನೇ. ಈಗ ಬಿದನೂರು ಸೀಮೆಯಲ್ಲಿದ್ದೀನಿ. ನನಗೆ ಒಬ್ಬ ಮೊಮ್ಮೊಗನನ್ನು ಬಿಟ್ಟು ಇನ್ಯಾರೂ ಇಲ್ಲ. ಅವನಿಗೆ ಕಾಲ ಮೀರೋದಕ್ಕೆ ಮೊದಲು ಉಪನಯನ ಮಾಡ್ಬೇಕಮ್ಮ. ಉಪನಯನ ಆದಮೇಲೆ ಅವನನ್ನು ಶೃಂಗೇರಿಗೆ ಕಳಿಸಿ ಕಲಿಸಬೇಕು ಅಂತ ನನ್ನ ಆಸೆ. ಈ ಮುದುಕನಿಗೆ ಏನಾದರೂ ಸಹಾಯ ಕೊಡ್ತೀಯೇನಮ್ಮ?” ಎಂದರು.

ತನ್ನ ಕೈಯಲ್ಲಿ ದುಡ್ಡುಕಾಸಿನ ವ್ಯವಹಾರ ಯಾವತ್ತೂ ಮಾಡಿದವಳಲ್ಲ ಅವಳು. “ನಾನು ಹೆಣ್ಣುಹೆಂಗಸು. ನನ್ನ ಹತ್ತಿರ ಏನು ತಾನೇ ಇದೆ ಕೊಡೋದಕ್ಕೆ? ನನ್ನ ಮನೆಯವರನ್ನು ಕೇಳದೇ ನಾನು ಏನು ತಾನೇ ಕೊಡೋದು?” ಎಂದಳು. ಮನಸ್ಸಿನಲ್ಲಿ ಪಿಚ್ಚೆನ್ನಿಸಿತು. ಗಂಡನನ್ನೇ ಕೇಳಿ ಕೊಡಿಸೋಣವೆಂದರೆ, ಆತ ಖಂಡಿತ ಒಪ್ಪುವುದಿಲ್ಲ. ಮೊದಲೇ ಅಕ್ಕಸಾಲಿ ಕೆಲಸ ಮಾಡುವವರು. “ನಮ್ಮ ಕಸುಬಿನಲ್ಲಿ ಯಾರುಏನು ಅಂತೆಲ್ಲ ನೋಡಬಾರದು. ಅಕ್ಕಸಾಲಿ ಅಕ್ಕನ ಚಿನ್ನವನ್ನೂ ಬಿಡೋಲ್ಲ ಅಂತ ಗಾದೆ ಇಲ್ಲವೇ?” ಎನ್ನುತ್ತಿದ್ದ ಅವನು. ಮೊದಲು ಇಷ್ಟು ಬಿಗಿಮುಷ್ಟಿಯಿರಲಿಲ್ಲ. ಆದರೆ, ಈಗ ಮಾವನವರು ಹೋಗಿ ಐದುವರ್ಷವಾಯಿತಲ್ಲ? ಆಗಿನಿಂದಂತೂ ಗಂಡನಿಗೆ ವ್ಯವಹಾರವೇ ಹೆಚ್ಚಾಗಿ ಹೋಗಿದೆ.

“ನಿಮಗೆ ತವರುಮನೆಯಿಂದ ಬಂದಿರೋದು ಏನಾದರೂ ಇದ್ದರೆ ಕೊಡಮ್ಮ. ನಾನೂ ಮುದುಕ. ಎಷ್ಟು ಮನೆಗೆ ಅಂತ ಹೋಗಿ ಕೇಳಲಿ?” ಎಂದರು ಆತ. ಕತ್ತನ್ನು ಮುಟ್ಟಿಕೊಂಡಳು. ಅಲ್ಲಿರುವುದೊಂದು ತಾಳಿ. ಕೈಯಲ್ಲಿ ಎರಡು ಜೊತೆ ಬಳೆ. ಕಿವಿಯಲ್ಲಿ ವಜ್ರದ ಬೆಂಡೋಲೆ, ಮೂಗಲ್ಲಿ ಮೂಗುತಿ, ಇಷ್ಟು ಬಿಟ್ಟು ಅವಳ ಮೈಮೇಲೆ ಒಡವೆ ಇನ್ನೇನಿತ್ತು? ಮುತ್ತೈದೆಯಾದವಳು ಇದರಲ್ಲಿ ಯಾವುದು ತಾನೇ ತೆಗೆಯಬಹುದು? ಹೆಸರಿಗೆ ಮನೆಯದು ಚಿನ್ನದ ವ್ಯಾಪಾರ. ಆದರೆ ಎಲ್ಲವನ್ನೂ ಪೆಟ್ಟಿಗೆಯಲ್ಲಿಟ್ಟು ಭದ್ರಮಾಡುವ ಗಂಡ ಇರುವಾಗ, ಇವಳು ಏನು ತಾನೇ ಮಾಡಲಾಗುತ್ತೆ?

ಸರಸ್ವತಿ ಏನೋ ಯೋಚಿಸುತ್ತಿದ್ದು ನೋಡಿ, ತಾನು ಹೇಳಿದ್ದು ಕೇಳಲಿಲ್ಲವೇನೋ ಎಂದುಕೊಂಡು ಆತ ಮತ್ತೆ “ಬೇಲೂರಿಂದ, ನಿನ್ನ ತವರು ಮನೆಯಿಂದ, ಏನಾದರೂ ಬಂದಿರೋ ಹಣಕಾಸು ಒಡವೆ ಗಿಡವೆ ಅಂತ ಇದ್ದರೆ ಕೊಡಮ್ಮ, ನಿನ್ನ ಕೈಲಾದದ್ದು” ಎಂದರು. ಸರಸ್ವತಿಗೆ, ದೇವರ ಗೂಡಿನಲ್ಲಿ ಇನ್ನೊಂದು ಹರಳಿನ ಮೂಗುತಿ ಇರುವುದು ನೆನಪಾಯಿತು. ಹಾಕಿಕೊಂಡಿದ್ದ ಮುತ್ತಿನ ಮೂಗುತಿಯನ್ನು ತೆಗೆದಳು. “ತೊಗೊಳ್ಳಿ ಸ್ವಾಮೀ. ಇದು ನಮ್ಮ ತವರು ಮನೆಯಲ್ಲಿ ಕೊಟ್ಟಿದ್ದೇ. ನಿಮ್ಮನ್ನ ನೋಡಿದಾಗ ನನಗೆ ನನ್ನ ತಂದೆಯ ನೆನಪಾಗುತ್ತಿದೆ. ಇದು ಕೈಯಲ್ಲಿ ಹಿಡಿದು ಆಶೀರ್ವಾದ ಮಾಡಿ” ಎಂದು ನಮಸ್ಕಾರ ಮಾಡಿದಳು.

“ದೀರ್ಘ ಸುಮಂಗಲೀ ಭವ” ಎಂದು ಆಶೀರ್ವಾದ ಮಾಡಿ, ಅವರು ಹೊರಟುಹೋದಮೇಲೆ, ಸರಸ್ವತಿಗೆ ತಾನು ಕೊಟ್ಟದ್ದು ಸರಿಯೇ ತಪ್ಪೇ ಎಂಬ ಪೀಕಲಾಟ ಶುರುವಾಯಿತು. ಆಗಲಿ, ಇನ್ನೊಂದು ಮೂಗುತಿ ಹಾಕಿಕೊಂಡುಬಿಡುವೆ. ಗಂಡನಿಗೆ ಗೊತ್ತಾಗದೇ ಇರಬಹುದು ಎಂದುಕೊಳ್ಳುವಾಗಲೇ ಪಕ್ಕದ ಮನೆಯ ಲಕ್ಷ್ಮೀದೇವಿ ಬಂದಳು. ಹೊಸದಾಗಿ ಮದುವೆಯಾಗಿರುವ ಹುಡುಗಿ. ಅತ್ತೆ ಇಲ್ಲದ ಮನೆ. “ಸರಸ್ವತಮ್ಮ, ನನಗೆ ಹುಡಿಗಡುಬು ಹೇಗೆ ಮಾಡೋದು ಅಂತ ಹೇಳಿಕೊಡ್ತೀನಿ ಅಂದಿದ್ದಿರಲ್ಲ, ಅದಕ್ಕೇ ಬಂದೆ” ಎಂದಳು. “ಬಾಮ್ಮಾ ಲಕ್ಷ್ಮೀ” ಎನ್ನುತ್ತ ಸರಸ್ವತಿ ಅವಳನ್ನು ಅಡುಗೆ ಮನೆಗೆ ಕರೆದೊಯ್ದಳು.

**********

ಇವತ್ತು ಅಪ್ಪ ಬರೆಯೋದಕ್ಕಿಂದ ಒಳ್ಳೆ ಚಿತ್ತಾರ ಬರೆದುಕೊಡ್ತೀನಿ ಅನ್ನೋ ಮನಸು ಮಾಡಿಕೊಂಡು ಅಂಗಡಿಯ ಹಿಂದಿನ ಹಜಾರದಲ್ಲಿ ಕುಳಿತಿದ್ದ ಮಧ್ವಪತಿ. ತಾನು ದೊಡ್ಡವನಾದಮೇಲೆ, ಅಜ್ಜನಿಗಿಂತ, ಅಪ್ಪನಿಗಿಂತ ಒಳ್ಳೊಳ್ಳೆ ಚಿತ್ತಾರದ ಒಡವೆಗಳನ್ನ ಮಾಡಬೇಕು ಅನ್ನುವ ಆಸೆ ಅವನಿಗೆ ಬಹಳ ಇತ್ತು. ವ್ಯವಹಾರದಲ್ಲಿ ಆಸಕ್ತಿ ಇರುವ ಅವನ ಕಿವಿ ಹಾಗೇ ಹೊರಗಡೆ ಅಪ್ಪ ಬಂದವರೊಡನೆ ಆಡುತ್ತಿದ್ದ ಮಾತುಗಳನ್ನೂ ಕೇಳುತ್ತಿದ್ದವು. “ಇನ್ನು ಮೂರು ದಿನದಲ್ಲಿ ಸಿದ್ಧವಾಗುತ್ತೆ ಅಡ್ಡಿಕೆ ನಿಮ್ಮದು ಎನ್ನುತ್ತಿರುವ ತಂದೆಯ ಮುಖ ಮಧ್ವಪತಿಗೆ ಕಾಣುತ್ತಿರಲಿಲ್ಲ. ಎದುರು ಕೂತವರು ಇಕ್ಕೇರಿಯ ಗಣಪತಿ ಹೆಗಡೆಯವರು. “ಅರೆ, ಇನ್ನೂ ಇವರ ಅಡ್ಡಿಕೆಯ ಕೆಲಸ ಆರಂಭವೇ ಆಗಿಲ್ಲವಲ್ಲ, ಮೂರು ದಿನದಲ್ಲಿ ಕೊಡೋದು ಹೇಗೆ!” ಎಂದುಕೊಂಡ. ಈ ಚಿನ್ನದ ಕೆಲಸದಲ್ಲಿ, ಸಣ್ಣ ಪುಟ್ಟ ಸುಳ್ಳುಗಳು ಹೇಳಬೇಕಾಗುತ್ತೆ ಅನ್ನೋದು ಅವನಿಗೆ ತಿಳಿದದ್ದೇ. ಹೇಗಿದ್ದರೂ ಇಕ್ಕೇರಿಯಿಂದ ಇವರು ಮತ್ತೆ ಮೂರು ದಿನಕ್ಕೆ ಬರೋದಿಲ್ಲ ಅಂತ ಗೊತ್ತಿದ್ದೇ ಅಪ್ಪ ಹೀಗೆ ಹೇಳಿರುವುದು ಎಂದು ಅವನಿಗೆ ಊಹೆ ಆಯಿತು. ಸರಿ ಎಂದು ಹೇಳಿ ಹೆಗಡೆಯವರು ಹೊರಟಿದ್ದು ಅವನಿಗೆ ಕಾಣಿಸಿತು. ಅವರು ಹೋಗುತ್ತಿರುವ ಹಾಗೇ, ಬಾಗಿಲಲ್ಲಿ ಮತ್ತೆ ಆ ಮುದುಕ ಪ್ರತ್ಯಕ್ಷ! “ಈ ಮುದುಕಪ್ಪ ಮತ್ತೆ ಬರುತ್ತಿದ್ದಾನಲ್ಲ? ಎರಡು ಮೂರು ಸಲ ನಾನೇ ಓಡಿಸಿದ್ದೆನಲ್ಲ ಇವರನ್ನ” ಎಂದುಕೊಂಡವನು ಸರಿ, ಅಪ್ಪ ಇದ್ದಾರಲ್ಲ, ಏನಾದರೂ ಮಾಡಿಕೊಳ್ಳಲಿ ಎಂದು ಸುಮ್ಮನಾದ.

ಆ ಮುದುಕ ಬಂದವನು “ನಾಯಕರೇ, ನನ್ನ ಹತ್ತಿರ ಒಂದು ಒಡವೆ ಇದೆ. ಇದನ್ನ ತೊಗೊಂಡು, ಏನು ಬರತ್ತೋ ಕೊಡಿ ಸ್ವಾಮಿ” ಅಂತ ಹೇಳಿದ್ದು ಕೇಳಿಸಿತು. ಯಾವುದೋ ಹಳೆಯ ಒಡವೆ ಇದ್ದಿರಬಹುದು. ಸರಿ, ಇದಾದರೆ ಪರವಾಗಿಲ್ಲ. ಹೇಗಿದ್ದರೂ, ಅವನ ಸಮಯಕ್ಕೆ ಸಹಾಯ ಆಗುತ್ತಲ್ಲ ಅಪ್ಪ ಅದನ್ನ ಕೊಂಡುಕೊಂಡು ದುಡ್ಡು ಕೊಟ್ಟರೆ, ಅನ್ನಿಸಿತು ಮಧ್ವಪತಿಗೆ.

