ನಾನು ಈ ಮೊದಲು ಪುತಿನ ಅವರನ್ನು ಹೆಚ್ಚೇನೂ ಓದಿಕೊಂಡಿರಲಿಲ್ಲ. ಏನೋ ಅಲ್ಲಲ್ಲಿ ಕೇಳಿದ ಹಾಡುಗಳು -ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆನು, ಕೃಷ್ಣನ ಕೊಳಲಿನ ಕರೆ, ಮಳೆಯು ನಾಡ ತೊಯ್ಯುತಿರೆ, ನಿಲ್ಲಿಸದಿರು ವನಮಾಲಿ ಕೊಳಲಗಾನವಾ ಮೊದಲಾದ ಬಿಡಿಗವನಗಳಷ್ಟನ್ನೇ ಓದಿದ್ದೆ, ಹಾಡಿದ್ದೆ. ಮತ್ತೆ ಕೆಲವು ವರ್ಷಗಳ ಹಿಂದೆ ಅವರ ಗೋಕುಲ ನಿರ್ಗಮನ ನೃತ್ಯನಾಟಕದ ಒಂದು ರಂಗಪ್ರಯೋಗವನ್ನು ನೋಡಿದಾಗ ಅದರಲ್ಲಿನ ಸಂಗೀತ ಸಾಹಿತ್ಯಗಳ ಸಮ್ಮೇಳಕ್ಕೆ ಬೆರಗಾಗಿದ್ದೆ. ಮತ್ತೆ ಮೊನ್ನೆ ಅವರದೇ ಶ್ರೀರಾಮಪಟ್ಟಾಭಿಷೇಕದ ಪ್ರಯೋಗ ನೋಡಿದಮೇಲೆ, ಹಾಡುಗಳನ್ನು ಒಮ್ಮೆ ಶುರುವಿಂದ ಕೊನೆಯವರೆಗೆ ಓದಬೇಕೆನಿಸಿ ಕುಳಿತು ಓದಿದ್ದೂ ಆಯಿತು.

ಪುತಿನ ಅವರು ರಾಮಾಯಣದ ಕಥೆಯನ್ನಾಧರಿಸಿ ಐದಾರು ನೃತ್ಯನಾಟಕಗಳನ್ನು ಬರೆದಿದ್ದಾರೆ. ಅಹಲ್ಯೆ, ಶಬರಿ, ಹರಿಣಾಭಿಸರಣ ಮೊದಲಾದ ನಾಟಕಗಳಲ್ಲಿ ಮುಂದುವರೆಯುವ ರಾಮಾಯಣದ ಕಥೆ ಕೊನೆಗೊಳ್ಳುವುದು ಶ್ರೀರಾಮ ಪಟ್ಟಾಭಿಷೇಕದಲ್ಲಿ. ಕಥೆ ಎಲ್ಲರಿಗೂ ಗೊತ್ತಿರುವುದೇ ಆದರೂ ಕವಿ, ಅದನ್ನು ಹೇಳುವ ರೀತಿ ಹೆಚ್ಚಾಯದ್ದು. ಒಂದುಕಡೆಗೆ ಸಂಸ್ಕೃತ ಪದಗಳೇ ತುಂಬಿದ ವೃತ್ತಗಳಿಂದ ಹಿಡಿದು, ಜಾನಪದ ಧಾಟಿಯಲ್ಲಿ ಬರುವ ಹಾಡುಗಳ ತನಕ ಅದರ ವಿಸ್ತಾರ. ಜೊತೆಗೆ ಕವಿಯೇ ಹಾಡುಗಳಿಗೆ ಸಂಗೀತವನ್ನೂ ಒದಗಿಸಿ ವಾಗ್ಗೇಯಕಾರನಾಗಿರುವುದರಿಂದ ಒಂದೊಂದು ಹಾಡೂ ಕೂಡ ಮತ್ತೆ ಮತ್ತೆ ಕೇಳುವಂತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಪುತಿನ ಅವರೇ ಮುನ್ನುಡಿಯಲ್ಲಿ ಹೇಳಿರುವಂತೆ, ಅವರು ಸಂಗೀತವನ್ನು ಸಾಂಪ್ರದಾಯಿಕವಾಗಿ ಕಲಿಯದೇ ಹೋಗಿದ್ದರಿಂದ ಒಳ್ಳೆಯದೇ ಆಗಿದೆ. ಬಹಳ ಕಟ್ಟುಪಾಡುಗಳಿಗೆ ಒಳಗಾಗದೆ, ಎಷ್ಟೋ ಪ್ರಸಿದ್ಧ ರಾಗಗಳಲ್ಲಿ, ಮತ್ತೆ ಕೆಲವು ಇಂತಹದ್ದೇ ಎಂದು ಹೆಸರಿಸಲು ಆಗದೇ ಇರುವಂತಹ ಹೊಸ ಸೊಗಡಿರುವ ರಾಗಗಳಲ್ಲೂ ಅವರ ಲಹರಿ ಹರಿದಿದೆ.

