೨೦೧೦ರ ಕೊನೆ ದಿನದಂದು ವಿಶ್ವ ಸಂಕೇತಿ ಸಮ್ಮೇಳನ ಆರಂಭವಾಗಲಿದೆ. ಮೂರು ದಿನದ  ಈ ಸಮ್ಮೇಳನಕ್ಕೆ ನಾಲ್ಕೈದು ಸಾವಿರ ಜನ ಬಂದು ಸೇರುವ ನಿರೀಕ್ಷೆ ಇದೆಯಂತೆ!

(ಸಂಕೇತಿಗಳು ತಮ್ಮ ವಲಸೆಗೆ ಕಾರಣಳಾದವಳೆಂದು ಸ್ಮರಿಸುವ ನಾಚಾರಮ್ಮನ ವಿಗ್ರಹ, ಲಕ್ಷ್ಮೀಕೇಶವ ದೇವಾಲಯ, ಕೌಶಿಕ, ಹಾಸನ ಜಿಲ್ಲೆಯಲ್ಲಿ)

 

ಶಿವಮೊಗ್ಗ ಜಿಲ್ಲೆಯ ಮತ್ತೂರು-ಹೊಸಳ್ಳಿಗಳಲ್ಲಿ ನಡೆಯುತ್ತಿರುವ ಈ ಮೂರು ದಿನದ ಸಮ್ಮೇಳನ, ಕರ್ನಾಟಕವನ್ನು ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಬಂದು ತಮ್ಮ ಮನೆಯಾಗಿಸಿಕೊಂಡ ಎಲ್ಲ ಸಂಕೇತಿಗಳಿಗೂ ಒಂದು ಸಂಭ್ರಮದ ಆಚರಣೆಯೇ ಸರಿ.

ಸಮ್ಮೇಳನದ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ

ಸಮ್ಮೇಳನಕ್ಕೆ ನಾನಂತೂ ಹೋಗಲಾಗಲಿಲ್ಲ, ಆದರೇನಂತೆ? ಈ ಸಾವಿರ ವರ್ಷದ ಹಿಂದಿನ ಈ ವಲಸೆಯ ಬಗ್ಗೆ ಇರುವ, ಬಾಯಿಂದ ಬಾಯಿಗೆ ಹರಿದು ಬಂದಿರುವ ಕಥೆಯೊಂದಕ್ಕೆ ನನ್ನದೇ ತಿರುವೊಂದನ್ನು ಕೊಟ್ಟು ನಾನು ಬರೆದಿದ್ದ ಸಣ್ಣ ಕಥೆಯೊಂದನ್ನ ಮತ್ತೆ ಇಲ್ಲಿ ಹಾಕುತ್ತಿದ್ದೇನೆ.  ಮೊದಲು ಈ ಕಥೆ ಬರೆದಾಗ ನನಗೆ ಗೊತ್ತಿಲ್ಲದಿದ್ದ ಕೆಲವು ಸಂಗತಿಗಳು ಈಗ ತಿಳಿದು ಬಂದಿದ್ದರಿಂದ, ಒಂದೆರಡು ವಿವರಗಳನ್ನು ಅದಕ್ಕೆ ತಕ್ಕಂತೆ ಬದಲಿಸಿರುವೆ.

-ನೀಲಾಂಜನ

———————————————————————————————————————————————————–
ಒಂದು ವಲಸೆಯ ಹಿಂದೆ…
————————————————————————————————————————————————————

“ಹುಡುಗೀರಾ, ಸೀರೆಗೆ ಗಂಟು ಸರಿಯಾಗಿ ಕಟ್ಟಿಕೊಂಡಿದೀರೇನೇ? ಯಾರ ಕೆಟ್ಟ ಕಣ್ಣು ಹೇಗಿರತ್ತೋ ಅಂತ ಗೊತ್ತಾಗಲ್ಲ” ಅಂತ ಬತ್ತಿ ಹೊಸೆಯುತ್ತಿದ್ದ ಅಜ್ಜಿ ಸ್ವಲ್ಪ ಕ್ಷೀಣಿಸಿದ ದನಿಯಲ್ಲಿ ಹೇಳಿದ್ದಕ್ಕೆ, ಚಿಗರೆಗಳಂತೋಡುವ ಆ ಹುಡುಗಿಯರಲ್ಲಿ ಒಬ್ಬಳು “ಅಜ್ಜಿಗೆ ಕೆಲಸ ಬೇರೆ ಇಲ್ಲ. ಬತ್ತಿ ಹೊಸೆಯೋದು, ಇಲ್ವೇ ಬುದ್ದಿ ಹೇಳೋದು!” ಎಂದು ಕಿಲಕಿಲ ನಗೆಯೊಂದಿಗೆ ಹೇಳುತ್ತಿರುವಂತೆ, ಆವರೆಲ್ಲ ಬಿಂದಿಗೆ ಹಿಡಿದು ಹೊರಗೋಡಿದರು. ಅವರ ಮಾತುಕೇಳಿ ಹುಚ್ಚು ಹುಡುಗೀರು ಎಂದುಕೊಂಡ ನಾಚಾರಮ್ಮ ಮತ್ತೆ ಬತ್ತಿ ಹೊಸೆವ ಕೆಲಸ ಮುಂದುವರೆಸಿದಳು. ಇವರ ವಯಸ್ಸಿನಲ್ಲಿ ನಾನೂ ಹೀಗೇ ಇದ್ದೆನೆ? ಇಲ್ಲ, ಇವರಿಗಿಂತ ಹೆಚ್ಚು ಚೂಟಿಯಾಗಿದ್ದೆ ಎನ್ನಿಸಿತು. ನಮ್ಮ ಊರಿನ ಪಕ್ಕದ ಕುತ್ತಾಲದ ಅಬ್ಬಿಯಲ್ಲಿ ನನ್ನಷ್ಟು ಚೆನ್ನಾಗಿ, ಧೈರ್ಯವಾಗಿ ಈಜುವವರು ಯಾರು ತಾನೇ ಇದ್ದರು?ಮನಸ್ಸು ಹಿಂದಕ್ಕೋಡತೊಡಕಿತು. ಎಷ್ಟು ವರ್ಷವಾಗಿರಬಹುದು ಇದೆಲ್ಲ? ಎಪ್ಪತ್ತು? ಎಪ್ಪತ್ತೈದು? ಯಾಕೋ ಎಲ್ಲವೂ ಮಸುಕಾದಂತೆನಿಸಿತು. ಹಾಗೇ ಆ ಹುಡುಗಿಯರ ಮಾತು ನೆನೆಯುತ್ತಿದ್ದಂತೆ ಭಯವಾಯಿತು.

ನಿಜವಾಗಿಯೂ ನನಗೆ ಅರಳು ಮರುಳೇ? ನನಗೆ? ನಾಕು ಭಾಷೆಯಲ್ಲಿ ಆಶುಕವಿತೆ ಹೊಸೆಯುತ್ತಿದ್ದವಳಿಗೆ? ನೂರಾರು ಹಾಡು ಹಸೆ ಹಾಡುತ್ತಿದ್ದವಳಿಗೆ? ನಿಜಕ್ಕೂ ಎಷ್ಟೋ ವಿಷಯಗಳೇ ನೆನಪಿಗೆ ಸರಿಯಾಗಿ ಬರಲೊಲ್ಲದಲ್ಲ? ಇದೇಕೋ ಒಂದೆರಡು ವರ್ಷದಿಂದ ಈ ನೆನೆಪಿಗೆ ಬಾರದ ವ್ಯಾಧಿ ತನಗಂಟಿಕೊಂಡಿದೆಯಲ್ಲ? ನನ್ನ ಮನೆಮಾತಿನ ಪದಗಳೇ ಒಮ್ಮೊಮ್ಮೆ ಹೊಳೆಯದೇ, ಸುತ್ತಮುತ್ತಲಿನ ಈ ನೆಲದ ಭಾಷೆಯ ಪದಗಳನ್ನು ತಾನು ಆಲ್ಲಲ್ಲಿ ಬಳಸುತ್ತಿರುವುದು ಅರಿವಾದಂತಾಗಿ, ಈ ಹುಡುಗಿಯರು ಹೇಳಿದ್ದೇ ನಿಜವಿರಬೇಕೆಂಬ ಮಂಕು ಸುತ್ತುವರೆಯಿತು.

