You are currently browsing the tag archive for the ‘ಸುಭಾಷಿತ’ tag.

ಎರಡು ತಿಂಗಳಿನಿಂದ ಈ ’ಮನೆ’ಯಲ್ಲಿ ಒಂದಕ್ಷರ ಬರೆದಿಲ್ಲ ಅನ್ನೋದು ಇವತ್ತು ಮನಸ್ಸಿಗೆ ಬಂತು. ಹಾಗಂತ ನಾನು ಈ ’ಮನೆ’ಯ ಕಡೆಗೆ ಸುಳಿದೇ ಇಲ್ಲ ಅಂತಲ್ಲ. ನೂರೆಂಟು ಕೆಲಸ ಕಾರ್ಯಗಳ ನಡುವೆ, ಅದು ಕಂಡರೂ ಕಾಣದಂತೆ ಇದ್ದೆ ಅಷ್ಟೆ. ಒಂದು ರೀತಿ ಅಭಾವ ವೈರಾಗ್ಯ, ಬೇಡ, ಅಕ್ಷರ ವೈರಾಗ್ಯ ಅಂದರೆ ತಪ್ಪೇನಿಲ್ಲ ಬಿಡಿ. ಅಲ್ಲಿರುವ, ಇಲ್ಲಿರುವ, ಎಲ್ಲೆಲ್ಲೋ ಇರುವ ಇಂತಹ ಮನೆಗಳನ್ನೆಲ್ಲ ಸಂಭಾಳಿಸುವುದು ಹುಲುಮಾನವರಾದ ನನ್ನಂತಹವರಿಗೆ ಕಷ್ಟವೇ.

Puri Jagannatha
(Jagannatha of Puri: Image courtesy: http://srividya-rajesh.com/dharma/)

ಮನುಷ್ಯಮಾತ್ರದವರನ್ನ ಬಿಡಿ, ದೇವಾನುದೇವತೆಗಳಿಗೇ ಸಂಸಾರ ತಾಪತ್ರಯಗಳು ಅನ್ನೋದು ತಪ್ಪಿದ್ದಲ್ಲ. ಹೇಗಪ್ಪ ಗೊತ್ತು ಅಂತೀರಾ? ಈಗ ಮಾತಾಡೋದಕ್ಕೆ ಮೊದಲು ಅದಕ್ಕೆ ಆಧಾರ, ಅಂಕಿ-ಅಂಶ ಇಂತಹದ್ದನ್ನೆಲ್ಲ ಕೊಡ್ದಿದ್ರೆ ಇನ್ನೊಬ್ಬರ ಮಾತನ್ನ ಯಾರೂ ಕಿವಿಗೂ ಹಾಕ್ಕೊಳೋದಿಲ್ಲ ಅನ್ನೋದು ನನಗೆ ಗೊತ್ತು. ಇಲ್ಲ ಒಂದು ವೇಳೆ ಕೇಳಿದ್ರೂ, ಜಾಣ ಕಿವುಡನ್ನು ತಂದ್ಕೊಳೋರೂ ಇದ್ದಾರೆ ಬಿಡಿ. ಅದು ನನ್ನ ನಿಮ್ಮ ತಪ್ಪಲ್ಲ ಸ್ವಾಮೀ, ಕಲಿಗಾಲ, ಕಲಿಗಾಲ ಮಹಿಮೆ!

ಅದಕ್ಕೇ ಈಗ ಏನನ್ನಾದರೂ ಹೇಳೋ ಮೊದಲೇ ಒಂದಷ್ಟು ಅದಕ್ಕೆ ಬೆಂಬಲಿಸೋ ಅಂಥ, ಬೆಂಗಾವಲಾಗಿರೋ ಅಂತಹ ಅಡಿಪಾಯ ಇಟ್ಕೊಂಡೇ ಹರಟೆ ಹೊಡೀಬೇಕು ಅಂತ ನಾನಂತೂ ತೀರ್ಮಾನ ಮಾಡಿಬಿಟ್ಟಿದೀನಪ್ಪ. ಅದನ್ನ ಅತ್ಲಾಗಿ ಬಿಟ್‍ಹಾಕಿ. ಏನೋ ಕೆಲಸವಿಲ್ಲದ ಕುಂಬಾರನ ಕಥೆ ಯಾಕೆ ನನಗೆ? ಇರಲಿ. ದೇವಾನುದೇವತೆಗಳ ಸಂಸಾರ ತಾಪತ್ರಯಗಳ ಬಗ್ಗೆ ಹೇಳಬೇಕು ಅಂತಿದ್ದೆ. ಹೇಳ್ತೀನಿ. ಮತ್ತೆ ಚುಪ್ ಅಂತ ಬಾಯ್ಮುಚ್ಕೋತೀನಿ.