ಶ್ರೀರಾಮ ಪಟ್ಟಾಭಿಷೇಕದ ಕಥೆ ಆರಂಭವಾಗುವುದು ರಾಮ ರಾವಣನನ್ನು ಕೊಂದ ನಂತರ. ಆದಿಕವಿ ವಾಲ್ಮೀಕಿಯನ್ನು “ವಂದೇ ವಾಲ್ಮೀಕಿ ಕೋಕಿಲಂ” ಎಂದು ನಮಿಸುತ್ತಾ ಬರುವ ಕಥೆ ಹೇಳುವ ಕಥಕ ವೃಂದವವರು , ರಾವಣನಮೇಲೆ ವಿಜಯ ಸಾಧಿಸಿದ ರಾಮನಿಗೆ “ಜಯಜಯ ವಿಜಯೀ ರಘುರಾಮ, ಶ್ರುತಿಮನೋಹರ ಪ್ರಿಯನಾಮ, ವಿಜಿತದುರಾಸದ ಕಾಮ, ಸುಜ್ಞಪುರಸ್ಕೃತಗುಣಧಾಮ, ಸದ್ಭಾವಸಾಮ್ರಾಜ್ಯ ಸಾರ್ವಭೌಮ” ಎಂದೆಲ್ಲಾ ಹಾಡಿ ಹೊಗಳುತ್ತಾರೆ. ಸಾಂಪ್ರದಾಯಿಕವಾಗಿ ಮಂಗಳಕಾರಿ ಎನಿಸಿದ ಸೌರಾಷ್ಟ್ರ ರಾಗದಲ್ಲಿರುವ ಈ ಹಾಡಿನಲ್ಲಿ, ರಾಮನು ರಂಗದ ಮೇಲೆ ಮಂಗಳಕಾರಿಯಾಗಿ ಬರಲಿ ಎನ್ನುವ ಆಶಯ ಕಾಣುತ್ತೆ.

ಆರಂಭವೇನೋ ಮಂಗಳವೇ. ರಾಮ ರಂಗಕ್ಕೆ ಬರುವುದನ್ನೇ ಕಾಯುತ್ತಿರುವ ಕಥಕ ವೃಂದವು ಆ ಮಹನೀಯ ದಾಶರಥಿಯನ್ನು ಕೊಂಡಾಡುವುದನ್ನು ಮುಂದುವರೆಸುತ್ತಾರೆ.  ಅವನನ್ನು ಹಾಡಿ ಹೊಗಳುವ ಐಸಿರಿಗೆ ಹೆಮ್ಮೆ ಪಡುತ್ತಾರೆ. ಹಾಗೆಯೇ, ಅವನ ಚರ್ಯೆಯನ್ನು ಮಾತ್ರ ಅರಿಯುವುದು ಅಷ್ಟು ಸುಲಭವಲ್ಲ ಎಂದು ಮುಂದಾಗಬಹುದಾದ ಅನಾಹುತಕ್ಕೆ ಮುನ್ನುಡಿ ಬರೆಯುತ್ತಾರೆ. ಏಕೆಂದರೆ ಆ ರಾಮನ ಗುಣಗಳೇ ಅಂತಹವು. ಒಂದುಕಡೆ ತಂದೆಯ ಮಾತಿಗೆಂದು ರಾಜ್ಯವನ್ನೇ ತೊರೆದುಬಿಟ್ಟವನು, ಇನ್ನೊಂದು ಕಡೆ ಮಡದಿಯ ಮಾತಿಗೆಂದು ಮಾಯೆಯೆಂದು ತಿಳಿದಿದ್ದೂ, ಮಾರೀಚನ ಬೆನ್ನಟ್ಟುತ್ತಾನೆ. ಒಂದು ಕಡೆ ತಮ್ಮಂದಿರನ್ನು ಪಾಲಿಸುವವನೆಂದು ಹೆಸರುಗಳಿಸಿದ್ದರೆ, ಇನ್ನೊಂದು ಕಡೆ ಅಣ್ಣನನ್ನೇ ಕೊಲ್ಲಹೊರಟ ಸುಗ್ರೀವನ ಪರನಿಲ್ಲುತ್ತಾನೆ. ಕೋತಿಗಳ ಕೈಯಲ್ಲಿ ಸಮುದ್ರಕ್ಕೆ ಸೇತುವೆ ಕಟ್ಟಿಸಿ ರಾಕ್ಷಸರ ಪುರಿಯನ್ನೇ ಮುರಿಯುತ್ತಾನೆ. ಅದಕ್ಕೆಂದೇ,  ಕವಿ ಆ ದಾಶರಥೀ ಮಹನೀಯನ “ಲೋಭ ತ್ಯಾಗಗಳ ಯೋಗವರಿಯೆವಯ್ಯ, ಮಮತೆ ವಿಷಮತೆಯ ಸಮಯವರಿವೆವಯ್ಯ, ಚಿತ್ತಚರಿತೆಗತಿವಿಸ್ಮಿತರಾವಯ್ಯ” ಎನ್ನುತ್ತ ಅವನನ್ನು ಸ್ತುತಿಸುವ ತಮ್ಮ ಭಾಗ್ಯಕ್ಕೆ ಎಣೆಯಿಲ್ಲವೆಂದು ಕಥಕ ವೃಂದದಿಂದ ಹಾಡಿಸುವುದು ಯುಕ್ತವೇ ಆಗಿದೆ. ಹೀಗೆ ಹಾಡುವಾಗಲೇ ಆಂಜನೇಯ ಲಕ್ಷ್ಮಣರ ಸಮೇತ ರಾಮನ ಆಗಮನ. ನೀರೆಯರೆಲ್ಲ ಅವರಿಗೆ ಆರತಿ ಬೆಳಗಿ ಸ್ವಾಗತಿಸುತ್ತಿರುವಷ್ಟರಲ್ಲಿ ಇನ್ನೊಂದೆಡೆಯಿಂದ ಮೇನೆಯಲ್ಲಿ ಕುಳಿತ ಸೀತೆ ರಾಮನ ಬಳಿಸಾರಿ ಬರುತ್ತಾಳೆ. ಸೀತೆ ರಂಗದೊಳಗೆ ಬರುವ ಪರಿಯನ್ನು ಕವಿಯ ಮಾತಲ್ಲೇ ಕೇಳಬೇಕು:

ನೋಡದೋ ಬರುತಿಹಳು
ಭೂದೇವಿಯ ಮಗಳು
ಎಂದೂ ಕಾಣದಿಹ ಚೆಂದದವಳ ನೋಡೇ
ಮಂದಿಯಂದಣವ ಮುತ್ತುತಿಹುದಹಹ
ಅಂದು ಖರಹರನ ಕಂಡ ಸೊಗಮರುಕೊಳೆ
ಮಂದಗಮನದೊಳು ಗಂಡನ ಸನಿಯಕೆ

ಊರವರೆಲ್ಲ, ಇಂತಹ ಮಂದಗಮನೆಯ ಮೊಗವನ್ನು ನೋಡಲು ಅಂದಣವನ್ನು ಮುತ್ತುವುದರಲ್ಲಿ ಅಚ್ಚರಿಯೇನಿದೆ? ಆ ಸೀತೆಯಾದರೂ ಎಂತಹವಳು? ಅವಳು “ವಸುಮತಿ ದುಹಿತೆ ಜನಕರಾಜರ್ಷಿಸುತೆ ನಿರುಪಮಚರಿತೆ ಲೋಕಮಾತೆ” ಅಲ್ಲವೇ? ಮಹಾಪುರುಷನ ಪ್ರೇಮಕ್ಕೆ ಒಬ್ಬಳೇ ಹಕ್ಕುದಾರಿಣಿಯಾದ ಈ ಸೀತೆ ದುಷ್ಟರನ್ನು ಅಳಿಸಿ ದಕ್ಷ ಬ್ರಹ್ಮನ ಮಗಳಾದ ದಾಕ್ಷಾಯಣಿಯ ಸ್ವರೂಪಿಯೇ ಸರಿ ಎಂದು ಅವಳನ್ನು ಎಲ್ಲರೂ ಬರಮಾಡಿಕೊಳ್ಳುತ್ತಾರೆ.

ಆದರೆ, ಸೀತೆ ಬಳಿಸಾರುತಿದ್ದರೂ ರಾಮನ ಮುಖ ಮಾತ್ರ ಎತ್ತಲೋ ಇರುವುದು ಎಲ್ಲರಿಗೂ ಏನೋ ಮನಕ್ಲೇಶವನ್ನು ತರುತ್ತಿದೆ. ಆ ರಾಮನ ಮುಖ ವ್ಯಾಕುಲತೆಯೆಂದ ನೆಲದೆಡೆಗೆ ಇರುವುದು ಎಲ್ಲರ ಗಮನಕ್ಕೂ ಬಂದು ಮೂಕರಾಗಿ, ಭೀತರಾಗಿ, ಇನ್ನೇನು ನಡೆಯುವುದೋ ಎಂದು ಕಾಯುತ್ತಿರುವಂತೆ ಸೀತೆ ರಾಮನ ಬಳಿ ಬಂದು ಅವನನ್ನು ಮೆಲುದನಿಯಲ್ಲಿ “ಆರ್ಯಪುತ್ರ, ಆರ್ಯಪುತ್ರ” ಎಂದು ಕರೆಯುತ್ತಾಳೆ