ಆದರೆ. ಅಷ್ಟರಲ್ಲೆ, ತಟಕ್ಕನೆ ಆ ಈಶ್ವರ ಸಂವತ್ಸರದ ಯುಗಾದಿಯ ದಿನದ ನೆನಪು ಮರುಕಳಿಸಿತು.

~~~~

ಅಣ್ಣ ನನಗೆ ವಿದ್ಯಾರಂಭ ಮಾಡಿದ್ದು ಒಂದು ಯುಗಾದಿಯ ದಿನ. ಕುತ್ತಾಲನಾಥನ* ದೇವಾಲಯದಲ್ಲಿ ಪಂಚಾಗ ಶ್ರವಣ ಮುಗಿಸಿ ಬಂದ ನಂತರ ನನ್ನ ಓದಿಗೆ ಓನಾಮವಾಯಿತು. ನಾನಂತೂ ಬೆರಳು ತೋರಿದರೆ, ಹಸ್ತ ನುಂಗುವಂಥವಳು. ನನಗೆ ಪಾಠ ಹೇಳಿಕೊಡುತ್ತ, ಅಣ್ಣನ ಮುಖ ಹೊಳೆಯುತ್ತಿರುತ್ತಿದ್ದುದು ನನ್ನ ಗಮನಕ್ಕೂ ಬರುತ್ತಿತ್ತು.

ಒಂದು ದಿನ ಊಟ ಬಡಿಸುವಾಗ “ಏನೂ ಅಂದ್ರೆ, ನಮ್ಮ ನಾಚಾರು ಏಕಸಂಧಿಗ್ರಾಹಿ, ಅಲ್ವೇನು?” ಅಮ್ಮನ ಪ್ರಶ್ನೆಗೆ ಅಣ್ಣ “ಸುಮ್ಮನಿರು. ಮಕ್ಕಳನ್ನ ಅವರಿಗೆ ಕೇಳೋ ತರಹ ಹೊಗಳ್ಬಾರದು” ಎಂದು ನುಡಿದಿದ್ದು ಹೊರಗೆ ಆಡಿಕೊಳ್ಳುತ್ತಿದ್ದ ನನಗೆ ಕೇಳೇಕೇಳಿತ್ತಲ್ಲ!

ಅಣ್ಣ ಹೇಳಿಕೊಟ್ಟದ್ದು ಒಂದೇ ಎರಡೇ? ಕಾವ್ಯ, ವ್ಯಾಕರಣ, ಸಂಗೀತ – ಎಲ್ಲದರಲ್ಲೂ ನನಗೆ ಆಸಕ್ತಿ. ಅಪ್ಪನಿಗೆ ಹೇಳಿಕೊಡುವ ಉತ್ಸಾಹ. ಇಬ್ಬರಲ್ಲೂ ಎಲ್ಲೆಯಿರದ ಹುಮ್ಮಸ್ಸು. ನನ್ನ ಹಾಗೆ ರಾಮಾಯಣ ಭಾರತಗಳನ್ನು ವಾಚಿಸುವರು ಯಾರೂ ಇರಲಿಲ್ಲ ಊರಲ್ಲಿ. ಹಲವು ಬಾರಿ ಅಣ್ಣನ ಜೊತೆಯೇ ಕೂತು ಹಾಡುವ ಅವಕಾಶ ದೊರೆತಿತ್ತು ತನಗೆ.

ದಂಡಿಯ ಕಾವ್ಯಾದರ್ಶವನ್ನು ಪಾಠಮಾಡುತ್ತ, ಅಣ್ಣ ವಿಜ್ಜಿಕೆಯ ವಿಷಯ ಹೇಳಿದ್ದರು. ಬಡಗಣದ ಚಾಲುಕ್ಯರ ರಾಜಮನೆತನದ ಹೆಣ್ಣಾದ ವಿಜ್ಜಿಕೆ, ಕವಿ ದಂಡಿ ಸರಸ್ವತಿಯನ್ನು ಸರ್ವಶುಕ್ಲಾ ಎಂದು ಕರೆದಿದ್ದನ್ನು ಹೇಗೆ ತರಾಟೆಗೆ ತೆಗೆದುಕೊಂಡಿದ್ದಾಳೆ ಎಂದು ತೋರಿಸಲು ಅವಳ ಶ್ಲೋಕವನ್ನೂ ಹೇಳಿದ್ದರು.

ನೀಲೋತ್ಪಲ ಶ್ಯಾಮಾಂ ವಿಜ್ಜಿಕಾಂ ಮಾಮಜಾನತ |
ವ್ಯರ್ಥೇನ ದಂಡಿನಾ ಪ್ರೋಕ್ತಾ ಸರ್ವಶುಕ್ಲಾ ಸರಸ್ವತೀ ||

ವಿಜ್ಜಿಕೆಯ ದಾರ್ಷ್ಟಿಕ ನೋಡಿ, ನನಗೆ ಬಹಳ ಸಂತಸವಾಗಿತ್ತು. ಹೆಣ್ಣೆಂದರೆ, ಹೀಗಿರಬೇಕಲ್ಲವೆ? ಎನ್ನಿಸಿತ್ತು.

ಕನ್ನೈದಿಲೆಯೋಲ್ವ ಈ ವಿಜ್ಜಿಕೆಯನರಿಯದೆಯೆ
ದಂಡಿ ನುಡಿದುದು ದಂಡ- ಸರಸತಿಯು ಬಿಳುಪೆಂದು!

“ಈ ವಿಜ್ಜಿಕೆ ನನ್ನ ಹಾಗೇ ನಸುಗಪ್ಪಾಗಿದ್ದಿರಬೇಕು ಅಲ್ವಾ ಅಣ್ಣ? ಇವಳು ಹೀಗೆ ಬರೆಯದಿರುವುದು ಇಲ್ಲದಿದ್ದರೆ, ನಾನೇ ಒಂದು ಪದ್ಯ ಬರೆದುಬಿಡುತ್ತಿದ್ದೆ – ನೀಲೋತ್ಪಲ ದಳಶ್ಯಾಮಾಂ ನಾಚಾರೂಮ್ ಅಜಾನತ ಎಂದು” ಎಂದಿದ್ದೆ ನಾನು.

“ಬೇಡ ಮಗು ನಾಚಿಯಾರೇ, ಸ್ವಪ್ರಶಂಸೆ ಸಲ್ಲದು” ಎಂದಿದ್ದರು ಅಣ್ಣ.

~~~~

“ನಾಚಾರಮ್ಮ, ಇನ್ನೇನು ಎಲೆ ಹಾಕಬೇಕು. ನಡುಮನೆಯಲ್ಲಿ ಹೊಸ ಸೀರೆ ಇದೆಯಂತೆ. ಉಟ್ಟು ಅಭಿಗಾರ## ಮಾಡಲು ಬಾರಮ್ಮ” ಸೀತಮ್ಮನ ಮಾತುಗಳು ಕನಸಿನಲ್ಲೆಲ್ಲೋ ಬಂದಂತೆ ಇದ್ದವು.