ಈಗ ಶಿವ ಇದ್ದಾನಲ್ಲ, ಇವನ ಕಷ್ಟ ಕೇಳೋಕ್ ಬನ್ನಿ ಮೊದಲು. ದುಡ್ಡು ಕಾಸು ಇಲ್ಲದವರ ಪಾಡು ಯಾರಿಗೂ ಬೇಡ ಅನ್ನೋ ಸಮಾಚಾರ ಭೂಲೋಕದಲ್ಲಿರೋ ನಮ್ಮಂತಹವರಿಗೆ ದಿನೇ ದಿನೇ ಅನುಭವಕ್ಕೆ ಬರುತ್ತಲೇ ಇರುತ್ತೆ. ಯಾಕಂತಂದ್ರೆ, ಭರ್ತೃಹರಿಯ ಸುಭಾಷಿತ ಚೆನ್ನಾಗಿ ತಿಳಿಸಿಕೊಡ್ತಿದೆ ನೋಡಿ (ಕನ್ನಡಕ್ಕೆ ತಂದಿದ್ದು ನಾನೇ):

ಹಣವಿದ್ದರೆ ಅವನೆ ಬಲು ಸೊಗಸುಗಾರ
ಅವ ಪಂಡಿತ, ಅರಿತವ, ಮಾತುಗಾರ!
ಗುಣಗ್ರಾಹಿ, ನೋಡಬೇಕೆನಿಸುವ ಚೆಲ್ವ
ಹಣದಾಸರೆ ಇರುವೆಡೆಯಿದ್ದಾವು ಗುಣಗಳೆಲ್ಲ!

ಸಂಸ್ಕೃತ ಮೂಲ:

ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ
ಸ ಪಂಡಿತಃ ಸ ಶ್ರುತವಾನ್ ಗುಣಜ್ಞಃ
ಸ ಏವ ವಕ್ತಾ ಸ ಚ ದರ್ಶನೀಯಃ
ಸರ್ವೇ ಗುಣಾಃ ಕಾಂಚನಮಾಶ್ರಯಂತಿ!

ಶಿವ, ಪಾಪ, ಭರ್ತೃಹರಿಯ ಸುಭಾಷಿತಗಳನ್ನ ಓದಿದವನಲ್ಲ. ಹೋಗಲಿ, ಲೋಕದ ರೀತಿ ನೋಡಿದವನೇ ಅಂದರೆ ಅದೂ ಇಲ್ಲ. ಎಲ್ಲೋ ಹಿಮಾಲಯ ಪರ್ವತದಲ್ಲಿ ಕೊರೆಯೋ ಚಳಿಯ ಕೈಲಾಸದಲ್ಲಿ ಕುಳಿತು ತಪಸ್ಸು ಮಾಡೋ ಅಂತಹವನು ಆತ. ಬಟ್ಟೆ ಬರೆ ಇಂತಹದರ ಮೇಲೂ ಗಮನವೂ ಇಲ್ಲ. ಹೇಳೋರು ಕೇಳೋರು ಮೊದಲೇ ಇರಲಿಲ್ಲ. ತಾನಾಯ್ತು, ತನ್ನ ಕೈಲಾಸ ಆಯ್ತು ಅಂತ ಇದ್ದಿದ್ರೆ ಚೆನ್ನಾಗೇ ಇರ್ತಿತ್ತು. ಆದ್ರೆ, ಯಾಕೋ ಏನೋ ನಂಗೊತ್ತಿಲ್ಲ, ಪಾಪ – ದೇವತೆಗಳೂ ರಾಕ್ಷಸರೂ ಅಮೃತಕ್ಕೋಸ್ಕರ ಕಡಲನ್ನ ಕಡೆಯೋ ಕಡೆಗೆ ಹೋಗಿಬಿಟ್ಟ. ಅಲ್ಲಾದ ಅನ್ಯಾಯ ನೋಡಿ – ವಿಷ್ಣು ಒಂದು ಕಡೆ ಲಕ್ಷ್ಮಿಯನ್ನ, ಸುದರ್ಶನ ಚಕ್ರವನ್ನ, ಇಂದ್ರ ಉಚ್ಚೈಶ್ರವಸ್ಸನ್ನ, ಐರಾವತವನ್ನ, ಹೀಗೆ ಸಮುದ್ರದಿಂದ ಹುಟ್ಟಿದ್ದ ಒಳ್ಳೊಳ್ಳೇದನ್ನೆಲ್ಲಾ ಒಬ್ಬೊಬ್ರಾಗಿ ಹಾರಿಸ್ಕೊಂಡು ಹೋದ್ರು. ಪಾಪದ ಶಿವನಿಗೆ ದಕ್ಕಿದ್ದೇನು? ವಿಷ ಅಷ್ಟೇ. ವಿಷ ಕುಡಿದು, ಗಂಟಲನ್ನ ಕಪ್ಪು ಮಾಡ್ಕೊಂಡು, ನಂಜುಂಡ ಅನ್ನೋ ಹೆಸರು ತೊಗೊಂಡಿದ್ದೇ ಅವನ ಭಾಗ್ಯ. ಅನ್ಯಾಯ ಅಲ್ವೇ ಮತ್ತೆ?