ಹೌದು. ಈ ರಾಮನಿಗಾದರೂ ಏನಾಯ್ತು? ರಕ್ಕಸರನ್ನು ಮುರಿದು ಮಡದಿಯ    ಬಿಡಿಸಿಕೊಂಡವನಿಗೇನಾಯಿತು? ಅವನ ಮಾತನ್ನು ಕೇಳಿ ಸೀತೆ ಏಕೆ, ಅಲ್ಲಿದ್ದ ಊರವರೆಲ್ಲ ಮೂರ್ಛೆ ಹೋಗುವುದೇ ಬಾಕಿ. ಅವನು ಹೇಳಿದ್ದೇನು? ಕಣ್ಣ ಬೇನೆಯವನಿಗೆ ಬೆಳಕು ಚೆಲ್ಲುವ ದೀವಿಗೆ ಚಿನ್ನದ್ದಾದರೂ ಹೇಗೆ ನೋಡಲು ನೋವ ತರುವುದೋ, ಹಾಗೆ ಸೀತೆಯ ಮುಖವನ್ನು ಕಂಡರೆ ಅವನಿಗೆ ಆಗುವುದು – ಆ ರಕ್ಕಸನ ಮನೆಯಲ್ಲಿ ಹೇಗೆ ತಾನೇ ಅಂದಗೆಡದೇ ಇದ್ದಳೋ ಎಂಬ ಉಮ್ಮಳ. ಕುಲದ ಗೌರವವನ್ನುಳಿಸಲು ರಾವಣನನ್ನು ಕೊಂದಾಯ್ತು. ಸೀತೆಯನ್ನ್ನು ಸೆರೆಯಿಂದ ಬಿಡಿಸಾಯ್ತು. ಆದರೆ, ಮೋಹದಿಂದ ಸೀತೆಯನ್ನು ಸ್ವೀಕರಿಸುವುದು ಮಾತ್ರ ಸಾಧ್ಯವಿಲ್ಲ. ಎಲ್ಲಾದರೂ ಹೋಗಿ ಚೆಂದದಿಂದಿರು ಎಂದುಬಿಡುವ ರಾಮನ ” ಪೋ ಪೋ ಪೋ ಚಲುವೆ – ಪೋ ಮನ ಬಂದೆಡೆ ನೆಂಟನೋ ಕೆಳೆಯನೋ ಉಂಟಾದವರೆಡೆ” ಎನ್ನುವ ಮಾತನ್ನು ಕೇಳಿದ ಸೀತೆಗೆ ದಿಗ್ಭ್ರಾಂತಿ. ಈ ಮಾತನ್ನು ಕೇಳಲು ಬದುಕಿದೆನೇ ನಾನು? ಎಂಬ ಪ್ರಶ್ನೆ ಅವಳಿಗೆ ಕಾಡುತ್ತದೆ.

“ಬರುವೆ ಬರುವೆ ದುರುಳರ ತರಿವೆ ಸೆರೆಯ ಬಿಡಿಸಿ ಒಯ್ವೆಯೆಂದು” ಕಾಯುತ್ತಿದ್ದ ಪತಿಯಲ್ಲೇ ಪ್ರಾಣವಿಟ್ಟ ತನ್ನಂತಹ ಹೆಣ್ಣಿಗಾಡುವ ಮಾತೇ ಇದು ಎಂಬ ಸೀತೆಯ ಪ್ರಶ್ನೆಗೆ ರಾಮನ ನಿಟ್ಟುಸಿರೇ ಉತ್ತರ. “ಕೆಟ್ಟ ಸಮಯದಿ ದುಷ್ಟರಕ್ಕಸ ರಟ್ಟೆಯಸೆಳೆದೊಯ್ಯುವಂದು ಅಟ್ಟೆಯಿದನು ಕಟ್ಟಿಗೆಯೆನಿಸಿ ನೆಟ್ಟೆ ನಿನ್ನೊಳು ಮನವ ಸ್ವಾಮಿ” ಎನ್ನುವ ಸೀತೆಯ ಮಾತಿಗೆ ಕರಗದವರು ಯಾರು ತಾನೇ ಇದ್ದಾರು ಆ ರಾಮನ ಹೊರತು?

ಕೊನೆಗೆ ಅಲ್ಲಿ ನೆರೆದಿದ್ದ ಜನಕ್ಕೇ ಸೀತೆ ರಾಮನಿಗೆ ಬುದ್ಧಿ ಹೇಳಬಾರದೇ?ಈಂದು ಕೇಳುತ್ತಾಳೆ:

ಬಲ್ಲಹನೊಲ್ಲದನಾಥೆ ಹೆಣ್ಣಿಗೆ

ಎಲ್ಲಿಹುದಾಸರೆ? ಆವನ ಮರೆ?

ಬಲ್ಲವರಿಲ್ಲವೆ ಈ ನೆರವಿಯೊ-

ಳೊಳ್ಳೆ ಮಾತನಾಡುವರೀತಗೆ?

ಆದರೇನು? ರಾಮನಿಗಿಂತೂ ಕರುಣ ಬಂದಂತೆ ತೋರದು. ಸೀತೆ ಎದ್ದು ನಿಲ್ಲುತ್ತಾ ಮನವನ್ನು ಗಟ್ಟಿಮಾಡಿಕೊಳ್ಳುತ್ತಾಳೆ. ಆ ಕೂಡಲೇ, ಚಿತೆಯೊಂದನ್ನು ಸಿದ್ಧಮಾಡುವಂತೆ ಲಕ್ಷ್ಮಣನಿಗೆ ಆಣತಿಕೊಡುತ್ತಾಳೆ.