“ಒಂದು ಅರ್ಧ ಗಂಟೆ ಇಲ್ಲೇ ಇರಪ್ಪ, ಮತ್ತೆ ಬಂದು ಈ ಮೂಗುಬೊಟ್ಟಿನ ದುಡ್ಡು ಕೊಡ್ತೀನಿ” ಎಂದು ಹೇಳಿದ್ದು ಕೇಳಿಸಿತು. ಒಳಗೆ ಬಂದು ನನಗೆ ಹೇಳಿ ಹೋಗ್ತಾರೇನೋ ಅಂಗಡಿ ನೋಡಿಕೊಳ್ಳೋದಕ್ಕೆ ಎಂದು ಮಧ್ವಪತಿ ಎಂದುಕೊಳ್ಳುವಷ್ಟರಲ್ಲೇ, ಅಂಗಡಿಯ ಬಾಗಿಲಿಗೆ ಬೀಗ ಜಡಿದ ಸದ್ದಾಯಿತು. ನಾನು ಇಲ್ಲಿ ಇರುವುದು ಗೊತ್ತಿರಲಿಲ್ಲ ಅನ್ನಿಸುತ್ತೆ. ನಾನು ಹಿಂದುಗಡೆಯಿಂದ ಬಂದಿದ್ದೆನಲ್ಲ ನಾಗಾಚಾರಿ ಹತ್ತಿರ ಕದ ತೆಗೆಸಿಕೊಂಡು? ಆಮೇಲೆ ತಂದೆ ಒಳಕ್ಕೆ ಬಂದೇ ಇರಲಿಲ್ಲ ಅನ್ನುವುದು ಹೊಳೆಯಿತು. ಇದಾವ ಮೂಗುಬೊಟ್ಟಿರಬಹುದು? ಅಷ್ಟು ಬೆಲೆಬಾಳುವುದಿರಬಹುದೇ? ಅದಕ್ಕೆ ಕೊಡುವಷ್ಟು ದುಡ್ಡು ಇಲ್ಲಿ ಇರಲಿಲ್ಲವೇನೋ? ಇನ್ನೆಲ್ಲಿಂದಾದರೂ ದುಡ್ಡು ತರಲು ಹೋಗಿರಬಹುದೇ? ಅದ್ಯಾವುದೋ ದಕ್ಷಿಣ ದೇಶದ ದೇವಸ್ಥಾನದಲ್ಲಿ, ದೇವಿಗೆ ಹಾಕಿರೋ ಮೂಗುತಿಯ ವಜ್ರದ*** ಹೊಳಪು ಎಷ್ಟೋ ದೂರಕ್ಕೆ ಕಾಣತ್ತೆ, ದೇವಿಯ ಮುಖಕ್ಕೆ ಬೇರೆ ದೀಪವೇ ಬೇಡವಂತೆ ಅಂತ ಒಂದು ಸಲ ಅಪ್ಪ ಹೇಳಿದ್ದು ನೆನಪಾಯಿತು. ಅಂತಹದ್ದಾಗಿದ್ದರೆ, ನೋಡಬೇಕು ಎಂದು ಆಸೆಯಾಗಿ ಮುಂದಿನ ಕೋಣೆಗೆ ನಡೆದ ಮಧ್ವಪತಿ. ಸಂದೂಕದ ಬೀಗದ ಕೈ ಎಂದಿನಂತೆ ಹಾಸಿನ ಕೆಳಗೆ ಸಿಕ್ಕಿತು. ಪೆಟ್ಟಿಗೆ ತೆಗೆದು ನೋಡಿದ. ಮೇಲಿನ ಚೌಕೋನದ ಖಾನೆಯಲ್ಲೇ ಇತ್ತು ಆ ಮುತ್ತಿನ ಮೂಗುತಿ. ಆದರೆ ಅವನ ಕಲ್ಪನೆಯಂತೆ ಯಾವುದೇ ಭಾರೀ ಮೂಗುತಿಯಾಗಿರಲಿಲ್ಲ ಅದು. ಮೇಲೊಂದು ಮುತ್ತು. ಕೆಳಗೆ ಬೇಸರಿಯಲ್ಲಿ ಮೂರು ಸಣ್ಣ ಮುತ್ತುಗಳು. ಕಣ್ಣುಗಾಜಿನಲ್ಲಿ ಹಿಡಿದು ಮುತ್ತನ್ನು ನೋಡಿದ. ಒಳ್ಳೇ ಮುತ್ತೇ. ಆದರೆ, ನಾವು ಕೊಳ್ಳಲಾರದಷ್ಟು ಬೆಲೆ ಬಾಳೋದೇನಲ್ಲ. ಅಪ್ಪ ಯಾಕೆ ಮತ್ತೆ ಹೊರಗೆ ಹೋದರು? ಸೋಜಿವಾಯಿತು ಅವನಿಗೆ. ಹಾಗೇ, ಇದು ಬಹಳ ಪರಿಚಿತವಾದದ್ದು ಅಂತಲೂ ಅನ್ನಿಸತೊಡಗಿತು. ಮತ್ತೊಮ್ಮೆ ಮಧ್ವಪತಿ ಮೂಗುತಿಯನ್ನು ಕೈಯಲ್ಲಿ ಹಿಡಿದ. ಅದು ಯಾವುದು ಎಂದು ಅವನಿಗೆ ಗೊತ್ತಾಗಿಬಿಟ್ಟಿತು.

*********

ಹುಡಿಗಡುಬು ಮಾಡುವ ವಿಧಾನವನ್ನು ಹೇಳಿಸಿಕೊಂಡು ಲಕ್ಷ್ಮೀದೇವಿ ಹೊರಟಳು. ಬಾಗಿಲು ಹಾಕಿಕೊಳ್ಳಲು ಅವಳ ಹಿಂದೆಯೇ ಹೋದ ಸರಸ್ವತಿಗೆ, ಮನೆ ಬಾಗಿಲಲ್ಲಿ ಗಂಡ ಬರುತ್ತಿರುವುದು ಕಂಡಿತು. ಇದೇನು, ಹೊತ್ತಲ್ಲದ ಹೊತ್ತಿನಲ್ಲಿ ಇವರು ಅಂಗಡಿ ಬಿಟ್ಟು ಇಲ್ಲಿಗೆ ಬಂದಿರುವುದು? ಎಂದುಕೊಂಡಳು. ಅಲ್ಲದೆ, ಏಕೋ ಅವನ ಮುಖ ಎಂದಿನಂತಿಲ್ಲ ಎಂತಲೂ ಅನ್ನಿಸಿತು.

“ಒಂದು ಸ್ವಲ್ಪ ನೀರು ಕೊಡ್ತೀಯಾ ಆಸರೆಗೆ” ಎಂದ ಶ್ರೀನಿವಾಸ.

ಒಳಹೋಗಿ, ತಾಮ್ರದ ತಂಬಿಗೆಯಲ್ಲಿ ನೀರು ತಂದಳು ಸರಸ್ವತಿ. ಅದನ್ನು ಕೊಡುತ್ತಿದ್ದ ಹಾಗೇ ಗಂಡ ತನ್ನ ಮುಖವನ್ನೇ ನೋಡುತ್ತಿರುವುದರ ಅರಿವಾಯಿತು ಅವಳಿಗೆ.

“ಮುತ್ತಿನ ಮೂಗುತಿ ಏನಾಯಿತು ನಿನ್ನದು?” ಎಂದ ಅವನು. ಇವಳ ಎದೆ ಧಸಕ್ಕೆಂದಿತು. ಹುಡಿಗಡುಬು ಮಾಡುವ ಧಾವಂತದಲ್ಲಿ, ಬೇರೆ ಮೂಗುತಿ ಹಾಕಿಕೊಳ್ಳುವುದನ್ನು ಮರೆತಿದ್ದಳು. ತಕ್ಷಣ ಬಾಯಿಗೆ ಬಂದದ್ದು ಹೇಳಿದಳು: “ಎಣ್ಣೆ ನೀರು ಹಾಕ್ಕೊಳ್ಳೋವಾಗ ತೆಗೆದಿಟ್ಟಿದ್ದೆ ಎಣ್ಣೆ ಕೂರುತ್ತೆ ಅಂತ, ಹಾಕಿಕೊಳ್ಳೋದು ಮರೆತಿದ್ದೆ”. ಆದರೆ, ಯಾಕೋ ಈ ಸುಳ್ಳನ್ನ ತಾನು ಸಾಧಿಸೋಕ್ಕಾಗೋದಿಲ್ಲ ಎನ್ನಿಸಿತು. ಅಲ್ಲದೆ, ಮುಖವೆಲ್ಲ ಬೆವರುತ್ತಿದೆ.

“ಹೌದಾ? ಸರಿ. ಹಾಕ್ಕೊಂಡು ಬಾ. ಈಗ”

ಜೀವ ಬಾಯಿಗೆ ಬಂತು ಅವಳಿಗೆ. ಆದರೆ ಮಾತು ಹೊರಬಂದಾಗಿದೆ. ಇನ್ನೇನೂ ಗತಿ ಕಾಣಲಿಲ್ಲ. ನಡುಮನೆಗೆ ನಡೆದಳು. ದೇವರ ಮುಂದೆ ಕುಳಿತಳು. ಗಂಡ ಜಗಲಿಯ ಮೇಲೆ ಕಾಯುತ್ತಿದ್ದಾನೆ.

ಇಪ್ಪತ್ತಕ್ಕೂ ಹೆಚ್ಚು ವರ್ಷದ ದಾಂಪತ್ಯ ಜೀವನ ಕಣ್ಣು ಮುಂದೆ ಒಂದುಸಲ ಬಂದು ಹೋಯಿತು ಅವಳಿಗೆ. ಪ್ರೀತಿಸುವ ಗಂಡ, ಆದರೆ ಸ್ವಲ್ಪ ಕಠಿಣ ಸ್ವಭಾವ. ದುಡ್ಡಿನ ವಿಷಯದಲ್ಲಂತೂ ಕೈ ಬಿಗಿ. ಸುಳ್ಳು ತಟವಟ ಎಂದರೆ ಆಗದು. ಸ್ವಲ್ಪ ಕೈಸಡಿಲಿಸು ಎಂದು ತಾನು ಹೇಳಿದರೆ ಅವನು ಕೇಳದವ. ಚೆನ್ನಾಗಿ ಓದಿ ಬರೆದು ಮಾಡಿರುವ ಅವನಿಗೆ, ಏನಾದರೂ ಬದಲು ಹೇಳಿದರೆ, ಕೂಡಲೆ ಅದಕ್ಕೆ ವಿರುದ್ಧಾರ್ಥ ಬರುವ ಯಾವುದೋ ಶ್ಲೋಕವನ್ನೋ, ವಚನವನ್ನೋ ಆ ಕ್ಷಣವೇ ಉದಾಹರಣೆಗೆ ಹೇಳಿಬಿಡುವಂತಹವನು. ಈಗ ತಾನು ಮಾಡಿದ ಕೆಲಸ ಹೇಳಿಬಿಡಲೇ? ಬೇಡವೇ? ಮನಸ್ಸು ಉಯ್ಯಾಲೆಯ ಮೇಲೆ ತೂಗಿತು.

ತಟ್ಟೆಯಲ್ಲಿದ್ದ ಹೂವು ತೆಗೆದು ದೇವರ ಮುಡಿಗೇರಿಸಿದಳು. ಬಲಗಡೆಗೆ ಬಿದ್ದರೆ, ಹೋಗಿ ಕ್ಷಮೆ ಕೇಳುತ್ತೇನೆ. ಅವಮಾನ ಆದದ್ದಾಗಲಿ. ಎದುರಿಸುವುದು. ಎಡಗಡೆಗೆ ಬಿದ್ದರೆ, ಮಾನ ಉಳಿಯುತ್ತೆ, ಆದರೆ ಅದಕ್ಕೆ ಕೊಡಬೇಕಾದ ಬೆಲೆ ಪ್ರಾಣತ್ಯಾಗ. ಅಷ್ಟೇ. ನಿರ್ಧರಿಸಿಬಿಟ್ಟಳು. ವಿಠಲನ ಮೂರುತಿಯ ಮೇಲೆ ಮಲ್ಲಿಗೆ ಹೂವು ಮಿನುಗಿತು ಸಣ್ಣ ನಂದಾದೀಪದ ಬೆಳಕಲ್ಲಿ. ಕಣ್ಣು ಮುಚ್ಚಿ ಮೂರು ಪ್ರದಕ್ಷಿಣೆ ಹಾಕಿದಳು.

ಕಣ್ಣು ಬಿಟ್ಟಾಗ ಹೂವು ಎಡಕ್ಕೆ ಬಿದ್ದಿರಬೇಕೆ?

ಅವಳಿಗೆ ಮುಂದಿನ ದಾರಿ ಕಂಡಿತ್ತು.

*********

ಮಧ್ವಪತಿ ಓಡುತ್ತಿದ್ದ. ಮುಷ್ಟಿ ಬಿಗಿಹಿಡಿದು ಓಡುತ್ತಿದ್ದ.

ಅಂಗಡಿಗೂ ಮನೆಗೂ ನಿದಾನವಾಗಿ ನಡೆದರೆ ಒಂದು ಗಳಿಗೆ ಬೇಕು. ಈಗ ಅವನಿಗೆ ಅಷ್ಟು ಸಮಯ ಇಲ್ಲ.

ಮನೆಯಲ್ಲಿ ಅಪ್ಪ ಏನಾದರೂ ಗಲಾಟೆ ಮಾಡಿದರೆ? ಅಮ್ಮನನ್ನು ಬೈದರೆ? ಅಮ್ಮ ಅತ್ತರೆ? ಆದಷ್ಟು ಬೇಗ ಓಡಿ ಹೋಗಿ ಅಪ್ಪನ ಕಣ್ಣು ತಪ್ಪಿಸಿ ಕೊಟ್ಟುಬಿಡಬೇಕು.

ಯಾವತ್ತೋ ಯಾರೋ ಕೇಳಿದರು ಎಂದು ಅಮ್ಮ ಒಂದು ಚೀಲ ಬತ್ತ ಕೊಟ್ಟಾಗ ಆಗಿದ್ದ ಗಲಭೆ ನೆನಪಾಗಿತ್ತು ಅವನಿಗೆ.

ಹಾಗೆಲ್ಲಾ ಕೆಲಸಕ್ಕೆ ಬಾರದಿರುವವರಿಗೆ ಕೊಡಬೇಕು ಎನ್ನುವ ಇಷ್ಟ ತನಗೂ ಇಲ್ಲ. ಆದರೆ, ಅಮ್ಮ ಅಳುವುದು ಮಾತ್ರ ಮಧ್ವಪತಿಗೆ ಬೇಕಾಗಿಲ್ಲ.

ಮನೆ ಹತ್ತಿರವಾಗಿತ್ತು. ಜಗಲಿಯ ಮೇಲೆ ಅಪ್ಪ ಕುಳಿತದ್ದು ಕಂಡಿತು. ಸುತ್ತ ಬಳಸಿ ನಡುಮನೆಯ ಕಿಟಕಿ ಹತ್ತಿರ ಹೋಗಿ ಮೆತ್ತಗೆ “ಅಮ್ಮ ಅಮ್ಮ” ಎಂದು ಕೂಗಿದ. ಎತ್ತರದ ಕಿಟಕಿಯ ಮೇಲೆ ಹತ್ತಲು ಆಗುತ್ತಿಲ್ಲ ಅವನಿಗೆ.

ಹೇಗೋ ಸರಳುಗಳನ್ನು ಹಿಡಿದು ಮೇಲೆ ಹತ್ತಿ, ತಲೆಯನ್ನು ಕಿಟಕಿಯಲ್ಲಿ ತೂರಿಸಿ ಒಳಗೆ ಕಣ್ಣು ಹಾಯಿಸಿದ.

ದೇವರ ಮುಂದೆ ಕುಳಿತ ಅಮ್ಮ. ಕಣ್ಣುಮುಚ್ಚಿ ಕೈಯಲ್ಲಿ ಬಟ್ಟಲು ಹಿಡಿದಿದ್ದಾಳೆ. ಅದರಲ್ಲೇನಿದೆ?

ಹೊರಗಿನಿಂದ ಅಪ್ಪ ಕೂಗಿದ್ದು ಅವನಿಗೂ ಕೇಳಿಸಿತು. “ಬಂದೆಯಾ ಸರಸ್ವತಿ ಮೂಗುತಿ ಹಾಕ್ಕೊಂಡು? ಎಷ್ಟು ಹೊತ್ತು ಮಾಡ್ತಿದೀ?”

ಏನೋ ಆಗಬಾರದ್ದು ಆಗುತ್ತಿದೆ ಎಂದು ಅವನಿಗನ್ನಿಸಿತು. ಕೈಯಲ್ಲಿದ್ದ ಪುಟ್ಟ ಪೆಟ್ಟಿಗೆಯನ್ನು ನೇರವಾಗಿ ಅಮ್ಮನ ತಲೆಯ ಮೇಲೇ ಬೀಳುವಂತೆ ಎಸೆದ. ಅಷ್ಟರಲ್ಲಿ ಸರಳುಗಳನ್ನು ಹಿಡಿದಿದ್ದ ಅವನ ಕೈಗಳು ಜಾರಿ, ಕೆಳಗೆ ಬಿದ್ದ ಮಧ್ವಪತಿ.