ಹೌದು. ಅದು ನಿಜವೋ ಕನಸೋ ತಿಳಿಯದೇ ಹೋಗಿತ್ತವಳಿಗೆ. ನನಗೇ ಹೀಗಾಗಬೇಕೇ? ಯಾವ ಪಾಪಕ್ಕೆ ಈ ಶಿಕ್ಷೆ? ’ಪುತ್ರಶೋಕಂ ನಿರಂತರಂ’ ಅನ್ನುತ್ತಾರೆ. ಈ ಪುತ್ರ ಶೋಕ ತನಗೇಕೆ ಸುತ್ತಿಕೊಂಡಿತು? ಎಲ್ಲಕ್ಕೂ ಮೊದಲು ಈ ಜ್ಯೋತಿಷ್ಮತಿ ತೈಲವನ್ನು ಕುಡಿಯೋ ಆಸೆ ಇವರಿಗೆ ಏಕೆ ಬಂತು? ನನಗಿಂತ ಹೆಚ್ಚು ಪಂಡಿತನಾಗಬೇಕೆಂಬ ಆಸೆಯೇ ಅದರಿಂದಾಗುವ ಕೆಟ್ಟ ಪರಿಣಾಮಗಳನ್ನೂ ಗಣಿಸದಿರುವಂತೆ ಮಾಡಿತಲ್ಲ? ಅಷ್ಟಕ್ಕೂ ಆ ಗೊಂಗುಂಗೆ ಎಣ್ಣೆಯಲ್ಲಿ ಏನೇನು ಬೆರೆಸಿತ್ತೋ? ಆ ಕುತ್ತಾಲನಾಥನಿಗೇ ಗೊತ್ತು.

ಹದಿಮೂರು ದಿನದಿಂದ ಆ ದೇವರನ್ನು ಶಪಿಸದ ಕ್ಷಣವಿಲ್ಲ ಅವಳು.

ಅಣ್ಣ ತನ್ನ ಮದುವೆಯ ನಿಶ್ಚಯ ಮಾಡಿ ಬಂದ ದಿನ ಅವಳಿಗೆ ಬಹಳ ಚೆನ್ನಾಗಿ ನೆನಪಿತ್ತು.

“ದೇವರ ದಯೆ. ಬಹಳ ಒಳ್ಳೆ ಸಂಬಂಧ. ಸ್ಥಿತಿವಂತ ಹುಡುಗ. ಶೆಂಕೋಟೆ**ಯಲ್ಲೇ ಬೇಕಾದಷ್ಟು ಜಮೀನಿದೆ. ಒಬ್ಬನೇ ಮಗ. ಜವಾಬ್ದಾರಿ ಇನ್ನೇನೂ ಇಲ್ಲ. ನೀನು ಅಲ್ಲಿ ರಾಣಿ ಹಾಗೆ ಬಾಳ್ತೀಯಾ. ಹೋದ ಮನೆಯಲ್ಲಿ, ಒಂದು ಮಾತು ಬರದಂತೆ, ನಮ್ಮ ಮರ್ಯಾದೆ ಕಾಪಾಡು ತಾಯೀ” ಎಂದಿದ್ದರು ಅವರು.

“ಅಣ್ಣ, ಚೆನ್ನಾಗಿ ಓದಿಕೊಂಡಿದ್ದಾರಾ?” ಇದೊಂದೇ ಮಾತು ನಾನು ಕೇಳಿದ್ದು. ಬೇರೆ ಹುಡುಗಿಯರಂತೆ, ಸುರಸುಂದರಾಂಗನನ್ನು ಕಟ್ಟಿಕೊಳ್ಳುವ ಆಸೆಯೇನು ತನ್ನಲ್ಲಿ ಮನೆ ಮಾಡಿರಲಿಲ್ಲ ಅಷ್ಟಕ್ಕೂ.

“ಅವರ ಅಮ್ಮ ಅದೆಷ್ಟು ವಿದ್ಯಾವಂತೆ ಅಂತೀ – ಘಟ್ಟದ ಮೇಲಿನ ಮಾತು, ಘಟ್ಟದ ಕೆಳಗಿನ ಭಾಷೆ*** ಅಷ್ಟೇ ಅಲ್ಲ. ಬಡಗಲಿಗೆ ಕಾಶೀ ಯಾತ್ರೆ ಹೋದಾಗ ಅಲ್ಲಿಯ ಭಾಷೆಗಳನ್ನೆಲ್ಲ ಕಲಿತು, ಸರಾಗವಾಗಿ ನಾಕೋ ಐದೋ ಭಾಷೆಗಳಲ್ಲಿ ಸಲೀಸಾಗಿ ಮಾತಾಡ್ತಾರೆ. ಬಹಳ ಒಳ್ಳೆ ಸ್ವಭಾವ, ಅಂದಮೇಲೆ …” ಎಂದಿದ್ದರು ಅಣ್ಣ.

ಅಣ್ಣ ಸುಳ್ಳು ಹೇಳಿರಲಿಲ್ಲ. ಆದರೆ, ಸತ್ಯವನ್ನೂ ಹೇಳಿರಲಿಲ್ಲ ಅನ್ನುವ ಮಾತು ನನಗೆ ತಾಳಿ ಕಟ್ಟಿಸಿಕೊಂಡ ಮರುದಿನವೇ ತಿಳಿದುಬಂದಿತ್ತು.

ಅತ್ತೆ ಹತ್ತಿರ ಕುಳ್ಳಿರಿಸಿಕೊಂಡು ನನಗೆ ಹೇಳಿದ್ದರು:

“ಮಗೂ ನಾಚಿಯಾರೇ, ನೀನು ಬಹಳ ಬುದ್ದಿವಂತೆ ಅಂತ ಕೇಳಿದೀನಿ. ನಿನ್ನ ತಂದೆ ಮಾಡೋ ಪ್ರವಚನಗಳನ್ನ ಕೇಳಿರೋ ನನಗೆ, ಅವರು ತಮ್ಮ ಮಗಳನ್ನ ಹೇಗೆ ತಯಾರು ಮಾಡಿದಾರೆ ಅನ್ನೋದನ್ನ ಕಲ್ಪಿಸಿಕೊಳ್ಳಬಹುದು. ನಿನ್ನ ಗಂಡ ಅಷ್ಟಾಗಿ ಓದಿಕೊಳ್ಳಲಿಲ್ಲ. ಹಾಗಂತ ಅವನೇನೂ ಪೆದ್ದನಲ್ಲ – ಆದರೆ, ಓದೋದರ ಕಡೆಗೆ ಅವನ ಗಮನ ಹೆಚ್ಚು ಹರೀಲಿಲ್ಲ. ಇರೋ ಆಸ್ತಿ ಬೇಕಾದಷ್ಟು. ಅದನ್ನ, ಬೆಳೆಸ್ದೇ ಹೋದರೂ, ಉಳಿಸಿಕೊಂಡು ಹೋದರೆ ಸಾಕು. ನಿನ್ನಂಥ ಬುದ್ಧಿವಂತೆ ಅವನ ಹಿಂದೆ ಇರೋದ್ರಿಂದ ನಾನು ನೆಮ್ಮದಿಯಾಗಿರಬಹುದು ರಾಮಾ ಕೃಷ್ಣಾ ಅಂತ” ಅಂತ ಅಂದಿದ್ದರು ಅತ್ತೆ.

ಮನದಲ್ಲಾದ ನಿರಾಸೆಯನ್ನು ನಾಲಗೆಗೆ ತರಲಿಲ್ಲ ಅವಳು. ಹೋದ ಮನೆಯಲ್ಲಿ ಮಾತೊಂದು ಬರದಂತೆ ಕೊಟ್ಟ ಮಾತು ಅವಳನ್ನು ಕಟ್ಟಿಹಾಕಿತ್ತು.

ಹಾಗೇ ವರುಷಗಳು ಕಳೆಯುತ್ತಿದ್ದವು. ಮುದ್ದಾದ ಗಂಡು ಮಗುವಿಗೆ ತಾಯಾದಳು ಅವಳು. ಪುಟ್ಟ ಕೃಷ್ಣನನ್ನು ಕಂಡು ಆಡಿಸಿ ಕೆಲವರ್ಷಗಳಲ್ಲೇ ಅತ್ತೆ ಕಾಲವಾದರು. ಅತ್ತ, ಕಾಶಿ ಯಾತ್ರೆಗೆ ಹೋದ ಅಪ್ಪ ಅಮ್ಮ, ಹಿಂತಿರುಗಲೇ ಇಲ್ಲ. ಅವರೊಡನೆ ಹೋಗಿ ಮರಳಿದವರು, ಅಪ್ಪನ ಪಾಂಡಿತ್ಯ ಕಂಡ ಕಾಶಿಯ ಪಂಡಿತರು ಅವರನ್ನು ಅಲ್ಲೇ ಉಳಿಸಿಕೊಂಡ ವಾರ್ತೆ ತಂದರು.

