(ಕೆಲವು ವರ್ಷಗಳ ಹಿಂದೆ ನಾನು ಬರೆದಿದ್ದ ಕಥೆಯಿದು. ಇಂದು ಬರುವ ಪುಷ್ಯ ಬಹುಳ ಅಮಾವಾಸ್ಯೆಯ ಪುರಂದರ ದಾಸರ ಆರಾಧನೆಯ ನಿಮಿತ್ತ, ಮತ್ತೊಮ್ಮೆ ಇಲ್ಲಿ  ಕೆಲವು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಹಾಕುತ್ತಿದ್ದೇನೆ)

Captureಗಂಟೆ ಹನ್ನೊಂದಾಗುವ ಮೊದಲು ಅಂತೂ ಪೂಜೆ ಮುಗಿಸಿ ಎದ್ದಳು ಸರಸ್ವತಿ. ಇವತ್ತು ಮಂಗಳಾರತಿ ಮಾಡುವಾಗ ಜೋರಾಗಿಯೇ ಹಾಡನ್ನು ಹೇಳಿದ್ದಳು. ಗಂಡ ಮನೆಯಲ್ಲಿದ್ದಾಗ ಅವಳ ಹಾಡು ಕೇವಲ ಗುನುಗಾಗಿ, ಬರೀ ಅವಳ ಕಿವಿಗೆ ಮಾತ್ರ ಕೇಳುವಂತಾಗಿಬಿಡುತ್ತಿತ್ತು. ಹಾಗೇನೂ ಕೆಟ್ಟದಾಗಿ ಅವಳು ಹಾಡುತ್ತಿರಲಿಲ್ಲ. ಅವಳಿಗೂ ಚಿಕ್ಕ ವಯಸ್ಸಿನಲ್ಲಿ ಸಂಗೀತ ಪಾಠವಾಗಿತ್ತು. ಆದರೆ, ಅವಳ ಗಂಡ ಎಷ್ಟಾದರೂ ಸಂಗೀತದಲ್ಲಿ ನುರಿತವನು. ಅವನಿಗೆ ಕೇಳುವಂತೆ ಹಾಡುವುದಕ್ಕೆ ಇವಳಿಗೇ ಸ್ವಲ್ಪ ಹಿಂಜರಿಕೆ. ಏನಾದರೂ ತಪ್ಪು ಹಾಡಿದರೆ, ಅವನು ಕೂಡಲೆ ಹೀಗಲ್ಲ ಹಾಗೆ ಎಂದು ತಿದ್ದುವನು. ವೇಳೆಯಿದ್ದರೆ ಮೂಲೆಯಲ್ಲಿಟ್ಟ ತಂಬೂರಿಯನ್ನೂ ತಂದೇಬಿಡುವನು. ಹೀಗೆ ಹಾಡಿದರೆ ಇನ್ನೂ ಸೊಗಸು ಎಂದು ಹೊಸ ಸಂಗತಿಗಳನ್ನು ತೋರುವನು. ಹಾಗಾಗಿ ಇಷ್ಟು ವರ್ಷವಾದರೂ, ಸರಸ್ವತಿಗೆ ಅವನ ಮುಂದೆ ಹಾಡಲು ಏನೋ ಆತಂಕ. ಅವಳ ಕಂಠಕ್ಕೆ ಧ್ವನಿ ಬರಬೇಕಿದ್ದರೆ, ಗಂಡ ಹೊರಕ್ಕೆ ಹೋಗಿರಲೇಬೇಕು. ಜೀವನಕ್ಕೆ ಬೇರೆ ವ್ಯಾಪಾರವಿಲ್ಲದಿದ್ದರೆ ಅವನು ಸಂಗೀತವನ್ನೇ ವೃತ್ತಿ ಮಾಡಿಕೊಂಡುಬಿಡುತ್ತಿದ್ದನೋ ಏನೋ ಎಂದು ಸರಸ್ವತಿಗೆ ಹಲವು ಬಾರಿ ಅನ್ನಿಸಿದ್ದು ನಿಜವೇ. ಹಾಗಾಗಿದ್ದರೂ ಚೆನ್ನಿತ್ತೇನೋ? ಅವನು ಹಾಡುವುದನ್ನು ನೆಮ್ಮದಿಯಿಂದ ಕೇಳಿಯೇ ಎಷ್ಟೋ ತಿಂಗಳಾಗಿಹೋಗಿರಬೇಕು. ಅವನು ಹಾಡುತ್ತಾ ಕುಳಿತರೆ, ಆ ಸ್ವರ್ಗವೇ ಇಳಿದು ಬರುತ್ತದೆಯೋ? ಅಥವ ಆ ಕೃಷ್ಣನ ಬೃಂದಾವನವೇ ಈ ಕ್ಷೇಮಪುರಕ್ಕೆ** ಬಂದುಬಿಡುವುದೋ? ಮದುವೆಯ ಮರುದಿವಸ ಅವನು ಹಾಡುತ್ತಿದ್ದನ್ನು ಕೇಳಿದ ಗೆಳತಿಯರಿಗೆಲ್ಲ ತನ್ನನ್ನು ಕಂಡರೆ ಹೊಟ್ಟೆಕಿಚ್ಚಾಗಿತ್ತಲ್ಲ? ಇವರಷ್ಟು ಚೆನ್ನಾಗಿ ಹಾಡುತ್ತಿದ್ದವರು ಅಂದರೆ ನಮ್ಮೂರಿನಲ್ಲಿ ಮನೆ ಮುಂದೆ  ಬರುತ್ತಿದ್ದೊಬ್ಬ ಹರಿದಾಸರು. ಅವರನ್ನ ಬಿಟ್ಟರೆ ಇನ್ಯಾರೂ ಅಷ್ಟು ಸೊಗಸಾದ ಕಂಠದವರನ್ನು ಕಂಡೇ ಇಲ್ಲ ತಾನು ಅನ್ನುವುದು ನೆನಪಾಯಿತು ಅವಳಿಗೆ.

ಈ ಊರಿಗೆ ಬಂದು ಇಪ್ಪತ್ತು ವರ್ಷಕ್ಕೂ ಹೆಚ್ಚಾದರೂ, ಇನ್ನೂ ನನ್ನೂರು, ನನ್ನೂರು ಎನ್ನುತ್ತೇನಲ್ಲ! ಇದು ಎಂತಹ ವೈಪರೀತ್ಯ ಅನ್ನಿಸುವಾಗಲೇ ತವರು ಮನೆಗೆ ಹೋಗಿ ಆಗಲೇ ವರ್ಷಗಳೇ ಕಳೆದಿವೆ ಅನ್ನುವ ಸತ್ಯ ಖೇದವನ್ನು ಹೆಚ್ಚಿಸಿತು. ಮದುವೆಯಾಗಿ ಎಷ್ಟು ವರುಷವಾದರೂ, ಹೆಣ್ಣಿಗೆ ತವರ ಬಯಕೆ ಕರಗುವುದೇ ಇಲ್ಲವಲ್ಲ! ಮೊದಲಿಗೆ ಮಲೆನಾಡಿನ ಮೂಲೆಯ ಈ ಊರಿಗೆ ತನ್ನನ್ನು ಮದುವೆಮಾಡಿಕಳಿಸಿಕೊಡುವ ಮಾತು ಬಂದಾಗ ಅವಳಿಗೆ ಬಹಳ ಯೋಚನೆಯಾಗಿತ್ತು. ತನ್ನ ತವರೂರು ಎಷ್ಟು ಚೆಂದ? ಊರಿನ ನಟ್ಟನಡುವೆ ಮುನ್ನೂರಕ್ಕೂ ಹೆಚ್ಚು ವರ್ಷ ಹಳೆಯದಾದ ಚೆನ್ನಕೇಶವನ ಗುಡಿ. ಪ್ರತಿನಿತ್ಯ ಒಂದಲ್ಲ ಒಂದು ಉತ್ಸವ! ಆದರೇನು? ಮದುವೆಯಾದ ಹೆಣ್ಣಿಗೆ ಗಂಡನೂರೇ ತನ್ನೂರಾಗಬೇಕಲ್ಲ? ಇಲ್ಲಿಗೆ ಬಂದ ಹೊಸತರಲ್ಲಿ ಅವಳಿಗೆ ಇಲ್ಲಿನ ಹಸಿರು ಕಂಡು ಬಹಳ ಹಿತವೆನಿಸಿತ್ತು. ಆದರೆ, ಮಳೆಗಾಲದಲ್ಲಿ ಧೋ ಎಂದು ಸುರಿಯುವ ಮಳೆಗೆ ಅವಳು ಹೆದರಿ ಹೋಗಿದ್ದಳು! ಇಲ್ಲಿ ಮಳೆಗಾಲವೋ, ವರ್ಷಕ್ಕೆ ನಾಲ್ಕು ತಿಂಗಳಿಗಿಂತ ಹೆಚ್ಚೇ. ಮಳೆ ಬಂತೆಂದರೆ, ನೆಲವೆಲ್ಲೋ, ನೀರೆಲ್ಲೋ ತಿಳಿಯಲಾರದಂತಹ ಪರಿಸ್ಥಿತಿ. ಆದರೂ, ಮಳೆಗಾಲ ಬಂದರೆ ಗಂಡ ವ್ಯಾಪಾರದ ಚಿಂತೆ ಬಿಟ್ಟು ಕೆಲವು ತಿಂಗಳು ಮನೆಯಲ್ಲಿ ಸಂಗೀತಸಾಧನೆ ಮಾಡುವುದನ್ನು ಕೇಳುತ್ತಿರಬಹುದು. ಆಷಾಢ ಬೇಗ ಬರಬಾರದೇ? ಎಂದುಕೊಳ್ಳುತ್ತಾ ಅವಳು ಅಡುಗೆ ಕೋಣೆ ಹೊಕ್ಕಳು.

*********

ಒಳಗಿನಿಂದ ನಾಗಾಚಾರಿ ತಂದ ನವರತ್ನದ ಪದಕವನ್ನು ನೋಡಿದ ಶ್ರೀನಿವಾಸ. ಪರವಾಗಿಲ್ಲ. ಹೇಳಿದಂತೆಯೇ ಮಾಡಿದ್ದಾನೆ. ಆದರೆ, ಇಲ್ಲಿ ಒಂದು ಕಡೆ ಪಚ್ಚೆ ಕಲ್ಲುಗಳು ತುಸು ಹೆಚ್ಚಾದುವು ಎನ್ನಿಸಿತು. ಸರಿ, ಸರದಲ್ಲಿ ಅದಕ್ಕೆ ಸಮತೂಗಿಸುವಂತೆ ವಿನ್ಯಾಸ ಮಾಡಿದರಾಯಿತು ಎಂದು ಹೊಸ ನಕಾಸೆ ಬರೆಯತೊಡಗಿದ. ಇದು ಅರಮನೆಯವರಿಗೆ ಹಬ್ಬದೊಳಗೆ ತಲುಪಬೇಕು, ಸ್ವಲ್ಪ ಹೆಚ್ಚು ಹೊತ್ತು ಕೆಲಸ ಮಾಡು ಎಂದು ನಾಗಾಚಾರಿಗೆ ಹೇಳಿ, ಮತ್ತೊಂದು ಒಡವೆಯ ಚಿತ್ರ ಬರೆಯತೊಡಗಿದವನಿಗೆ, ಅಪ್ಪ ಹೋದ ಮೇಲೆ, ತನ್ನ ದಿನ ಪೂರ್ತಿ ಅಂಗಡಿಯಲ್ಲೇ ಹೋಗುತ್ತಿದೆ ಅನ್ನುವುದು ನೆನಪಾಯಿತು. ಈಗಾಗಲೇ ಹೇಬಣನಿಗೆ ಹದಿನೆಂಟಾಯಿತು. ಅವನಿಗೊಂದು ಮದುವೆ ಮಾಡಿ, ಅವನಿಗೂ ಚೆನ್ನಾಗಿ ಕೆಲಸ ಕಲಿಸಿಕೊಟ್ಟು, ಜವಾಬ್ದಾರಿಯಲ್ಲಿ ಅವನಿಗೂ ಪಾಲಿತ್ತರೆ, ಮತ್ತೆ ಸ್ವಲ್ಪವಾದರೂ ಸಂಗೀತಸಾಧನೆಗೆ ತೊಡಗಬಹುದು ಅನ್ನಿಸಿತು.