**********

ಸರಸ್ವತಿಗೇ ತನ್ನ ಕಣ್ಣುಗಳನ್ನೇ ನಂಬಲಾಗುತ್ತಿಲ್ಲ. ತಾನು ವಿಷ ಕುಡಿಯ ಹೊರಟಾಗ ಮೇಲಿನಿಂದ ಬಿದ್ದ ಪುಟ್ಟ ಪೆಟ್ಟಿಗೆಯಲ್ಲಿ ತನ್ನ ಮೂಗುತಿ! ಅದನ್ನು ಹಾಕಿಕೊಂಡು ಹೊರಗೆ ಹೊರಟರೆ ಗಂಡನ ಮುಖದಲ್ಲಿ ಆಶ್ಚರ್ಯ! ಹೊರಗೆ ಹೋದವಳು ಬಟ್ಟಲನ್ನೂ ಮರೆತು ಕೈಯಲ್ಲೇ ಹಿಡಿದಿದ್ದಳು ಅವಳು.

ಅವಳ ಕಿವಿಯ ಓಲೆಯ ಹರಳೊಂದು ಮಾಯವಾಗಿದ್ದು ಅವನಿಗೆ ಕಂಡಿದ್ದರಿಂದ, ಬಟ್ಟಲಲ್ಲೇನಿತ್ತೆಂದು ಅವನಿಗೆ ಗೊತ್ತಾಗಿಹೋಗಿತ್ತು. ಅದನ್ನು ಅವಳ ಕೈಯಿಂದ ಕಿತ್ತು ಹೊರಗೆ ಎರಚಿ ಮಾತಿಲ್ಲದೇ ಧಾವಿಸಿದ್ದ ಅವನು ಅಂಗಡಿಗೆ.

ಅಂಗಡಿಗೆ ಹೋಗಿ ನೋಡಿದರೆ ಮುಂಬಾಗಿಲ ಬೀಗ ಹಾಗೇ ಇದೆ. ಆ ಮುದುಕನ ಪತ್ತೆ ಇಲ್ಲವೇ ಇಲ್ಲ. ಒಳಹೊಕ್ಕು ನೋಡಿದರೆ, ಸಂದೂಕದಲ್ಲಿ ಮೂಗುತಿಯ ಸುದ್ದಿಯೂ ಇಲ್ಲ.

ಶ್ರೀನಿವಾಸನಿಗೆ ಮನಸ್ಸು ಕಲಕಿಹೋಗಿತ್ತು. ತನಗೆ ಹೇಳದೆ ಕೊಟ್ಟ ದಾನದಿಂದ ಹೆದರಿದ ಹೆಂಡತಿ ಪ್ರಾಣ ಕಳೆದುಕೊಳ್ಳಹೊರಟಳೇ? ಹಾಗೇನಾದರೂ ಆಗಿದ್ದರೆ, ತನ್ನ ಹತ್ತಿರ ಇದ್ದ ಹಣವನ್ನೆಲ್ಲ ಸುರಿದರೂ ಅವಳು ಮತ್ತೆ ಬರುತ್ತಿರಲಿಲ್ಲವಲ್ಲ?

ಒಂದು ನಿರ್ಧಾರಕ್ಕೆ ಬಂದಿತ್ತು ಅವನ ಮನಸ್ಸು. ಅಂಗಡಿಗೆ ಮತ್ತೆ ಬೀಗ ಹಾಕಿ ಹೊರಟ ಅವನು.

*********

ಊರಿನಲ್ಲೆಲ್ಲ ಒಂದೇ ಸುದ್ದಿ. ನವಕೋಟಿ ನಾರಾಯಣ ಶ್ರೀನಿವಾಸ ನಾಯಕರು ಇದ್ದುದೆಲ್ಲ ದಾನ ಮಾಡುತ್ತಿದ್ದಾರಂತೆ! ಯಾರಿಗೂ ನಂಬಲಾರದ ಮಾತು! ಎಲ್ಲವನ್ನೂ ದಾನ ಮಾಡಿ, ಹರಿದಾಸರಾಗುತ್ತಾರಂತೆ!

ಶ್ರೀನಿವಾಸ ನಾಯಕ ಅಂಗಡಿಗೆ ಹೋಗಿ ಬಂದವನೆ ಸರಸ್ವತಿಗೆ ಮುದುಕನ ಕಥೆ ಹೇಳಿ, ಅವನು ಯಾರೋ ಮಹಾತ್ಮನೇ ಇರಬೇಕು, ನಾನು ನಿಜವಾಗಲೂ ತಪ್ಪು ಮಾಡುತ್ತಿದ್ದೆ ಎನ್ನಿಸಿದೆ. ಹೆಚ್ಚು ಕಡಿಮೆಯಾಗಿದ್ದರೆ, ನಿನ್ನನ್ನೂ ಕಳೆದುಕೊಳ್ಳುತ್ತಿದ್ದೆ. ಆಮೇಲೆ ನಾವೆಲ್ಲ ಅನಾಥರಾಗುತ್ತಿದ್ದೆವಲ್ಲ ಎಂದು ಹಳಹಳಿಸಿದ್ದ.

ಸರಸ್ವತಿಗೆ ಅವನಲ್ಲಾದ ಬದಲಾವಣೆ ನೋಡಿ ಅಚ್ಚರಿಯಾಗಿತ್ತು.

ಅವನ ಮಾತು ಮುಂದುವರೆಯುತ್ತಿತ್ತು: “ನಾವು ವಿಜಯನಗರಕ್ಕೆ ಹೋಗಿಬಿಡೋಣ. ಅಲ್ಲಿ ಯಾರಾದರೂ ಗುರುಗಳನ್ನು ಹುಡುಕುತ್ತೇನೆ. ಹಿಂದೆ ಕಲಿತದ್ದನ್ನು ಮುಂದುವರೆಸುತ್ತೇನೆ. ಅವರು ಹೇಳಿದಂತೆ ಮಾಡುತ್ತೇನೆ. ನಾಲ್ಕು ಹಾಡು ಬರೆದು ಮಕ್ಕಳಿಗೆ ಹೇಳಿಕೊಡುವ ಬದಲು, ಎಲ್ಲರ ಮನೆಯ ಮುಂದೆ ನಾಲ್ಕು ಹಾಡು ಹೇಳುವ ಹರಿದಾಸನಾಗುತ್ತೇನೆ. ಇನ್ನು ಸಾಕು ನಮಗೆ ಈ ಕ್ಷೇಮಪುರ. ಇವತ್ತೇ ಆಗಲಿ ಈ ಶ್ರೀನಿವಾಸ ನಾಯಕನ ಕೊನೆ. ನೀವೆಲ್ಲ ನನ್ನ ಜೊತೆ ಬರಲು ಸಿದ್ಧವೇ?”

ವೈಕುಂಠದಾಸರ ನೆನಪಾಯಿತು ಅವಳಿಗೆ. ಮನೆಯ ಮುಂದೆ ಬಂದು ಅವರು ನಿಂತು ಹಾಡುತ್ತಿದ್ದುದ್ದು ಎಷ್ಟು ಸೊಗಸು! ಈಗ ಇವನೂ ಹಾಗೇ ಹರಿದಾಸನಾಗುವ ಮಾತಾಡುತ್ತಿದ್ದಾನೆ! ಸರಸ್ವತಿ ಮಾತಿಲ್ಲದೇ ತಂಬೂರಿ ತಂದು ಗಂಡನ ಕೈಗಿತ್ತಿದ್ದಳು.

ಹೊರಗೆ ಶ್ರೀನಿವಾಸ ಎಲ್ಲವನ್ನೂ ದಾನ ಕೊಡುತ್ತಿರುವಾಗ, ನಡುವೆ ಮಧ್ವಪತಿ ಅಮ್ಮನನ್ನು ಗುಟ್ಟಾಗಿ ಕರೆದು ನಡೆದುದ್ದನ್ನ ಹೇಳಿದ್ದ.

ಅದೆಲ್ಲ ಕೇಳಿ,  ಆ ಮುದುಕ ಬಂದದ್ದು ಯಾರೋ? ನನ್ನ ತಂದೆಯ ಹಾಗೇ ಇದ್ದರಲ್ಲಾ? ಮೂಗುತಿ ತಂದುಕೊಟ್ಟದ್ದು ಮಧ್ವಪತಿಯಾದರೂ, ಅವನಿಗೆ ಆ ಬುದ್ಧಿ ಕೊಟ್ಟವನು ಆ ಬೇಲೂರ ಚೆನ್ನಿಗ, ಪುರಂದರವಿಠಲ ತಾನೇ? ಆದದ್ದೆಲ್ಲಾ ಒಳಿತೇ ಆಯಿತು, ಆ ವಿಠಲನ ಸೇವೆಗೆ ಸಾಧನ ಸಂಪತ್ತಾಯಿತು ಎಂದು ಸರಸ್ವತಿಯ ಮನಸ್ಸು ಹೇಳಿತು.

“ಮಧ್ವ, ಈಗ ನಡೆಯುತ್ತಿರುವುದೂ ಎಲ್ಲ ಆ ವಿಠಲನ ಇಚ್ಛೆಯಂತೆಯೇ. ಇಲ್ಲಿಯವರೆಗೂ ನಡೆದದ್ದೂ ಅವನ ಇಚ್ಛೆಯಂತೆ. ಹೋಗಿ, ಈ ವಿಷಯ ನಿಮ್ಮಪ್ಪನಿಗೆ ಹೇಳು” ಎಂದಳು ಅವಳು.

ಮಧ್ವಪತಿ ಹೋಗಿ ಶ್ರೀನಿವಾಸ ನಾಯಕನಿಗೆ ನಡೆದದ್ದನ್ನೆಲ್ಲ ಹೇಳಿದ. ಎಲ್ಲವನ್ನೂ ಶಾಂತವಾಗಿ ಕೇಳಿದ ಶ್ರೀನಿವಾಸ ಹೇಳಿದ್ದೊಂದೇ ಮಾತು. “ಕೃಷ್ಣಾರ್ಪಣಮಸ್ತು”. ಅವನಿಗೆ ಅವನ ಮುಂದಿನ ದಾರಿ ನಿಚ್ಚಳವಾಗಿತ್ತು.

ಮರುದಿನ ಬೆಳಿಗ್ಗೆ ಅವರ ಮನೆ ಬರಿದಾಗಿತ್ತು. ವಿಜಯನಗರದ ಕಡೆಗೆ ಹೋಗುವ ದಾರಿಯಲ್ಲಿ ಶ್ರೀನಿವಾಸ ನಾಯಕನ ಕುಟುಂಬ ನಡೆಯುತ್ತ ಸಾಗಿತ್ತು. ಕೈಯಲ್ಲಿ ತಾಳ ತಂಬೂರಿ ಹಿಡಿದ ಶ್ರೀನಿವಾಸನ ಸುಮಧುರ ಧ್ವನಿ ಕೇಳುತ್ತಿತ್ತು.

“ತಂಬೂರಿ ಮೀಟಿದವ ಭವಾಬ್ದಿ ದಾಟಿದವ

ತಾಳವ ತಟ್ಟಿದವ ಸುರರೊಳು ಸೇರಿದವ

ಗಾನವ ಪಾಡಿದವ ಹರಿ ಮೂರುತಿ ನೋಡಿದವ

ವಿಠಲನ ನೋಡಿದವ ವೈಕುಂಠಕೆ ಓಡಿದವ….”

ಹೌದು.

ಅವರು ನಡೆದಿದ್ದರು, ಗುರಿಯ ಕಡೆಗೆ.

ಅವರ ಕೊನೆಯ ಗುರಿಯ ಕಡೆಗೆ.

***************************************************************************************************************

ಟಿಪ್ಪಣಿಗಳು:

ಶ್ರೀನಿವಾಸನಾಯಕ ಪುರಂದರದಾಸನಾಗಲು ಪ್ರೇರೇಪಿಸಿದ ದಂತಕಥೆ ಎಲ್ಲರಿಗೂ ಗೊತ್ತಿರುವುದೇ. ಆದರೆ, ಈ ಕಥೆಯಲ್ಲಿನ ವಿವರಗಳು ನನ್ನ ಕಲ್ಪನೆಯವು ಎಂದು ಹೇಳಲು ಇಚ್ಛಿಸುವೆ. ಪುರಂದರದಾಸರು ಕರ್ನಾಟಕ ಸಂಗೀತವನ್ನು ಕಲಿಸಲು ಅನುಕೂಲವಾಗುವಂತೆ ಬಾಲಪಾಠಗಳ ರಚೆನೆ ಮಾಡಿದರು ಎನ್ನುವುದು ಪರಂಪರೆಯಿಂದ ತಿಳಿದುಬರುತ್ತದೆ.

ಅವರನ್ನು ಕರ್ನಾಟಕ ಸಂಗೀತ ಪಿತಾಮಹ ಎಂದೂ ಕರೆಯುತ್ತಾರೆ. ಹೇಬಣ, ಮಧ್ವಪತಿ ಮತ್ತು ಅಭಿನವ ಎಂಬ ಪುರಂದರ ದಾಸರ ಮಕ್ಕಳ ಹೆಸರು ಶಾಸನಗಳಲ್ಲಿ ಸಿಕ್ಕಿವೆ.

**: ಕ್ಷೇಮಪುರ, ಪುರಂದರಪುರವೆಂದೂ ಹೆಸರಾದ ಈ ಊರನ್ನು ಶಿವಮೊಗ್ಗ ಜಿಲ್ಲೆಯ ಆರಗ ಸೀಮೆಯ ಗೇರುಸೊಪ್ಪೆ ಎಂದು ಶಾಸನಾಧಾರಗಳಿಂದ ಗುರುತಿಸಲಾಗಿದೆ. ಪುರಂದರದಾಸರು ಇಲ್ಲಿಯವರಾಗಿದ್ದಿರಬೇಕೆಂಬುದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದಾರೆ.

***: ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ದೇವಿಯ ಮೂಗುತಿಯ ಹೊಳಪು, ಪ್ರಕಾಶ ಬಹಳ ಪ್ರಖ್ಯಾತವಾದದ್ದು.

61ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತವು ಕರ್ನಾಟಕ ಸಂಗೀತವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವುದು ಸರಿಯಷ್ಟೇ. ಆದರೆ ಈ ಸಂಗೀತ ಪ್ರಕಾರದಲ್ಲಿ ಆಸಕ್ತಿಯುಳ್ಳ ಕೇಳುಗರು ಒಂದಂಶವನ್ನು ತಪ್ಪದೇ ಗಮನಿಸುತ್ತಾರೆ.  ಕರ್ನಾಟಕ ಸಂಗೀತವು ಕರ್ನಾಟಕವೊಂದೇ ಅಲ್ಲದೆ, ಬೇರೆ ರಾಜ್ಯಗಳಲ್ಲೂ ರೂಢಿಯಲ್ಲಿದೆ, ಇಲ್ಲಿಗಿಂತ ಹೆಚ್ಚಾಗಿಯೇ!  ಸುಪ್ರಸಿದ್ಧರೆನಿಸಿದ ಬಹಳಷ್ಟು ಕರ್ನಾಟಕ ಸಂಗೀತಗಾರರು ತಮಿಳರು ಅಥವ ತೆಲುಗರು.  ತ್ಯಾಗರಾಜರೇ ಮೊದಲಾದ ಕರ್ನಾಟಕ ಸಂಗೀತದ ತ್ರಿಮೂರ್ತಿಗಳನ್ನೊಳಗೊಂಡು ಬಹಳಷ್ಟು ಜನ ವಾಗ್ಗೇಯಕಾರರು ಕನ್ನಡಿಗರಲ್ಲ.  ಇನ್ನು ಕನ್ನಡದವರೇ ಆದ ಮೈಸೂರು ವಾಸುದೇವಾಚಾರ್ಯರಂಥವರೂ ಕನ್ನಡದಲ್ಲಿ ಬರೆದಿದ್ದು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ – ಒಂದೋ ಎರಡೋ.  ಹೀಗಾಗಿ ಹರಿದಾಸರ ರಚನೆಗಳನ್ನು ಬಿಟ್ಟರೆ, ಇಂದು ಕರ್ನಾಟಕ ಸಂಗೀತದಲ್ಲಿ ಪ್ರಚಲಿತವಾಗಿರುವ ಅತಿ ಹೆಚ್ಚು “ಕೃತಿ” ಎಂಬ ಪ್ರಕಾರದ ರಚನೆಗಳು ತೆಲುಗು, ಸಂಸ್ಕೃತ, ಮತ್ತು ಕೆಲಮಟ್ಟಿಗೆ ತಮಿಳು ಭಾಷೆಯವು. ಹರಿದಾಸರ ಹೆಚ್ಚಿನ ರಚನೆಗಳ ಮೂಲ ಸಂಗೀತರೂಪವೂ ಉಳಿಯದೇ ಹೋಗಿರುವುದರಿಂದ, ನಾವು ಕೇಳುವ ಹರಿದಾಸ ‘ಕೃತಿ’ಗಳಲ್ಲಿ ಹೆಚ್ಚಿನವು ಸಂಗೀತದ ಮಟ್ಟಿಗೆ ಹೇಳುವುದಾದರೆ, ತ್ಯಾಗರಾಜಾದಿಗಳ ನಂತರದವು. ಅಂದಮೇಲೆ ಕರ್ನಾಟಕ ಸಂಗೀತದಲ್ಲಿ ಕರ್ನಾಟಕವೆಲ್ಲಿ? ಕನ್ನಡವೆಲ್ಲಿ? ಎಂಬ ಪ್ರಶ್ನೆಗಳು ಏಳುವುದು ಸಹಜವೇ.