ಇದನ್ನೇ ಭರ್ತೃಹರಿ, ನಮಗೆಲ್ಲ ಒಂದು ಎಚ್ಚರಿಕೆಯಾಗಿ ಈ ಪದ್ಯದಲ್ಲಿ ಹೇಳ್ತಾನೆ ನೋಡಿ:

ಸಂಸ್ಕೃತ ಮೂಲ:

ಕಿಂ ವಾಸಸೇತ್ಯತ್ರ ವಿಚಾರಣೀಯಮ್ ವಾಸಃ ಪ್ರಧಾನಂ ಖಲು ಯೋಗ್ಯತಾಯಾಃ
ಪೀತಾಂಬರಂ ವೀಕ್ಷ್ಯ ದದೌ ಸ್ವಕನ್ಯಾಂ ಚರ್ಮಾಂಬರಂ ವೀಕ್ಷ್ಯ ವಿಷಂ ಸಮುದ್ರಃ ||

ಹಾಗಂದ್ರೆ,

ಉಡುಪು ತೊಡುವುದರಲ್ಲಿ ಇರಲಿ ತುಸು ಗಮನ
ಮಟ್ಟಕ್ಕೆ ತಕ್ಕುಡುಗೆ ಇದ್ದರದು ವಯಿನ!
ಹಳದಿ ರೇಸಿಮೆಯುಟ್ಟವಗೆ ಮಗಳನೇ ಕೊಟ್ಟ
ಕಡಲೊಡೆಯ ತೊಗಲುಟ್ಟವಗೆ ನಂಜುಣಿಸಿಬಿಟ್ಟ!

ಸಮುದ್ರ ರಾಜ,  ಈ ವಿಷ್ಣು ಪಟ್ಟೆ ಪೀತಾಂಬರ ಉಟ್ಕೊಂಡಿದಾನೆ ಅನ್ನೋ ಕಾರಣಕ್ಕೆ ಮಗಳಾದ ಲಕ್ಷ್ಮಿಯನ್ನ ಅವನಿಗೆ ಕನ್ಯಾದಾನ ಮಾಡಿ ಕಳಿಸಿಬಿಟ್ಟರೆ, ಒಣಚರ್ಮ ತೊಟ್ಕೊಂಡಿದಾನೆ ಅನ್ನೋ ಕಾರಣಕ್ಕೆ, ಶಿವನಿಗೆ ತೀರಾ ವಿಷ ಕುಡಿಸೋದೇ? ಅನ್ಯಾಯ. ಪರಮ ಅನ್ಯಾಯ.