ಅಪ್ಪ ಚಿಕ್ಕಂದಿನಿಂದಲೇ ತನಗೆ ಕೆಲಸದ, ವ್ಯಾಪಾರದ ತರಪೇತಿ ಕೊಟ್ಟಿದ್ದರು. ಅರೆ, ನಾನು ಮಕ್ಕಳಿಗೆ ಅಂಗಡಿಗೆ ಬರೋದಕ್ಕೆ ಹೆಚ್ಚು ಹೇಳುತ್ತಲೇ ಇಲ್ಲವಲ್ಲ? ಈ ಕಿರಿಯವ ಮಧ್ವಪತಿ ಒಬ್ಬನಿಗೆ ಮಾತ್ರ ಅಂಗಡಿಗೆ ಬರುವುದಕ್ಕೆ ಉತ್ಸಾಹ. ಎಷ್ಟೋ ಬಾರಿ ಜೊತೆಗೆ ಬರುತ್ತಾನೆ. ಕುಳಿತು ನಾನು ಮಾಡುವ ಚಿತ್ತಾರಗಳನ್ನು ನೋಡುತ್ತಿರುತ್ತಾನೆ. ಅವನೂ ಸ್ವಲ್ಪ ಬರೆಯುತ್ತಾನೆ. ಈ ದೊಡ್ಡ ಇಬ್ಬರೂ ಅಮಾವಾಸ್ಯೆ ಹುಣ್ಣಿಮೆಗೂ ಬಂದರೆ ಬಂದರು, ಬಿಟ್ಟರೆ ಬಿಟ್ಟರು. ಸ್ವಲ್ಪ ಬಿಗಿ ಮಾಡಬೇಕು. ಇಲ್ಲದಿದ್ದರೆ ನಾಳೆ ವ್ಯಾಪಾರವನ್ನೇ ಕಡೆಗಣಿಸಿದರೆ ಎಂದು ಭಯವಾಯಿತು. ಆಮೇಲೆ, ಅಪ್ಪ ನನಗೂ ಅಂಗಡಿಗೆ ಬರಲು ಬಲವಂತ ಮಾಡುತ್ತಿರಲಿಲ್ಲ. ಆದರೂ, ನಾನೀಗ ಮೂರುಹೊತ್ತೂ ವ್ಯಾಪಾರದಲ್ಲೇ ಮುಳುಗಿಲ್ಲವೇ ಎನ್ನುವುದು ಹೊಳೆದು, ಭಯವಿಲ್ಲ ಅನ್ನಿಸಿತು. ಅಪ್ಪನಂತೂ, ತಾಯಿಯ ಬಳಿ “ಶೀನಪ್ಪ ಹಾಡಿಕೊಳ್ಳುತ್ತಿದ್ದರೆ ಅವನಿಗೆ ಕೆಲಸ ಕಾರ್ಯ ಅಂತ ತೊಂದರೆ ಮಾಡಬೇಡ, ಅವನ ಪಾಡಿಗವನನನ್ನ ಬಿಟ್ಟುಬಿಡು” ಅಂತ ಹೇಳಿಟ್ಟಿದ್ದರು. ಸಂಗೀತದಲ್ಲಿ ನನಗೆ ಗುರುಗಳು ಕಲಿಸಿದ್ದು ಒಂದಾದರೆ, ನಾನೇ ಶಾಸ್ತ್ರ ಗ್ರಂಥಗಳ ಹೊತ್ತಿಗೆಗಳನ್ನು ಓದಿ, ತಾನೇ ರೂಢಿಸಿಕೊಂಡು ಕಲಿತಿದ್ದು ಇನ್ನೆಷ್ಟೋ. ಚಿಕ್ಕಂದಿನಿಂದ ನಾನಾಗೇ ಸಂಗೀತದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ. ಒಮ್ಮೆ ಮಾತ್ರ ಅಪ್ಪ ಹೇಳಿದ್ದು ನೆನಪಿದೆ – “ಏನೇ ಆಗಲಿ ಶೀನಪ್ಪ, ಈ ನಮ್ಮ ಕಸುಬನ್ನ ಕೈ ಬಿಡಬೇಡ. ಸಂಗೀತ ಹಾಡುತ್ತೇನೆಂದು ಅರಮನೆಯವರ ಕಾಲು ಹಿಡಿಯುವುದು ಬೇಡ. ಹಾಡುವುದಾದರೆ, ನಿನಗೋಸ್ಕರ ಹಾಡಿಕೋ, ಅಷ್ಟೆ”. ನಾನೂ ಅದನ್ನ ಮೀರದೇ ನಡೆದೆ. ಅಷ್ಟಕ್ಕೂ ನಮ್ಮ ತಲೆತಲಾಂತರದ ರತ್ನಪಡಿ ವ್ಯಾಪಾರ ಇರುವಾಗ, ಪುರಂದರಪುರದ ಶ್ರೀನಿವಾಸನಾಯಕ ಎಂದರೆ ನವಕೋಟಿ ನಾರಾಯಣ ಎಂದೇ ಎಲ್ಲರೂ ಎನ್ನುವಾಗ, ರಾಜರಿಗೇ ಸಾಲಕೊಡುವಂತಹ ಶ್ರೀಮಂತಿಕೆ ನಮಗಿರುವಾಗ, ಅರಸರ ಬಾಗಿಲು ಕಾಯುವುದೇಕೆ? ಅಪ್ಪ ಹೇಳಿದ್ದೇ ಸರಿ. ಈಗ ನನಗೆ ನಾನೇ ಅರಸ. ಬೇಕಾದಾಗ ಹಾಡುವೆ. ಬೇಡವಾದಾಗ ಇಲ್ಲ ಎಂದುಕೊಳ್ಳುವಾಗಲೇ, ಎರಡು ಮೂರು ವಾರಗಳಿಂದ ತಂಬೂರಿ ಹಿಡಿದಿಲ್ಲ, ಮಕ್ಕಳಿಗೂ ಹೇಳಿಕೊಟ್ಟಿಲ್ಲವೆಂಬುದು ಹೊಳೆದು ಮನಸ್ಸಿಗೆ ಮೋಡ ಆವರಿಸಿದ್ದಾಗ ಒಳಗಿನಿಂದ ಮಧ್ವಪತಿ ಬಂದು, “ಅಪ್ಪ, ಈ ಚಿತ್ರ ನೋಡಿ – ಕಿವಿಯ ಓಲೆಗೆ ಈ ರೀತಿ ಮಾಡಿದರೆ ಚೆನ್ನಾಗಿರತ್ತೆ. ಅಲ್ವಾ?” ಎಂದು ಕೇಳಿದ್ದು ಶ್ರೀನಿವಾಸನ ಮನಸ್ಸು ಬೇರೆಡೆಗೆ ಹರಿಯಲು ಅನುವಾಯಿತು.

*********

ಅಭಿನವ ಸಂಗೀತ ಅಭ್ಯಾಸಕ್ಕೆ ಕೂತಿದ್ದ. ಅಪ್ಪ ಸಂಗೀತದ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಹೊಸ ಪಾಠ ಇರಲಿ, ಇಲ್ಲದೇ ಇರಲಿ ಅಭ್ಯಾಸ ಮಾತ್ರ ಪ್ರತಿ ನಿತ್ಯ ಮಾಡಲೇಬೇಕು. ಅಣ್ಣತಮ್ಮಂದಿರಲ್ಲ್ಲಿ ನನ್ನ ಧ್ವನಿ ಎಲ್ಲರಿಗಿಂತ ಚೆನ್ನಾಗಿರುವುದೆಂದು, ಅಪ್ಪ ತನ್ನ ಪಾಠದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ ಅನ್ನುವುದು ಬಾಯಿ ಬಿಟ್ಟು ಹೇಳದಿದ್ದರೂ, ಅಭಿನವನಿಗೆ ಎಷ್ಟೋ ದಿನದ ಹಿಂದೆ ತಿಳಿದಿತ್ತು. ಪ್ರತಿ ನಿತ್ಯ ವರಸೆಗಳನ್ನು ಮೂರು ಕಾಲದಲ್ಲೂ ಅಭ್ಯಾಸ ಮಾಡಲೇ ಬೇಕು! ವರ್ಷದ ಹಿಂದೆ ಒಂದು ದಿನ ಆಟದ ಬಯಲಲ್ಲಿ ಮೂಲೆ ಮನೆಯ ವೇಂಕಟೇಶ ಹಾಸ್ಯ ಮಾಡಿದ್ದು ನೆನಪಾಯಿತು. “ನಿಮ್ಮಪ್ಪ ಎಲ್ಲೂ ಇಲ್ಲದ ಪದ್ಧತಿಯಲ್ಲಿ ಪಾಠ ಮಾಡ್ತಾರಂತೆ! ಸರಿಯಾಗಿ ಒಬ್ಬ ಗುರು ಹತ್ತಿರ ಹೋಗದೇ ಇದ್ರೆ ನೀನು ಸಂಗೀತ ಕಲಿತಹಾಗೇ! ಉದ್ಧಾರ ಆದ ಹಾಗೇ!”. ಅಭಿನವನಿಗೆ ಒಂದು ಕಡೆ ಸಿಟ್ಟು, ಇನ್ನೊಂದು ಕಡೆ ಅಳು ಎರಡೂ ಒಟ್ಟಿಗೆ ಬಂದಿತ್ತು – ಎಲ್ಲರೆದುರು ಗೇಲಿ ಮಾಡಿದನಲ್ಲ ಎಂದು.