ಆದರೆ ಮೇಲ್ನೋಟಕ್ಕೆ ಕನ್ನಡ ಹೆಚ್ಚಾಗಿ ಕಾಣದಿದ್ದರೂ, ಸ್ವಲ್ಪ ಒಳಹೊಕ್ಕು ನೋಡಿದಾಗ, ಸಂಗೀತದಲ್ಲಿ ಕನ್ನಡವು ಹಾಸುಹೊಕ್ಕಾಗಿರುವುದು ಕಂಡು ಬರುತ್ತದೆ.

ಅಂದಹಾಗೆ ಕರ್ನಾಟಕ ಸಂಗೀತವೆಂಬ ಹೆಸರು ನಮ್ಮ ಸಂಗೀತಕ್ಕೆ ಬಹಳ ಹಳೆಯ ಹೆಸರಲ್ಲ. ಅದು ಸುಮಾರಾಗಿ ಪ್ರಚಾರಕ್ಕೆ ಬಂದು ಒಂದೂವರೆ ಶತಮಾನವಷ್ಟೇ ಆಗಿರಬಹುದು. ಕರ್ನಾಟಕ ಸಂಗೀತದ ಪಿತಾಮಹರೆಂದು ಪುರಂದರ ದಾಸರ ಹೆಸರು ದಾಖಲಾಗಿರುವುದೂ ೧೯೦೪ ರಲ್ಲಿ ಪ್ರಕಟವಾದ, ಸುಬ್ಬರಾಮ ದೀಕ್ಷಿತರ ಸಂಗೀತ ಸಂಪ್ರದಾಯ ಪ್ರದರ್ಶಿನಿಯಲ್ಲಿ. ಹಾಗೆಂದರೆ ಆ ಪುಸ್ತಕದಲ್ಲಿ ದಾಖಲಾಗುವ ಮೊದಲು ತಮಿಳುನಾಡಿನ ತಂಜಾವೂರು ಪ್ರಾಂತ್ಯದಲ್ಲಿ ಪುರಂದರ ದಾಸರು “ಕರ್ನಾಟಕ” ಸಂಗೀತದ ಬಾಲ ಪಾಠಗಳ ಪದ್ಧತಿಯನ್ನು ಸಿದ್ಧಮಾಡಿದವರು ಎಂಬ ನಂಬಿಕೆ ಹಾಸುಹೊಕ್ಕಾಗಿದ್ದಿರಬೇಕು. ಸುಮಾರಾಗಿ ೧೮ನೇ ಶತಮಾನದ ಮೊದಲ ದಶಕಗಳಲ್ಲಿ ತಂಜಾವೂರಿನ ರಾಜ ತುಳಜಾಜಿ ಬರೆದ ‘ಸಂಗೀತ ಸಾರಾಮೃತ’ವೆಂಬ ಹೊತ್ತಿಗೆಯಲ್ಲಿ  ಆತ ಈ ಬಗ್ಗೆ ಪ್ರಸ್ತಾಪಿಸುತ್ತಾನೆ.  ಹಾಗಾಗಿ  ಕರ್ನಾಟಕ ಸಂಗೀತವೆಂಬ ಹೆಸರು ಮೊದಲು ಬಂದದ್ದು ತಮಿಳು ಮಾತನಾಡುವ ಪ್ರದೇಶದಲ್ಲೇ ಎಂಬುದರಲ್ಲಿ ಅನುಮಾನವಿಲ್ಲ,

ಭಾರತೀಯ ಸಂಗೀತವು ಸುಮಾರು ೧೨-೧೩ನೇ ಶತಮಾನಗಳ ತನಕ ಏಕರೂಪವಾಗಿತ್ತೆಂಬುದು, ನಂತರ ಮಹಮ್ಮದೀಯರ ಆಕ್ರಮಣದೊಡನೆ,  ಅವರೊಡನೆ ಬಂದ ಪರ್ಶಿಯನ್ ಹಾಗೂ ಇತರ ಮಧ್ಯಪೂರ್ವ ದೇಶಗಳ ಸಂಗೀತದ ಪ್ರಭಾವದಿಂದ ಎರಡು ಕವಲಾಯಿತೆಂಬುದು ಸುಸ್ಪಷ್ಟ. ಇದನ್ನು ಸಂಗೀತ ಶಾಸ್ತ್ರ ಗ್ರಂಥಗಳ ಹಿನ್ನೆಲೆಯಿಂದ ಗುರುತಿಸಬಹುದು. ದಕ್ಷಿಣದ ಕವಲಿಗೆ ಕರ್ನಾಟಕದ, ಕನ್ನಡಿಗರ ಕೊಡುಗೆ ಮಹತ್ವದ್ದು. ಸಂಗೀತವೆನ್ನುವುದು ನಿಂತ ನೀರಲ್ಲ – ಹರಿವ ನದಿಯಂತೆ. ಅಲ್ಲಲ್ಲಿ ಹೊಸ ಸಂಪ್ರದಾಯ ಸ್ವೋಪಜ್ಞತೆಗಳ ನದಿಗಳು ಅದಕ್ಕೆ ಸೇರುತ್ತಿರುವುದುಂಟು. ಹಾಗಾಗಿ ಶಾಸ್ತ್ರಜ್ಞರು , ಆಗಿಂದಾಗ್ಗೆ ಅವರ ಕಾಲದ ಸಂಗೀತ ಹೇಗಿತ್ತೆಂಬುದನ್ನು ದಾಖಲಿಸದಿದ್ದರೆ, ಈ ಸಂಗೀತವೆಂಬ ಹೊನಲಿನ ಹರಿವನ್ನು ಗುರುತಿಸುವುದು ಸಾಧ್ಯ.  ಈ ರೀತಿಯ ಶಾಸ್ತ್ರಜ್ಞರಲ್ಲಿ ಕನ್ನಡಿಗರ ಸಂಖ್ಯೆ ಬಹಳ ಹೆಚ್ಚೆನ್ನುವುದು ನಿರ್ವಿವಾದ.

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು – ಕೆಲವರನ್ನುಳಿದು ಈ ಗ್ರಂಥಕಾರರಲ್ಲಿ ಯಾರೂ ಕನ್ನಡದಲ್ಲಿ ಬರೆಯಲಿಲ್ಲ. ಆದರೆ ಅದಕ್ಕೆ ಕಾರಣವೂ ಇದೆ – ಏಕೆಂದರೆ ಅವರಿಗೆ ತಮ್ಮ ವಿಚಾರಗಳು ಕನ್ನಡ ಮಾತನ್ನಾಡುವ ವಲಯದಿಂದಲೂ ಹೊರಕ್ಕೂ ತಿಳಿಸುವುದು ಮುಖ್ಯವಾಗಿತ್ತು. ಏಕೆಂದರೆ ಈ ಸಂಗೀತದ ಭೌಗೋಳಿಕ ಹರಹು ಕನ್ನಡ ಮಾತನಾಡುವ ಪ್ರದೇಶಗಳಿಗೂ ಹೊರಗೂ ಹಬ್ಬಿತ್ತು.  ಅಲ್ಲದೇ ಇನ್ನು ಈ ಕೆಲವು  ಆ ಕಾರಣದಿಂದ ಈ ಗ್ರಂಥಕಾರರು ಬಹುಪಾಲು ತಮ್ಮ ಪುಸ್ತಕಗಳನ್ನ ಕನ್ನಡಕ್ಕೆ ಬದಲಾಗಿ ಸಂಸ್ಕೃತದಲ್ಲಿ ಬರೆದರು. ಇದು ಸುಮಾರಾಗಿ, ಹಲವು ದೇಶಗಳ ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ಪ್ರಚಂಚದಲ್ಲಿ ಆದಷ್ಟೂ ಹೆಚ್ಚು ಜನರಿಗೆ ತಿಳಿಯಲೆಂದು ಇಂಗ್ಲಿಷ್ ಭಾಷೆಯಲ್ಲಿ ಬರೆಯುವುದಕ್ಕೆ ಹೋಲಿಸಬಹುದು.  ಹೀಗೆ ನಮ್ಮ ಸಂಗೀತದ ಲಕ್ಷಣಗಳ ಬಗ್ಗೆ ಬರೆದವರಲ್ಲಿ ನಾವು ವಿದ್ಯಾರಣ್ಯ (ಸಂಗೀತಸಾರ),  ಕಲ್ಲಿನಾಥ, ರಾಮಾಮಾತ್ಯ (ಸ್ವರಮೇಳ ಕಲಾನಿಧಿ), ಪಂಡರೀಕ ವಿಠಲ (ಸದ್ರಾಗಚಂದ್ರೋದಯ ), ಗೋವಿಂದ ದೀಕ್ಷಿತ ( ಸಂಗೀತ ಸುಧಾ) , ವೆಂಕಟ ಮಖಿ (ಚತುರ್ದಂಡಿ ಪ್ರಕಾಶಿಕಾ) ಮುದ್ದು ವೆಂಕಟಮಖಿ (ರಾಗಲಕ್ಷಣ) – ಈ ಗ್ರಂಥಕಾರರನ್ನೂ, ಅವರ ಹೊತ್ತಿಗೆಗಳನ್ನೂ ನೆನೆಯಬೇಕಾಗುತ್ತದೆ.  ಹೀಗೆ ಹಲವರು ಕನ್ನಡಿಗರ ಈ ಸಂಗೀತವು ಬೆಳೆದು ಬಂದ ದಾರಿಯನ್ನು ದಾಖಲು ಮಾಡುವುದೂ ದಕ್ಷಿಣಾದಿ ಸಂಗೀತಕ್ಕೆ “ಕರ್ನಾಟಕ” ಸಂಗೀತವೆಂದು ಹೇಳುವುದಕ್ಕೆ ಇದೂ ಒಂದು ಪ್ರಮುಖ ಕಾರಣವಿರಬೇಕೆಂದು ಮಹಾಮಹೋಪಾಧ್ಯಾಯ ರಾ.ಸತ್ಯನಾರಾಯಣ ಅಭಿಪ್ರಾಯಪಡುತ್ತಾರೆ.

ಒಟ್ಟಿನಲ್ಲಿ “ಕರ್ನಾಟಕ”ಕ್ಕೆ ಕರ್ನಾಟಕ ಸಂಗೀತವೆಂದು ಹೆಸರು ಕೊಟ್ಟವರು ಕನ್ನಡಿಗರಲ್ಲ. ಇದರಲ್ಲಿ ಆಶ್ಚರ್ಯವೂ ಇಲ್ಲ. ಉದಾಹರಣೆಗೆ, ಸಾಮಾನ್ಯವಾಗಿ ರಾಗಿಮುದ್ದೆ ಪರಿಚಿತವಾಗಿರುವ ದಕ್ಷಿಣ ಕರ್ನಾಟಕದಲ್ಲಿ , ಮುದ್ದೆ ಎಂದರೆ ರಾಗಿ ಮುದ್ದೆ ಎಂದೇ ಅರ್ಥ ಮಾಡಿಕೊಳ್ಳಲಾಗುತ್ತದೆ. ಆದರೆ ಈ ಪ್ರದೇಶದಿಂದ ಹೊರಗಡೆಯಾದರೆ ಅದನ್ನು “ರಾಗಿ ಮುದ್ದೆ” ಎಂದೇ ಹೇಳಬೇಕಾಗುತ್ತದೆ. ಅದೇ ರೀತಿ ಈ ಸಂಗೀತವು, ಕರ್ನಾಟಕ ಸಂಗೀತವೆಂದು ಹೆಸರು ಬರಲು, ಕರ್ನಾಟಕದಿಂದ ಬಂದ ಲಾಕ್ಷಣಿಕರು ಹೆಚ್ಚಾಗಿ ಈ ಸಂಗೀತ ಪರಂಪರೆಯ ಬುನಾದಿಯಾಗಿ ಇದ್ದಿರುವುದೂ, ಕನ್ನಡಿಗ ಪುರಂದರ ದಾಸರ ಸಂಗೀತ ಕಲಿಸುವ ಪದ್ಧತಿಯನ್ನೇ ಎಲ್ಲಕಡೆ ಮಾನ್ಯ ಮಾಡಿರುವುದೂ, ಇವೆಲ್ಲವೂ ಕರ್ನಾಟಕ ಸಂಗೀತವೆನ್ನುವ ಹೆಸರು ಬರಲು ಕಾರಣವಾಗಿವೆಯೆಂದು ರಾ.ಸತ್ಯನಾರಾಯಣರ  ಅಭಿಪ್ರಾಯ. ಇಂದಿನ ಕರ್ನಾಟಕ ಸಂಗೀತ ತೆಗೆದುಕೊಳ್ಳುವ ರೂಪಕ್ಕೆ, ಇದರಲ್ಲಿ ಹಾಡುವ ರಚನೆಗಳಿಗೆ, ನೇರವಾಗಿಯೋ, ಇಲ್ಲ ತಮ್ಮ ಶಿಷ್ಯ ಪರಂಪರೆಯ ಮೂಲಕವೋ, ಹದಿನೆಂಟನೇ ಶತಮಾನದಲ್ಲಿ ತಂಜಾವೂರಿನ ಸುತ್ತಮುತ್ತ್ತ ಬಾಳಿದ ಸಂಗೀತ ತ್ರಿಮೂರ್ತಿಗಳ (ತ್ಯಾಗರಾಜ, ಮುದ್ದುಸ್ವಾಮಿ ದೀಕ್ಷಿತ ಮತ್ತು ಶಾಮಾಶಾಸ್ತ್ರಿ ) ಪಾಲು ಹಿರಿದು. ಈ ವಾಗ್ಗೇಯಕಾರರ  ಕಾಲಕ್ಕೆ ಸ್ವಲ್ಪ ಮೊದಲು ಬಂದದ್ದೇ ತುಳಜಾಜಿಯ ಸಂಗೀತ ಸಾರಾಮೃತ . ಈ ಪುಸ್ತಕ ಆಧರಿಸಿರುವ, ಉದ್ಧರಿಸುವ ಬಹುಪಾಲು ಶಾಸ್ತ್ರ ಗ್ರಂಥಗಳು, ಅವನಿಗೂ ಮುಂಚೆ ಕನ್ನಡಿಗ ಸಂಗೀತಜ್ಞರು ಬರೆದಿರುವಂತಹುವೇ!