ಒಂದು ಮುತ್ತನ್ನು ಹೆತ್ತ ಅವಳ ಹೊಟ್ಟೆ ಮತ್ತೆ ಅದೇಕೋ ಚಿಗುರಲಿಲ್ಲ. ಆದರೆ, ಪುಟ್ಟ ಕೃಷ್ಣನ ಜೊತೆಗೆ ತನ್ನ ಬಾಲ್ಯವನ್ನೇ ಮರುಕಳಿಸುತ್ತಿದ್ದ ಅವಳಿಗೆ, ಅದರಿಂದೇನೂ ಪಿಚ್ಚೆನಿಸಿರಲಿಲ್ಲ.

~~~~

“ನಾಚಾರೂ, ಆಗಲಿಲ್ಲವೇ ಇನ್ನೂ?” ಹೊರಗಿನಿಂದ ಸೀತೆಯ ಸ್ವರ ಮತ್ತೆ ಕೇಳಿ ಬಂದಾಗ ನಾಚಾರಮ್ಮ ಎದ್ದಳು. ನಡೆಯುತ್ತಿರುವುದು ಸಾವಿನ ಸಮಾರಾಧನೆ. ಅದಕ್ಕೆ ಹೊಸ ಬಟ್ಟೆ ಉಡಬೇಕೆಂಬ ಶಾಸ್ತ್ರಮಾಡಿದವರು ಯಾರೋ? ಎನ್ನಿಸಿತು. ಇನ್ನಾರು? ಯಾರೋ ಗಂಡಸೇ ಇರಬೇಕು. ಹೆಣ್ಣಿನ ಮನಸ್ಸಿನ ದುಃಖವನ್ನು ಅರಿಯಲು ಗಂಡಸರಿಗೆ ಹೇಗೆ ತಾನೇ ಸಾಧ್ಯ?

ಸೀರೆಯುಟ್ಟಳು ನಾಚಾರಮ್ಮ. ಏನೋ ಈ ಸೀರೆ ಬಲು ನಯವಾಗಿದೆ ಎನ್ನಿಸಿತು. ನಡುಮನೆಯಲ್ಲೋ, ಬೆಳಕೇ ಸಾಲದು. ಸೀರೆಯ ಬಣ್ಣವೂ ಸರಿಯಾಗಿ ತಿಳಿಯುವಂತಿರಲಿಲ್ಲ. ಸಾವಿನ ಸಮಾರಾಧನೆಯ ಸೀರೆಯ ಬಣ್ಣದ ಯೋಚನೆ ಮಾಡುತ್ತಿದ್ದೇನಲ್ಲ ಎನ್ನಿಸಿ ಒಮ್ಮೆ ಸಣ್ಣ ನಗು ಬಂತು. ಹದಿಮೂರು ದಿನಗಳಲ್ಲಿ ಮೊದಲ ಬಾರಿ ಅವಳು ನಕ್ಕಿದ್ದಳು.

ನಗು! ತನ್ನ ಮಗನೊಡನೆ ಅವಳು ಎಷ್ಟು ನಕ್ಕಿರಲಿಲ್ಲ! ಅವನ ವಿದ್ಯಾರಂಭವಾದೊಡನೆ, ಅವನಿನ್ನೂ ಚಿಕ್ಕಹುಡುಗನೆನ್ನುವುದೆಂಬ ಭಾವ ಅವಳಲ್ಲಿ ಮರೆತು, ತನ್ನೋರಗೆಯವನೆಂಬ ಭಾವ ಮೂಡಿಬಿಟ್ಟಿತ್ತು. ಕೃಷ್ಣ ಗುರುಮನೆಯಿಂದ ಬಂದಾಗಲೆಲ್ಲ ನೇರವಾಗಿ ಅಡಿಗೆಮನೆಗೆ ನುಗ್ಗುತ್ತಿದ್ದ. ಕಲಿತಿದ್ದು ಏನು ಎಂದು ಹೇಳುವವರೆಗೆ ಸಮಾಧಾನವಿರುತ್ತಿರಲಿಲ್ಲ ಅವನಿಗೆ. ಪ್ರಶ್ನೆ ಹಾಕಿ, ಅವನ ಕುತೂಹಲ ಕೆರಳಿಸುತ್ತಿದ್ದಳು ಇವಳು. ಅವನು ತನ್ನ ಅಜ್ಜನ ತರಹವೇ, ಬಹಳ ಬುದ್ಧಿಶಾಲಿ. ಮುಖಲಕ್ಷಣದಲ್ಲಿ ತಂದೆಯನ್ನು ಹೋತರೂ, ಬುದ್ಧಿಶಕ್ತಿಯಲ್ಲಿ, ಸದ್ಯ, ಹಾಗಾಗಲಿಲ್ಲ.

ಅವನಿಗೆ ಗುರುಗಳು ಭಾಸ್ಕರಾಚಾರ್ಯನ ಲೀಲಾವತಿಯ ಬೀಜಗಣಿತದ ಪದ್ಯಗಳನ್ನು ಹೇಳಿಕೊಟ್ಟಿದ್ದ ದಿನ ಅವಳು ಮರೆಯುವಂತಿರಲಿಲ್ಲ. ಅವತ್ತೇ ಆ ಕೆಟ್ಟ ತಿರುವು ನಡೆದದ್ದು.

ಮಗ ಮನೆಗೆ ಬಂದವನೇ ನನ್ನೊಡನೆ ಆ ಸಮಸ್ಯೆಯನ್ನು ಬಿಡಿಸಲು ಕೇಳಿದ. ಇವಳಿಗೆ ತಿಳಿಯದ್ದೇನು ಅದು? ಕೂಡಲೆ ಹೇಳಿಕೊಟ್ಟಿದ್ದಳು.

ಅಂದು ರಾತ್ರಿ, ಊಟ ಬಡಿಸುವಾಗ ದೂರು ಬಂತು- “ನೀನು ಈಗ ನನ್ನನ್ನು ಮರೆತೇಬಿಟ್ಟಿದ್ದೀ. ಬರೀ ಮಗನೊಡನೆ ಮಾತಾಡುತ್ತಿದ್ದರೆ ಸಾಕೇ?”

“ಹಾಗೇನಿಲ್ಲ. ನೀವೂ ಬನ್ನಿ ಸೇರಿಕೊಳ್ಳಿ ಮಾತಿನಲ್ಲಿ. ಮಗುವಿಗೂ ಇಷ್ಟವಾಗುತ್ತೆ ಇಬ್ಬರೂ ಅವನಿಗೆ ಏನಾದರೂ ಹೇಳಿಕೊಟ್ಟರೆ”

ಎಷ್ಟು ದಿನದಿಂದ ಕಟ್ಟಿತ್ತೋ, ಕಟ್ಟೆಯೊಡೆದಿತ್ತು. “ನಾನು ನಿನ್ನಷ್ಟು ವಿದ್ಯಾವಂತ ಅಲ್ಲ ಅನ್ನೋದನ್ನ ಹಂಗಿಸೋದಕ್ಕೆ ತಾನೇ ಈ ಮಾತು?” ಎಲೆಯಲ್ಲೇ ಕೈತೊಳೆದು ಧಢಧಢ ಹೊರನಡೆದವನು, ನಾಲ್ಕು ದಿನವಾದರೂ ಪತ್ತೆ ಇರಲಿಲ್ಲ.

ಮನೆಯಲ್ಲಿ ಇಲ್ಲದವನನ್ನು ಇವಳು ಮಾತಿನಲ್ಲೇ ಕೇರಳಕ್ಕೆ ಕಳಿಸಿದ್ದಳು. ಹೇಗೂ ಕೃಷ್ಣಾಷ್ಟಮಿ ಹತ್ತಿರಕ್ಕೆ ಬಂದಿದ್ದು ಅನುಕೂಲಕ್ಕೆ ಬಂದಿತ್ತು. ಗುರುವಾಯೂರಪ್ಪನನ್ನು ಬಾಯಿಮಾತಿನಲ್ಲೇ ದರ್ಶನಮಾಡಿಸಿಬಿಟ್ಟಳು. ಅಕ್ಕಪಕ್ಕದವರಿಗಾರಿಗೂ ಐಬು ಕಾಣಲಿಲ್ಲ ಸದ್ಯಕ್ಕೆ.

ವಾರದ ಮೇಲೆ ಬಂದವನ ಮುಖದಲ್ಲಿ ಗೆಲುವಿನ ಕಳೆ ಇತ್ತು. ಬಂದವನೇ ಕೈಯಲ್ಲಿದ್ದ ಜಾಡಿಯನ್ನು ಕೊಟ್ಟು, “ದೇವರ ಮುಂದಿಡು. ಸ್ನಾನ,ಪೂಜೆಯಾದಮೇಲೆ, ಎಲ್ಲರೂ ತೊಗೋಬೇಕು” ಎಂದು ಹೇಳಿ ಸ್ನಾನಕ್ಕೆ ನಡೆದಿದ್ದ.