ಈ ಸಮುದ್ರ ಮಥನ ಆಗೋ ಸಂದರ್ಭದಲ್ಲಿ ಶಿವನಿಗೆ ಪಾರ್ವತಿಯೊಡನೆ ಇನ್ನೂ ಮದುವೆ ಆಗಿರ್ಲಿಲ್ಲ ಅಂತ ಕಾಣುತ್ತೆ. ಆ ಕಡೆ, ಮೊದಲ ಹೆಂಡತಿ ದಾಕ್ಷಾಯಿಣಿ ಅಗ್ನಿ ಪ್ರವೇಶ ಮಾಡಿ ಆಗಿ ಹೋಗಿತ್ತು ಅನ್ನಿಸುತ್ತೆ. ಆಮೇಲೆ ಕಾಲಾನುಕ್ರಮೇಣ, ಪಾರ್ವತಿಯ ಜೊತೆ ಮದುವೆಯೂ ಆಯ್ತು. ವಿರಾಗಿಯಾದ ಶಿವ ಸಂಸಾರಿಯೂ ಆದ. ಮಕ್ಕಳು ಮರಿ ಅಂತಲೂ ಆದ್ರು. ಹಾಗಿದ್ರೂ ಶಿವನ ತಾಪತ್ರಯಗಳು ತೀರದೇ ಹೋದುವು. ಅವನಿಗೆ ಭಿಕ್ಷಾಪಾತ್ರೆಯ ನಂಟಂತೂ ತಪ್ಪದೇ ಹೋಯ್ತು. ಅದಕ್ಕೇ ನೋಡಿ, ಇನ್ನೊಬ್ಬ ಸುಭಾಷಿತಕಾರ ಹೇಳೋ ಈ ಪದ್ಯವನ್ನ:

ಸಂಸ್ಕೃತ ಮೂಲ:

ಸ್ವಯಂ ಮಹೇಶಃ ಶ್ವಶುರಃ ನಗೇಶಃ ಸಖಾ ಧನೇಶಃ ತನಯಃ ಗಣೇಶಃ |
ತಥಾಪಿ ಭಿಕ್ಷಾಟನಮೇವ ಶಂಭೋಃ ಬಲೀಯಸೀ ಕೇವಲಮೀಶ್ವರಿಚ್ಛಾ! ||

ಅಂದರೆ,

ತಾನೆ ಲೋಕಕ್ಕೊಡೆಯ ಮಾವ ಬೆಟ್ಟಗಳೊಡೆಯ
ಗೆಳೆಯ ಸಿರಿಗೊಡೆಯ ಮಗನು ಗಣಗಳೊಡೆಯ
ಅದಕೇನು? ತಿರಿದು ತಿಂಬುದು ತಪ್ಪಲಿಲ್ಲವು ಶಿವಗೆ
ಅದಕೆ ಹೇಳುವೆನಿಂದು ವಿಧಿಯೆ ಬಲವೆಂದು!

ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ ಅಂತಾರಲ್ಲ, ಹಾಗಾಯ್ತು ನೋಡಿ ಶಿವನ ಪಾಡು. ಆದರೂ ಒಂದು ವಿಷಯದಲ್ಲಿ ಅವನು ಸುಖಿಯೇ. ಏಕಂದರೆ, ಅವನಿಗೆ ಅವನ ಮನವರಿತು ನಡೆಯುವ ಹೆಂಡತಿ ಇದ್ದಾಳೆ!

ಸಂಸ್ಕೃತ ಮೂಲ:

ಸ್ವಯಂ ಪಂಚಮುಖೋ ಪುತ್ರೌ ಗಜಾನನ ಷಡಾನನೌ
ದಿಗಂಬರಃ ಕಥಂ ಜೀವೇತ್ ಅನ್ನಪೂರ್ಣಾ ನ ಚ ಗೃಹೇ! (ಸಂಸ್ಕೃತ ಮೂಲ)

ಕನ್ನಡದಲ್ಲಿ:

ತನ್ನದೈದು ಬಾಯಿ ಮಗನಿಗಾರು ಬಾಯಿ
ಇನ್ನೊಬ್ಬ ಮಗನಿಗಿದೆ ಆನೆಯ ಬಾಯಿ!
ಅನ್ನವನುಣಿಸುವ ಅನ್ನಪೂರ್ಣೆ ಮನೆಯಲ್ಲಿ
ಇಲ್ಲದಿರೆಂತು ಬದುಕುವನು ಬಯಲನುಟ್ಟವನು?