ಅದೇನೇ ಇರಲಿ – ಇಂದಿನ ಕರ್ನಾಟಕ ಸಂಗೀತದ ಪಾರಿಭಾಷಿಕ ಶಬ್ದಗಳನ್ನು ನೋಡಿದಾಗ, ಅದರಲ್ಲಿ ಹಲವು ಕನ್ನಡ ಪದಗಳಿರುವುದನ್ನು ನೋಡಬಹುದು. ಕರ್ನಾಟಕ ಸಂಗೀತದ ಬಾಲಪಾಠಗಳು, ಅಂದರೆ ಸಂಗೀತ ಕಲಿಯ ಹೊರಟವರಿಗೆ ಮೊದಮೊದಲು ಹೇಳಿಕೊಡುವ ಪಾಠಗಳಾದ – ಸರಳೆ, ಜಂಟಿವರಸೆ, ಹೆಚ್ಚುಸ್ಥಾಯಿ ವರಸೆ, ತಗ್ಗು ಸ್ಥಾಯಿ ವರಸೆ, ದಾಟು ವರಸೆ – ಇಂತಹ  ಹೆಸರುಗಳಲ್ಲಿ  ಕನ್ನಡವು ಢಾಳಾಗಿ ಕಾಣುತ್ತದೆ. ಇದರಲ್ಲಿ ಸರಳೆ ಎನ್ನುವ ಹೆಸರು, ಸ್ವರಾಲೀ ಅಥವಾ ಸ್ವರಾವಳೀ ಎಂಬ ಸಂಸ್ಕೃತ ಪದದ ಬದಲಾದ ರೂಪ. ಅದರೆ ಸರಳೆಗಳನ್ನು ಕಲಿತ ನಂತರ ಹೇಳಿಕೊಡುವ ಜಂಟಿ ವರಸೆ, ಹೆಚ್ಚುಸ್ಥಾಯಿ ವರಸೆ ( ಅಥವಾ  ಮೇಲುಸ್ಥಾಯಿ ವರಸೆ), ತಗ್ಗುಸ್ಥಾಯಿ ವರಸೆ ಇತ್ಯಾದಿ ಹೆಸರುಗಳೆಲ್ಲಾ ಕನ್ನಡದ್ದೇ ಆಗಿವೆ ಎನ್ನುವುದನ್ನು ಗಮನಿಸಬಹುದು. ನೆರಹೊರೆಯ ಭಾಷೆಗಳಾದ ತಮಿಳು ತೆಲುಗುಗಳಲ್ಲೂ ಇವಕ್ಕೆ ಸಮಾನವಾದ ಪದಗಳೇ ( ಉದಾ: ತಮಿಳಿನಲ್ಲಿ ಸರಳೈ, ಜಂಟ ವರಿಸೈ, ಮೇಲ್ ಸ್ಥಾಯಿ/ಕೀಳ್ ವರಿಸೈ ಹೀಗೆ)  ಬಳಕೆಯಲ್ಲಿವೆ,  ಬಾಲ ಪಾಠಗಳನ್ನು ರೂಢಿಗೆ  ತಂದದ್ದು ಕನ್ನಡಿಗರಾದ ಪುರಂದರ ದಾಸರೇ ಎಂಬ ಪರಂಪರಾಗತ ನಂಬಿಕೆಯಿರುವುದನ್ನು ಗಮನಿಸಿದಾಗ ಈ ಹೆಸರುಗಳು ಮೊದಲಿಗೆ ಕನ್ನಡದಲ್ಲೆ ಹುಟ್ಟಿ ನಂತರ, ತಮಿಳು ತೆಲುಗು ಮಲಯಾಳಂ ಭಾಷಿಕರೂ ಅದೇ (ಇಲ್ಲವೇ ಅವಕ್ಕೆ ಸಮಾನವಾದ) ಹೆಸರುಗಳನ್ನೇ ಬಳಸಿದ್ದಾರೆಂಬ ಊಹೆಯನ್ನು ಮಾಡಬಹುದು. ಕರ್ನಾಟಕ ಸಂಗೀತವನ್ನು ಕಲಿಯುವ ವಿದ್ಯಾರ್ಥಿಗಳೆಲ್ಲ ಮೊದಮೊದಲು ಈ ಪಾಠಗಳನ್ನು ಮಾಯಾಮಾಳವ ಗೌಳರಾಗದಲ್ಲೂ, ನಂತರ ಹಲವು ಬೇರೆ ಬೇರೆ ರಾಗಗಳಲ್ಲೂ ಹಾಡಿ ಅಭ್ಯಾಸ ಮಾಡುವುದು ಎಲ್ಲ ರಾಜ್ಯಗಳಲ್ಲಿಯೂ ಇರುವ ಪದ್ಧತಿ.

ಇನ್ನು ಕನ್ನಡದಲ್ಲಿ ಸಂಗೀತ ರಚನೆಗಳನ್ನು ಮಾಡಿರುವ ಹರಿದಾಸರ ರಚನೆಗಳನ್ನೇ ತೆಗೆದುಕೊಳ್ಳೋಣ – ಹರಿದಾಸರು ಮೂರು ರೀತಿಯ ರಚನೆಗಳನ್ನು ಮಾಡಿದ್ದಾರೆ; ಅವೆಂದರೆ ಪದಗಳು, ಸುಳಾದಿಗಳು ಮತ್ತು ಉಗಾಭೋಗಗಳು. ಪದಗಳು ಎಣಿಕೆಯಲ್ಲಿ ಉಗಾಭೋಗ ಮತ್ತು ಸುಳಾದಿಗಳಿಗಿಂತ ಪದಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಈಗ “ಪದ” ಎಂಬ ಪದದ ಬಗ್ಗೆ ಒಂದಿಷ್ಟು ವಿಚಾರಗಳು –  ಕರ್ನಾಟಕ ಸಂಗೀತದಲ್ಲಿರುವ ರಚನೆಗಳಲ್ಲಿ ಇದು ಒಂದು ಪ್ರಮುಖ ಬಗೆಯ ರಚನೆ. ಪದ ಎನ್ನುವ ಪದ (word) ಸಂಸ್ಕೃತದ್ದೇ ಆದರೂ, ಸಂಗೀತ ಪರಿಭಾಷೆಯಲ್ಲಿ ಅದಕ್ಕೆ ಸಾಮಾನ್ಯಾರ್ಥವಲ್ಲದೆ,  ಅದಕ್ಕೆ  ಪಲ್ಲವಿ, ಅನುಪಲ್ಲವಿ ಮತ್ತು ಹಲವು ಚರಣಗಳಿರುವಂತಹ ಒಂದು ನಿಬದ್ಧ ಸಂಗೀತರಚನೆ ಎಂದು ಅರ್ಥೈಸಲಾಗುತ್ತೆ.  ಹದಿನಾಲ್ಕನೇ ಶತಮಾನದ ನರಹರಿತೀರ್ಥರೇ ಮೊದಲ ಹರಿದಾಸರೆಂಬ ಪ್ರತೀತಿ ಇದೆ. ಇದು ಸರಿಯಾಗಿದ್ದರೆ ಈ “ಪದ” ಎಂಬ ಸಂಗೀತ ರಚನೆ ಮೊದಲು ಹುಟ್ಟಿದ್ದೂ ಕನ್ನಡದಲ್ಲೇ. ಇವರನಂತರ ಹದಿನೈದನೇ ಶತಮಾನದಲ್ಲಿ ಹೆಚ್ಚಾಗಿ ಪದಗಳನ್ನು ಬರೆದದ್ದೆಂದರೆ ತೆಲುಗಿನಲ್ಲಿ ಅನ್ನಮಯ್ಯ, ಮತ್ತೆ ಕನ್ನಡದಲ್ಲಿ ಅವರ ಸರಿಸುಮಾರು ಸಮಕಾಲೀನರಾದ ಶ್ರೀಪಾದರಾಯರು. ಇದಾದಮೇಲೆ ವ್ಯಾಸರಾಯರು , ಪುರಂದರದಾಸ, ಕನಕದಾಸರಾದಿಯಾಗಿ ನೂರಾರು ಹರಿದಾಸರು ಸಾವಿರಾರು ಪದಗಳನ್ನು ರಚಿಸಿದ್ದಾರೆ.ಈ ಪದಗಳು ಶೃಂಗಾರ ಆಧ್ಯಾತ್ಮ ಮತ್ತು ಭಕ್ತಿ ಎಲ್ಲ ಭಾವನೆಗಳನ್ನು ಹೊರಹೊಮ್ಮಿಸುತ್ತಿದ್ದ ಸಾಹಿತ್ಯ ಹೊಂದಿರುತ್ತಿದ್ದವು. ಆ ನಂತರ ೧೮ನೇ ಶತಮಾನದ ಮೇಲೆ ಪದಗಳು ಕೇವಲ ಶೃಂಗಾರ ರಚನೆಗಳು ಮಾತ್ರ ಎಂಬ ಸೀಮಿತವಾದ ಅರ್ಥ ಪಡೆದುಕೊಂಡಿತು. ಇದಕ್ಕೆ ೧೭ನೇ ಶತಮಾನದ ವಾಗ್ಗೇಯಕಾರ ಕ್ಷೇತ್ರಯ್ಯನು ತೆಲುಗಿನಲ್ಲಿ ಹೆಚ್ಚಾಗಿ ಶೃಂಗಾರ ಪದಗಳನ್ನು ರಚಿಸಿದ್ದು ಕಾರಣವಿರಬಹುದು. ಇಂತಹ ಬದಲಾವಣೆಗಳು ಸಂಗೀತ ಪ್ರಪಂಚದಲ್ಲಿ ನಡೆಯುತ್ತಿರುವಂತವಹವೇ. ಆದರೆ ಇಂದಿಗೂ “ದಾಸರ ಪದ” ಗಳು, ಕ್ಷೇತ್ರಯ್ಯನ ಶೃಂಗಾರ ಪದಗಳು ಮತ್ತೆ  ಅದರ ವ್ಯಾಕರಣಾರ್ಥ (word) ದಿಂದ ಬೇರೆಯಾದ ಅಸ್ತಿತ್ವವನ್ನು ಹೊಂದಿರುವುದಂತೂ ನಿಜ.

ಪದಗಳಷ್ಟೇ ಅಲ್ಲದೆ, ಹರಿದಾಸರು ಸುಳಾದಿಗಳೆಂಬ ರಚನೆಗಳನ್ನೂ ಮಾಡಿದ್ದಾರೆ. ತಾಳಮಾಲಿಕೆಗಳಾಗಿ ಹಾಡುವ ಸುಳಾದಿಗಳಲ್ಲಿ ಒಂದು ಪಲ್ಲವಿಯೂ, ಹಲವಾರು (೫-೭) ಚರಣಗಳೂ, ಮತ್ತೆ “ಜೊತೆ” ಎಂಬ ಹೆಸರಿನ ಕೊನೆಯೆರಡು ಸಾಲುಗಳೂ ಇರುತ್ತವೆ. ಸುಳಾದಿ ಎಂಬುದರ ಅರ್ಥ ಹಲವಾರು ವಿಶ್ಲೇಷಣೆಗಳ ನಂತರವೂ ಸ್ವಲ್ಪ ಅಸ್ಪಷ್ಟವಾಗಿದೆ. “ಸುಳುಹು ಹಾದಿ”, “ಸೂಳ್ ಹಾದಿ” (ಅಂದರೆ ಒಳ್ಳೆಯ ದಾರಿ) ಎಂಬುದೇ ಸುಳಾದಿ ಎಂದಾಗಿದೆ ಎಂದು ಒಂದು ಅಭಿಪ್ರಾಯವಿದ್ದರೆ, ಸಾಲಗಸೂಡ ವೆಂಬ ಹೆಸರಿನ ಹಿಂದಿದ್ದ ಸಂಗೀತ ರಚನೆಯೇ ’ಸೂಳಾದಿ” ಆಗಿದೆ ಎನ್ನುವುದು ಇನ್ನೊಂದು ಅಭಿಪ್ರಾಯ. ಒಂದು ವೇಳೆ ಮೊದಲನೆಯದೇ ಸರಿಯಾಗಿದ್ದರೆ, ಈ ರಚನೆಯ ಹೆಸರೂ ಕನ್ನಡವೇ ಎಂದಾಗುತ್ತದೆ. ಇನ್ನು ಸುಳಾದಿಯ ಕೊನೆಯ “ಜೊತೆ” ಎನ್ನುವುದು ಕನ್ನಡ ಪದವೇ ಎನ್ನುವುದು ತಿಳಿದದ್ದೇ. ಎರಡು ಸಾಲಿಗಳಿರುವುದರಿಂದ, ಇದು “ಜೊತೆ”. ಜೋಡಿ ಎನ್ನುವ ಅರ್ಥದಲ್ಲಿ ಜೊತೆ ಅನ್ನುವುದು ಕನ್ನಡದಲ್ಲಿ ಮಾಮೂಲಿ ಬಳಕೆ ಇರುವುದನ್ನು ಗಮನಿಸಬಹುದು.

ಆದರೆ ಹರಿದಾಸರ ಮೂರನೆಯ ಬಗೆಯ ರಚನೆಗಳಾದ ಉಗಾಭೋಗಗಳಿಗೆ ಆ ಹೆಸರು ಹೇಗೆ ಬಂದಿತೆಂಬುದರ ಬಗ್ಗೆ ಇನ್ನೂ ವಿವಾದವಿದ್ದು, ಆ ಹೆಸರಿಗೆ ಕನ್ನಡ ಮೂಲವಿಲ್ಲವೆಂದು ಮಾತ್ರ ಹೇಳಬಹುದು. ಅವು ರಚನೆಯಲ್ಲಿ ವೀರಶೈವ ಶರಣರ ವಚನಗಳನ್ನು ಹೋಲುವಂತೆ ಕಂಡರೂ, ವಚನಗಳಂತಲ್ಲದೆ ಉಗಾಭೋಗಗಳ ಪ್ರಮುಖ ಉದ್ದೇಶ ಹಾಡುವುದಾಗಿದೆ. ಈಚೆಗೆ ವಚನಗಳನ್ನೂ ಹಾಡುವ ಪದ್ಧತಿ ಇದ್ದರೂ ಕೂಡ, ಎಲ್ಲಾ ವಚನಗಳೂ ಹಾಡುವ ಉದ್ದೇಶದಿಂದ ಬರೆದವುಗಳಲ್ಲ.

ರಚನೆಗಳಿಂದ ಈಗ ಕರ್ನಾಟಕ ಸಂಗೀತದಲ್ಲಿ ಬಳಕೆಯಿರುವ ರಾಗಗಳ ಹೆಸರಿನ ಕಡೆಗೊಮ್ಮೆ  ದೃಷ್ಟಿ ಹಾಯಿಸೋಣ. ರಾಗಗಳ ಹೆಸರುಗಳಲ್ಲಿ ಕೆಲವು ಪ್ರದೇಶಗಳ ಹೆಸರುಗಳು ಕಂಡುಬರುವುದು ಒಂದು ವಿಶೇಷ ಸಂಗತಿ. ಆದರೆ ಹೀಗೆ ಹೆಸರಿಸಿಕೊಳ್ಳುವ ರಾಗಗಳಲ್ಲಿ ಭಾರತದ ಮೂರು ಭಾಗಗಳ ಹೆಸರು ಮಾತ್ರ ಕಂಡು ಬರುತ್ತವೆ. ಅವು ಕರ್ನಾಟ, ಬಂಗಾಲ/ಗೌಡ (ಬಂಗಾಳ)   ಮತ್ತೆ ಗುರ್ಜರ/ಸೌರಾಷ್ಟ್ರ (ಗುಜರಾತ್). ಹೀಗಾಗಿ  ಕರ್ನಾಟಕ ಸಂಗೀತದಲ್ಲಿ  ಗುರ್ಜರಿ, ಸೌರಾಷ್ಟ್ರ, ಸುರುಟೀ,  ಬಂಗಾಳ, ಶುದ್ಧ ಬಂಗಾಳ, ಕನ್ನಡ, ಕನ್ನಡಬಂಗಾಳ, ಕನ್ನಡ ಗೌಳ, ಸಿಂಧು ಕನ್ನಡ, ಮಾರುವ ಕನ್ನಡ   ಮೊದಲಾದ ಹೆಸರಿನ ರಾಗಗಳಿವೆ. ಈ ಹೆಸರುಗಳು ಈ ರಾಗಗಳಿಗೆ ಏಕೆ ಬಂದವು ಎಂಬುದನ್ನು ಇದಮಿತ್ಥಂ ಎಂದು ಹೇಳಲು ಅಸಾಧ್ಯವಾದರೂ, ಈ ರಾಗಗಳು ಮೊದಮೊದಲು ಪ್ರಸಿದ್ಧವಾದ ಪ್ರದೇಶಗಳ ಸೂಚಕವಾಗಿರಬಹುದೇ ಎಂಬ ಊಹೆಯನ್ನು ಮಾಡಬಹುದು.