ಮರುದಿನ ಪಾಠಕ್ಕೆ ಕೂತಾಗ ಅವನು ಕೇಳಿದ್ದ: “ಅಪ್ಪ, ನೀವು ಹೇಳಿಕೊಡೋ ಪಾಠದ ವಿಧಾನ ಎಲ್ಲೂ ಇಲ್ಲವಂತೆ…. ಎಲ್ಲ ಹುಡುಗರೂ ನನ್ನ ಹಾಸ್ಯ ಮಾಡ್ತಾರೆ”

“ನಾಕು ಮಂದಿ ಬಾಯಿ ಯಾರು ತಾನೇ ಮುಚ್ಚಿಸೋಕೆ ಸಾಧ್ಯ? ಹೌದು. ಈ ರೀತಿ ಸಾಧಕಗಳೆಲ್ಲ ಎಲ್ಲೂ ಇಲ್ಲ. ಇವೆಲ್ಲ ನಾನೇ ರಚನೆ ಮಾಡಿದ್ದು. ಅದಕ್ಕೇನೀಗ? ಮಕ್ಕಳಿಗೆ ಸಂಗೀತ ಕಲಿಯೋದಕ್ಕೆ ಹೊರಟಾಗ ಸ್ವರ ಹಿಡಿಯೋಕೆ, ಶ್ರುತಿ ಜ್ಞಾನ ಬರೋಕೆ, ಕಾಲಪ್ರಮಾಣ ಹೊಳೆಯೋಕೆ, ನಾಲಿಗೆ ಹೊರಳೋಕೆ ಅನುಕೂಲ ಆಗ್ಲಿ ಅಂತ ನಾನೇ ಯೋಚಿಸಿ ನಿಮಗೆಲ್ಲ ಹೀಗೇ ಹೇಳ್ಕೊಡ್ತಿದೀನಿ. ಅಪ್ಪ ಹಾಕಿದ ಆಲದ ಮರಕ್ಕೇ ನೇತು ಹಾಕ್ಕೋಬೇಕೇನು? ಯಾವ ರೀತಿ ಕಲಿತರೆ ಚೆನ್ನಾಗಿ ಹಾಡಬಹುದೋ ಹಾಗೆ ಕಲಿತರಾಯಿತು. ಈಗ ಅದೆಲ್ಲದರ ಯೋಚನೆ ಬಿಟ್ಟು, ಶ್ರೀ ಗಣನಾಥ ಹಾಡು ಮುಂದಿನ ಪಾಠಕ್ಕೆ ಮೊದಲು” ಎಂದಿದ್ದರು ಅಪ್ಪ.

“ಸುಮ್ಮನೆ ತಂಬೂರಿ ನುಡಿಸ್ತಾ ಇದೀಯಲ್ಲೋ? ಏನು ಹಾಡಬೇಕು ಅನ್ನೋದು ಮರೆತು ಹೋಯಿತಾ?” ಅಮ್ಮ ಕೇಳಿದರು.ಎಲ್ಲೋ ಯೋಚಿಸುತ್ತಿದ್ದ ಅಭಿನವ “ಏನೂ ಇಲ್ಲ” ಅನ್ನುತ್ತ, ದೇವಗಾಂಧಾರ ರಾಗದ ಪ್ರಬಂಧವನ್ನು ಹಾಡತೊಡಗಿದ.

**********

ಆಕಾಶದಲ್ಲಿ ಮೋಡಗಳು ಕವಿಯುತ್ತಿರಬೇಕು. ಒಳಗೆ ಆಗಲೇ ಕತ್ತಲಾಗುತ್ತಿದೆ ಎಂದೆನ್ನಿಸಿತು ಶ್ರೀನಿವಾಸನಿಗೆ. “ಏ, ಮಧ್ವಪತಿ, ದೀಪ ಹತ್ತಿಸಿ ತಾರೋ” ಎಂದು ಕೂಗು ಹಾಕಿದ. ಎರಡು ನಿಮಿಷವಾದರೂ ಅವನೇಕೋ ಬರಲಿಲ್ಲ. ಆದರೆ, ಅವನ ಧ್ವನಿ ಅಂಗಡಿಯ ಮುಂಭಾಗದಲ್ಲಿ ಸಣ್ಣಗೆ ಕೇಳುತ್ತಿತ್ತು. ಯಾರ ಹತ್ತಿರ ಮಾತಾಡುತ್ತಿದ್ದಾನೆ? ಕೊಲ್ಲೂರಿನ ದೇವಿಗೆ ಒಂದಷ್ಟು ಆಭರಣಗಳನ್ನ ಮಾಡಬೇಕಿದೆ ಎಂದು ನಾಯಕರ ಕಡೆಯವರು ಹೇಳಿಕಳಿಸಿದ್ದರು. ಅಲ್ಲಿಂದಲೇ ಯಾರಾದರೂ ಬಂದಿರಬಹುದೇ? ಈ ಹುಡುಗ ಏನಾದ್ರೂ ಅರೆಕೊರೆ ಹೇಳಿ ಕಳಿಸಿಬಿಟ್ಟರೆ ಕಷ್ಟವೆನ್ನಿಸಿ ಹೊರಗೆ ಧಾವಿಸಿದ ಶ್ರೀನಿವಾಸ.

“ನೋಡ್ರೀ, ಹಾಗೆ ಯಾವ್ಯಾವಾಗ್ಲೋ ಏನೂ ದಾನ ಮಾಡೋಕಾಗಲ್ಲ. ಹೊರಡಿ. ನಾಳೆ ಬನ್ನಿ ನೋಡೋಣ” ಎನ್ನುತ್ತಿದ್ದ ಮಧ್ವಪತಿ. ಪರವಾಗಿಲ್ಲ. ಅಪ್ಪನಿಗೆ ತಕ್ಕ ಮಗನೇ. ಇನ್ನೂ ಅಜ್ಜನಿಗೆ ತಕ್ಕ ಮೊಮ್ಮೊಗ ಅಂದರೆ ಇನ್ನೂ ಒಳ್ಳೆಯದು! ಅಜ್ಜನ ಮಾತನ್ನ ಚಾಚೂ ತಪ್ಪದೇ ಆಚರಿಸ್ತಿದಾನೆ!

ತಂದೆಯವರು ತೀರಾ ಆರೋಗ್ಯ ತಪ್ಪಿದಾಗ ತನಗೆ ಕೂರಿಸಿ ಬುದ್ಧಿ ಹೇಳಿದ್ದು ಶ್ರೀನಿವಾಸನಿಗೆ ಮನದ ಮುಂದೆ ಹಾದು ಹೋಯಿತು. ಅವತ್ತೂ ಮಧ್ವಪತಿ ನನ್ನ ಜೊತೆಯಲ್ಲೇ ಇದ್ದನಲ್ಲ.

“ಶೀನಪ್ಪ, ನೋಡು ನೀನು ಇಷ್ಟು ದಿನ ಅಂಗಡಿ ವ್ಯಾಪಾರದ ವಿಷಯ ತಲೆ ಕೆಡಿಸಿಕೊಂಡಿಲ್ಲ. ಇನ್ನು ನಾನು ಹೆಚ್ಚು ದಿನ ಉಳಿಯೋನಲ್ಲ. ಇನ್ನು ಮುಂದೆ ನೀನೇ ಎಲ್ಲ ನಿಂತು ನೋಡಿಕೋಬೇಕು. ದುಂದು ವೆಚ್ಚ ಮಾಡಬೇಡ. ಒಂದು ವರಹ ಉಳಿಸಿದ್ದು ಅಂದರೆ, ಒಂದು ವರಹ ಗಳಿಸಿದ್ದಕ್ಕಿಂತ ಹೆಚ್ಚು ಅನ್ನೋದನ್ನ ಮರೀಬೇಡ. ದೇವರುದಿಂಡರು ಅಂತ ಸುಮ್ಮಸುಮ್ಮನೆ ಹರಕೆ ಹಣ ವೆಚ್ಚ ಮಾಡಬೇಡ. ಕಾಯಕವೇ ಕೈಲಾಸ ಅಂತ ಹೇಳೋದು ಕೇಳಿಲ್ಲವೇ ನೀನು? ನಮ್ಮ ಕೆಲಸವನ್ನ ನಾವು ಶ್ರದ್ಧೆಯಿಂದ ಮಾಡಿದರೆ, ಹರನೇ ಆಗಲಿ, ಹರಿಯೇ ಆಗಲಿ ಅದನ್ನ ಮೆಚ್ಚುತ್ತಾರೆಯೇ ಹೊರತು, ನೀನ್ಯಾವ ಗುಡಿ ಸುತ್ತಿದೆ, ಗೋಪುರ ಹತ್ತಿದೆ ಅಂತ ಕೇಳೋರಲ್ಲ ಅವರು”.

“ಅಪ್ಪ, ಆದ್ರೂ, ನಮ್ಮ ಕೈಲಾದ್ದನ್ನು ಕೊಟ್ಟರೆ ಅದರಲ್ಲಿ ತಪ್ಪೇನು..” ಎಂದು ಹೊರಟ ಮಾತನ್ನು ಅರ್ಧಕ್ಕೇ ತುಂಡರಿಸಿದ್ದರು ಅವರು.

“ಆದರೂ ಇಲ್ಲ, ಗೀದರೂ ಇಲ್ಲ. ನಾವು ಕೆಟ್ಟು ಕಷ್ಟದಲ್ಲಿ ಬಿದ್ದರೆ ನೋಡೋರು ಯಾರು? ನೀನು ಚಿಕ್ಕವನಿದ್ದಾಗ ನಾನು ಅವರಿವರಿಗೆ ದಾನ -ಸಾಲ ಅದು ಇದು ಅಂತ ಕೊಟ್ಟು, ಬಹಳ ಕಷ್ಟದಲ್ಲಿದ್ದೆ. ನಿನಗೆ ನೆನಪಿಲ್ಲ. ಆ ಕಾಲದಲ್ಲಿ ನನಗೆ ಸಹಾಯ ಅಂತ ಮಾಡಿದವರು ಯಾರೂ ಇಲ್ಲ. ಆದರೂ ಹೇಗೋ ಎದೆಗುಂದದೆ ಮುಂದೆ ಬಂದೆ. ನಾನು ಪಟ್ಟ ಕಷ್ಟ ನೀನು ಪಡೋದು ಬೇಡ. ಅದಕ್ಕೂ ಹೆಚ್ಚು, ನಿನ್ನ ತಪ್ಪಿನಿಂದ, ಈ ವರದಪ್ಪನ ಮೊಮ್ಮೊಕ್ಕಳು ಬೀದಿಗೆ ಬರುವುದು ಬೇಡ. ದಾನಧರ್ಮದ ಮಾತಿನಿಂದ ಮೂರು ಮಾರು ದೂರ ಇರ್ತೀನಿ ಅಂತ ಮಾತು ಕೊಡು” ಎಂದಿದ್ದರು ಅಪ್ಪ.