ಅಂತೂ ಎಷ್ಟೆಲ್ಲಾ ತಾಪತ್ರಯಗಳ ನಡುವೆಯೂ ಶಿವನ ಸಂಸಾರ ಚೆನ್ನಾಗಿ ಸಾಗ್ತಾ ಇರೋದಕ್ಕೆ ಹೆಂಡತಿ ಪಾರ್ವತಿ ಎಷ್ಟು ಕಾರಣ ಅನ್ನೋದು ಗೊತ್ತಾಯ್ತಲ್ಲ? ಇದೊಂದು ವಿಷಯದಲ್ಲಿ ಅವನು ಪುಣ್ಯ ಮಾಡಿದವನೇ.

ಅದೇ, ವಿಷ್ಣುವನ್ನ ನೋಡಿ. ಪೀತಾಂಬರವುಟ್ಟು ಮಿಂಚಿದವನಿರಬಹುದು ಅವನು. ವೈಕುಂಠದ ವೈಭೋಗದಲ್ಲಿ ನಲಿದಿರಬಹುದು ಅವನು. ಹಾಲ್ಗಡದಲ್ಲಿ ಹಾಯಾಗಿ ಪವಡಿಸಿರಬಹುದು ಅವನು. ಬಹಳ ಸಂತೋಷವಾಗೇ ಇರಬೇಕು ಅವನು, ಅಂತೆಲ್ಲಾ ಯೋಚಿಸ್ತಾ ಇದ್ರೆ, ಹಾಕಿ ಕಡಿವಾಣ ನಿಮ್ಮ ಆಲೋಚನಾ ಸರಣಿಗೆ! ಅವನ ತಾಪತ್ರಯಗಳು ಏನೂ ಕಮ್ಮಿ ಇಲ್ಲ!

ಮಡದಿಯೊಬ್ಬಳಿದ್ದಲ್ಲೆ ಇರುವಳು ಮತ್ತೊಬ್ಬಳೋ ನಿಂತೆಡೆ ನಿಲ್ಲಳು
ಒಡಲಿರದ ಮಗ ಮೂಲೋಕ ಗೆದ್ದವ; ತಡೆಯಲಾರದಂತೆ ಕಾಡಿಸುವ!
ಕಡಲಲಿ ಮನೆ; ಹಾಸಿಗೆಗೆ ಹಾವೊಂದು; ಅತ್ತಿತ್ತ ಒಯ್ಯಲು ಅದರ ವೈರಿ
ಬೀಡೆನ್ನದು ಹೀಗಾಯ್ತೆಂದು ನೆನೆದು ನೆನೆದೇ ಮರವಾದನು ಮುರಾರಿ!

ಸಂಸ್ಕೃತ ಮೂಲ:

ಏಕಾ ಭಾರ್ಯಾ ಪ್ರಕೃತಿರಚಲಾ ಚಂಚಲಾ ಚ ದ್ವಿತೀಯಾ
ಪುತ್ರೋSನಂಗಸ್ತ್ರಿಭುವನಜಯೀ ಮನ್ಮಥೋ ದುರ್ನಿವಾರಃ |
ಶೇಷಃ ಶಯ್ಯಾ ವಸತಿರುದಧಿರ್ವಾಹನಂ ಪನ್ನಗಾರಿಃ
ಸ್ಮಾರಂ ಸ್ಮಾರಂ ಸ್ವಗೃಹಚರಿತಂ ದಾರುಭೂತೋ ಮುರಾರಿಃ||

