ಮೊನ್ನೆ ಮೊನ್ನೆ ತನಕ ನಾನು ಸಂಕಟಮೋಚನ ಹನುಮಂತನ ಗುಡಿಯ ವಿಷಯ ಕೇಳೇ ಇರಲಿಲ್ಲ. ಈಚೆಗೆ ಇಬ್ಬರು ಮೂವರು ಜಾಗ ಚೆನ್ನಾಗಿದೆ ಅಂತ ಹೇಳಿದ್ದು ಕೇಳಿಬಂತು. ಇಲ್ಲೇ ಹತ್ತಿರದಲ್ಲೇ ಇದೆಯಲ್ಲ, ಒಂದು ಸಲ ಯಾಕೆ ಹೋಗಿ ಬರಬಾರದು ಅಂತ ಹೊರಟಿದ್ದಾಯಿತು. ವೆಬ್ ಸೈಟ್ ನಲ್ಲೆ ಎಚ್ಚರಿಗೆ ಹಾಕಿದ್ದರು – ಯಾಹೂ ಮ್ಯಾಪ್ಸ್ ಹಿಡಿದ್ರೆ ಎತ್ಲಾಗೋ ತೊಗೊಂಡು ಎಲ್ಲಿಗೋ ಕಳಿಸ್ಬಿಡಬಹುದು. ಇನ್ನು ಜಿಪಿಎಸ್ ನೂ ನಂಬ್ಲೇ ಬೇಡಿ ಅಂತ. ಸರಿ ಅಂತ ದಾರಿಯನ್ನೇನೋ ಒಂದ್ ಚೀಟಿ ಮೇಲೆ ಗುರುತು ಹಾಕ್ಕೊಂಡಾಯ್ತು.

ಇನ್ನೇನು ಹೊರಟೇ ಆಯ್ತು ಅನ್ನೋ ಹೊತ್ತಿಗೆ ನೋಡ್ದ್ರೆ ಭಾನುವಾರ ಬರ್ಲೇಬೇಡಿ ಅಂತ ಹಾಕ್ಬಿಟ್ಟಿದಾರೆ! ಸರಿ. ಬುತ್ತಿಗೆ ಅಂತ ಮಾಡಿದ್ದೂಟವನ್ನ ಮನೆಯಲ್ಲೇ ತಿಂದಿದ್ದಾಯ್ತು.

ಪುಣ್ಯಕ್ಕೆ, ಈ ವಾರ ಲೇಬರ್ ಡೇ ಅಂತ ಸೋಮವಾರ ಕೂಡ ರಜಾ ಇತ್ತಲ್ಲ ಹೊಸದಾಗಿ ಬುತ್ತಿ ಕಟ್ಟಿಕೊಂಡು ಹೊರಟ್ವಿ.

ಒಂದು-ಒಂದೂಕಾಲು ಗಂಟೆ ಪ್ರಯಾಣ ಸುಮಾರು ನಮ್ಮ ಮನೇ ಇಂದ. ಗಿಲ್ರಾಯ್ ದಾಟಿ ಹೆಕರ್ಸ್ ಪಾಸ್ ಹೈವೇನಲ್ಲಿ ಪಶ್ಚಿಮಕ್ಕೆ ತಿರುಗಿ ಹೋಗ್ತಿದ್ರೆ, ಎರಡೂ ಕಡೆ ದ್ರಾಕ್ಷಿ ತೋಟಗಳ, ದ್ರಾಕ್ಷಾರಸ ತಯಾರ್ಸೋ ವೈನರಿಗಳದ್ದೇ ಕಾರುಬಾರು.

ದ್ರಾಕ್ಷಿಯ ತೋಟ
ದ್ರಾಕ್ಷಿಯ ತೋಟ

ಒಂದೊಂದು ಗಿಡದಲ್ಲೂ ಜೊಂಪೆ ಜೊಂಪೆಯಾಗಿ ನೇತಾಡ್ತಿರೋ ಕರೀ ದ್ರಾಕ್ಷಿ.  ಸ್ವಲ್ಪ ಹತ್ತಿರ ನೋಡೋಣ ಅಂತ ಹೋಗಿ ಹಣ್ಣಿನ ರುಚಿ ನೋಡಿದ್ದೂ ಆಯ್ತು.

DSCN6242

ದೂರದ ಬೆಟ್ಟಗಳಲ್ಲಿ ಇನ್ನೂ ಹೇಮಂತ ಋತು ಬರ್ದೇ ಇದ್ರೂ, ಆಗಲೆ ಅಲ್ಲಲ್ಲಿ ಬಣ್ಣ ಕಾಣ್ತಾ ಇದೆ.