~~~~

ಸೀತೆಯ ಕೂಸು ಸಾವಿತ್ರಿ ಬಾಗಿಲು ತಳ್ಳಿ ಒಳಬಂದಳು. ಉದ್ದ ಜಡೆಯ ಮುದ್ದು ಹುಡುಗಿ. ”ನಾಚಾರು ಮಾಮೀ, ಎಲೆ ಹಾಕಿ ಆಯ್ತಂತೆ. ತುಪ್ಪದ ಜಾಡಿ ತನ್ನಿ ಅಂತ ಅಮ್ಮ ಹೇಳ್ತಿದಾರೆ” ಎಂದಳು. ”ಸರಿ, ಬಂದೆ” ಎಂದು ತುಪ್ಪದ ಜಾಡಿ ತರಲು ಇವಳು ಅಡುಗೆಮನೆಯೆಡೆ ಹೊರಟಳು.

ತುಪ್ಪದ ಜಾಡಿ ಎತ್ತಿಕೊಳ್ಳುತ್ತಿದ್ದಂತೆಯೇ, ಮತ್ತೆ ಅದೇ ತೈಲದ ಜಾಡಿ ಮನಸ್ಸಿಗೆ ಬಂತು.

“ನಾಗರಕೋಯಿಲ್ಲಿಗೆ ಹೋಗಿದ್ದೆ ನಾಚಾರೂ. ಅಲ್ಲಿ ವೈದ್ಯನಾಥ ಪಂಡಿತರನ್ನು ಕಾಡಿ, ಬೇಡಿ , ಪುಸಲಾಯಿಸಿ ಜ್ಯೋತಿಷ್ಮತಿ ತೈಲ ತಂದಿದೀನಿ. ಇದನ್ನು ಕುಡಿದರೆ ಬುದ್ದಿಶಕ್ತಿ ಹೆಚ್ಚತ್ತಂತೆ” ಎಂದಿದ್ದ.

ಎದೆ ಧಡಕ್ಕೆಂದಿತ್ತು ಇವಳಿಗೆ. ಜ್ಯೋತಿಷ್ಮತೀ ತೈಲದ ಬಗ್ಗೆ ಇವಳಿಗೇನು ಗೊತ್ತಿಲ್ಲವೇ? ಅದನ್ನು ಹೇಗೆ ಮಾಡ್ಬೇಕು ಅನ್ನೋದನ್ನೂ ಇವಳು ಆಯುರ್ವೇದ ಗ್ರಂಥಗಳಲ್ಲಿ ಓದಿದ್ದಳು. ಹಾಗಾಗಿ, ಅದರಿಂದ ಯಾವ ಹಾನಿ ಆಗಬಹುದು ಅನ್ನುವುದೂ ಗೊತ್ತಿತ್ತು ಇವಳಿಗೆ.

“ಬೇಡ ಅಂದ್ರೆ, ಅದನ್ನು ಕುಡಿದರೆ ಬುದ್ಧಿ ಹೆಚ್ಚಲೂ ಬಹುದು ಅಥವ ಹುಚ್ಚೂ ಹಿಡೀಬಹುದು. ಮಾಡೋವಾಗ ಹೆಚ್ಚು ಕಮ್ಮಿ ಆಗಿದ್ರೆ, ಪ್ರಾಣಕ್ಕೂ ಅಪಾಯ. ಅಷ್ಟಕ್ಕೂ, ನಮಗಿರೋ ಬುದ್ಧಿಯನ್ನ ನಾವು ಉಪಯೋಗಿಸಿದ್ರಾಯ್ತು. ಇದೆಲ್ಲ ಯಾಕೆ?” ಎಂದು ತಡೆಯಲು ಯತ್ನಿಸಿದಳು.

“ನಾನು ನಿನ್ನಹಾಗೆ, ನಿನ್ನನ್ನ ಮೀರಿಸೋ ಹಾಗೆ ಪಾಂಡಿತ್ಯ ಪಡೆದರೆ, ನಿನಗೆ ಹೊಟ್ಟೇ ಕಿಚ್ಚು. ಅಲ್ವಾ?” ಕಹಿಯಾಗಿ, ಖಾರವಾಗಿ ಕೇಳಿದ್ದ ಅವನು. ಇವಳು ಮೌನವಾಗಿ ಕಣ್ಣೀರು ಸುರಿಸಿದ್ದಳು. ಅಷ್ಟಕ್ಕೂ ವಿದ್ಯೆ ಅನ್ನೋದು ತೈಲದಿಂದ ಬರೋ, ಮಂತ್ರಕ್ಕೆ ಉದುರೋ ಮಾವಿನಕಾಯಲ್ಲ ಅನ್ನೋದನ್ನ ಅವನಿಗೆ ತಿಳಿಸಿ ಹೇಳೋದಾದ್ರೂ ಹೇಗೆ?

