ಗುಂಡ ಒಂದು ಸಂಗೀತ ಕಚೇರಿಗೆ ಹೋದ; ಅವನಿಗೆ ಒಂದು ಹಾಡು ಬಹಳ ಹಿಡಿಸಿಬಿಡ್ತು. ಏನೇ ಆಗ್ಲಿ, ಅದರ ಬಗ್ಗೆ ತಿಳ್ಕೋಬೇಕು ಅಂತ ಕಚೇರಿ ಮುಗಿದ ಮೇಲೆ ಹಾಡುಗಾರರನ್ನ ಹೋಗಿ ಕೇಳಿದ: ಸ್ವಾಮೀ, ಇಂತ ಹಾಡು ನೀವು ಹೇಳಿದ್ರಲ್ಲ, ಅದು ಯಾವ ರಾಗ, ಯಾವ ಭಾಷೆಯದು ಅಂತ?

ಹಾಡುಗಾರರು ಒಂದೇ ಮಾತಿನಲ್ಲಿ ಉತ್ತರ ಹೇಳಿದರು.

ಕನ್ನಡ

…………………

ಹೌದು: ಕನ್ನಡ ಒಂದಕ್ಕೇ, ಭಾಷೆ, ನಾಡು ಮತ್ತು ರಾಗ – ಎಲ್ಲವೂ ಆಗುವ ಸಾಧ್ಯತೆ ಇರೋದು! ಭಾರತೀಯ ಸಂಗೀತದಲ್ಲಿ ಭೌಗೋಳಿಕವಾಗಿ ಬಂದಿರುವ ಹಲವು ಹೆಸರುಗಳಿವೆ. ಅದರಲ್ಲಿ ಹೆಚ್ಚಾಗಿ ಕರ್ನಾಟಕ, ಗುಜರಾತ್, ಮತ್ತು ಬಂಗಾಳ ಈ ಪ್ರದೇಶಗಳ ಮೇಲಿನ ಹೆಸರುಗಳು ಹೆಚ್ಚು.

ಹಾಗಾಗಿ ಕರ್ನಾಟಕ ಸಂಗೀತದಲ್ಲಿ ಸಿಂಧುಕನ್ನಡ, ಕನ್ನಡಬಂಗಾಳ, ಕನ್ನಡಗೌಳ, ಕಾನಡಾ ಮೊದಲಾದ ಕರ್ನಾಟಕ ದೇಶಸೂಚಿ ರಾಗಗಳಿವೆ. ಇವಲ್ಲದೇ ಬರೀ ಕನ್ನಡ ಎಂಬ ಹೆಸರಿನ ರಾಗವೂ ಬಹಳ ಪ್ರಸಿದ್ಧವೇ ಆಗಿದೆ.

-ನೀಲಾಂಜನ