“ಹೊತ್ತಿಸು ಚಿತೆಯನು ಲಕ್ಷ್ಮಣ, ನಿನ್ನತ್ತಿಗೆ ಬೀಳಲಿ ಈ ಕ್ಷಣ! ಮೃತ್ಯುವಿಗಲ್ಲದೆ ಮತ್ತಾರಿಗಹುದಯ್ಯ ಕುತ್ತನಿದ ಕಳೆದೆನ್ನುತ್ತರಿಸುವಳವು” ಎನ್ನುವ ಸೀತೆಯ ಮಾತಿಗೆ ಮರುನುಡಿಯಲಾರದ ಲಕ್ಷ್ಮಣ ಚಿತೆಯೊಂದನ್ನು ಅಲ್ಲೇ ನಿರ್ಮಿಸುತ್ತಾನೆ.

ನೆರೆದವರೆಲ್ಲ ದಿಗ್ಭ್ರಾಂತರಾಗಿ ನೋಡುತ್ತಿರುವಂತೆ ಸೀತೆ ತಾನು ಪಾಪಿಯಲ್ಲದಿದ್ದರೆ ಈ ಬೆಂಕಿಯು ತನ್ನನ್ನು ಕಾಪಾಡಲೆಂದು ಕೋರುತ್ತಾ ಲಕ್ಷ್ಮಣನಿಗೆ “ಹೊಗುವೆನುರಿಯನು ಮೈದುನ, ನನ್ನ ಬಗೆಯ ನನ್ನಿಯ ತೋರಲೀಕ್ಷಣ” ಎನ್ನುತ್ತ ಚಿತೆಯೊಳಗೆ ಜಿಗಿದೇ ಬಿಡುತ್ತಾಳೆ.

ಕೆಟ್ಟಮೇಲೆ ಬುದ್ಧಿ ಬಂತು ಎಂಬ ಗಾದೆ ಕೇಳಿದ್ದೇವಲ್ಲ. ಹಾಗೇ ರಾಮ ಸೀತೆ ಅಗ್ನಿಕುಂಡಕ್ಕೆ ಬಿದ್ದಮೇಲೆ, ತಾನು ಮೋಸಹೋದೆನಲ್ಲಾ? ಇನ್ನೇಕೆ ತಾನೇ ತಾನು ರಾಜ್ಯಕ್ಕೆ ಮರಳಲಿ ಎಂದು ದುಃಖಿಸುತ್ತಾನೆ.

ಈ ಎಲ್ಲ ಹಾಡುಗಳಲ್ಲಿಯೂ ಪುತಿನ ಅವರ ವಾಗ್ಗೇಯಕಾರತ್ವ ಎದ್ದು ಕಾಣುತ್ತದೆ. ಒಂದೊಂದು ಭಾವನೆಗೂ ತಕ್ಕ ರಾಗಗಳನ್ನು ಬಳಸಿದ್ದಾರೆ. ಚಿತೆಗೆ ಬೀಳುವ ನಿರ್ಧಾರಕ್ಕೆ ತಕ್ಕುದಾದ ಹಂಸಧ್ವನಿ, ಮತ್ತೆ ಅದರ ನಂತರವೇ ಬರುವ ರಾಮನ ಶೋಕವನ್ನು ವ್ಯಕ್ತಪಡಿಸಲು ಬರುವ ಶುಭಪಂತುವರಾಳಿ ಹೀಗೆ ಪ್ರತಿಯೊಂದು ಹಾಡೂ ಅದಕ್ಕೆ ತಕ್ಕ ಮಟ್ಟಿನಲ್ಲೇ ಇದೆ.

ಸೀತೆ ಅಕಳಂಕೆ. ಅವಳನ್ನು ಬೆಂಕಿಯೂ ಕೂಡ ಸುಡಲಾರದೇ ಹೋಯಿತು. ಬದಲಿಗಾದದ್ದೇನು? ಎಲ್ಲರ ಅಚ್ಚರಿಗೆ ಸಾಕ್ಷಾತ್ ಅಗ್ನಿಯೇ ಕುಂಡದಿಂದೆದ್ದು ಸೀತೆಯನ್ನೆತ್ತಿ ತರುತ್ತಾ ರಾಮನಿಗೆ , ಈಗಾಗಲೇ ಸಂಕಷ್ಟಗಳಲ್ಲೇ ಬೆಂದ ಈ ಸೀತೆಯನ್ನು ಮತ್ತು ಸುಡಲು ಸಾಧ್ಯವೇ ಎಂದು ಕೇಳುತ್ತಾ, ಕುಂದಿಲ್ಲದ ಈಕೆಯನ್ನು ಸ್ವೀಕರಿಸಿ ಸಂತೋಷದಿಂದಿರು ಎಂದು ಹರಸಿ ಮಾಯವಾಗುತ್ತಾನೆ. ನಂತರ ರಾಮ ಸೀತೆಗೆ, ತಾನು ಅವಳು ಅಕಳಂಕಿತ ಎಂದು ತಿಳಿದಿದ್ದರೂ ಕೂಡ, ಜನನಾಯಕನೆಂಬ ಹೊಣೆ ಹೊತ್ತಿರುವಾಗ, ಅಪವಾದ ಬರಬಹುದೆಂಬ ಭೀತಿಯಿಂದ ಹೀಗೆ ಸಲ್ಲದ ಕಾರ್ಯ ಮಾಡಬೇಕಾಯಿತೆಂದು ಹೇಳಿ ತನ್ನ ತಪ್ಪನ್ನು ಮನ್ನಿಸಿ ಮತ್ತೆ ತನ್ನನ್ನು ವರಿಸಬೇಕೆಂದು ಸೀತೆಯನ್ನು ಬೇಡಿಕೊಳ್ಳುತ್ತಾನೆ.