ಕುತ್ತಾಲನಾಥನನ್ನು ನೆನೆದು ಮೂವರೂ ತೈಲವನ್ನು ಕುಡಿದಿದ್ದರು.

~~~~

ಹೊರಗೆ ಮತ್ತೆ ಸೀತೆಯ ಧ್ವನಿ. “ಬಂದೇ” ಎಂದು ಜಾಡಿ ಹಿಡಿದು, ಅಡುಗೆ ಮನೆಯಿಂದ ಹೊರಬಂದು ಮೆಟ್ಟಿಲಿಳಿದರೆ, ಏಕೋ ಉಟ್ಟಿದ್ದ ಸೀರೆ ಜಾರಿತೆನಿಸಿತು. ಉರಿಯುವ ಒಲೆಯ ಬೆಳಕಲ್ಲಿ ಬಗ್ಗಿ ನೋಡಿದರೆ, ಸೀರೆಯ ಮೇಲೆ ಏನೋ ಪುಡಿ ಕಾಣಿಸಿತು.ಕೊಡವಿಕೊಳ್ಳಲು ಹೋದರೆ, ಸೀರೆಯ ಎಲ್ಲ ಬದಿಯಲ್ಲೂ ಅದೇ ಪುಡಿ. ಮುಟ್ಟಲು ಬಲು ನಯ.

ನಿಂತು ಸೀರೆಯ ನೆರಿಗೆ ಸಡಿಲಿಸಿ, ಭುಜದ ಮೇಲೆ ಗಂಟೊಂದನ್ನು ಕಟ್ಟಿ, ಸೆರಗು ಸುತ್ತಿಕೊಂಡು, ಎಲೆ ಹಾಕಿದ್ದ ನಡುಮನೆಗೆ ನಡೆದಳು.

ಕುಳಿತಿದ್ದವರು ಮಂತ್ರ ಪುಷ್ಪ ಮುಗಿಸುತ್ತಿದ್ದಂತೆ, ಬಗ್ಗಿ ತುಪ್ಪ ಬಡಿಸತೊಡಗಿದಳು. ಅವಳ ಕಣ್ಣುಗಳು ಕೆಂಡದುಂಡೆಯಾಗಿದ್ದವು. ಬಡಿಸುತ್ತ ಹೋದಂತೆ, ಕುಳಿತವರಲ್ಲಿ ಕೆಲವರು ಮುಖ ಮುಖ ನೋಡಿಕೊಳ್ಳುತ್ತಿದ್ದುದು ಅವಳ ಗಮನಕ್ಕೆ ಬರದೇ ಹೋಗಲಿಲ್ಲ.

ಮೂರೂ ಸಾಲಿಗೆ ಬಡಿಸಿ ಮುಗಿಸುವ ತನಕ ತಲೆ ಎತ್ತದ ಅವಳು ಕೊನೆಯ ಎಲೆಗೆ ಬಂದಾಗ ತಲೆ ಎತ್ತಿದರೆ ಅಲ್ಲಿದ್ದದ್ದು ಅವಳ ಗಂಡ.

“ನಂಗೆ ಇವತ್ತು ತಿಂಡಿ ಕೂಡಾ ಕೊಟ್ಟಿಲ್ಲ. ತುಂಬಾ ಹೊಟ್ಟೆ ಹಸೀತಿತ್ತು. ಅದಕ್ಕೆ ಹಾಕಿದ್ದ ಕೋಸಂಬರಿ ಪಲ್ಯ ಉಪ್ಪಿನಕಾಯಿ ಎಲ್ಲ ತಿಂದೇಬಿಟ್ಟೆ!” ಅಂದ ಅವನ ಮುಖ ನೋಡಿದರೆ ಅವನು ತನಗೆ ತಾನೇ ಮಾತಾಡಿಕೊಳ್ಳುತ್ತಿದ್ದುದು ಸ್ಪಷ್ಟವಿತ್ತು. ಆದ್ರೆ, ಮರುಗಳಿಗೆಯೇ ಇವಳನ್ನು ಕಂಡವನು “ನಾಚಾರೂ, ಹೊಸ ಸೀರೆ ಉಟ್ಟೆಯಾ? ಎಲ್ರು ಹೇಳಿದ ಹಾಗೆ, ನಾನೇ ಸೀರೆಗೆಲ್ಲ ಚೆನ್ನಾಗಿ ಬಳಪದ ಕಲ್ಲಿನ ಪುಡಿ ಸವರಿದೆ. ಉಟ್ಕೊಳ್ಳೋಕೆ ನಯವಾಗಿರತ್ತೆ ಅಂದ್ರು. ಚೆನ್ನಾಗಿದೆ ಅಲ್ವಾ?” ಎಂದು ಕೇಳಿದವನು ಮರುಕ್ಷಣವೇ, ”ಕೃಷ್ಣ ಎಲ್ಲಿ? ಅವನು ಊಟಕ್ಯಾಕೆ ಕೂತಿಲ್ಲ? ಇನ್ನೂ ಹೊಟ್ಟೆ ಹಸಿ ಇಲ್ವಂತಾ ಅವನಿಗೆ?” ಎಂದ. ಕಳೆದ ಹದಿನೈದು ದಿನ ಏನಾಗಿದೆ ಎನ್ನುವುದರ ಲವಲೇಶ ಅನುಭವವೂ ಅವನಿಗಿರಲಿಲ್ಲ ಎಂಬುದು ಸುಲಭವಾಗಿ ಕಾಣುತ್ತಿತ್ತು.

ಅವಳ ಸಹನೆಯ ಮಿತಿ ಮೀರಿತ್ತು. ಅವಳ ದನಿ ಅಷ್ಟು ಜೋರಾಗಬಹುದು ಅನ್ನುವುದರ ಅರಿವು ಅಲ್ಲಿಯತನಕ ಅವಳಿಗೇ ಇದ್ದಿರಲಿಲ್ಲ.

“ನೀವೆಂಥ ಮನುಷ್ಯರು? ಪ್ರಾಣಿಗಳಿಗೇ ನಿಮಗಿಂತ ದಯೆ ಕರುಣೆ ಸಹಾನುಭೂತಿ ಇರುತ್ತೆ. ಎಲ್ಲರ ಮುಂದೆ ನನ್ನ ಸೀರೆ ಜಾರಿ, ಅವಮಾನವಾಗಲಿ ಎನ್ನೋದು ತಾನೇ ನಿಮ್ಮ ಉದ್ದೇಶ ಅಂತ ನನಗೆ ಗೊತ್ತಾಗಿಲ್ಲ ಅಂದುಕೊಂಡಿರಾ? ನೀವೆಲ್ಲ ಏನು ದುಶ್ಶಾಸನನ ವಂಶಜರೇನು? ನಿಮ್ಮ ದುಷ್ಟ ಯೋಚನೆ ತಿಳಿದ ಕೂಡಲೇ, ನೋಡಿರೋ, ಹೇಗೆ ಗಂಟು ಬಿಗಿದಿದ್ದೇನೆ ಅಂತ? ಇಂಥ ನಾಯಿಗಳ ಮುಂದೆ ಒಂದು ಕ್ಷಣ ಕೂಡ ಮಾತನಾಡಲು ನನಗೆ ಮನಸ್ಸಾಗುತ್ತಿಲ್ಲ. ಆದರೆ, ನಾನು ಹೇಳುವುದನ್ನು ಹೇಳಿಯೇ ಹೋಗೋದು”

ಕುಳಿತವರೆಲ್ಲರೂ ಕಲ್ಲುಗಟ್ಟಿಹೋಗಿದ್ದರು.

“ಆ ದರಿದ್ರ ಗೊಂಗುಂಗೆ ಎಣ್ಣೆ ಕುಡಿದು, ನನ್ನ ಗಂಡನಿಗೆ ಹುಚ್ಚು ಹಿಡಿಯಿತು. ಮಗ ಸತ್ತೇ ಹೋದ. ಆ ಕುತ್ತಾಲನಾಥ ನನ್ನನ್ನೇ ಕರೆದುಕೊಂಡು ಹೋಗಿದ್ದರೆ ಚೆನ್ನಾಗಿತ್ತು. ಗಂಟಲುರಿಯನ್ನು ತಾಳದೆ, ನಾನು ಪ್ರಾಣ ಕಳೆದುಕೊಳ್ಳಲೆಂದು ಬಾವಿಗೆ ಹಾರಿದರೆ, ಅಲ್ಲಿಯೂ ನನ್ನ ಅದೃಷ್ಟ ಕಮ್ಮಿಯಾಗಿರಬೇಕೇ?”

“ಕತ್ತಿನ ಮಟ್ಟ ನೀರಿನಲ್ಲಿ, ಉರಿಯ ಕಡೆ ಗಮನ ಹೋಗಬಾರದೆಂದು, ನಾನು ನನ್ನ ಮನಸ್ಸಿಗೆ ಬಂದ ಶ್ಲೋಕಗಳನ್ನೂ, ಪದ್ಯಗಳನ್ನೂ ಜೋರಾಗಿ ಹೇಳಿಕೊಳ್ಳುತ್ತಿದ್ದರೆ, ನೀವೇನೆಂದುಕೊಂಡಿರಿ? ಜ್ಯೋತಿಷ್ಮತಿ ತೈಲ ಕುಡಿದು ನಾನು ಪಂಡಿತೆಯಾದೆ ಎಂದುಕೊಂಡಿರಿ ಅಲ್ಲವೇ? ನೀವು ಮನುಷ್ಯರಾಗಿದ್ದರೆ, ನನ್ನನ್ನು ಅಲ್ಲೇ ಸಾಯಲು ಬಿಡಬೇಕಿತ್ತು. ಹೊರಗೆಳೆದು ಎಂಥಾ ಕೆಲಸ ಮಾಡಿದಿರಿ? ನನ್ನ ಪಾಂಡಿತ್ಯದ ಹಿಂದೆ ಎಷ್ಟು ವರ್ಷಗಳ ಅಧ್ಯಯನ, ಪ್ರಯತ್ನ ಇತ್ತು ಎನ್ನುವುದನ್ನು ನೀವು ಗುರುತಿಸದೇ ಹೋದಿರಿ”

“ಒಬ್ಬ ಹೆಂಗಸು ನಿಮಗಿಂತ ಹೆಚ್ಚಿಗೆ ಕಲಿತಿರಬಹುದು ಅನ್ನುವ ಸಂಗತಿಯನ್ನೇ ನಿಮಗೆ ಅರಗಿಸಿಕೊಳ್ಳಲಾಗಲಿಲ್ಲ. ಅಲ್ಲವೇ? ಅದಕ್ಕೆ, ನನ್ನ ಗಂಡನ ಕೈಯಲ್ಲೇ, ನನಗೆ ಅವಮಾನವಾಗುವಂತೆ ಸೀರೆಗೆ ಬಳಪದ ಪುಡಿ ಮೆತ್ತಿಸಿದಿರಿ. ಇಂಥ ಹಾಳೂರಿನಲ್ಲಿ ನಾನು ಇನ್ನೊಂದು ಕ್ಷಣವೂ ಇರಲಾರೆ. ಒಬ್ಬ ಹೆಂಗಸಿಗೆ ಸಲ್ಲಬೇಕಾದ ಗೌರವ ಕೊಡಲು ತಿಳಿಯದ ನಿಮ್ಮಂಥವರ ನಡುವೆ ಇರುವುದಕ್ಕಿಂತ, ಹಾಳು ಬಾವಿಗೆ ಬಿದ್ದು ಸಾಯುವುದೇ ಮೇಲು. ಆದರೆ ಆತ್ಮಹತ್ಯೆ, ಮಹಾಪಾಪ. ಭೂಮಿ ದೊಡ್ಡದಾಗಿದೆ. ಎಲ್ಲಾದರೂ ಬದುಕಿಕೊಳ್ಳುತ್ತೇನೆ. ಆದರೆ, ಒಂದು ನೆನಪಿಟ್ಟುಕೊಳ್ಳಿ. ಇದು ನನ್ನ ಶಾಪ ಎಂದೇ ಎಂದುಕೊಳ್ಳಿ. ಇಲ್ಲಿ ಉಳಿದ ನೀವುಯಾರೂ ಉದ್ಧಾರವಾಗುವುದಿಲ್ಲ.

ಅದೇ ಕ್ಷಣ ಮನೆಯಿಂದ ಹೊರನಡೆದಿದ್ದಳು ಅವಳು.