ಅಪ್ಪನ ಮಾತು ಎಂದಿಗೂ ಮೀರದಿದ್ದ ಶ್ರೀನಿವಾಸ ಭಾಷೆ ಇತ್ತಿದ್ದ. ಗಂಟಲೊಣಗುತ್ತಿದ್ದರೂ, ಅಪ್ಪ ಮಾತು ಮುಂದುವರೆಸಿದ್ದರು:

“ನೋಡು ಶೀನಪ್ಪ. ’ಅನ್ನದಾನಂ ಪರಂ ದಾನಂ ವಿದ್ಯಾದಾನಮತ: ಪರಂ ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವಂಚ ವಿದ್ಯಯಾ’ ಅನ್ನೋ ಮಾತು ನಿನಗೆ ಗೊತ್ತಿದೆ. ಒಬ್ಬರಿಗೆ ಒಂದು ವರಹ ದಾನ ಮಾಡೋ ಬದಲು, ಒಂದು ವರಹ ಗಳಿಸೋ ದಾರಿ ತೋರಿಸಿಕೊಟ್ಟರೆ, ಅದು ಅವರ ಜೀವಮಾನ ಪೂರ್ತಿ ಅವರೊಡನೆ ಇರತ್ತೆ. ಹಣ ಕೊಟ್ಟರೆ, ಅದು ವೆಚ್ಚಮಾಡುವವರೆಗೆ ಮಾತ್ರ. ಅದರ ಬದಲು, ಹಣಗಳಿಸುವಂಥ ವಿದ್ಯೆ ಹೇಳಿಕೊಟ್ಟರೆ, ಅವರ ಜೀವನ ಪೂರ್ತಿ ಅದು ಅವರನ್ನ ಕಾಯುತ್ತೆ. ಅದಕ್ಕೆ, ನಿನಗೆ ಯಾರಿಗಾದರೂ ಸಹಾಯ ಮಾಡ್ಬೇಕಿದ್ದರೆ, ಅವರಿಗೆ ನಿನ್ನ ಚಿನಿವಾರಿಕೆಯನ್ನೋ, ನಿನ್ನ ಪ್ರೀತಿಯ ಸಂಗೀತಕಲೆಯನ್ನೋ ಹೇಳಿಕೊಡು. ಅದನ್ನ ಅವರು ರೂಢಿಸಿಕೊಂಡರೆ ಅವರವರ ಹಣೆಪಾಡು. ಅದಕ್ಕಿಂತ ಹೆಚ್ಚು ಮಾಡಲು ನೀನೇನು ಬ್ರಹ್ಮನೇ?”

ಹೊರಗೆ ಮಧ್ವಪತಿ ಇನ್ನೂ ಮಾತಾಡುತ್ತಿದ್ದ:

“ಇಲ್ಲ ಸ್ವಾಮೀ, ನೀವು ನಡೆಯಿರಿ. ಉಪನಯನವಾಗಲಿ, ಮದುವೆಯೇ ಆಗಲಿ, ನಮ್ಮ ತಂದೆ ಆದ್ರೂ ನಾನು ಹೇಳೋ ಉತ್ತರವನ್ನೇ ಹೇಳ್ತಾರೆ. ಯಾಕೆ ಸಮಯ ಹಾಳು ಮಾಡ್ಕೋತೀರಾ? ಇನ್ಯಾವಾಗ್ಲಾದರೂ ಬನ್ನಿ ನೋಡೋಣ”

ಶ್ರೀನಿವಾಸನಾಯಕ ಮುಂದಿನ ಹಜಾರಕ್ಕೆ ಬರುವುದಕ್ಕೂ, ಆ ಮುದುಕ ಹೊರಕ್ಕೆ ಹೋಗುವುದಕ್ಕೂ ಸರಿಯಾಯಿತು.

ಆದರೆ ಅವನು ಹೋಗಿದ್ದು ತತ್ಕಾಲಕ್ಕೆ ಎಂದು ಮರುದಿನವೇ ಗೊತ್ತಾಯಿತು. ಅಂಗಡಿ ತೆಗೆಯುವ ವೇಳೆಗೇ ಆ ಮುದುಕ ಅಲ್ಲಿ ಬಂದು ನಿಂತಿದ್ದ. ಶ್ರೀನಿವಾಸನನ್ನು ಕಂಡ ಕೂಡಲೆ, “ಅಯ್ಯ, ನಿಮ್ಮ ಮಗ ಮತ್ತೆ ಬರೋದಕ್ಕೆ ಹೇಳಿದ್ದ. ಮೊಮ್ಮೊಗನಿಗೆ ಉಪನಯನ ಮಾಡ್ಬೇಕು. ಏನಾದರೂ ದಾನ ಕೊಡಿ ಸ್ವಾಮೀ” ಎಂದ. ಈಗ ತಾನೇ ಅಂಗಡಿ ಬಾಗಿಲು ತೆಗೀತಾ ಇರೋದು ಕಾಣೋದಿಲ್ವೇ, ಆಮೇಲೆ ಸ್ವಲ್ಪ ವ್ಯಾಪಾರ ಆದ ಮೇಲೆ ಬಾ” ಎಂದಿದ್ದಕ್ಕೆ ಮುದುಕ “ಇಲ್ಲೇ ಕೂತಿರ್ತೀನಿ ಸ್ವಾಮೀ ಹಾಗೇ” ಎಂದು ಹೊರಗೇ ಕೂತುಕೊಂಡ. ಅವತ್ತೆಲ್ಲ ಶ್ರೀನಿವಾಸನಿಗೆ ಕೆಲಸದ ಭರಾಟೆ ಹೆಚ್ಚಾಗಿತ್ತು. ಕೆಳದಿಯ ನಾಯಕರ ಕಡೆಯವರು ಬಂದಾಗ ಅವರಿಗೆ ತಕ್ಕಂತೆ ಮರ್ಯಾದೆ ಮಾಡುವ ಗಲಭೆ ಕೂಡ ಇತ್ತು. ಇವೆಲ್ಲ ಸೇರಿ ಸಂಜೆ ಹೊರಡುವ ಸಮಯಕ್ಕೆ ಬಹಳ ಆಯಾಸವೂ ಆಗಿತ್ತು. ಹೊರಟಾಗ, ಮತ್ತೆ ಆ ಮುದುಕ ಪ್ರತ್ಯಕ್ಷನಾಗಬೇಕೇ? ಕಂಡರೂ ಕಾಣದ ಹಾಗೆ ಹೊರಟ ಶ್ರೀನಿವಾಸ. ಇದು ಇನ್ನೂ ಮೂರು ನಾಲ್ಕು ದಿವಸ ಮತ್ತೆ ಮತ್ತೆ ನಡೆಯಿತು. ಇದಲ್ಲದೇ, ಇನ್ನೂ ಒಂದೆರಡು ಸಲ ಮಧ್ವಪತಿ ಆ ಮುದುಕನನ್ನು ಗದರಿಸಿ ಕಳಿಸಿದ್ದು ಶ್ರೀನಿವಾಸನಿಗೆ ಕೇಳಿಯೂ ಇತ್ತು.

ಅವತ್ತು ಹುಣ್ಣಿಮೆಯ ರಾತ್ರಿ ಶ್ರೀನಿವಾಸ ಅಂಗಡಿಯಿಂದ ಹೊರಡುವ ಸಮಯ. ಮಧ್ವಪತಿ ಸಂಜೆಗೆ ಮುಂಚೆಯೇ ಮನೆಗೆ ಹೋಗಿ ಆಗಿತ್ತು. ಸಂದೂಕವನ್ನೂ ಮುಚ್ಚಿದ್ದಾಗಿತ್ತು. ಅಷ್ಟರಲ್ಲೇ, ಆ ಮುದುಕ ಮತ್ತೆ”ನಮಸ್ಕಾರ ನಾಯಕರೇ” ಎನ್ನುತ್ತಾ ಬರಬೇಕೇ? ಹಾಗೇ ಓಡಿಸಬೇಕೆಂದಿದ್ದರೂ, ಶ್ರೀನಿವಾಸನಿಗೆ ತಾನು ಕುಳ್ಳಿರುವ ಹಾಸಿನ ಕೆಳಗೆ ವರಹವೊಂದು ಬಿದ್ದಿದ್ದು ಕಾಣಿಸಿತು. “ತೊಗೋ, ಇನ್ನೊಂದು ಸಲ ಮುಖ ತೋರಿಸಬೇಡ ಇಲ್ಲಿ” ಅಂತ ಮುದುಕನ ಕೈಗೆ ಹಾಕಿದಾಗ, ಆ ವರಹದ ಅಡಿಭಾಗ ಒದ್ದೆಯಾಗಿ, ಕಿಲುಬಿದ್ದು ಕಾಣಿಸಿತು, ಆದರೆ ಅವನಲ್ಲಿ ಮತ್ತೆ ಪೆಟ್ಟಿಗೆ ತೆಗೆದು ಒಂದು ಒಳ್ಳೇ ವರಹ ಕೊಡುವ ತಾಳ್ಮೆಯಿರಲಿಲ್ಲ. ಮುದುಕ ಮರುಮಾತಾಡದೇ ಹೋಗಿದ್ದು ನೋಡಿ “ಪಾಪ, ಮುದುಕನಿಗೋ, ಕಣ್ಣು ಕಾಣದೇನೋ? ಅದಕ್ಕೆ ನಾಣ್ಯ ಕಿಲುಬಿದ್ದು ಕಾಣಲಿಲ್ಲವೇನೋ? ಅದೇನಾದರೂ ಹಾಳಾಗಲಿ” ಎಂದುಕೊಳ್ಳುತ್ತಾ ಮನೆಗೆ ನಡೆದ.

**********

ನಡುಹಗಲು. ಅಡುಗೆಮನೆ ಕೆಲಸವೆಲ್ಲ ಮುಗಿಯುತ್ತ ಬಂದಿದೆ. ಹೇಬಣ ಮತ್ತು ಅಭಿನವ ಇಬ್ಬರೂ ಮೂರು ದಿನವಾಯಿತು ಊರಿಗೆ ಹೋಗಿ. ಇವತ್ತು ಸಂಜೆ ಬರಬೇಕು. ಸರಸ್ವತಿಗೆ ಯಾಕೋ ಆಯಾಸವಾದಂತಾಗಿ ಹತ್ತು ನಿಮಿಷ ಕೂರೋಣವೆನ್ನಿಸಿ ಹಜಾರದ ಉಯ್ಯಾಲೆಯ ಮೇಲೆ ಹಾಗೇ ಕುಳಿತಳು. ಅಷ್ಟರಲ್ಲೆ, ಬಾಗಿಲು ಬಡಿಯುವ ಶಬ್ದ. ಹೋಗಿ ಅಗುಳಿ ತೆಗೆದಳು. ಒಬ್ಬರು ವಯಸ್ಸಾದವರೊಬ್ಬರು ಬಾಗಿಲಲ್ಲಿ ನಿಂತಿದ್ದರು.

“ಒಳಗೇ ಬರಲೇ ಸರಸ್ವತಮ್ಮ?”

ಅವರನ್ನು ಸರಸ್ವತಿ ಯಾವತ್ತೂ ಕಂಡಿರಲಿಲ್ಲ. ಅವರಿಗೆ ತನ್ನ ಹೆಸರು ಹೇಗೆ ಗೊತ್ತಾಯಿತೋ? ಸ್ವಲ್ಪ ಉದ್ದವಾದ ಮೂಗು. ಮುಖದಲ್ಲಿ ಕಿರುನಗೆ. ತಲೆಯ ಮೇಲೆ ಸುತ್ತಿದ್ದ ಬಿಳೀ ದಟ್ಟಿ. ಯಾಕೋ ತನ್ನ ತಂದೆಯನ್ನೇ ನೋಡಿದಂತಾಯಿತು ಅವಳಿಗೆ.

“ಬನ್ನಿ” ಅಂದಳು ಅವಳು. ಆತ ಒಳಗೆ ಬಂದು, ನಾನೂ ಹಿಂದೆ ನಿಮ್ಮ ಬೇಲೂರಿನ ಕಡೆಯವನೇ. ಈಗ ಬಿದನೂರು ಸೀಮೆಯಲ್ಲಿದ್ದೀನಿ. ನನಗೆ ಒಬ್ಬ ಮೊಮ್ಮೊಗನನ್ನು ಬಿಟ್ಟು ಇನ್ಯಾರೂ ಇಲ್ಲ. ಅವನಿಗೆ ಕಾಲ ಮೀರೋದಕ್ಕೆ ಮೊದಲು ಉಪನಯನ ಮಾಡ್ಬೇಕಮ್ಮ. ಉಪನಯನ ಆದಮೇಲೆ ಅವನನ್ನು ಶೃಂಗೇರಿಗೆ ಕಳಿಸಿ ಕಲಿಸಬೇಕು ಅಂತ ನನ್ನ ಆಸೆ. ಈ ಮುದುಕನಿಗೆ ಏನಾದರೂ ಸಹಾಯ ಕೊಡ್ತೀಯೇನಮ್ಮ?” ಎಂದರು.