ಇಷ್ಟೇ ಅಲ್ಲ , ಕರ್ನಾಟ ಎನ್ನುವ ಪದವು ದೇಶ ಮತ್ತೆ ಬಾಷಾ ವಾಚಿ ಎಂಬ ಮಾತಿಗೂ ರಾಗಗಳ ಹೆಸರಿನಿಂದ ಪುಷ್ಟಿ ಸಿಗುತ್ತದೆ. ಮೊದಮೊದಲು ನಮ್ಮ ನಾಡಿಗೆ ಕರ್ನಾಟಕ ವೆಂಬ ಹೆಸರು ಬಂದಿದ್ದು ಕನ್ನಡ ಎಂಬ ಭಾಷೆಯಿಂದಲೋ? ಅಥವಾ ನಮ್ಮ ನಾಡಿನ ಕರ್ನಾಟ(ಕ) ಎಂಬ ಹೆಸರಿನಿಂದ ಕನ್ನಡ ಎಂಬ ಭಾಷೆಯ ಹೆಸರು ಬಂತೋ? ಎಂಬ ಚರ್ಚೆಯೂ ಆಗಿತ್ತು. ಹೀಗಾಗಿ ಕರ್ನಾಟ(ಕ) ಎಂಬುದು ದೇಶವಾಚಿಯೆಂದೂ ಕನ್ನಡ ಎಂಬುದು ಭಾಷಾವಾಚಿಯೆಂದೂ  ಅಭಿಪ್ರಾಯ ಪಟ್ಟವರೂ ಇದ್ದರು.  ನಂತರ,  ಕನ್ನಡವೆಂಬ ಪದವೇ ಸಂಸ್ಕೃತಕ್ಕೆ ಹೋದಾಗ ಕರ್ನಾಟ(ಕ) ಎಂದಾಗಿದೆ ಎಂಬ ಅಭಿಪ್ರಾಯವನ್ನು ಹಲವು ವಿದ್ವಾಂಸರು ಬೆಂಬಲಿಸುವುದನ್ನು ಕಾಣಬಹುದು. ಇದಕ್ಕೆ ಒಂದು ಆಧಾರವಾಗಿ ಕರ್ನಾಟಕ ಸಂಗೀತದ ಹಲವು ರಾಗಗಳ ಹೆಸರುಗಳನ್ನೂ ನಿದರ್ಶನವಾಗಿ ನೋಡಬಹುದು. ಸುಮಾರಾಗಿ ೧೪ನೇ ಶತಮಾನದಿಂದ ಇರುವ ಸಂಗೀತ ಲಕ್ಷಣಗ್ರಂಥಗಳಲ್ಲಿ ರಾಗಗಳನ್ನು ವಿವರಿಸುವಾಗ, ಕರ್ನಾಟ ಮತ್ತು ಕನ್ನಡ ಪದಗಳನ್ನು ಒಂದರ ಸ್ಥಳದಲ್ಲಿ  ಒಂದನ್ನು ಬಳಸಲಾಗಿದೆ. ಒಂದೇ ರಾಗಕ್ಕೆ ಕನ್ನಡ ಗೌಳ ಮತ್ತು ಕರ್ನಾಟ ಗೌಡ, ಕರ್ಣಾಟ ಗೌಡ ಎನ್ನುವ ಹೆಸರುಗಳನ್ನು ನಾವು ಕಾಣಬಹುದಾಗಿದೆ!

ಇನ್ನು ಇಂದು ಬಳಕೆಯಲ್ಲಿರುವ ರಾಗಗಳನ್ನು ಅಭ್ಯಾಸದ ಅನುಕೂಲಕ್ಕೆಂದು ವಿಂಗಡಿಸುವ ಪದ್ಧತಿ ಹುಟ್ಟಿದ್ದು ಕರ್ನಾಟಕದಲ್ಲೇ ಇರಬೇಕು. ಇದರ ಮೊದಲ ಮೊಳಕೆಯನ್ನು ನಾವು ೧೪ನೇ ಶತಮಾನದಲ್ಲಿದ್ದ ವಿದ್ಯಾರಣ್ಯರಲ್ಲಿ ನೋಡಬಹುದು. ಇವರ ಕಾಲದಲ್ಲಿ ಪ್ರಚಾರದಲ್ಲಿದ್ದ ಸುಮಾರು ೫೦ ರಾಗಗಳನ್ನು ಅವುಗಳ ಲಕ್ಷಣಗಳು ತಿಳಿಯಲು ಅನುಕೂಲವಾಗುವಂತೆ ಮೇಳ (ಗುಂಪು)ಗಳಲ್ಲಿ ವಿಂಗಡಿಸಿದ್ದು ವಿದ್ಯಾರಣ್ಯರೇ. ಈ ಮೇಳ ಪದ್ಧತಿಯನ್ನು ಮುಂದೆ ೧೬ ನೇ ಶತಮಾನದಲ್ಲಿಯೂ ಪುಂಡರೀಕ ವಿಠಲ (ಅಕ್ಬರನ ಸಮಕಾಲೀನ), ರಾಮಾಮಾತ್ಯ (ವಿಜಯನಗರದ ಕೊನೆಯ ರಾಜ ಅಳಿಯ ರಾಮರಾಯನ ಮಂತ್ರಿ) ಇವರು ಬೆಳೆಸಿದರು. ನಂತರ ಇದಕ್ಕೆ  ಇನ್ನೂ ಪೂರ್ಣ ರೂಪ ಕೊಟ್ಟವನು, ತಂಜಾವೂರಿನ ನಾಯಕ ದೊರೆಗಳ ಮಂತ್ರಿಯಾಗಿದ್ದ ವೆಂಕಟಮಖಿ. ಈತನೂ ಕೂಡ, ತಾನು ಕನ್ನಡದವನೆಂದು ಹೇಳಿಕೊಂಡಿದ್ದಾನೆ. ರಾಗಗಳ ವಿಂಗಡಣೆಗೆ ಇವನು ಬುನಾದಿ ಹಾಕಿಕೊಟ್ಟ ಎಪ್ಪತ್ತೆರಡು ಮೇಳಗಳ ಪದ್ಧತಿಯೇ  ಇಂದಿಗೂ ಕರ್ನಾಟಕ ಸಂಗೀತದಲ್ಲಿ  ಬಳಕೆಯಲ್ಲಿದೆ. ಇದನ್ನು ನೋಡಿದಾಗ ವೆಂಕಟ ಮಖಿ ಅವನ ‘ಚತುರ್ದಂಡೀ ಪ್ರಕಾಶಿಕೆ’ ಯಲ್ಲಿ ರಾಗಗಳ ವಿಂಗಡಣೆಗೆ ಎಪ್ಪತ್ತೆರಡು ಮೇಳಗಳು ಬೇಕು, ಮತ್ತೆ ಸಾಕು – ಇದಕ್ಕಿಂದ ಹೆಚ್ಚಾಗಲೀ , ಕಡಿಮೆಯಾಗಲೀ ಮೇಳಗಳನ್ನು ಹೇಳಲು ಸಾಕ್ಷಾತ್ ಶಿವನಿಗೂ ಸಾಧ್ಯವಾಗುವುದಿಲ್ಲ ಎಂದು ಸಾರಿ ಹೇಳಿದ ಮಾತು ಸಾರ್ಥಕವೇ ಆಗಿದೆ ಎನ್ನಿಸುತ್ತದೆ.

ಸಂಗೀತ ರಚನೆಗಳಷ್ಟೇ ಅಲ್ಲದೇ ಇನ್ನೂ ಹಲವು ಪಾರಿಬಾಷಿಕ ಪದಗಳಲ್ಲೂ  ಕನ್ನಡವನ್ನು ಕಾಣಬಹುದು. ಕರ್ನಾಟಕ ಸಂಗೀತದಲ್ಲಿ ಒಂದು ರಾಗಕ್ಕೆ ಅದರ ರೂಪ ಕೊಡುವುದರಲ್ಲಿ ಗಮಕ ( ornamentation) ಎನ್ನುವುದು ಬಹಳ ಮುಖ್ಯ. ಗಮಕಗಳಲ್ಲಿ ಹಲವು ವಿಧಗಳಿದ್ದು – ದಶವಿಧ ಗಮಕಗಳೆಂಬ ಒಂದು ವಿಂಗಡಣೆ ಪ್ರಖ್ಯಾತವಾಗಿದೆ. ಈ ಗಮಕಗಳ ಹೆಸರುಗಳಲ್ಲಿ,  ಹೊಮ್ಮು, ಜಾರು, ರವೆ, ಓರಿಕೆ ಮೊದಲಾದ ಗಮಕಗಳ ಹೆಸರುಗಳು ಕನ್ನಡ ಇಲ್ಲವೇ ತೆಲುಗು ಭಾಷಾಮೂಲದ್ದೆಂದು ಸುಲಭವಾಗಿ ತಿಳಿಯುತ್ತದೆ. ಎರಡೂ ಭಾಷೆಗಳಲ್ಲಿ  ಅವೇ ಪದಗಳ ಬಳಕೆ ಇರುವುದರಿಂದ ಇದರದ್ದೇ ಎಂದು ಹೇಳಲಾಗುವುದಿಲ್ಲವಾದರೂ, ಈ ಗಮಗಕಳಿಗೆ ಹೆಸರು ಕೊಟ್ಟಿದ್ದು ಈ ಮಾತುಗಳನ್ನಾಡುವ ಪ್ರದೇಶದವರು ಎಂಬುದನ್ನು ಮಾತ್ರ ನಿಶ್ಚಿತವಾಗಿ ಹೇಳಬಹುದು.

ಇಷ್ಟೇ ಅಲ್ಲ -ತೀರಾ ಮೊದಮೊದಲು ಪಾಠಮಾಡುವ ಬಾಲ ಪಾಠಗಳನ್ನು ಬಿಟ್ಟರೆ, ಉಳಿದ  ಯಾವುದೇ ಸಂಗೀತ ರಚನೆಯಲ್ಲಿಯೂ, ಸಾಹಿತ್ಯವನ್ನೂ, ಮತ್ತು ಆ ಸಾಹಿತ್ಯ ಭಾಗವನ್ನು ಹಾಡುವುದು ಹೇಗೆಂಬ ಸಂಗೀತದ ಭಾಗವೂ ಇರುತ್ತದೆ. ಸಂಗೀತದ ಭಾಗಕ್ಕೆ “ಧಾತು” ಎಂದು ಕರೆದರೆ, ಸಾಹಿತ್ಯದ ಭಾಗವನ್ನು ಸೂಚಿಸುವ ಪಾರಿಭಾಷಿಕ ಪದ “ಮಾತು”. ಇದು ಕನ್ನಡದ್ದೆಂದು ವಿಶೇಷವಾಗಿ ಹೇಳಬೇಕಿಲ್ಲವಷ್ಟೇ!

ಹೀಗೆ, ಕರ್ನಾಟಕ ಸಂಗೀತದಲ್ಲಿ  ಬೇರೆ ಭಾಷೆಯ ರಚನೆಗಳನ್ನು ಹಾಡುವ ಮಾತ್ರಕ್ಕೆ, ಅದು ನಮ್ಮದಾಗದೇ ಹೋಗುವುದಿಲ್ಲ. ಇದೇ ರೀತಿಯಲ್ಲೇ, ಕರ್ನಾಟಕ ಸಂಗೀತವೆಂಬ ಹೆಸರಿದ್ದರೂ, ಅದರ ಸಂಪ್ರದಾಯವನ್ನು ಉಳಿಸಿಕೊಂಡ ಎಲ್ಲ ಪ್ರದೇಶಗಳಿಗೂ ಅದು ಒಟ್ಟಾರೆ ಸೇರಿದ್ದೇ. ಆಧುನಿಕ ಕಾಲದಲ್ಲಿ ಕರ್ನಾಟಕ ಸಂಗೀತದ ಕುರಿತು ಹೇಳುವಾಗ, ಕನ್ನಡಿಗರೂ “ಕಾರ್ನಾಟಿಕ್” ಎಂದು ಹೇಳುವ ಚಾಳಿಯಿದೆ. ಇದು ಬ್ರಿಟಿಷರ ಬಳುವಳಿ.  ಅಲ್ಲದೇ “ಕಾರ್ನಾಟಿಕ್” ಎಂಬುದು ಬ್ರಿಟಿಷರು ವಾಲಾಜಾಪೇಟೆ ವೆಲ್ಲೂರು ಸುತ್ತ ಮುತ್ತಲ (ಇಂದಿನ ತಮಿಳುನಾಡಿನಲ್ಲಿ) ಇರುವ ಪ್ರದೇಶಕ್ಕೆ ಕೊಟ್ಟ (ತಪ್ಪಾದ) ಹೆಸರು, ಮತ್ತು ಚಾರಿತ್ರಿಕವಾಗಿ ಆ ಪ್ರದೇಶದಿಂದ ಕರ್ನಾಟಕ ಸಂಗೀತಕ್ಕೇನೂ ಗಮನಾರ್ಹ ಕೊಡುಗೆಯೇನೂ ಬಂದಂತಿಲ್ಲ. ಹಾಗಾಗಿ ಕನ್ನಡಿಗರಾದರೂ ನಮ್ಮ ಸಂಗೀತವನ್ನು ಕರ್ನಾಟಕ ಸಂಗೀತವೆಂದು ಕರೆಯುವುದೇ ಒಳಿತು. ಹಾಗೆಯೇ ಕನ್ನಡಿಗರು ನಮ್ಮದೇ ಆದ ಈ ಸಂಗೀತವನ್ನು ಕೇಳಿ ಆನಂದಿಸುವುದು, ಕಲಿತು, ಮುಂದಿನ ಪೀಳಿಗೆಗೂ ಅದನ್ನು ಮುಂದುವರೆಸುವುದು ಆದರೆ ಮತ್ತೂ ಒಳಿತು.