DSCN6248

ಕೊನೇ ಹತ್ತು ಹದಿನೈದು ಮೈಲಿ ಬೆಟ್ಟಗಳ ಮೇಲೆ.  ಸುತ್ತ ರೆಡ್ ವುಡ್ ಮರಗಳ ಕಾಡು. ಪುಣ್ಯಕ್ಕೆ ರಸ್ತೆ ಕಡಿದಾಗಿದ್ರೂ, ತಲೆ ತಿರ್ಗೋ ಹಾಗಿಲ್ಲ ಸದ್ಯ. ಅಷ್ಟರಲ್ಲಿ ಮೌಂಟ್ ಮಡೋನ ಕೌಂಟಿ ಪಾರ್ಕ್ ಅನ್ನೋ ಗುರುತು ಕಣ್ಣಿಗೆ ಬಿತ್ತು.

DSCN6233

ಒಳಕ್ಕೆ ತಿರಿಗಿಕೊಂಡ ಮೇಲೆ, ರಸ್ತೆ ಸ್ವಲ್ಪ ಇನ್ನೂ  ಚಿಕ್ಕದಾಯಿತು. ಕಾಡು ಮತ್ತೂ ದಟ್ಟ.  ಅದೇ ರಸ್ತೆಯಲ್ಲೇ ಕೆಲವು ಮೈಲಿ ಮುಂದೆ ಹೋದ ಮೇಲೆ ಮೌಂಟ್ ಮಡೋನ  ಸೆಂಟರ್ ಸಿಕ್ಕಿತು.  ಹೋಗಿ  ವಾಹನ ನಿಲ್ಲಿಸಿದರೆ, ಪ್ರಶಾಂತವಾದ ಜಾಗ.

ಒಂದು ಕಡೆ ನೋಡಲು ಪಹಾರೊ ನದಿಯ ಬಯಲು.

ಪಹಾರೊ ನದಿ ಬಯಲು
ಪಹಾರೊ ನದಿ ಬಯಲು

ಇನ್ನೊಂದು ಕಡೆ ಕೆಲವು ಮೆಟ್ಟಲನ್ನೇರಿದರೆ ಸಂಕಟ ಮೋಚನ ಹನುಮಂತನ ಮಂದಿರ.

ಸಂಕಟ ಮೋಚನ ಹನುಮಂತನ ಗುಡಿ
ಸಂಕಟ ಮೋಚನ ಹನುಮಂತನ ಗುಡಿ

ಪುಟ್ಟ ಗುಡಿಯೊಳಗೆ ಬೆಟ್ಟ ವನ್ನು ಹೊತ್ತಿರುವ ಹನುಮಾನ್.

ಹನುಮಾನ್
ಹನುಮಾನ್

ನಂತರ ಅಲ್ಲೇ ಸ್ವಲ್ಪ ಸುತ್ತಾಡಿದ ನಂತರ ಆಸರೆಗೆ ಏನಾದರೂ ಸಿಗುವುದೋ ಅಂತ ಹೋಗಿ ನೋಡಲು ಸಿಕ್ಕಿದ್ದು ಆಂಜನೇಯಾಸ್ ವರ್ಲ್ಡ್ ಕೆಫೆ. ಆದ್ರೆ ನಾವು ಹೋದಾಗ ಮುಚ್ಚಿತ್ತು.

ವರ್ಲ್ಡ್ ಕ್ಲಾಸ್ ಕೆಫೆ :)
ವರ್ಲ್ಡ್ ಕ್ಲಾಸ್ ಕೆಫೆ 🙂
ವರ್ಲ್ಡ್ ಕ್ಲಾಸ್ ಮೆನು

ವರ್ಲ್ಡ್ ಕ್ಲಾಸ್ ಮೆನು

ಸರಿ. ಮತ್ತೊಮ್ಮೆ ಹನುಮಂತನಿಗೆ ಕೈಮುಗಿದು ಹೊರಟಿದ್ದಾಯ್ತು. ದಾರೀಲಿ ಸಿಕ್ಕ ರೆಡ್ ವುಡ್ ತೋಪಿನಲ್ಲಿ ಬುತ್ತಿ ಊಟ ಮುಗಿಸಿದ್ದೂ ಆಯ್ತು. ನಂತರ ಎತ್ತರದ ಮರಗಳ ತಣ್ಣೆಳಲಲ್ಲಿ ಸ್ವಲ್ಪ ಸುತ್ತಾಟ.

DSCN6201

DSCN6209

ಎಲ್ಲಾ  ಆದ್ಮೇಲೆ ಇನ್ನೇನು? ಮತ್ತೆ ಇನ್ನೊಮ್ಮೆ ಬರಬೇಕು ಇಲ್ಲಿ ಅನ್ನುವ ಮಾತುಗಳೊಡನೆ ಮನೆಗೆ ಪಯಣ!

DSCN6249

-ನೀಲಾಂಜನ

Advertisements