ಸೀತೆಯೋ, ಭೂದೇವಿಯ ಮಗಳಲ್ಲವೇ? ಅಷ್ಟೇ ಸಹನೆ ಅವಳಿಗೆ. ಅಪವಾದದ ಶಂಕೆಯನ್ನೂ ಹೀಗೆ ಬೆಂಕಿಯೇ ದೂರ ಮಾಡಿದಮೇಲೆ ಮನ್ನಿಸಲು ಏನಿದೆ? ಅಷ್ಟಕ್ಕೂ ಮಾಯಾಮೃಗದ ಹಿಂದೆ ರಾಮನನ್ನು ಕಳಿಸಿ ಎಲ್ಲ ಅನರ್ಥಕ್ಕೂ ತಾನೇ ದಾರಿಯಾದವಳಲ್ಲವೇ? – “ಚೆನ್ನ ಏನಿದೆ ಮನ್ನಿಸೆ, ನಿನ್ನವಳಲ್ಲವೇ?” ಎಂದು ಮರುನುಡಿಯುತ್ತಾಳೆ. ನಂತರ ಇಬ್ಬರೂ ಒಬ್ಬರಿಗೊಬ್ಬರು ಮರಳಿ ದೊರೆತ ಸುಖವನ್ನು ನೆನೆಯುತ್ತಾ, “ದೈವ ಮರಳಿ ಕರುಣಿಸಿರುವಾಗ ಇದೇ ಶುಭಗಳಿಗೆ, ಇಂದು ಕೆಟ್ಟ ಕನಸಳಿದು ಪ್ರಭಾತವಾಯ್ತು” ಎಂದೆಣೆಸಿ ಆನಂದದಿಂದಿರುವಾಗ, ವಿಭೀಷಣ “ಮನಸಿನ ವೇಗದ” ಪುಷ್ಪಕ ವಿಮಾನವನ್ನು ತಂದು ರಾಮನಿಗುಡುಗೊರೆಯಾಗಿ ಕೊಡಲು ರಾಮ ಸೀತಾ ಲಕ್ಷ್ಮಣರ ಆ ವಿಮಾನವನ್ನೇರಿ ಅಯೋಧ್ಯೆಯ ಕಡೆಗೆ ತೆರಳುತ್ತಾರೆ.

ದಾರಿಯಲ್ಲಿ ಹಾರಿಹೋಗುತ್ತಿರುವಾಗ ರಾಮ ಅಲ್ಲೆಲ್ಲ ಕೆಳಗೆ ಕಾಣುತ್ತಿರುವೆಡೆಗಳನ್ನು “ಇದು ಹನುಮ-ಸುಗ್ರೀವರು ನನಗೆ ಗೆಳೆಯರಾದ ಸ್ಥಳ, ಇಲ್ಲಿ ತಾನೇ ಅತ್ರಿ ಮುನಿಯ ಆಶ್ರಮ, ನೀನು ಅನುಸೂಯೆಯ ಕೈಯಲ್ಲಿಆಲಂಕಾರ ಮಾಡಿಸಿಕೊಂಡ ಸ್ಥಳ” ಎಂದೆಲ್ಲ ತೋರುತ್ತಾ ಇನ್ನೇನು ದೂರ ದಿಗಂತದಲ್ಲಿ ಅಯೋಧ್ಯೆಯ ಹೊನ್ನಕಳಸಗಳು ಕಾಣುತ್ತಿದ್ದಂತೆ, ಗುಹನನ್ನು ಕಾಣದೇ ಹೋದರೆ ಸರಿಯಲ್ಲ, ವಿಮಾನ ಇಲ್ಲೇ ಗಂಗೆಯ ತೀರದಲ್ಲಿ ನಿಲ್ಲಲಿ. ಮತ್ತೆ ತಮ್ಮ ಬರವನ್ನು ಭರತನಿಗೆ ತಿಳಿಸಲೆಂದು ಹನುಮನು ತೆರಳಲಿ ಎಂದಾಣತಿಯಿಡುತ್ತಾನೆ. ಅದ್ಭುತ, ಅಚ್ಚರಿಗಳನ್ನೆತ್ತಿತೋರುವ ಈ “ಏರೈನೀರೆ ಕುಬೇರನ ತೇರನು” ಎನ್ನುವ ಹಾಡನ್ನು ಮುಖಾರಿ ರಾಗದಲ್ಲ ಸಂಯೋಜಿಸಿರುವುದು ಪುತಿನ ಅವರ ರಾಗದೊಳಗಿನ ತಿರುಳನ್ನು ಗ್ರಹಿಸುವ ಶಕ್ತಿಗೆ ಗುರುತಾಗಿದೆ.