ತನ್ನ ಕೈಯಲ್ಲಿ ದುಡ್ಡುಕಾಸಿನ ವ್ಯವಹಾರ ಯಾವತ್ತೂ ಮಾಡಿದವಳಲ್ಲ ಅವಳು. “ನಾನು ಹೆಣ್ಣುಹೆಂಗಸು. ನನ್ನ ಹತ್ತಿರ ಏನು ತಾನೇ ಇದೆ ಕೊಡೋದಕ್ಕೆ? ನನ್ನ ಮನೆಯವರನ್ನು ಕೇಳದೇ ನಾನು ಏನು ತಾನೇ ಕೊಡೋದು?” ಎಂದಳು. ಮನಸ್ಸಿನಲ್ಲಿ ಪಿಚ್ಚೆನ್ನಿಸಿತು. ಗಂಡನನ್ನೇ ಕೇಳಿ ಕೊಡಿಸೋಣವೆಂದರೆ, ಆತ ಖಂಡಿತ ಒಪ್ಪುವುದಿಲ್ಲ. ಮೊದಲೇ ಅಕ್ಕಸಾಲಿ ಕೆಲಸ ಮಾಡುವವರು. “ನಮ್ಮ ಕಸುಬಿನಲ್ಲಿ ಯಾರುಏನು ಅಂತೆಲ್ಲ ನೋಡಬಾರದು. ಅಕ್ಕಸಾಲಿ ಅಕ್ಕನ ಚಿನ್ನವನ್ನೂ ಬಿಡೋಲ್ಲ ಅಂತ ಗಾದೆ ಇಲ್ಲವೇ?” ಎನ್ನುತ್ತಿದ್ದ ಅವನು. ಮೊದಲು ಇಷ್ಟು ಬಿಗಿಮುಷ್ಟಿಯಿರಲಿಲ್ಲ. ಆದರೆ, ಈಗ ಮಾವನವರು ಹೋಗಿ ಐದುವರ್ಷವಾಯಿತಲ್ಲ? ಆಗಿನಿಂದಂತೂ ಗಂಡನಿಗೆ ವ್ಯವಹಾರವೇ ಹೆಚ್ಚಾಗಿ ಹೋಗಿದೆ.

“ನಿಮಗೆ ತವರುಮನೆಯಿಂದ ಬಂದಿರೋದು ಏನಾದರೂ ಇದ್ದರೆ ಕೊಡಮ್ಮ. ನಾನೂ ಮುದುಕ. ಎಷ್ಟು ಮನೆಗೆ ಅಂತ ಹೋಗಿ ಕೇಳಲಿ?” ಎಂದರು ಆತ. ಕತ್ತನ್ನು ಮುಟ್ಟಿಕೊಂಡಳು. ಅಲ್ಲಿರುವುದೊಂದು ತಾಳಿ. ಕೈಯಲ್ಲಿ ಎರಡು ಜೊತೆ ಬಳೆ. ಕಿವಿಯಲ್ಲಿ ವಜ್ರದ ಬೆಂಡೋಲೆ, ಮೂಗಲ್ಲಿ ಮೂಗುತಿ, ಇಷ್ಟು ಬಿಟ್ಟು ಅವಳ ಮೈಮೇಲೆ ಒಡವೆ ಇನ್ನೇನಿತ್ತು? ಮುತ್ತೈದೆಯಾದವಳು ಇದರಲ್ಲಿ ಯಾವುದು ತಾನೇ ತೆಗೆಯಬಹುದು? ಹೆಸರಿಗೆ ಮನೆಯದು ಚಿನ್ನದ ವ್ಯಾಪಾರ. ಆದರೆ ಎಲ್ಲವನ್ನೂ ಪೆಟ್ಟಿಗೆಯಲ್ಲಿಟ್ಟು ಭದ್ರಮಾಡುವ ಗಂಡ ಇರುವಾಗ, ಇವಳು ಏನು ತಾನೇ ಮಾಡಲಾಗುತ್ತೆ?

ಸರಸ್ವತಿ ಏನೋ ಯೋಚಿಸುತ್ತಿದ್ದು ನೋಡಿ, ತಾನು ಹೇಳಿದ್ದು ಕೇಳಲಿಲ್ಲವೇನೋ ಎಂದುಕೊಂಡು ಆತ ಮತ್ತೆ “ಬೇಲೂರಿಂದ, ನಿನ್ನ ತವರು ಮನೆಯಿಂದ, ಏನಾದರೂ ಬಂದಿರೋ ಹಣಕಾಸು ಒಡವೆ ಗಿಡವೆ ಅಂತ ಇದ್ದರೆ ಕೊಡಮ್ಮ, ನಿನ್ನ ಕೈಲಾದದ್ದು” ಎಂದರು. ಸರಸ್ವತಿಗೆ, ದೇವರ ಗೂಡಿನಲ್ಲಿ ಇನ್ನೊಂದು ಹರಳಿನ ಮೂಗುತಿ ಇರುವುದು ನೆನಪಾಯಿತು. ಹಾಕಿಕೊಂಡಿದ್ದ ಮುತ್ತಿನ ಮೂಗುತಿಯನ್ನು ತೆಗೆದಳು. “ತೊಗೊಳ್ಳಿ ಸ್ವಾಮೀ. ಇದು ನಮ್ಮ ತವರು ಮನೆಯಲ್ಲಿ ಕೊಟ್ಟಿದ್ದೇ. ನಿಮ್ಮನ್ನ ನೋಡಿದಾಗ ನನಗೆ ನನ್ನ ತಂದೆಯ ನೆನಪಾಗುತ್ತಿದೆ. ಇದು ಕೈಯಲ್ಲಿ ಹಿಡಿದು ಆಶೀರ್ವಾದ ಮಾಡಿ” ಎಂದು ನಮಸ್ಕಾರ ಮಾಡಿದಳು.

“ದೀರ್ಘ ಸುಮಂಗಲೀ ಭವ” ಎಂದು ಆಶೀರ್ವಾದ ಮಾಡಿ, ಅವರು ಹೊರಟುಹೋದಮೇಲೆ, ಸರಸ್ವತಿಗೆ ತಾನು ಕೊಟ್ಟದ್ದು ಸರಿಯೇ ತಪ್ಪೇ ಎಂಬ ಪೀಕಲಾಟ ಶುರುವಾಯಿತು. ಆಗಲಿ, ಇನ್ನೊಂದು ಮೂಗುತಿ ಹಾಕಿಕೊಂಡುಬಿಡುವೆ. ಗಂಡನಿಗೆ ಗೊತ್ತಾಗದೇ ಇರಬಹುದು ಎಂದುಕೊಳ್ಳುವಾಗಲೇ ಪಕ್ಕದ ಮನೆಯ ಲಕ್ಷ್ಮೀದೇವಿ ಬಂದಳು. ಹೊಸದಾಗಿ ಮದುವೆಯಾಗಿರುವ ಹುಡುಗಿ. ಅತ್ತೆ ಇಲ್ಲದ ಮನೆ. “ಸರಸ್ವತಮ್ಮ, ನನಗೆ ಹುಡಿಗಡುಬು ಹೇಗೆ ಮಾಡೋದು ಅಂತ ಹೇಳಿಕೊಡ್ತೀನಿ ಅಂದಿದ್ದಿರಲ್ಲ, ಅದಕ್ಕೇ ಬಂದೆ” ಎಂದಳು. “ಬಾಮ್ಮಾ ಲಕ್ಷ್ಮೀ” ಎನ್ನುತ್ತ ಸರಸ್ವತಿ ಅವಳನ್ನು ಅಡುಗೆ ಮನೆಗೆ ಕರೆದೊಯ್ದಳು.

**********

ಇವತ್ತು ಅಪ್ಪ ಬರೆಯೋದಕ್ಕಿಂದ ಒಳ್ಳೆ ಚಿತ್ತಾರ ಬರೆದುಕೊಡ್ತೀನಿ ಅನ್ನೋ ಮನಸು ಮಾಡಿಕೊಂಡು ಅಂಗಡಿಯ ಹಿಂದಿನ ಹಜಾರದಲ್ಲಿ ಕುಳಿತಿದ್ದ ಮಧ್ವಪತಿ. ತಾನು ದೊಡ್ಡವನಾದಮೇಲೆ, ಅಜ್ಜನಿಗಿಂತ, ಅಪ್ಪನಿಗಿಂತ ಒಳ್ಳೊಳ್ಳೆ ಚಿತ್ತಾರದ ಒಡವೆಗಳನ್ನ ಮಾಡಬೇಕು ಅನ್ನುವ ಆಸೆ ಅವನಿಗೆ ಬಹಳ ಇತ್ತು. ವ್ಯವಹಾರದಲ್ಲಿ ಆಸಕ್ತಿ ಇರುವ ಅವನ ಕಿವಿ ಹಾಗೇ ಹೊರಗಡೆ ಅಪ್ಪ ಬಂದವರೊಡನೆ ಆಡುತ್ತಿದ್ದ ಮಾತುಗಳನ್ನೂ ಕೇಳುತ್ತಿದ್ದವು. “ಇನ್ನು ಮೂರು ದಿನದಲ್ಲಿ ಸಿದ್ಧವಾಗುತ್ತೆ ಅಡ್ಡಿಕೆ ನಿಮ್ಮದು ಎನ್ನುತ್ತಿರುವ ತಂದೆಯ ಮುಖ ಮಧ್ವಪತಿಗೆ ಕಾಣುತ್ತಿರಲಿಲ್ಲ. ಎದುರು ಕೂತವರು ಇಕ್ಕೇರಿಯ ಗಣಪತಿ ಹೆಗಡೆಯವರು. “ಅರೆ, ಇನ್ನೂ ಇವರ ಅಡ್ಡಿಕೆಯ ಕೆಲಸ ಆರಂಭವೇ ಆಗಿಲ್ಲವಲ್ಲ, ಮೂರು ದಿನದಲ್ಲಿ ಕೊಡೋದು ಹೇಗೆ!” ಎಂದುಕೊಂಡ. ಈ ಚಿನ್ನದ ಕೆಲಸದಲ್ಲಿ, ಸಣ್ಣ ಪುಟ್ಟ ಸುಳ್ಳುಗಳು ಹೇಳಬೇಕಾಗುತ್ತೆ ಅನ್ನೋದು ಅವನಿಗೆ ತಿಳಿದದ್ದೇ. ಹೇಗಿದ್ದರೂ ಇಕ್ಕೇರಿಯಿಂದ ಇವರು ಮತ್ತೆ ಮೂರು ದಿನಕ್ಕೆ ಬರೋದಿಲ್ಲ ಅಂತ ಗೊತ್ತಿದ್ದೇ ಅಪ್ಪ ಹೀಗೆ ಹೇಳಿರುವುದು ಎಂದು ಅವನಿಗೆ ಊಹೆ ಆಯಿತು. ಸರಿ ಎಂದು ಹೇಳಿ ಹೆಗಡೆಯವರು ಹೊರಟಿದ್ದು ಅವನಿಗೆ ಕಾಣಿಸಿತು. ಅವರು ಹೋಗುತ್ತಿರುವ ಹಾಗೇ, ಬಾಗಿಲಲ್ಲಿ ಮತ್ತೆ ಆ ಮುದುಕ ಪ್ರತ್ಯಕ್ಷ! “ಈ ಮುದುಕಪ್ಪ ಮತ್ತೆ ಬರುತ್ತಿದ್ದಾನಲ್ಲ? ಎರಡು ಮೂರು ಸಲ ನಾನೇ ಓಡಿಸಿದ್ದೆನಲ್ಲ ಇವರನ್ನ” ಎಂದುಕೊಂಡವನು ಸರಿ, ಅಪ್ಪ ಇದ್ದಾರಲ್ಲ, ಏನಾದರೂ ಮಾಡಿಕೊಳ್ಳಲಿ ಎಂದು ಸುಮ್ಮನಾದ.