ಒಬ್ಬಳು ಹೆಂಡತಿ ಭೂಮಿ, ಸ್ವಭಾವದಲ್ಲಿ ತಟಸ್ಥೆ. ಇದ್ದಲ್ಲೇ ಇರುವವಳು. ಇನ್ನೊಬ್ಬ ಹೆಂಡತಿ ಲಕ್ಷ್ಮಿ ತೀರಾ ಚಂಚಲೆ. ಅವಳ ಕಾಲು ನಿಂತಲ್ಲಿ ನಿಲ್ಲದವಳು. ಇನ್ನು ಮಗನೆನಿಸಿಕೊಂಡ ಮನ್ಮಥನಿಗೆ ದೇಹವೇ ಇಲ್ಲ. ಆದರೂ, ಮೂಲೋಕದ ಜನರಿಗೂ ತಡೆಯಲಾರದಂತೆ ಕಾಟ ಕೊಡೋದೇ ಇವನ ಕೆಲಸ. ಹೀಗಾಗಿ ಹೆಂಡತಿ ಮಕ್ಕಳಿಂದಲಂತೂ ವಿಷ್ಣುವಿಗೆ ಸಂಸಾರದಲ್ಲಿ ಒಂದು ನಿರಾಳ ಸಮಾಧಾನ ಅನ್ನೋದು ಸಿಗೋ ಮಾತೇ ಇಲ್ಲ. ಹೋಗಲಿ ಮನೆಯವರನ್ನ ಬಿಟ್ಟು ಉಳಿದವರನ್ನ ನೋಡೋಣ ಅಂದ್ರೆ, ಅವನಿಗೆ ಮನೆಯಾದರೂ ಎಲ್ಲಿದೆ? ಒಂದು ನಿಮಿಷವೂ ಸುಮ್ಮನಿರದೆ ಅಲೆಗಳನ್ನ ಎಸೆಯುತ್ತಲೇ ಇರೋ ಸಮುದ್ರ. ಅಲೆ ಇದ್ದರೆ ಇತ್ತು, ಹೋಗಲಿ, ನಾಲ್ಕು ನಿಮಿಷ ನೆಮ್ಮದಿಯಾಗಿ ನಿದ್ದೆ ಮಾಡೋಣ ಅಂದ್ರೆ, ಹಾಸಿಗೆಯಾದರೂ ಉಂಟೇ? ಪಾಪದವ, ಹಾವಿನ ಮೇಲೆ ಮಲಗಬೇಕು ಅವನು. ಯಾವಾಗಲೂ ಸರಸರ ಹರಿಯೋ ಅಂತಹ ಹಾವು, ವಿಷ್ಣು ಮಲಗಿಬಿಟ್ಟ ಅಂತ ಇದ್ದಲ್ಲೇ ಸುಮ್ಮನಿರುತ್ಯೇ? ಅದೂ ಅಲ್ಲೇ ಮೇಲೆ ವಿಷ್ಣುವಿನ ವಾಹನವಾಗಿ ಇರೋ ಗರುಡ ತನ್ನ ದೊಡ್ಡ ವೈರಿಯಾಗಿ, ಸದಾ ಹೊಂಚು ಹಾಕ್ತಾನೇ ಇರೋವಾಗ?

ಇನ್ನು ಈ ವಿಷಯಗಳ ಬಗ್ಗೆಯೇ ಯೋಚಿಸೀ ಯೋಚಿಸೀ ವಿಷ್ಣು ಸುಸ್ತಾಗಿ ಮರಗಟ್ಟಿ ಹೋದನಂತೆ. ಅಕ್ಷರಶಃ ಮರಗಟ್ಟಿ ಹೋದನಂತೆ. ಸಂಸಾರ ತಾಪತ್ರಯಗಳಿಂದ ಅವನು ಎಷ್ಟು ನೊಂದಿದ್ದಾನೆ ಅನ್ನೋದಕ್ಕೆ ಬೇರೆ ಇನ್ನೇನಾದರೂ ಕುರುಹು ಬೇಕೇನು?

-ನೀಲಾಂಜನ

ಕೊ: ಸಾಧಾರಣವಾಗಿ ದೇವಾಲಯಗಳಲ್ಲಿ ಕಲ್ಲಿನ, ಇಲ್ಲ ಲೋಹದ ವಿಗ್ರಹಗಳಿದ್ದರೆ,  ಪುರಿಯ ದೇವಾಲಯದಲ್ಲಿರುವ ಜಗನ್ನಾಥನ ವಿಗ್ರಹ ಮರದ್ದು. ಚಿತ್ರ ಈ ಬರಹದ ಮೊದಲಿಗೆ ಹಾಕಿದ್ದೇನೆ. ಆ ವಿಷಯವನ್ನೇ ಸುಭಾಷಿತಕಾರ ಶ್ಲೇಷೆಯಿಂದ, ವಿಷ್ಣುವು ’ಮರಗಟ್ಟಿ’ಹೋದ ಎಂದು ಹೇಳಿದ್ದಾನೆ.

As I was reading a subhAshita toady, I was stuck by the resemblance between that verse and a vacana of Akka Mahadevi, a Kannada poet-saint from 12th century.