ಅತ್ತ ಭರತನೋ, ಹದಿನಾಕು ವರ್ಷದಿಂದ ಅಣ್ಣನನ್ನೇ ನೆನೆಯುತ್ತ “ಎಂದಣ್ಣನನು ಕಾಂಬೆ ನಾ ಪಾದುಕೆ, ಎಂದು ಜೋಡಿಪೆ ನಿನ್ನ ಶ್ರೀ ಪಾದಕೆ” ಎಂದು ಕಾಯುತ್ತಲಿರಲು ಹನುಮ ಬಂದು ನೀಡಿದ ಸುದ್ದಿ ಅವನುಗೆ ಬಹಳ ಸಂತೋಷ ತಂದಿತು. ಶತ್ರುಘ್ನನಿಗೆ “ಪೋ ಶತ್ರುಘ್ನ, ಊರ ಸಿಂಗರಿಸು ಕೇರಿಕೇರಿಯೊಳು ಸುದ್ದಿಯ ಹರಡುತ” ಎಂದು  ಅಪ್ಪಣೆ ಕೊಡಲು ಊರಿನ ಜನರ ಹರ್ಷಕ್ಕೆ ಮೇರೆಯೇ ಇಲ್ಲ!  ಎಲ್ಲರೂ “ವನಕೆ ತೆರಳಿದವ ಮರಳಿದನಿದೆಕೋ ಅನುಜ ಸತಿ ಸಹಿತ ಶ್ರೀ ರಘುರಾಮ” ಎಂದು ಹಾಡಿ ಕುಣಿದು ನಲಿಯುತ್ತಾರೆ. “ಛತ್ರ ಚಾಮರ ತನ್ನಿ ಮಿತ್ರರೆಲ್ಲರು ಬನ್ನಿ ಚಿತ್ರಾಲಂಕಾರದೊಳು ಪುತ್ರ ಪರಿವಾರ ಸಹಿತ” ಎನ್ನುತ್ತ ಸುದ್ದಿ ತಂದ ಆ ಹನುಮಂತನೊಡನೆಯೇ ಕುಣಿದು ನಲಿಯುತ್ತಾರೆ

ಮತ್ತಿನ್ನೇನು? ಅರಮನೆಯಲ್ಲ ರಾಮ ಬರವಿಗೆ ಕಾಯುತ್ತೆ. ಎಲ್ಲ ಕಡೆಯಲ್ಲೂ ಸಡಗರ. ಗುಹನನ್ನು ಕಂಡು ಬಂದ ರಾಮ ಲಕ್ಷ್ಮಣ ಸೀತೆಯನ್ನು ಭರತ  ನಂದಗ್ರಾಮದಿಂದ ಅಯೋಧ್ಯೆಗೆ ಕರೆತರುತ್ತಾನೆ.  ಪರ್ಣಕುಟಿಲ್ಲೇ ಹದಿನಾಲ್ಕು ವರ್ಷ ಪಾದುಕೆಯ ಸ್ಮರಣೆಯಲ್ಲೇ ಕಳೆದ ಆ ಭರತ ರಾಮನನ್ನು ಕಂಡಾಗ ಅವನಿಗಾದ ಹರ್ಷ ಇಡೀ ಜಗತ್ತನ್ನೇ ಆವರಿಸಿಕೊಳ್ಳುವಷ್ಟು ಗಾಢವೆಂದು ಕವಿ ನುಡಿಯುತ್ತಾರೆ.  ಭರತ ರಾಮನಿಗೆ “ದೊರೆಯ ತನವನು ಕೋ ಓ ರಾಘವ, ಹೊರೆಯಲರಿಯೆನು ನಿನ್ನ ತೆರದೊಳು ಕಿರಿಯ ನಾನೀ ರಾಜ್ಯವ” ಎನ್ನಲು ತಮ್ಮನ ಸವಿಯಾದ ಮಾತುಗಳನ್ನೂ, ವಿನಯವನ್ನೂ ಕಂಡು ಬೆರಗಾಗಿ, ಅಯೋಧ್ಯೆಯ ಅರಸನಾಗುವುದೇ ತಕ್ಕದ್ದೆಂದು ಕೊಳ್ಳುತ್ತ ಎಲ್ಲರ ಸಹಿತ ಅಯೋಧ್ಯೆಗೆ ತೆರಳುತ್ತಾನೆ.