ಆ ಮುದುಕ ಬಂದವನು “ನಾಯಕರೇ, ನನ್ನ ಹತ್ತಿರ ಒಂದು ಒಡವೆ ಇದೆ. ಇದನ್ನ ತೊಗೊಂಡು, ಏನು ಬರತ್ತೋ ಕೊಡಿ ಸ್ವಾಮಿ” ಅಂತ ಹೇಳಿದ್ದು ಕೇಳಿಸಿತು. ಯಾವುದೋ ಹಳೆಯ ಒಡವೆ ಇದ್ದಿರಬಹುದು. ಸರಿ, ಇದಾದರೆ ಪರವಾಗಿಲ್ಲ. ಹೇಗಿದ್ದರೂ, ಅವನ ಸಮಯಕ್ಕೆ ಸಹಾಯ ಆಗುತ್ತಲ್ಲ ಅಪ್ಪ ಅದನ್ನ ಕೊಂಡುಕೊಂಡು ದುಡ್ಡು ಕೊಟ್ಟರೆ, ಅನ್ನಿಸಿತು ಮಧ್ವಪತಿಗೆ.

“ಒಂದು ಅರ್ಧ ಗಂಟೆ ಇಲ್ಲೇ ಇರಪ್ಪ, ಮತ್ತೆ ಬಂದು ಈ ಮೂಗುಬೊಟ್ಟಿನ ದುಡ್ಡು ಕೊಡ್ತೀನಿ” ಎಂದು ಹೇಳಿದ್ದು ಕೇಳಿಸಿತು. ಒಳಗೆ ಬಂದು ನನಗೆ ಹೇಳಿ ಹೋಗ್ತಾರೇನೋ ಅಂಗಡಿ ನೋಡಿಕೊಳ್ಳೋದಕ್ಕೆ ಎಂದು ಮಧ್ವಪತಿ ಎಂದುಕೊಳ್ಳುವಷ್ಟರಲ್ಲೇ, ಅಂಗಡಿಯ ಬಾಗಿಲಿಗೆ ಬೀಗ ಜಡಿದ ಸದ್ದಾಯಿತು. ನಾನು ಇಲ್ಲಿ ಇರುವುದು ಗೊತ್ತಿರಲಿಲ್ಲ ಅನ್ನಿಸುತ್ತೆ. ನಾನು ಹಿಂದುಗಡೆಯಿಂದ ಬಂದಿದ್ದೆನಲ್ಲ ನಾಗಾಚಾರಿ ಹತ್ತಿರ ಕದ ತೆಗೆಸಿಕೊಂಡು? ಆಮೇಲೆ ತಂದೆ ಒಳಕ್ಕೆ ಬಂದೇ ಇರಲಿಲ್ಲ ಅನ್ನುವುದು ಹೊಳೆಯಿತು. ಇದಾವ ಮೂಗುಬೊಟ್ಟಿರಬಹುದು? ಅಷ್ಟು ಬೆಲೆಬಾಳುವುದಿರಬಹುದೇ? ಅದಕ್ಕೆ ಕೊಡುವಷ್ಟು ದುಡ್ಡು ಇಲ್ಲಿ ಇರಲಿಲ್ಲವೇನೋ? ಇನ್ನೆಲ್ಲಿಂದಾದರೂ ದುಡ್ಡು ತರಲು ಹೋಗಿರಬಹುದೇ? ಅದ್ಯಾವುದೋ ದಕ್ಷಿಣ ದೇಶದ ದೇವಸ್ಥಾನದಲ್ಲಿ, ದೇವಿಗೆ ಹಾಕಿರೋ ಮೂಗುತಿಯ ವಜ್ರದ*** ಹೊಳಪು ಎಷ್ಟೋ ದೂರಕ್ಕೆ ಕಾಣತ್ತೆ, ದೇವಿಯ ಮುಖಕ್ಕೆ ಬೇರೆ ದೀಪವೇ ಬೇಡವಂತೆ ಅಂತ ಒಂದು ಸಲ ಅಪ್ಪ ಹೇಳಿದ್ದು ನೆನಪಾಯಿತು. ಅಂತಹದ್ದಾಗಿದ್ದರೆ, ನೋಡಬೇಕು ಎಂದು ಆಸೆಯಾಗಿ ಮುಂದಿನ ಕೋಣೆಗೆ ನಡೆದ ಮಧ್ವಪತಿ. ಸಂದೂಕದ ಬೀಗದ ಕೈ ಎಂದಿನಂತೆ ಹಾಸಿನ ಕೆಳಗೆ ಸಿಕ್ಕಿತು. ಪೆಟ್ಟಿಗೆ ತೆಗೆದು ನೋಡಿದ. ಮೇಲಿನ ಚೌಕೋನದ ಖಾನೆಯಲ್ಲೇ ಇತ್ತು ಆ ಮುತ್ತಿನ ಮೂಗುತಿ. ಆದರೆ ಅವನ ಕಲ್ಪನೆಯಂತೆ ಯಾವುದೇ ಭಾರೀ ಮೂಗುತಿಯಾಗಿರಲಿಲ್ಲ ಅದು. ಮೇಲೊಂದು ಮುತ್ತು. ಕೆಳಗೆ ಬೇಸರಿಯಲ್ಲಿ ಮೂರು ಸಣ್ಣ ಮುತ್ತುಗಳು. ಕಣ್ಣುಗಾಜಿನಲ್ಲಿ ಹಿಡಿದು ಮುತ್ತನ್ನು ನೋಡಿದ. ಒಳ್ಳೇ ಮುತ್ತೇ. ಆದರೆ, ನಾವು ಕೊಳ್ಳಲಾರದಷ್ಟು ಬೆಲೆ ಬಾಳೋದೇನಲ್ಲ. ಅಪ್ಪ ಯಾಕೆ ಮತ್ತೆ ಹೊರಗೆ ಹೋದರು? ಸೋಜಿವಾಯಿತು ಅವನಿಗೆ. ಹಾಗೇ, ಇದು ಬಹಳ ಪರಿಚಿತವಾದದ್ದು ಅಂತಲೂ ಅನ್ನಿಸತೊಡಗಿತು. ಮತ್ತೊಮ್ಮೆ ಮಧ್ವಪತಿ ಮೂಗುತಿಯನ್ನು ಕೈಯಲ್ಲಿ ಹಿಡಿದ. ಅದು ಯಾವುದು ಎಂದು ಅವನಿಗೆ ಗೊತ್ತಾಗಿಬಿಟ್ಟಿತು.

*********

ಹುಡಿಗಡುಬು ಮಾಡುವ ವಿಧಾನವನ್ನು ಹೇಳಿಸಿಕೊಂಡು ಲಕ್ಷ್ಮೀದೇವಿ ಹೊರಟಳು. ಬಾಗಿಲು ಹಾಕಿಕೊಳ್ಳಲು ಅವಳ ಹಿಂದೆಯೇ ಹೋದ ಸರಸ್ವತಿಗೆ, ಮನೆ ಬಾಗಿಲಲ್ಲಿ ಗಂಡ ಬರುತ್ತಿರುವುದು ಕಂಡಿತು. ಇದೇನು, ಹೊತ್ತಲ್ಲದ ಹೊತ್ತಿನಲ್ಲಿ ಇವರು ಅಂಗಡಿ ಬಿಟ್ಟು ಇಲ್ಲಿಗೆ ಬಂದಿರುವುದು? ಎಂದುಕೊಂಡಳು. ಅಲ್ಲದೆ, ಏಕೋ ಅವನ ಮುಖ ಎಂದಿನಂತಿಲ್ಲ ಎಂತಲೂ ಅನ್ನಿಸಿತು.

“ಒಂದು ಸ್ವಲ್ಪ ನೀರು ಕೊಡ್ತೀಯಾ ಆಸರೆಗೆ” ಎಂದ ಶ್ರೀನಿವಾಸ.

ಒಳಹೋಗಿ, ತಾಮ್ರದ ತಂಬಿಗೆಯಲ್ಲಿ ನೀರು ತಂದಳು ಸರಸ್ವತಿ. ಅದನ್ನು ಕೊಡುತ್ತಿದ್ದ ಹಾಗೇ ಗಂಡ ತನ್ನ ಮುಖವನ್ನೇ ನೋಡುತ್ತಿರುವುದರ ಅರಿವಾಯಿತು ಅವಳಿಗೆ.

“ಮುತ್ತಿನ ಮೂಗುತಿ ಏನಾಯಿತು ನಿನ್ನದು?” ಎಂದ ಅವನು. ಇವಳ ಎದೆ ಧಸಕ್ಕೆಂದಿತು. ಹುಡಿಗಡುಬು ಮಾಡುವ ಧಾವಂತದಲ್ಲಿ, ಬೇರೆ ಮೂಗುತಿ ಹಾಕಿಕೊಳ್ಳುವುದನ್ನು ಮರೆತಿದ್ದಳು. ತಕ್ಷಣ ಬಾಯಿಗೆ ಬಂದದ್ದು ಹೇಳಿದಳು: “ಎಣ್ಣೆ ನೀರು ಹಾಕ್ಕೊಳ್ಳೋವಾಗ ತೆಗೆದಿಟ್ಟಿದ್ದೆ ಎಣ್ಣೆ ಕೂರುತ್ತೆ ಅಂತ, ಹಾಕಿಕೊಳ್ಳೋದು ಮರೆತಿದ್ದೆ”. ಆದರೆ, ಯಾಕೋ ಈ ಸುಳ್ಳನ್ನ ತಾನು ಸಾಧಿಸೋಕ್ಕಾಗೋದಿಲ್ಲ ಎನ್ನಿಸಿತು. ಅಲ್ಲದೆ, ಮುಖವೆಲ್ಲ ಬೆವರುತ್ತಿದೆ.

“ಹೌದಾ? ಸರಿ. ಹಾಕ್ಕೊಂಡು ಬಾ. ಈಗ”

ಜೀವ ಬಾಯಿಗೆ ಬಂತು ಅವಳಿಗೆ. ಆದರೆ ಮಾತು ಹೊರಬಂದಾಗಿದೆ. ಇನ್ನೇನೂ ಗತಿ ಕಾಣಲಿಲ್ಲ. ನಡುಮನೆಗೆ ನಡೆದಳು. ದೇವರ ಮುಂದೆ ಕುಳಿತಳು. ಗಂಡ ಜಗಲಿಯ ಮೇಲೆ ಕಾಯುತ್ತಿದ್ದಾನೆ.