Here is the subhAshita I am referring to:

छिन्नोपि चंदनतरुः न जहाति गंधं
वृद्धोपि वापणपतिः न जहाति लाभं ।
यंत्रार्पितो मधुरतां न जहाति चेक्षुः
क्षीणोपि न त्यजति शीलगुणान् कुलीनः ॥

ಛಿನ್ನೋಪಿ ಚಂದನತರುಃ ನ ಜಹಾತಿ ಗಂಧಂ
ವೃದ್ಧೋಪಿ ವಾಪಣಪತಿಃ ನ ಜಹಾತಿ ಲಾಭಂ |
ಯಂತ್ರಾರ್ಪಿತೋ ಮಧುರತಾಂ ನ ಜಹಾತಿ ಚೇಕ್ಷುಃ
ಕ್ಷೀಣೋಪಿ ನ ತ್ಯಜತಿ ಶೀಲಗುಣಾನ್ ಕುಲೀನಃ ||

The Subhashita tells that how noble men (or women) do not drift away from their good nature even when they are facing bad times. I just could not stop using two lines from AkkamahAdEvi’s vachana “chandanava kaDidu koredu tEdoDe” (ಚಂದನವ ಕಡಿದು ಕೊರೆದು ತೇದೊಡೆ) to bring this subhAshita into KannaDa, for they make such a perfect match!

ಚಂದನವ ಕಡಿದು ಕೊರೆದು ತೇದೊಡೆ
ನೊಂದೆನೆಂದು ಕಂಪ ಬಿಟ್ಟಿತ್ತೇ?
ಕುಂದಿದಾ ದೇಹದ ಮುದಿವ್ಯಾಪಾರಿಯೂ
ಹಿಂದಾಗಬಿಟ್ಟಾನೆ ಗಳಿಕೆಯನ್ನು?
ಸಂದು ಸಂದು ಕಡಿದ ಕಬ್ಬನು
ತಂದು ಗಾಣದಲಿಕ್ಕಿ ಅರೆದೊಡೆ
ನೊಂದೆನೆಂದದು ತಾ ಸವಿಯ ಬಿಟ್ಟೀತೇ?
ನೊಂದರೂ ಕುಂದಿದರೂ ಶೀಲಗುಣಗಳನು
ಒಂದೇ ಮನದಿ ಕಾಯುವರು ಅಗ್ಗಳರು!

(ಮಹಾದೇವಿಯಕ್ಕನ ಎರಡು ಸಾಲುಗಳನ್ನು ಸಾಲ ತೆಗೆದುಕೊಂಡಿರುವೆ – ಅಂತ ಸೊಗಸಾದ ಸಾಲುಗಳನ್ನು ಬಿಡಲು ಮನಸಾಗಲಿಲ್ಲ – ಆ ವಚನ ಚಂದನವ ಕಡಿದು ಕೊರೆದು ತೇದೊಡೆ ಎಂದೇ ಆರಂಭವಾಗುತ್ತೆ 🙂 )

-ನೀಲಾಂಜನ

ಒಳ್ಳೆಯ ನಡತೆಯ ಮೇಲಿನ ಕೆಲವು ಸುಭಾಷಿತಗಳು. ಭಾವಾನುವಾದ ನನ್ನದು.

ಕೊಡದಿರು ಕುಲಕ್ಕೆ ಬೆಲೆ
ನಡತೆಗೆ ನೀಡು ಮಹತ್ತು!
ಎಡೆಬಿಡದೆ ಬೆಳೆದೀತು ಕಳೆ
ಹೊಲವದು ಸೊಗಸಿದ್ದಷ್ಟೂ!

ಸಂಸ್ಸ್ಕೃತ ಮೂಲ:

ಕಿಂ ಕುಲೇನೋಪದಿಷ್ಟೇನ ಶೀಲಮೇವಾತ್ರ ಕಾರಣಂ
ಭವಂತಿ ಸುತರಾಂ ಸ್ಫೀತಾಃ ಸುಕ್ಷೇತ್ರೇ ಕಂಟಕೀದ್ರುಮಾಃ

ಹೆರವರಿಗುಪದೇಶ ನೀಡುವುದರಲಿ
ಕುಶಲರು ಪ್ರತಿಯೊಬ್ಬರೂ
ಈ ನಡತೆಯ ತಡೆಸು ನಿಂತವರು
ಇರಬಹುದು ಸಾವಿರಕೊಬ್ಬರು!