ಮತ್ತಿನ್ನೇನುಳಿದಿದೆ? ಅರಮನೆಯೆಲ್ಲ ಸಿದ್ಧವಾಗಿದೆ. ಋಷಿಮುನಿಗಳೆಲ್ಲ ಪವಿತ್ರ ಜಲದೊಂದಿಗೆ ಕಾದಿದ್ದಾರೆ. ಪಟ್ಟಾಭಿಷೇಕ ಮಹೋತ್ಸವಕ್ಕೆ ಸಿದ್ಧರಾದ ರಾಮ ಸೀತೆಯರನ್ನು ರತ್ನ ಸಿಂಹಾಸನವೇರಿಸಿ ಅವರ ಮುಡಿಗೆ ಹೊನ್ನಿನ ಕಿರೀಟವೇರಿಸಿದ್ದಾರೆ. ಎಲ್ಲ ಹಿರಿಯರು ಆಶೀರ್ವಾದ ಮಾಡಿದ್ದಾರೆ.  ಮಂತ್ರ ಘೋಷ ಹೊಮ್ಮಿದೆ. “ಅರಸುತನದಿ ಅಭಿಷೇಚಿಪೆವು ನಿನ್ನ ಹಿರಿಮೆ ಹೆಚ್ಚಲೆಂದು ಹರಸುವೆವು” ಎಂದು ಹಾಡಿದ್ದಾರೆ. “ತಿರೆಯವರೊಲವೊಳು ಸೇಚಿಪೆವು” ಎನ್ನುತ್ತ “ಸಹಜ ಸತಿ ಸಹಿತ ಹಿತವರೊಡನೆ ನೀ ಮಹಿತನಾಗಿ ಚಿರ ದೊರೆತನದೊಳಗಿರು” ಎನ್ನತ್ತ ಮಂಗಳಾಚರಣೆ ಮಾಡಿದ್ದಾರೆ.

ರಾಮನನ್ನು ನಾವೆಲ್ಲ ಆದರ್ಶಪುರುಷನೆಂದು ನಂಬಿದ್ದೇವಲ್ಲವೇ? ಅದಕ್ಕೆ ತಕ್ಕಂತೆ ತಾನೇ ಅವನು ನಡೆದುಕೊಳ್ಳುವುದು? ತನ್ನ ಪ್ರಜೆಗಳಿಗಳಿಗೆಲ್ಲ “ತಮ್ಮಾಶಯದೊಲು ನಡೆವೆ, ಕ್ಲೇಶಗಳಿಲ್ಲದೆ ತಿರೆಯ ಜನರು ಸಂತೋಷದೊಳಿರುವೊಲು ಜತುನವಗೊಳ್ಳುವೆ; ಧರ್ಮದೊಳೇ ನಿಲ್ಲುವೆ, ಸತ್ಕರ್ಮದಿ ಕೇಡ ಗೆಲ್ಲುವೆ ; ಸಕಲಕೂ ಶುಭವ ಕೋರುವೆ, ಅಕಲುಷನಾಗಿ ಬಾಳುವೆ ” ಎನ್ನುವ ಭಾಷೆಯನ್ನೀಯುತ್ತಾನೆ.

ನಾಟಕವು ಪ್ರಸಿದ್ಧವಾದ “ಮಂಗಳಂ ಕೋಸಲೇಂದ್ರಾಯ” ಎಂಬ ಸಂಸ್ಕೃತ ಶ್ಲೋಕದ ಕನ್ನಡ ಅನುವಾದದೊಂದಿಗೆ, ಮತ್ತೆ ಕಾಲಕಾಲಕ್ಕೂ ಮಳೆಬೆಳೆಗಳಾಗಲಿ ಎನ್ನುವ ಸಾರ್ವಕಾಲಿಕ ಮಂಗಳಾಚರಣೆಯೊಂದಿಗೆ ಮುಕ್ತಾಯವಾಗುತ್ತದೆ.

“ಕೋಸಲೇಂದ್ರ ಮಹನೀಯ ಗುಣಾಬ್ಧಿಗೆ

ಚಕ್ರವರ್ತಿಸುತ ಸಾರ್ವಭೌಮನಿಗೆ

ಮಂಗಳಂ ಜಯ ಮಂಗಳಂ

ಪಟ್ಟಾಭಿರಾಮಗೆ|| ಮಂಗಳಂ||

-ನೀಲಾಂಜನ

(ಚಿತ್ರಗಳು: ಸೆಪ್ಟೆಂಬರ್ ೧೩, ೨೦೦೮ ರಂದು ಪಾಲೋ ಆಲ್ಟೋ ನಲ್ಲಿ  ನಡೆದೆ ಶ್ರೀರಾಮ ಪಟ್ಟಾಭಿಷೇಕ ನೃತ್ಯ ನಾಟಕದ ರಂಗ ಅವತರಣಿಕೆಯಿಂದ. ಚಿತ್ರಕೃಪೆ: ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಗೆಳೆಯರು)

Advertisements