ಇಪ್ಪತ್ತಕ್ಕೂ ಹೆಚ್ಚು ವರ್ಷದ ದಾಂಪತ್ಯ ಜೀವನ ಕಣ್ಣು ಮುಂದೆ ಒಂದುಸಲ ಬಂದು ಹೋಯಿತು ಅವಳಿಗೆ. ಪ್ರೀತಿಸುವ ಗಂಡ, ಆದರೆ ಸ್ವಲ್ಪ ಕಠಿಣ ಸ್ವಭಾವ. ದುಡ್ಡಿನ ವಿಷಯದಲ್ಲಂತೂ ಕೈ ಬಿಗಿ. ಸುಳ್ಳು ತಟವಟ ಎಂದರೆ ಆಗದು. ಸ್ವಲ್ಪ ಕೈಸಡಿಲಿಸು ಎಂದು ತಾನು ಹೇಳಿದರೆ ಅವನು ಕೇಳದವ. ಚೆನ್ನಾಗಿ ಓದಿ ಬರೆದು ಮಾಡಿರುವ ಅವನಿಗೆ, ಏನಾದರೂ ಬದಲು ಹೇಳಿದರೆ, ಕೂಡಲೆ ಅದಕ್ಕೆ ವಿರುದ್ಧಾರ್ಥ ಬರುವ ಯಾವುದೋ ಶ್ಲೋಕವನ್ನೋ, ವಚನವನ್ನೋ ಆ ಕ್ಷಣವೇ ಉದಾಹರಣೆಗೆ ಹೇಳಿಬಿಡುವಂತಹವನು. ಈಗ ತಾನು ಮಾಡಿದ ಕೆಲಸ ಹೇಳಿಬಿಡಲೇ? ಬೇಡವೇ? ಮನಸ್ಸು ಉಯ್ಯಾಲೆಯ ಮೇಲೆ ತೂಗಿತು.

ತಟ್ಟೆಯಲ್ಲಿದ್ದ ಹೂವು ತೆಗೆದು ದೇವರ ಮುಡಿಗೇರಿಸಿದಳು. ಬಲಗಡೆಗೆ ಬಿದ್ದರೆ, ಹೋಗಿ ಕ್ಷಮೆ ಕೇಳುತ್ತೇನೆ. ಅವಮಾನ ಆದದ್ದಾಗಲಿ. ಎದುರಿಸುವುದು. ಎಡಗಡೆಗೆ ಬಿದ್ದರೆ, ಮಾನ ಉಳಿಯುತ್ತೆ, ಆದರೆ ಅದಕ್ಕೆ ಕೊಡಬೇಕಾದ ಬೆಲೆ ಪ್ರಾಣತ್ಯಾಗ. ಅಷ್ಟೇ. ನಿರ್ಧರಿಸಿಬಿಟ್ಟಳು. ವಿಠಲನ ಮೂರುತಿಯ ಮೇಲೆ ಮಲ್ಲಿಗೆ ಹೂವು ಮಿನುಗಿತು ಸಣ್ಣ ನಂದಾದೀಪದ ಬೆಳಕಲ್ಲಿ. ಕಣ್ಣು ಮುಚ್ಚಿ ಮೂರು ಪ್ರದಕ್ಷಿಣೆ ಹಾಕಿದಳು.

ಕಣ್ಣು ಬಿಟ್ಟಾಗ ಹೂವು ಎಡಕ್ಕೆ ಬಿದ್ದಿರಬೇಕೆ?

ಅವಳಿಗೆ ಮುಂದಿನ ದಾರಿ ಕಂಡಿತ್ತು.

*********

ಮಧ್ವಪತಿ ಓಡುತ್ತಿದ್ದ. ಮುಷ್ಟಿ ಬಿಗಿಹಿಡಿದು ಓಡುತ್ತಿದ್ದ.

ಅಂಗಡಿಗೂ ಮನೆಗೂ ನಿದಾನವಾಗಿ ನಡೆದರೆ ಒಂದು ಗಳಿಗೆ ಬೇಕು. ಈಗ ಅವನಿಗೆ ಅಷ್ಟು ಸಮಯ ಇಲ್ಲ.

ಮನೆಯಲ್ಲಿ ಅಪ್ಪ ಏನಾದರೂ ಗಲಾಟೆ ಮಾಡಿದರೆ? ಅಮ್ಮನನ್ನು ಬೈದರೆ? ಅಮ್ಮ ಅತ್ತರೆ? ಆದಷ್ಟು ಬೇಗ ಓಡಿ ಹೋಗಿ ಅಪ್ಪನ ಕಣ್ಣು ತಪ್ಪಿಸಿ ಕೊಟ್ಟುಬಿಡಬೇಕು.

ಯಾವತ್ತೋ ಯಾರೋ ಕೇಳಿದರು ಎಂದು ಅಮ್ಮ ಒಂದು ಚೀಲ ಬತ್ತ ಕೊಟ್ಟಾಗ ಆಗಿದ್ದ ಗಲಭೆ ನೆನಪಾಗಿತ್ತು ಅವನಿಗೆ.

ಹಾಗೆಲ್ಲಾ ಕೆಲಸಕ್ಕೆ ಬಾರದಿರುವವರಿಗೆ ಕೊಡಬೇಕು ಎನ್ನುವ ಇಷ್ಟ ತನಗೂ ಇಲ್ಲ. ಆದರೆ, ಅಮ್ಮ ಅಳುವುದು ಮಾತ್ರ ಮಧ್ವಪತಿಗೆ ಬೇಕಾಗಿಲ್ಲ.

ಮನೆ ಹತ್ತಿರವಾಗಿತ್ತು. ಜಗಲಿಯ ಮೇಲೆ ಅಪ್ಪ ಕುಳಿತದ್ದು ಕಂಡಿತು. ಸುತ್ತ ಬಳಸಿ ನಡುಮನೆಯ ಕಿಟಕಿ ಹತ್ತಿರ ಹೋಗಿ ಮೆತ್ತಗೆ “ಅಮ್ಮ ಅಮ್ಮ” ಎಂದು ಕೂಗಿದ. ಎತ್ತರದ ಕಿಟಕಿಯ ಮೇಲೆ ಹತ್ತಲು ಆಗುತ್ತಿಲ್ಲ ಅವನಿಗೆ.

ಹೇಗೋ ಸರಳುಗಳನ್ನು ಹಿಡಿದು ಮೇಲೆ ಹತ್ತಿ, ತಲೆಯನ್ನು ಕಿಟಕಿಯಲ್ಲಿ ತೂರಿಸಿ ಒಳಗೆ ಕಣ್ಣು ಹಾಯಿಸಿದ.

ದೇವರ ಮುಂದೆ ಕುಳಿತ ಅಮ್ಮ. ಕಣ್ಣುಮುಚ್ಚಿ ಕೈಯಲ್ಲಿ ಬಟ್ಟಲು ಹಿಡಿದಿದ್ದಾಳೆ. ಅದರಲ್ಲೇನಿದೆ?

ಹೊರಗಿನಿಂದ ಅಪ್ಪ ಕೂಗಿದ್ದು ಅವನಿಗೂ ಕೇಳಿಸಿತು. “ಬಂದೆಯಾ ಸರಸ್ವತಿ ಮೂಗುತಿ ಹಾಕ್ಕೊಂಡು? ಎಷ್ಟು ಹೊತ್ತು ಮಾಡ್ತಿದೀ?”

ಏನೋ ಆಗಬಾರದ್ದು ಆಗುತ್ತಿದೆ ಎಂದು ಅವನಿಗನ್ನಿಸಿತು. ಕೈಯಲ್ಲಿದ್ದ ಪುಟ್ಟ ಪೆಟ್ಟಿಗೆಯನ್ನು ನೇರವಾಗಿ ಅಮ್ಮನ ತಲೆಯ ಮೇಲೇ ಬೀಳುವಂತೆ ಎಸೆದ. ಅಷ್ಟರಲ್ಲಿ ಸರಳುಗಳನ್ನು ಹಿಡಿದಿದ್ದ ಅವನ ಕೈಗಳು ಜಾರಿ, ಕೆಳಗೆ ಬಿದ್ದ ಮಧ್ವಪತಿ.

**********

ಸರಸ್ವತಿಗೇ ತನ್ನ ಕಣ್ಣುಗಳನ್ನೇ ನಂಬಲಾಗುತ್ತಿಲ್ಲ. ತಾನು ವಿಷ ಕುಡಿಯ ಹೊರಟಾಗ ಮೇಲಿನಿಂದ ಬಿದ್ದ ಪುಟ್ಟ ಪೆಟ್ಟಿಗೆಯಲ್ಲಿ ತನ್ನ ಮೂಗುತಿ! ಅದನ್ನು ಹಾಕಿಕೊಂಡು ಹೊರಗೆ ಹೊರಟರೆ ಗಂಡನ ಮುಖದಲ್ಲಿ ಆಶ್ಚರ್ಯ! ಹೊರಗೆ ಹೋದವಳು ಬಟ್ಟಲನ್ನೂ ಮರೆತು ಕೈಯಲ್ಲೇ ಹಿಡಿದಿದ್ದಳು ಅವಳು.

ಅವಳ ಕಿವಿಯ ಓಲೆಯ ಹರಳೊಂದು ಮಾಯವಾಗಿದ್ದು ಅವನಿಗೆ ಕಂಡಿದ್ದರಿಂದ, ಬಟ್ಟಲಲ್ಲೇನಿತ್ತೆಂದು ಅವನಿಗೆ ಗೊತ್ತಾಗಿಹೋಗಿತ್ತು. ಅದನ್ನು ಅವಳ ಕೈಯಿಂದ ಕಿತ್ತು ಹೊರಗೆ ಎರಚಿ ಮಾತಿಲ್ಲದೇ ಧಾವಿಸಿದ್ದ ಅವನು ಅಂಗಡಿಗೆ.

ಅಂಗಡಿಗೆ ಹೋಗಿ ನೋಡಿದರೆ ಮುಂಬಾಗಿಲ ಬೀಗ ಹಾಗೇ ಇದೆ. ಆ ಮುದುಕನ ಪತ್ತೆ ಇಲ್ಲವೇ ಇಲ್ಲ. ಒಳಹೊಕ್ಕು ನೋಡಿದರೆ, ಸಂದೂಕದಲ್ಲಿ ಮೂಗುತಿಯ ಸುದ್ದಿಯೂ ಇಲ್ಲ.

ಶ್ರೀನಿವಾಸನಿಗೆ ಮನಸ್ಸು ಕಲಕಿಹೋಗಿತ್ತು. ತನಗೆ ಹೇಳದೆ ಕೊಟ್ಟ ದಾನದಿಂದ ಹೆದರಿದ ಹೆಂಡತಿ ಪ್ರಾಣ ಕಳೆದುಕೊಳ್ಳಹೊರಟಳೇ? ಹಾಗೇನಾದರೂ ಆಗಿದ್ದರೆ, ತನ್ನ ಹತ್ತಿರ ಇದ್ದ ಹಣವನ್ನೆಲ್ಲ ಸುರಿದರೂ ಅವಳು ಮತ್ತೆ ಬರುತ್ತಿರಲಿಲ್ಲವಲ್ಲ?