****

ಆಕರ:

೧) ವೀಣಾಲಕ್ಷಣ ವಿಮರ್ಶೆ – ರಾ. ಸತ್ಯನಾರಾಯಣ

೨) ಕರ್ನಾಟಕ ಸಂಗೀತ ವಾಹಿನಿ – ರಾ. ಸತ್ಯನಾರಾಯಣ

೩) ಚತುರ್ದಂಡಿ ಪ್ರಕಾಶಿಕಾ (ಕನ್ನಡ ಮತ್ತು ಇಂಗ್ಲಿಷ್ ಅನುವಾದ) – ರಾ. ಸತ್ಯನಾರಾಯಣ

೪) Ragas of Sangeeta Saramrta – S.R.Janakiraman

(ಸೂಚನೆ: ಇದು ಬೆಂಗಳೂರಿನಲ್ಲಿ ೪ ಜನವರಿ, ೨೦೧೫ರಂದು ಬೆಂಗಳೂರಿನಲ್ಲಿ ನಡೆದ “ಪದಾರ್ಥ ಚಿಂತಾಮಣಿ- ಪದಕಮ್ಮಟದ ಸ್ಮರಣ ಸಂಚಿಕೆಗೆಂದು ಬರೆದ ಆಹ್ವಾನಿತ ಬರಹ)

ಕ್ಷೇಮಪುರದಲಿ ಇದ್ದನೊಬ್ಬನು ಶ್ರೀನಿವಾಸನ ನಾಮದಿ
ಹೇಮದಾಭರಣಗಳ ಮಾಡುತ ಮಾರಿ ಗಳಿಸುತ ನೆಮ್ಮದಿ
ನಾಮಮಾತ್ರಕು ದಾನವೆಂಬುದನಾತ ಸ್ವಲ್ಪವು ನೀಡದೆ
ನೇಮದಿಂದಲಿ ದುಡ್ಡುಮಾಡುವ ದಾರಿಯೊಂದನೆ ಕಂಡನು || ೧||

ಶ್ರೀನಿವಾಸನು ಸತ್ಯದಲಿ ಬೇರೆಲ್ಲ ವಿಷಯದಿ ಯೋಗ್ಯನು ||
ಗಾನವಿದ್ಯೆಯ ಪದ್ಧತಿಯಲಿ ಸಮಾನರಾರನು ಕಾಣೆನು
ಸಾನುರಾಗದಿ ಚಿಣ್ಣರಿಗೆ ಸಂಗೀತವಿದ್ಯೆಯ ಪೇಳ್ವನು
ಕಾನುಮಲೆಯ ಕ್ಷೇಮಪುರದಲ್ಲವನೆ ಬಲುಸಿರಿವಂತನು ||೨||

ಶ್ರೀನಿವಾಸನ ಮಡದಿ ಸರಸತಿ ಸಾಧ್ವಿಯವಳು ನಿಚ್ಚದಿ
ಮಾನಿನಿಯು ತಾನೆಂದು ಗಂಡನ ಮಾತ ಮೀರಲು ಹೋಗಳು
ತಾನು ಮಾಡಿದ ಭಾಗ್ಯ ತನ್ನಯ ಗಂಡ ಮಕ್ಕಳ ಕಾವುದು
ಏನೊ ಎಂತೋ ದೈವ ನೀಡಿದುದಲ್ಲೆ ಶಾಂತಿಯ ಕಾಂಬಳು ||೩||

ಒಂದು ಶ್ರಾವಣ ತಂಪು ಹಗಲಲಿ ಶ್ರೀನಿವಾಸನ ಮಳಿಗೆಗೆ
ಬಂದು ನಿಂತನು ವೃದ್ಧ ಬ್ರಾಹ್ಮಣನೊಬ್ಬ ಬೇಡುತ ಹಣವನು
ಕಂದ ಮೊಮ್ಮೊಗನಿಹನು ಮನೆಯಲಿ ಮಾಡಬೇಕಿದೆ ಮುಂಜಿಯ
ಒಂದು ಹೊನ್ನನು ಕೊಟ್ಟರಾಯಿತು ಧನ್ಯನಾಗುವೆ ಎಂದನು ||೪||

ಎಂದು ದಾನವ ಮಾಡದಂತಹ ಶ್ರೀನಿವಾಸನು ಯೋಚಿಸಿ
ಇಂದು ಈತನ ಸಾಗಿಹಾಕಿದರಾಯಿತೆನ್ನುತ ಭಾವಿಸಿ
ಮುಂದೆ ಬಾಗಿಲಿನಿಂದ ಆಚೆಯೆ ವೃದ್ಧನಾತನ ಕಳುಹಿಸಿ
ಬಂದು ನೋಡೆಲೆ ವಾರವಾಗಲಿ ಆಗ ಕೊಡಬಹುದೆಂದನು ||೫||

ಹೀಗೆ ವಾರವು ಮತ್ತೆ ವಾರವು ತಿಂಗಳುಗಳೇ ಸಂದವು
ಯೋಗಿಯಂದದಿ ಮುದುಕ ಹಾರುವ ಬೇಸರಿಲ್ಲದೆ ಬರುವನು
ಬಾಗಿ ನಿಲ್ಲುವ ಮತ್ತೆ ಬೇಡುತ ಒಂದು ಹೊನ್ನಿನ ಕಾಸನು
ರೇಗು ಹತ್ತಿದ ಶ್ರೀನಿವಾಸನು ಕಿಲುಬು ನಾಣ್ಯವ ಕೊಟ್ಟನು ||೬||

ಕೆಟ್ಟ ನಾಣ್ಯವ ಕೊಟ್ಟರೂ ಅವ ಕೈಯ ಮುಗಿಯುತ ಹೊರಟನು
ಕೆಟ್ಟು ಹೋಗಿರೆ ಹಣೆಯ ಬರಹವು ಹೊಣೆಯು ಯಾರದಕೆಂದನು
ಪಟ್ಟು ಬಿಡದಿರುವುದೊಳಿತೆಂದವ ಮನದಿ ಯೋಚನೆ ಮಾಡುತ
ನೆಟ್ಟ ನೇರದಿ ಹೋಗಿ ಸರಸತಿ ಮನೆಯ ಬಾಗಿಲ ಬಡಿದನು ||೭||

ತಂದೆಯಂತಿಹ ಮುದುಕ ಹೇಳಿದ ಕಥೆಯ ಸರಸತಿ ಕೇಳಿ ತಾ
ನೊಂದು ನವೆಯುತ ಏನ ತಾನೇ ಮಾಡಬಲ್ಲೇನೆಂದಿರೆ
ತಂದೆ ತಾಯಿಯು ಕೊಟ್ಟ ಮುತ್ತಿನ ನತ್ತು ನೆನಪಿಗೆ ಬಂದಿತು
ಚೆಂದವಾಗಿರುವೊಡವೆಯೊಂದಿದೆ ಕೊಳ್ಳಿರೀಗಲೆ ಎಂದಳು ||೮||

ತರುಣಿ ಕೊಟ್ಟಿಹ ಹೊಳೆವ ಮೂಗುತಿ ನೋಡಿ ಹಿಗ್ಗಿದ ಬ್ರಾಹ್ಮಣ
ಸಿರಿನಿವಾಸನ ಬಳಿಗೆ ವೇಗದಿ ಧಾವಿಸುತ್ತಲೆ ಹೋದನು
ಇರುಳ ದೀಪದ ಸೊಬಗಿನಾಮುತ್ತಿಹುದು ನನ್ನಲಿ ನೋಡಿರಿ
ಸರಿಯ ಬೆಲೆಯನು ನೀವೆ ಕಟ್ಟಿರಿ ಹಣವ ನೀಡಿರಿ ಎಂದನು ||೯||

ಹೊಳೆವ ಮೂಗುತಿ ಸೊಬಗ ಕಂಡು ಶಂಕೆಗೊಂಡನು ನಾಯಕ
ಬೆಳಕಿನಾ ಖನಿಯಿದನು ಕಂಡಿಹೆ ಮೊದಲೆ ತಾನೆಂದೆನಿಸಲು
ಹೊಳೆಯಿತವನಿಗೆ ಮಡದಿ ಸರಸತಿ ಹಾಕಿಕೊಳ್ಳುವ ಮೂಗುತಿ
ಸೆಳೆದು ತಂದಿಹನೇನೊ ಎನ್ನುವ ಭಯವು ಕಾಡಿತು ಮನಸಲಿ ||೧೦||

ಮಡದಿ ಸರಸತಿ ಏನು ಮಾಡಿದಳೆಂದು ಅರಿಯುವ ಕಾರಣ
ಒಡನೆ ಎದ್ದು ಹೊರಟ ಮನೆಕಡೆ ಶ್ರೀನಿವಾಸ ನಾಯಕ
ಕೊಡುವೆ ಹಣವನು ಹೊರಗೆ ಕುಳ್ಳಿರು ಬೇಗ ಮರಳುವೆ ಎನ್ನುತ
ಹಿಡಿದ ನತ್ತನು ಪೆಟ್ಟಿಗೆಯಲೇ ಇಟ್ಟು ಬೀಗವ ಹಾಕಿದ || ೧೧||

ಮಳಿಗೆ ಹಿಂದಿನ ಕೋಣೆಯಲ್ಲಿ ಇದ್ದ ಬಾಲಕ ಮಧ್ವಪ
ಕುಳಿತು ಚಿತ್ರವ ಬಿಡಿಸುತಿದ್ದವ ಅಪ್ಪ ಹೋದುದ ಕಾಣುತ
ಒಳಗಿನಿಂದ ಹೊರಗೆ ಬಂದು ನೋಡಿ ಮುಚ್ಚಿದ ಪೆಟ್ಟಿಗೆ
ಒಳಗೆ ನೋಡುವೆನೆಂದು ಬೀಗವ ತೆರೆಯೆ ಮೂಗುತಿ ಕಂಡಿತು ||೧೨||

ಅರರೆ ಅಮ್ಮನ ಮೂಗುತಿಯಿದು ಇಲ್ಲಿಗೇತಕೆ ಬಂದಿತು?
ಮುರಿದು ಹೋದುದೆ? ಸರಿಗೆ ಕಡಿದುದೆ? ಇಲ್ಲ ಬಣ್ಣವು ಕೆಟ್ಟುದೆ?
ಇರುವ ವಿಷಯವದೇನೋ ತಿಳಿಯದು ಮುದುಕನೇನಿದ ತಂದನು?
ಸರಿಯಿದನ್ನು ನೋಡಿ ತಂದೆಯದೇಕೆ ಮನೆಕಡೆ ನಡೆದನು? ||೧೩||

ಅತ್ತ ನಾಯಕ ಮನೆಗೆ ಹೋಗಿ ಬಳಿಗೆ ಮಡದಿಯ ಕರೆಯುತ
ಮುತ್ತು ಮೂಗುತಿ ಕಾಣದೆಲ್ಲಿಗೆ ಹೋಯಿತೆನ್ನುತ ಕೇಳಲು
ಎತ್ತಿ ಇಟ್ಟಿಹೆ ತಂದು ತೋರುವೆನೆಂದು ನುಡಿದೊಳಹೋದಳು;
ಇತ್ತ ಕಡೆಯಲಿ ಬಾಲಕನು ಭಯದಿಂದ ಮನೆಗೋಡುತಲಿರ್ದನು ||೧೪ ||

ನುಡಿದೆ ಹುಸಿಯನು ಗಂಡನಲಿ ನಾನೆಂತು ಮೂಗುತಿ ತೋರಲಿ?
ಬಿಡದೆ ನಿನ್ನಯ ಪಾದವೆಂದಿಗು ನಂಬಿದವಳನು ಪಾಲಿಸೋ
ಕಡುಪರೀಕ್ಷೆಯ ಸಮಯ ಬಂದಿದೆ ನೀನೆ ದಾರಿಯ ತೋರ್ವುದು
ಎಡದ ಹೂವಲಿ ಪ್ರಾಣ ನೀಗುವೆ ಬಲದಿ ಕೊಟ್ಟರೆ ಬಾಳುವೆ ||೧೫||

ಹೀಗೆ ನೆನೆಯುತ ಸರಸತಿಯು ತಾ ಹೂವನಿಟ್ಟಳು ವಿಠಲಗೆ
ಬೇಗ ಬಾರೆನ್ನುತಲಿ ಹೊರಗಡೆ ಪತಿಯು ಕೂಗುತಲಿದ್ದಿರೆ
ಆಗಬಾರದುದೇನೊ ನಡೆಯುವ ಭಯವು ಹೆಚ್ಚುತ ಹೋಗುತ
ಹೇಗೊ ದಾರಿಯ ಓಡಿ ಮುಗಿಸಿದ ಹುಡುಗ ಮನೆಬಳಿ ಬಂದನು ||೧೬||

ಹೊರಗಡೆಯಲೇ ಅಪ್ಪ ನಿಂತಿಹ ಮುಖದಲೇನೋ ಕೋಪವು
ಮರುಳುಗೆಟ್ಟನೊ? ಕನಸ ಕಂಡನೊ? ಏಕೆ ಈಪರಿ ನೋಟವು?
ಇರಲಿ ಮೊದಲಿಗೆ ತಾಯ ಕಾಣುವೆ ಮತ್ತೆ ಮೂಗುತಿ ನೀಡುವೆ
ಸರಸರನೆ ಹೀಗೆನಿಸಿ ಮಧ್ವಪ ಮನೆಯ ಪಕ್ಕದಿ ಓಡಿದ ||೧೭||

ಮುಚ್ಚಿರುವಕಂಗಳನು ಸರಸತಿ ಕೈಯ ಮುಗಿದೇ ತೆರೆಯಲು
ನಿಚ್ಚದಲಿ ಬಿದ್ದಿತ್ತು ಎಡಗಡೆಯಿಂದಲೊಂದು ಕುಸುಮವು
ಅಚ್ಚಕೆಂಪನೆ ಹೂವದನ್ನು ನೋಡಿ ಕಸಿವಿಸಿಗೊಳ್ಳುತ
ಪಚ್ಚೆವಜ್ರದ ಕಿವಿಯ ಓಲೆಯ ತೆಗೆದು ಪುಡಿಪುಡಿಗೈದಳು ||೧೮||

ಹಿಂದುಗಡೆಯಲಿ ಓಡುವಾಗಲೆ ಕಿಟಕಿಯಲ್ಲೇ ಕಂಡಿತು
ಮಂಗಳದ ಕುರುಹಲ್ಲ ತಾಯಿಯ ಕಣ್ಣ ತುಂಬಿದ ಹನಿಗಳು
ನುಂಗಹೊರಟಿಹಳೇನೊ ಕಾಣದು ಬಾಲಕನು ಭಯಗೊಳ್ಳುತ
ಮುಂದಕೇನೂ ತೋರದೇ ಅವ ನತ್ತು ಕಿಟಕಿಯೊಳೆಸೆದನು ||೧೯||

ಕಣ್ಣ ಮುಚ್ಚಿ ವಿಷವ ಸೇವಿಸ ಹೊರಟ ಸರಸತಿ ಬೆಚ್ಚುತ
ಕಣ್ಣ ಬಿಟ್ಟಳು ಏನೋ ಬಿದ್ದಿರಲಾಗ ಕೈಯಲಿ ಒಮ್ಮೆಗೆ
ಕಣ್ಣನೇ ತಾ ನಂಬಲಾರಳು ಕೈಯಲಿರುವುದು ಮೂಗುತಿ
ಬಣ್ಣಗೆಟ್ಟಿಹ ಅವಳ ಮೊಗದಲಿ ಮತ್ತೆ ಮರಳಿತು ಜೀವವು || ೨೦||

ಏನು ಯೋಚಿಸದೇನೆ ಸರಸತಿ ಹೋಗಿ ಹೊರಗಡೆ ಗಂಡಗೆ
ತಾನು ಕೈಯಲಿ ಹಿಡಿದ ಮೂಗುತಿ ಮಾತನಾಡದೆ ಕೊಟ್ಟಳು
ಏನಿಹುದವಳೆಡಗೈಲಿ ಬಟ್ಟಲು ಕಿವಿಯ ವಜ್ರವು ಕಾಣದೇ
ತಾನೆ ವಿಷಯವ ಅರಿತು ಬಟ್ಟಲ ವಿಷವ ನೆಲದಲಿ ಚೆಲ್ಲಿದ ||೨೧||

ನಡೆದ ನಾಯಕ ಅದೇ ನಿಮಿಷದಿ ಬೇಗ ತನ್ನಯ ಮಳಿಗೆಗೆ
ಅಡಗಿ ಹೋಗಿತ್ತವನ ಮನದಲಿ ಬೀಡು ಬಿಟ್ಟಿಹ ಕೃಪಣತೆ
ಉಡುಗಿ ಹೋಗುವುದಿತ್ತು ಒಂದೂ ತಪ್ಪುಮಾಡದ ಜೀವವು!
ಮಡದಿಗಿಂತಲು ಮಿಗಿಲು ಆಪುದೆ ಬರಿಯ ಧನಕನಕಾದಿಯು? ||೨೨||