ಸಂಸ್ಸ್ಕೃತ ಮೂಲ:

ಪರೋಪದೇಶಕುಶಲಾಃ ದೃಶ್ಯಂತೇ ಬಹವೋಜನಾಃ
ಸ್ವಭಾವಮತಿವರ್ತಂತಃ ಸಹಸ್ರೇಷು ಚ ದುರ್ಲಭಾಃ

ಬೆಟ್ಟದಾ ಕಾಡಿನಲಿ
ನೀರು ನಿಡಿ ಇಲ್ಲದೆಲೆ
ನಿಟ್ಟುಪವಾಸ ಸತ್ತರೂ ಲೇಸು
ಹಾವಿಗೆ ಮನೆಯಾದ
ಹಾಳು ಬಾವಿಯಲಿ
ಬೀಳುವುದೂ ಒಳಿತು
ಆಳದ ನೀರಿನ ಸುಳಿಯಲಿ
ಮುಳುಗುವುದೂ ಪದುಳವು
ಮನೆತನದ ಗರುವವನು
ನಡತೆಯನು ಕಳೆವುದಕಿಂತ!

ಸಂಸ್ಸ್ಕೃತ ಮೂಲ:

ವರಂ ವಿಂಧ್ಯಾಟವ್ಯಾಂ ಅನಶ್ನತೃಷ್ಣಾರ್ತಸ್ಯ ಮರಣಂ
ವರಂ ಸರ್ಪಾಕೀರ್ಣೇ ತೃಣವಿಹಿತಕೂಪೇ ನಿಪತನಂ
ವರಂ ಗರ್ತಾವರ್ತೇ ಗಹನಜಲಮಧ್ಯೇ ವಿಲಯನಂ
ನ ಶೀಲಾದ್ವಿಭ್ರಂಶೋ ಭವತು ಕುಲಜಸ್ಯ ಶ್ರುತವತಃ

-ನೀಲಾಂಜನ

Hits

  • 720,759

My book “Hamsanada” for iPad, iPhone or iPod

A Collection of  Samskrta Subhashitas, translated to Kannada

http://www.saarangamedia.com/product/hamsanada

My Book, on Google Play!

My Book Hamsanada, on Google Play

My Book Hamsanada, on Google Play

Enter your email address to follow this blog and receive notifications of new posts by email.

Join 5,032 other followers

ಅವಧಿಯಲ್ಲಿ ಹೀಗಂದರು:

"ಅಲ್ಲಿದೆ ನಮ್ಮ ಮನೆ…ಇಲ್ಲಿ ಬಂದೆ ಸುಮ್ಮನೆ… ಎಂಬ ಘೋಷ ವಾಕ್ಯದೊಂದಿಗೆ ಬ್ಲಾಗ್ ಮಂಡಲದಲ್ಲಿ ಕಾಣಿಸಿಕೊಂಡವರು ನೀಲಾಂಜನ. ಅಲ್ಲಿದೆ ನಮ್ಮ ಮನೆ ಕನ್ನಡದ ಪರಿಮಳವನ್ನು ಇಂಗ್ಲಿಷ್ ನಲ್ಲಿ ಹರಡುತ್ತಾ ಇದೆ. ಕನ್ನಡದ ವಚನಗಳು, ಸಂಸ್ಕೃತ ಸುಭಾಷಿತಗಳು ಜೊತೆಯಲ್ಲೇ ಸಂಗೀತ ಹೀಗೆ ಹಲವು ಲೋಕವನ್ನು ಈ ಬ್ಲಾಗ್ ಪರಿಚಯಿಸಿದೆ." ಅವಧಿ, ಮೇ ೧೫, ೨೦೦೮

ಇತ್ತೀಚಿನ ಟಿಪ್ಪಣಿಗಳು

Manjugouda police pa… ರಲ್ಲಿ Ugra Narasimha of Vijayan…
neelanjana ರಲ್ಲಿ Samasya Poornam – Part…
neelanjana ರಲ್ಲಿ Samasya Poornam – Part…
charukesha ರಲ್ಲಿ Where in the World is Mount…
ನೇಸರ್ ರಲ್ಲಿ Samasya Poornam – Part…
ಜುಲೈ 2020
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

ಬಗೆ ಬಗೆ ಬರಹ

ಸಂಗ್ರಹಗಳು