ಒಂದು ನಿರ್ಧಾರಕ್ಕೆ ಬಂದಿತ್ತು ಅವನ ಮನಸ್ಸು. ಅಂಗಡಿಗೆ ಮತ್ತೆ ಬೀಗ ಹಾಕಿ ಹೊರಟ ಅವನು.

*********

ಊರಿನಲ್ಲೆಲ್ಲ ಒಂದೇ ಸುದ್ದಿ. ನವಕೋಟಿ ನಾರಾಯಣ ಶ್ರೀನಿವಾಸ ನಾಯಕರು ಇದ್ದುದೆಲ್ಲ ದಾನ ಮಾಡುತ್ತಿದ್ದಾರಂತೆ! ಯಾರಿಗೂ ನಂಬಲಾರದ ಮಾತು! ಎಲ್ಲವನ್ನೂ ದಾನ ಮಾಡಿ, ಹರಿದಾಸರಾಗುತ್ತಾರಂತೆ!

ಶ್ರೀನಿವಾಸ ನಾಯಕ ಅಂಗಡಿಗೆ ಹೋಗಿ ಬಂದವನೆ ಸರಸ್ವತಿಗೆ ಮುದುಕನ ಕಥೆ ಹೇಳಿ, ಅವನು ಯಾರೋ ಮಹಾತ್ಮನೇ ಇರಬೇಕು, ನಾನು ನಿಜವಾಗಲೂ ತಪ್ಪು ಮಾಡುತ್ತಿದ್ದೆ ಎನ್ನಿಸಿದೆ. ಹೆಚ್ಚು ಕಡಿಮೆಯಾಗಿದ್ದರೆ, ನಿನ್ನನ್ನೂ ಕಳೆದುಕೊಳ್ಳುತ್ತಿದ್ದೆ. ಆಮೇಲೆ ನಾವೆಲ್ಲ ಅನಾಥರಾಗುತ್ತಿದ್ದೆವಲ್ಲ ಎಂದು ಹಳಹಳಿಸಿದ್ದ.

ಸರಸ್ವತಿಗೆ ಅವನಲ್ಲಾದ ಬದಲಾವಣೆ ನೋಡಿ ಅಚ್ಚರಿಯಾಗಿತ್ತು.

ಅವನ ಮಾತು ಮುಂದುವರೆಯುತ್ತಿತ್ತು: “ನಾವು ವಿಜಯನಗರಕ್ಕೆ ಹೋಗಿಬಿಡೋಣ. ಅಲ್ಲಿ ಯಾರಾದರೂ ಗುರುಗಳನ್ನು ಹುಡುಕುತ್ತೇನೆ. ಹಿಂದೆ ಕಲಿತದ್ದನ್ನು ಮುಂದುವರೆಸುತ್ತೇನೆ. ಅವರು ಹೇಳಿದಂತೆ ಮಾಡುತ್ತೇನೆ. ನಾಲ್ಕು ಹಾಡು ಬರೆದು ಮಕ್ಕಳಿಗೆ ಹೇಳಿಕೊಡುವ ಬದಲು, ಎಲ್ಲರ ಮನೆಯ ಮುಂದೆ ನಾಲ್ಕು ಹಾಡು ಹೇಳುವ ಹರಿದಾಸನಾಗುತ್ತೇನೆ. ಇನ್ನು ಸಾಕು ನಮಗೆ ಈ ಕ್ಷೇಮಪುರ. ಇವತ್ತೇ ಆಗಲಿ ಈ ಶ್ರೀನಿವಾಸ ನಾಯಕನ ಕೊನೆ. ನೀವೆಲ್ಲ ನನ್ನ ಜೊತೆ ಬರಲು ಸಿದ್ಧವೇ?”

ವೈಕುಂಠದಾಸರ ನೆನಪಾಯಿತು ಅವಳಿಗೆ. ಮನೆಯ ಮುಂದೆ ಬಂದು ಅವರು ನಿಂತು ಹಾಡುತ್ತಿದ್ದುದ್ದು ಎಷ್ಟು ಸೊಗಸು! ಈಗ ಇವನೂ ಹಾಗೇ ಹರಿದಾಸನಾಗುವ ಮಾತಾಡುತ್ತಿದ್ದಾನೆ! ಸರಸ್ವತಿ ಮಾತಿಲ್ಲದೇ ತಂಬೂರಿ ತಂದು ಗಂಡನ ಕೈಗಿತ್ತಿದ್ದಳು.

ಹೊರಗೆ ಶ್ರೀನಿವಾಸ ಎಲ್ಲವನ್ನೂ ದಾನ ಕೊಡುತ್ತಿರುವಾಗ, ನಡುವೆ ಮಧ್ವಪತಿ ಅಮ್ಮನನ್ನು ಗುಟ್ಟಾಗಿ ಕರೆದು ನಡೆದುದ್ದನ್ನ ಹೇಳಿದ್ದ.

ಅದೆಲ್ಲ ಕೇಳಿ,  ಆ ಮುದುಕ ಬಂದದ್ದು ಯಾರೋ? ನನ್ನ ತಂದೆಯ ಹಾಗೇ ಇದ್ದರಲ್ಲಾ? ಮೂಗುತಿ ತಂದುಕೊಟ್ಟದ್ದು ಮಧ್ವಪತಿಯಾದರೂ, ಅವನಿಗೆ ಆ ಬುದ್ಧಿ ಕೊಟ್ಟವನು ಆ ಬೇಲೂರ ಚೆನ್ನಿಗ, ಪುರಂದರವಿಠಲ ತಾನೇ? ಆದದ್ದೆಲ್ಲಾ ಒಳಿತೇ ಆಯಿತು, ಆ ವಿಠಲನ ಸೇವೆಗೆ ಸಾಧನ ಸಂಪತ್ತಾಯಿತು ಎಂದು ಸರಸ್ವತಿಯ ಮನಸ್ಸು ಹೇಳಿತು.

“ಮಧ್ವ, ಈಗ ನಡೆಯುತ್ತಿರುವುದೂ ಎಲ್ಲ ಆ ವಿಠಲನ ಇಚ್ಛೆಯಂತೆಯೇ. ಇಲ್ಲಿಯವರೆಗೂ ನಡೆದದ್ದೂ ಅವನ ಇಚ್ಛೆಯಂತೆ. ಹೋಗಿ, ಈ ವಿಷಯ ನಿಮ್ಮಪ್ಪನಿಗೆ ಹೇಳು” ಎಂದಳು ಅವಳು.

ಮಧ್ವಪತಿ ಹೋಗಿ ಶ್ರೀನಿವಾಸ ನಾಯಕನಿಗೆ ನಡೆದದ್ದನ್ನೆಲ್ಲ ಹೇಳಿದ. ಎಲ್ಲವನ್ನೂ ಶಾಂತವಾಗಿ ಕೇಳಿದ ಶ್ರೀನಿವಾಸ ಹೇಳಿದ್ದೊಂದೇ ಮಾತು. “ಕೃಷ್ಣಾರ್ಪಣಮಸ್ತು”. ಅವನಿಗೆ ಅವನ ಮುಂದಿನ ದಾರಿ ನಿಚ್ಚಳವಾಗಿತ್ತು.

ಮರುದಿನ ಬೆಳಿಗ್ಗೆ ಅವರ ಮನೆ ಬರಿದಾಗಿತ್ತು. ವಿಜಯನಗರದ ಕಡೆಗೆ ಹೋಗುವ ದಾರಿಯಲ್ಲಿ ಶ್ರೀನಿವಾಸ ನಾಯಕನ ಕುಟುಂಬ ನಡೆಯುತ್ತ ಸಾಗಿತ್ತು. ಕೈಯಲ್ಲಿ ತಾಳ ತಂಬೂರಿ ಹಿಡಿದ ಶ್ರೀನಿವಾಸನ ಸುಮಧುರ ಧ್ವನಿ ಕೇಳುತ್ತಿತ್ತು.

“ತಂಬೂರಿ ಮೀಟಿದವ ಭವಾಬ್ದಿ ದಾಟಿದವ

ತಾಳವ ತಟ್ಟಿದವ ಸುರರೊಳು ಸೇರಿದವ

ಗಾನವ ಪಾಡಿದವ ಹರಿ ಮೂರುತಿ ನೋಡಿದವ

ವಿಠಲನ ನೋಡಿದವ ವೈಕುಂಠಕೆ ಓಡಿದವ….”

ಹೌದು.

ಅವರು ನಡೆದಿದ್ದರು, ಗುರಿಯ ಕಡೆಗೆ.

ಅವರ ಕೊನೆಯ ಗುರಿಯ ಕಡೆಗೆ.

***************************************************************************************************************

ಟಿಪ್ಪಣಿಗಳು:

ಶ್ರೀನಿವಾಸನಾಯಕ ಪುರಂದರದಾಸನಾಗಲು ಪ್ರೇರೇಪಿಸಿದ ದಂತಕಥೆ ಎಲ್ಲರಿಗೂ ಗೊತ್ತಿರುವುದೇ. ಆದರೆ, ಈ ಕಥೆಯಲ್ಲಿನ ವಿವರಗಳು ನನ್ನ ಕಲ್ಪನೆಯವು ಎಂದು ಹೇಳಲು ಇಚ್ಛಿಸುವೆ. ಪುರಂದರದಾಸರು ಕರ್ನಾಟಕ ಸಂಗೀತವನ್ನು ಕಲಿಸಲು ಅನುಕೂಲವಾಗುವಂತೆ ಬಾಲಪಾಠಗಳ ರಚೆನೆ ಮಾಡಿದರು ಎನ್ನುವುದು ಪರಂಪರೆಯಿಂದ ತಿಳಿದುಬರುತ್ತದೆ.

ಅವರನ್ನು ಕರ್ನಾಟಕ ಸಂಗೀತ ಪಿತಾಮಹ ಎಂದೂ ಕರೆಯುತ್ತಾರೆ. ಹೇಬಣ, ಮಧ್ವಪತಿ ಮತ್ತು ಅಭಿನವ ಎಂಬ ಪುರಂದರ ದಾಸರ ಮಕ್ಕಳ ಹೆಸರು ಶಾಸನಗಳಲ್ಲಿ ಸಿಕ್ಕಿವೆ.

**: ಕ್ಷೇಮಪುರ, ಪುರಂದರಪುರವೆಂದೂ ಹೆಸರಾದ ಈ ಊರನ್ನು ಶಿವಮೊಗ್ಗ ಜಿಲ್ಲೆಯ ಆರಗ ಸೀಮೆಯ ಗೇರುಸೊಪ್ಪೆ ಎಂದು ಶಾಸನಾಧಾರಗಳಿಂದ ಗುರುತಿಸಲಾಗಿದೆ. ಪುರಂದರದಾಸರು ಇಲ್ಲಿಯವರಾಗಿದ್ದಿರಬೇಕೆಂಬುದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದಾರೆ.

***: ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ದೇವಿಯ ಮೂಗುತಿಯ ಹೊಳಪು, ಪ್ರಕಾಶ ಬಹಳ ಪ್ರಖ್ಯಾತವಾದದ್ದು.