~~~~

ಮಲಗಿದಲ್ಲೇ ಮಗ್ಗುಲಾಗುತ್ತಿದ್ದಂತೆ, ಲಕ್ಷ್ಮೀಕೇಶವನ ದೇವಸ್ಥಾನದ ಗಂಟೆ ಬಾರಿಸಿದ್ದು ಕೇಳಿಸಿತು. ಅಲ್ಲಿಂದಲೇ ಕೈಮುಗಿದಳು ನಾಚಾರಮ್ಮ.

ಮತ್ತೆ ಮನಸ್ಸಿನಲ್ಲಿ ಚಕ್ರ ಸುತ್ತಲು ಆರಂಭಿಸಿತ್ತು.

ಊಟದ ಮನೆಯಿಂದ ಹೊರಬಿದ್ದ ನನ್ನ ಹಿಂದೆಯೇ ಎಷ್ಟೋ ಜನರು ಬಂದು ಕಾಲಿಗೆ ಬಿದ್ದರಲ್ಲ! ನಮ್ಮನ್ನು ಕ್ಷಮಿಸು ಎಂದರಲ್ಲ!

“ಅದೇನೇ ಇರಲಿ. ನನಗೆ ಅವಮಾನ ಮಾಡಿದ ಈ ಹಾಳೂರಿನಲ್ಲಿ ನಾನಿರಲಾರೆ. ಬೇಕಿದ್ದರೆ ನನ್ನ ಜೊತೆ ನೀವೂ ಬನ್ನಿ. ನಾನು ತಡೆಯಲಾರೆ” ಎಂದಿದ್ದೆ ನಾನು. ಹುಲಿಗೆ ತನ್ನಕಾಡೇನು? ಪರರ ಕಾಡೇನು?

ಇಲ್ಲಿಗೆ ಬರುವ ಮೊದಲು ಅದೆಷ್ಟು ಊರುಗಳನ್ನು ದಾಟಿ ಬಂದದ್ದು? ನೂರಾರು ಹಳ್ಳ ಕೊಳ್ಳಗಳು – ಬೆಟ್ಟ ನದಿಗಳು . ತಾಮ್ರಪರ್ಣಿ – ಪೂರ್ಣಾ – ಪಂಪಾ, ಪಯಸ್ವಿನಿ, ಕಾವೇರಿ ,ಹೇಮಾವತಿ, ಎಲ್ಲವನ್ನೂ ದಾಟಿ ಬಂದೆವಲ್ಲ! ಜೊತೆಯಲ್ಲಿ ನೂರಾರು ಜನ. ನಮ್ಮ ಕಹಿ ನೆನಪುಗಳು ಹಿಂಬಾಲಿಸದಷ್ಟು ದೂರಕ್ಕೆ ಹೊರಟುಹೋಗಬೇಕು ಎನ್ನುವುದೊಂದೇ ಗುರಿ ಎಲ್ಲರಿಗೂ. ನಡುವೆ ನಿಂತ ಕಡೆ ಒಟ್ಟಿಗೆ ಅಡುಗೆ -ಊಟ. ಉಂಡ ಮೇಲೆ ವೆತ್ತಲೆ-ಪಾಕು### ಮೆದ್ದು, ಎಲ್ಲರೂ ಕೂಡಿ ಕುಳಿತು ಹಾಡುವುದು, ನಂತರ ಮಲಗುವುದು. ಮತ್ತೆ ಮರುದಿನ ಮುಂದಕ್ಕೆ ಪಯಣ. ಹೀಗೆ ನಡೆಯುತ್ತಲೇ ಇತ್ತು ನಮ್ಮ ದಿನಚರಿ.

ಹೆಣ್ಣುಮಕ್ಕಳಿಗೆಲ್ಲ ಗಂಟು ಹಾಕಿ ಸೀರೆ ಉಡುವ ವಿಧಾನ ನಾನೇ ತೋರಿಸಿಕೊಟ್ಟೆ. ಹಿಂದೆ ಆದ ಅನುಭವದಿಂದ ಪಾಠ ಕಲಿತವರು ತಾನೇ ಜಾಣರು? ನನ್ನನ್ನು ಹಾಸ್ಯಮಾಡಿಹೋದ ಈ ಹುಡುಗಿಯರಿಗೆ ನನ್ನ ಕಥೆ ಗೊತ್ತೋ ಗೊತ್ತಿಲ್ಲವೋ? ಆದರೆ, ನನ್ನಂತೇ ಗಂಡೀಸೀರೆಯನ್ನೇ ಉಡುತ್ತಾರಲ್ಲ! ಮನಸ್ಸು ಸಣ್ಣಗೆ ಸಮಾಧಾನದ ನಗೆ ಚೆಲ್ಲಿತು.

ಒಂದು ಚೈತ್ರಮಾಸದ ಚತುರ್ದಶಿಯ ದಿನ ನಾವಿಲ್ಲಿ ಬಂದದ್ದು. ಗುಡಿಯ ಗಂಟೆಯ ಸದ್ದು ಕೇಳಿ ಅಲ್ಲೇ ಹೋದೆವು ಎಲ್ಲರೂ. ಈ ಕೌಶಿಕದ# ಊರದೇವರು ಲಕ್ಷ್ಮೀಕೇಶವನಿಗೆ ಉತ್ಸವಕಾಲ ಅದು.