ಶ್ರೀನಿವಾಸನು ಕಾಣಲಿಲ್ಲ ಅಂಗಡಿಯಲಿ ಮುದುಕನ
ಏನುಮಾಡಲು ಬೇಕು ಎಂಬುದನಾಗ ಮನದಲಿ ಯೋಚಿಸಿ
ತಾನೆ ಕೂಡಲೆ ಮಾಡಿಬಿಟ್ಟನು ಹಿರಿಯದೊಂದು ಮುಡಿವನು
ದಾನ ಮಾಡುವೆ ದಾಸನಾಗುವೆ ವಿಜಯನಗರವ ಸೇರುವೆ ||೨೩||

ಮನೆಗೆ ಮರಳಿದ ಶ್ರೀನಿವಾಸನು ಮುಡಿವ ಮಡದಿಗೆ ಹೇಳಿದ
ತನಗೆ ಭಾಗ್ಯವದಾಯಿತೆನ್ನುತ ಸರಸತಿಯು ಮರು ನುಡಿದಳು
ಜನವ ಕರೆಯುತ ಸಕಲ ಸಿರಿಯನು ಅಲ್ಲೆ ದಾನವ ಮಾಡುತ
ಮನೆಮಠಗಳನು ತೊರೆದು ಹೆಂಡತಿ ಮಕ್ಕಳೊಟ್ಟಿಗೆ ಹೊರಟರು ||೨೪||

ಹೋದ ದಿನಗಳ ಮರೆತು ಬಿಟ್ಟರು ಮತ್ತೆ ದಂಡಿಗೆ* ಹಿಡಿದರು
ವೇದ ವೇದ್ಯನ ಭಾವ ಗಮ್ಯನ ನಾಮ ಸಾಸಿರ ನುಡಿಯುತ
ಆದರದಿ ದಾಸನೆನಿಸುತ್ತಲಿ ಪುರಂದರನಾ ಹೆಸರಲಿ
ಆದುದೆಲ್ಲಾ ಒಳಿತೆ* ಎನ್ನುತ ರಾಮಕ್ರಿಯೆ*ಯಲಿ ಪಾಡುತ || ೨೫||

-neelanjana

*******************************************
p.s:  This is the verse form of a story I wrote about Purandara Dasa’s transformation becoming  a Haridasa from his previous life as a merchant. If you are interested in reading it in prose form, the story can be read here in Kannada or here, in English

p.p.s:  It is written in the form of a choupadi – a four liner meter, which has been very successfully used in Kannada for story telling.  The unforgettable “Govina Hadu” comes to mind. In the form that I have chosen,  each line confirms to 3/4/3/4/3/4/4(5) mAtres

p.p.p.s: The first stanza refers to the town where Purandaradasa (or Srinivasa Nayaka, before he became a Haridasa hail) came from. Kshemapura, in the Sharavati valley is identified as the most likely place where he would have spent his life as a businessman. The last stanza refers to a composition of Purandara Dasa “Adaddella oLite Ayitu” that is supposedly an autobiographical, where he praises his wife as being instrumental in making him a Haridasa. This song is traditionally sung in rAga “Ramakriya” (now better known as Kamavardhini, and somewhat incorrectly as “Pantuvarali”

Today is the last day of  the lunar month of Pushya. The day Purandara dasa passes away in the year 1564AD.

ತೆರಳಿದರು ಹರಿಪುರಕಿಂದು || ಪಲ್ಲವಿ ||
ಪುರಂದರದಾಸರಾಯರು ದೀನಬಂಧು || ಅನುಪಲ್ಲವಿ ||

ರಕ್ತಾಕ್ಷಿವತ್ಸರ ಪುಷ್ಯಾಂತ ರವಿವಾರ
ಮುಕ್ತಿಗೈದಿದರು ಕೇಳಿ ಬುಧಜನರು || ೧ ||

ವಿರೂಪಾಕ್ಷ ಕ್ಷೇತ್ರದಿ ವಿಠಲನ್ನ ಸನ್ನಿಧಿಯಲ್ಲಿ
ಶರೀರವನಿರಿಸಿ ಅನಾಥರನು ಹರಸಿ || ೨ ||

In this song by Madhwapa Dasa,  son of Purandara Dasa records the date as “The last day of Pushya which was a Sunday,  in the year Raktakshi at Virupaksha kshetra, in the abode of Vithala’.

Contrary to what is popularly being parroted over decades,  Purandara Dasa did not hail from Purandaragada in current day Maharashtra.  Inscriptional evidence points that he is likely to have come from the region of Tirthahalli/ Gerusoppa in Shivamogga district of current day Karnataka. High time we correct some of the facts we pass to the next generation, I’d say!

Here is an alternate-history fiction I wrote on some events of Purandara Dasa’s, life setting it in this geographical region (in Kannada ). Here is the English translation of the same short story.

Here are links to a bunch of my old posts in English, about Purandara Dasa.

“Rama of Rangana Halli”

Thanksgiving in April

Govinda Smarane and Blog Hits!

Friday, the 13th

A Day to Remember

Dasarendare Purandara Dasarayya!

Ranga of Mavinakere

Why did Lakshi Wed Vasudeva?

Purandara Dasa’s 32 Ragas
Here are some links to some of my posts from my Kannada blog

ಇಂದಿನ ದಿನವೇ ಶುಭದಿನವು

ಬೆಲ್ಲದ ಕಟ್ಟೆಯ ಕಟ್ಟಿ

ವಾಹ್ವಾರೆ ಮೆಣಸಿನಕಾಯಿ

ನಾಡೆಲ್ಲ ಹುಡುಕಿದರು ಈಡಾರ ಕಾಣೆ

ಧರ್ಮವೆ ಜಯವೆಂಬ ದಿವ್ಯ ಮಂತ್ರ

ಹೆಂಡ್ತೀರ್ ಮಾತು ಗಂಡಂದ್ರು ಯಾಕೆ ಕೇಳ್ತಾರೆ?

ತುತ್ತುರು ತೂರೆಂದು ಬತ್ತಿಸ ರಾಗಗಳನ್ನು..

What is better than listening to or sing some songs of Purandara Dasa on this day of remembrance? That’s what I’ll do and hope you get a chance to do too!

-neelanjana

25th January, 2009 is Purandara Dasa Aradhane. I am posting here an article that I wrote for the February 2009 issue of ‘Guru Sarvabhouma’, a monthly publication by Sri Guru Raghavendra Matha, Mantralaya. Kannada compostions are written in devanagari script, for those readers who can’t read Kannada

—————————————————————————————————————————————————

 

इन्दिन दिनवे शुभदिनवु
इन्दिन वार शुभवार
इन्दिन तारॆ शुभतारॆ
इन्दिन योग शुब्गयोग
इन्दिन करण शुभकरण
इन्दु पुरन्दरविट्ठल रायन
सन्दर्शन फलवेमगायितु!

In the above kannada ugaabhoga (written in dEvanagari for those who can’t read kannada script) , Purandara Dasa says “Each and every day is a good day. One does not have to worry about the tithi, vaara, nakshatra, yoga or karana at all; because when one thinks of Hari, the day turns out to be a good day after all”. Similarly any day is indeed a good day to remember great souls such as Purandara Dasa. However it is customary to pay homage to such great people on special occassions such as the day they were born or the day they passed away. Such days give us a chance to read about, talk about, and understand their good deeds. This helps us to practice the principles and values  which such noble people stood for, and thereby turning us towards the right path for life. So I think it is very apt to highlight some aspects of Purandara Dasa’s works at this time of Purandara Dasa’s aradhane.

He is considered as one of the four pillars on which the entire edifice of haridasa literature stands, along with Sripadaraya, Vyasaraya and Vijaya dasa.  A very popular shloka  venerates these four haridasas as follows:

नमः श्रीपादराजाय नमस्ते व्यासयोगिणे ।
नमः पुरन्दरार्याय विजयार्याय ते नमः ॥

(I bow to thee, Sripadararaya and to the yogi vyAsa. I bow to the noble Purandara and Vijaya)

Purandara dasa is remembered as the noblest of all hari dasas. पुरन्दरगुरुं वन्दे दासश्रेष्ठम् दयानिधिम् – ” I bow to the great teacher Purandara, who is the best among the dasas, and an abode of compassion” so goes the saying. He is considered as the best among all the haridasas, so much so that his own guru says “If there one is a dasa, he should be like Purandara dasa” -‘ दासरॆन्दरे पुरन्दर दासरय्य ‘ “ದಾಸರೆಂದರೆ ಪುರಂದರ ದಾಸರಯ್ಯ”.  There are not many pupils in this world who have been praised thus by their own teachers.

 

dscn40491

(A Sculpture of Purandara Dasa, possibly from Hampe. This is a photograph of a photograph)

Purandara dasa is also called as the ‘pitaamaha’ of Karnataka sangeeta as it is practiced today. Purandara has had a varied role – a devotee, a haridasa (servant of God), a poet, a musician,  a social reformer, a saint and a traveler  who traveled all over south India. However, as it happens to many important men and women in Indian history,  the details of his life that are available are rather scant and sketchy. We do not exactly know the day he was born or the the place he was born or the day he was initiated to the haridasa fold. But, if we know one thing certianly, it is the day of his passing away.

Purandara dasa left this world on the Pushya  amavasye in the Raktakshi samvatsara (This corresponds to the year 1564 AD). We get this information from a composition attributed to Purandara dasa’s son Madhwapa dasa.  Here is what he says:

तॆरळिदरु हरिपुरकिंदु ॥ पल्लवि ॥

पुरंदरदासरायरु दीनबंधु ॥ अनुपल्लवि ॥

रक्ताक्षिवत्सर पुष्यांत रविवार
मुक्तिगैदिदरु केळि बुधजनरु ॥ १ ॥

विरूपाक्ष क्षेत्रदि विठलन्न सन्निधियल्लि
शरीरवनिरिसि अनाथरनु हरसि ॥ २ ॥

The pallavi and anupallavi lines in this song say that it was composed right on the day of Purandara Dasa passed away. The first charana clearly states that it was on amavasye, Pushya mAsa, Sunday. when Purandara dasa passed away. The second charana mentions Viroopaksha Kshetra (Hampe) and the line ‘in the sannidhi of vithala’, indicate that Purandara passed away somewhere in the viscinity of the Vijaya Vitthala temple in Hampe, very likely at the mantapa called as Purandara Mantapa nowadays.

Why does this song become important to us? This shows us how a song can be used to get historical information. Even if we do not know lots of things about Purandara’s life, we can still understand the principles he stood for. Whether or not one believes in miraculous incidents that are supposed to have taken place or not, the works of Purandara dasa are a great resource to guide us. In fact, Purandara dasa’s greatness lies not in the miracles that are associated with him, but in his works. Although Purandara dasa is said to have composed hundreds of thousands of songs, only a small fraction of that has been handed over to us through tradition. Luckily, within the available compositions there is plenty of information to understand the life and times of the period when Purandara dasa lived. Haridasa poetry is more like a mirror to the society. They show the positive attributes, as well as the shortcomings of their times. Many of these aspects are relevant even today, as they were several centuries ago.

Vijayadasa, who was instrumental in collecting Purandara dasa’s songs in the 18th century mentions that Purandara dasa was a merchant before he became a haridasa. Purandara dasa himself refers to trade and business in some of his songs. There might be an element of  autobiographical content in such songs.

In one composition Purandara dasas says:

व्यापार नमगायितु
श्रीपतिय पादारविंद सेवॆयॆंबो ।

हरिकरुणवॆ अंगि गुरुकरुणवॆ मुंडासु
हरिदासर दयवॆंबो वल्लि
परमपापि कलियॆंबो पापोसु मॆट्टि
दुरात्मरादवर ऎदॆमेलॆ नडॆवंथ ॥ व्यापार नमगायितु॥

बिळियकागद हृदय बायि कलमदानि
नालिगॆयॆंबोदे लेखनियु
लोलन कथॆ नामंगळ
शीलमनवि बरॆदु हरिगॆ ऒप्पिसुवंथ ॥  व्यापार नमगायितु॥

 

Purandara says here: “It is a fortune to be in the trade of serving the lotus feet of the Lord of Lakshmi. Wearing the Hari’s mercy as a coat, and  the kindness of guru as my turban,  the sympathy of other haridasas as a shoulder cloth, and wearing shoes that are none other than Kali himself, and then walking over the chest of evil men, is indeed a very good trade. Writing stories containing the names of Hari, in a paper that is none other than the heart, using the tongue as a pen, using the mouth as the ink pot is indeed a wonderful trade”. Here on one side, Purandara dasa describes the dress worn by a trader, and says that it is his ‘business’ as a haridasa is to tread the evil deeds and the evil in this world. The mention of the word ‘vyaapara’ – trade – rather than any other occupation might support the beleif that Purandara was a merchant before he became a haridasa.

Similarly, we can cite another ugabhoga where he says:

ऎन्न कडॆहायिसिरुवुदु निन्न भार
निन्न नंबि बदुकुवुदु ऎन्न व्यापार

 

It is your responsibility to take me to the other side
It is my business to have faith in you!

Such was the  outlook and philosophy of complete surrender to Hari that Purandara dasa, a great saint of all times had. Let us try to keep in mind his message at this time of Purandara dasa aradhane.

-neelanjana

Hits

  • 752,314

My book “Hamsanada” for iPad, iPhone or iPod

A Collection of  Samskrta Subhashitas, translated to Kannada

http://www.saarangamedia.com/product/hamsanada

My Book, on Google Play!

My Book Hamsanada, on Google Play

My Book Hamsanada, on Google Play

Enter your email address to follow this blog and receive notifications of new posts by email.

Join 9,609 other subscribers

ಅವಧಿಯಲ್ಲಿ ಹೀಗಂದರು:

"ಅಲ್ಲಿದೆ ನಮ್ಮ ಮನೆ…ಇಲ್ಲಿ ಬಂದೆ ಸುಮ್ಮನೆ… ಎಂಬ ಘೋಷ ವಾಕ್ಯದೊಂದಿಗೆ ಬ್ಲಾಗ್ ಮಂಡಲದಲ್ಲಿ ಕಾಣಿಸಿಕೊಂಡವರು ನೀಲಾಂಜನ. ಅಲ್ಲಿದೆ ನಮ್ಮ ಮನೆ ಕನ್ನಡದ ಪರಿಮಳವನ್ನು ಇಂಗ್ಲಿಷ್ ನಲ್ಲಿ ಹರಡುತ್ತಾ ಇದೆ. ಕನ್ನಡದ ವಚನಗಳು, ಸಂಸ್ಕೃತ ಸುಭಾಷಿತಗಳು ಜೊತೆಯಲ್ಲೇ ಸಂಗೀತ ಹೀಗೆ ಹಲವು ಲೋಕವನ್ನು ಈ ಬ್ಲಾಗ್ ಪರಿಚಯಿಸಿದೆ." ಅವಧಿ, ಮೇ ೧೫, ೨೦೦೮

ಇತ್ತೀಚಿನ ಟಿಪ್ಪಣಿಗಳು

Manjugouda police pa… ರಲ್ಲಿ Ugra Narasimha of Vijayan…
neelanjana ರಲ್ಲಿ Samasya Poornam – Part…
neelanjana ರಲ್ಲಿ Samasya Poornam – Part…
charukesha ರಲ್ಲಿ Where in the World is Mount…
ನೇಸರ್ ರಲ್ಲಿ Samasya Poornam – Part…
ಮೇ 2024
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

ಬಗೆ ಬಗೆ ಬರಹ

ಸಂಗ್ರಹಗಳು