ನಮ್ಮೂರಿನ ಕಡೆಯ ದೇವಾಲಯಗಳಂತೆ, ಭಾರೀ ಕಟ್ಟಡವಿಲ್ಲ. ಆದರೆ, ಮೂರ್ತಿಯ ಮುಖ ಅದೆಷ್ಟು ಮುದ್ದೋ! ಸಂಜೆ ಕಥಾ ಕಾಲಕ್ಷೇಪ ನಡೆಯುತ್ತಿತ್ತು. ನನ್ನ ಜೊತೆ ಬಂದವರಿಗೆಲ್ಲ ಇನ್ನೂ ಇಲ್ಲಿನ ಭಾಷೆ ಹೊಸತು. ಅಷ್ಟಾಗಿ ತಿಳಿಯುತ್ತಿರಲಿಲ್ಲ. ಆದರೆ, ಈ ನಾಚಾರಮ್ಮ ಎಂಥವಳು? ಈ ನಾಡಿಗೆ ಕಾಲಿಟ್ಟ ಕೆಲದಿವಸಗಳಲ್ಲೇ ಇಲ್ಲಿನ ಕರ್ನಾಟಭಾಷೆಯನ್ನು ಕಲಿತಾಗಿತ್ತಲ್ಲ! ನಾನೇ ಸಾರಾಂಶವನ್ನು ನನ್ನ ಜೊತೆಯವರಿಗೆ ನಮ್ಮ ನುಡಿಯಲ್ಲೇ ತಿಳಿಯುವಂತೆ ಹೇಳುತ್ತಿದ್ದೆ.  ಕಥೆ ಮುಗಿದ ಮೇಲೆ ಭಾಗವತರ ಜೊತೆ ಒಂದಷ್ಟು ಸಂಸ್ಕೃತದಲ್ಲಿ, ಕರ್ನಾಟ ಭಾಷೆಯಲ್ಲಿ ಮಾತಾಡಿದೆ. ಇದು ಹೊಯ್ಸಳರ ನಾಡಂತೆ. ಚಾಲುಕ್ಯ ವಲ್ಲಭರ ಮಾಂಡಲಿಕರಂತೆ ಅವರು. ಓ, ಅಪ್ಪ ಹೇಳುತ್ತಿದ್ದ ವಿಜ್ಜಿಕೆಯೂ ಈ ಕರ್ನಾಟ ದೇಶದವಳೇ, ಇದೇ ಚಾಲುಕ್ಯ ವಂಶದವರೇ ಅಲ್ಲವೇ ಎನ್ನುವುದೂ ನೆನಪಿಗೆ ಬಂತು. ಒಬ್ಬ ಕಲಿತ ಹೆಣ್ಣು ಈ ನೆಲದಲ್ಲಿ ಮಾನವಂತಳಾಗಿ ನಿಲ್ಲಬಹುದೆನಿಸಿತು.  ಇನ್ನೆಷ್ಟು ದಿನ ಅಲೆಮಾರಿ ಜೀವನ?

ನನ್ನ ಜೊತೆಯವರಿಗೆಲ್ಲ ಹೇಳಿದೆ.

“ಈ ಊರು ನಮಗೆ ಒಗ್ಗುವಂತೆ ಕಾಣುತ್ತಿದೆ. ಊರ ಮುಖಂಡರೊಂದಿಗೆ ಮಾತಾಡಿ, ನಮಗೆ ಇಲ್ಲಿ ಇರಬೇಕೆಂಬ ಬಯಕೆ ಇದೆ ಎಂಬ ಸಂಕೇತವನ್ನು ಕೊಡೋಣ. ಅವರು ಒಪ್ಪಿದಲ್ಲಿ, ಇಲ್ಲೆ ನೆಲೆ ಊರೋಣ. ಕಷ್ಟ ಪಟ್ಟು ದುಡಿಯೋಣ. ಹಾಲಲ್ಲಿ ಸಕ್ಕರೆ ಬೆರೆಸಿದ ರೀತಿ ಬದುಕೋಣ.”

ಅಲ್ಲಿಂದ ಇಲ್ಲಿಗೆ ಮುನ್ನಡೆಸಿಕೊಂಡು ಬಂದ ನನ್ನ ಮಾತಿಗೆ ಎದುರಾಡುವ ಮನಸ್ಸು ನಮ್ಮ ಸಂಘದಲ್ಲಿ ಯಾರಿಗೂ ಇರಲಿಲ್ಲ.

~~~~

ನೀರಿಗೆ ಹೋದ ನೀರೆಯರು ಮನೆ ಬಾಗಿಲಿಗೆ ಬಂದ ಸದ್ದಾಯಿತು. ಎಂಥ ಚೆಂದದ ಹುಡುಗಿಯರು! ಜೀವನದ ಕಳವಳವೇನೆಂದೇ ಅರಿಯದ ಕೂಸುಗಳು.

“ಈ ಹೆಣ್ಣುಗಳ ಜೀವನ ಸದಾಕಾಲ ಹೀಗೇ ಇರಿಸಪ್ಪ ಕೌಶಿಕೇಶ, ನಾ ಕಂಡ ಕಷ್ಟ ಯಾರಿಗೂ ಬಾರದಿರಲಿ” ಎಂದು ಸ್ತೋತ್ರ ಮಾಡಲಾರಂಭಿಸಿದ ನಾಚಾರಮ್ಮನಿಗೆ ನಿದ್ದೆ ಯಾವಾಗ ಬಂತೋ ತಿಳಿಯಲಿಲ್ಲ.

===============================================================================================

ಟಿಪ್ಪಣಿಗಳು:

* : ಕುತ್ತಾಲನಾಥ – ಈಗಿನ ಕೇರಳ ತಮಿಳುನಾಡು ಗಡಿಯಲ್ಲಿರುವ ಒಂದು ಪ್ರವಾಸೀ ಸ್ಥಳ ಕುಟ್ರಾಲಂ. ಅಲ್ಲಿ ಕುಟ್ರಾಲನಾಥನ ಗುಡಿ ಇದೆ.

** : ಶೆಂಕೋಟೆ – ಈಗಿನ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಇರುವ ಒಂದು ತಾಲೂಕು ಕೇಂದ್ರ – ಸೆಂಗೋಟ್ಟೈ. ಕುಟ್ರಾಲಂ ಇರುವುದು ಸೆಂಗೋಟ್ಟೈ ತಾಲೂಕಿನಲ್ಲಿಯೇ.

*** : ಘಟ್ಟದ ಮೇಲಿನ ಭಾಷೆ – ಘಟ್ಟದ ಕೆಳಗಿನ ಭಾಷೆ – ಈ ಕಥೆ ನಡೆದಿರಬಹುದಾದ  ಕ್ರಿ.ಶ. ೧೦ ನೇ ಶತಮಾನದ ಸಮಯದಲ್ಲಿ ತಮಿಳು ಮಲೆಯಾಳಂಗಳು ಎರಡು ಕವಲೊಡೆಯುತ್ತಿದ್ದವು.

# : ಕೌಶಿಕ – ಹಾಸನದ ಬಳಿ ಇರುವ ಒಂದು ಹಳ್ಳಿ. ಶಂಕೋಟೆಯಿಂದ ಬಂದ ನಾಚಾರಮ್ಮನ ಗುಂಪು ಮೊದಲು ನೆಲೆ ನಿಂತಿದ್ದು ಇಲ್ಲೇ ಎಂದು ಪರಂಪರೆಯಿಂದ ಬಂದ ನಂಬಿಕೆ. ಇಲ್ಲಿ ಲಕ್ಷ್ಮೀ ಕೇಶವನ ಗುಡಿ ಇದೆ. ಇದೇ ಗುಡಿಯಲ್ಲಿ ಈಗ ನಾಚಾರಮ್ಮನದ್ದೆಂದು ಗುರುತಿಸುವ ವಿಗ್ರಹವೂ ಇದೆ.

##: ಅಭಿಗಾರ = ಊಟಕ್ಕೆ ಬಡಿಸುವ ತುಪ್ಪ

###: ವೆತ್ತಲೆ ಪಾಕು = ಎಲೆ ಅಡಿಕೆ

ವಿಕಿಪಿಡಿಯಾದಲ್ಲಿ ಸಂಕೇತಿ ಜನರ ಬಗ್ಗೆ, ಸಂಕೇತಿ ನುಡಿಯ ಬಗ್ಗೆ ಇರುವ ಬರಹಗಳಿಗೆ ಇಲ್ಲಿ ಕೊಟ್ಟ ಕೊಂಡಿಗಳನ್ನು  ಚಿಟುಕಿಸಿ.