ಅಲ್ಲಿದೆ ನಮ್ಮ ಮನೆ, ಇಲ್ಲಿರುವುದು ಸುಮ್ಮನೆ!

ಕದಬಾಗಿಲಿರಿಸಿದ ಕಳ್ಳ ಮನೆಇದು
ಮುದದಿಂದಲೋಡ್ಯಾಡೋ ಸುಳ್ಳು ಮನೆ |
ಇದಿರಾಗಿ ವೈಕುಂಠವಾಸಮಾಡುವಂತ
ಪದುಮನಾಭನ ದಿವ್ಯ ಬದುಕುಮನೆ ||

ಮಾಳಿಗೆಮನೆಯೆಂದು ನೆಚ್ಚಿಕೆಡಲುಬೇಡ
ಕೇಳಯ್ಯ ಹರಿಕಥೆಶ್ರವಣಂಗಳ |
ನಾಳೆ ಯಮದೂತರು ಬಂದೆಳೆದೊಯ್ವಾಗ*
ಮಾಳಿಗೆ ಮನೆ ಸಂಗಡ ಬಾರದಯ್ಯ ||

ಮಡದಿಮಕ್ಕಳು ಎಂಬ ಹಂಬಲ ನಿನಗೇಕೋ
ಕಡುಗೊಬ್ಬುತನದಿ ನಡೆಯದಿರು |
ಒಡೆಯ ಶ್ರೀ ಪುರಂದರ ವಿಠಲನ ಚರಣವ
ದೃಢಭಕ್ತಿಯಲಿ ನೀ ನೆನೆಸಿಕೊ ಮನುಜ ||

ಚಿಕ್ಕಂದಿನಿಂದ ದೇವರನಾಮಗಳನ್ನು ಕೇಳುತ್ತಲೆ ಬೆಳೆದವನು ನಾನು. ಅಮ್ಮ ನನಗೆ ನೆನಪಿದ್ದಂತೆ, ಬೆಳಗ್ಗೆದ್ದಾಗಿನಿಂದ, ನಮ್ಮನ್ನು ಶಾಲೆಗೆ ಕಳಿಸುವವರೆಗೂ ಒಂದೆಡೆ ಕೆಲಸ ಮಾಡುತ್ತ, ಇತ್ತಕಡೆ ಹಾಡುತ್ತಲೇ ಇರುತ್ತಿದ್ದರು. ಇನ್ನೂ ಮನೆಯ ಅಡುಗೆ ಕೆಲಸ ಇತ್ಯಾದಿ ಎಲ್ಲ ಮುಗಿಯುವವರೆಗೆ ಅವರ ಹಾಡುಗಳು ಮುಂದುವರೆಯುತ್ತಿದ್ದವು. ಅವರ ಅಮ್ಮ, ಅಂದರೆ ನನ್ನ ಅಜ್ಜಿಯಂತೂ ಬೆಳಗಿನಿಂದ ಸಂಜೆಯವರೆಗೂ ಹೀಗೇ ಹಾಡುತ್ತಿದ್ದರಂತೆ. ಆದರೆ, ನನಗೆ ನೆನಪಿರುವ ಹೊತ್ತಿಗೆ ಅವರಿಗೆ ಹಾಡಲು ಅಷ್ಟಾಗಿ ಆಗುತ್ತಿರಲಿಲ್ಲ. ಅದಿರಲಿ, ನಮ್ಮ ಮನೆಯಲ್ಲಿ ಬೆಂಗಳೂರು ಆಕಾಶವಾಣಿಯ ೮:೨೦ ರ ರೇಡಿಯೋ ಸಂಗೀತದ ಸಮಯದಲ್ಲಿ ಮಾತ್ರ ನಮ್ಮ ಅಮ್ಮನಿಗೆ ಹಾಡುವುದರಿಂದ ವಿಶ್ರಾಂತಿ, ಮತ್ತು ರೇಡಿಯೋಕ್ಕೆ ಹಾಡುವ ಯೋಗ. ಅಮ್ಮನಿಗೆ ನೂರೋ ಇನ್ನೂರೋ ದೇವರನಾಮಗಳು ಬರುತ್ತವೆ. ಅಷ್ಟಲ್ಲದೇ, ಹೊಸದೊಂದು ಸಾಹಿತ್ಯ ಕಂಡರೆ, ಕೇಳಿದರೆ ತಕ್ಷಣ ಅದಕ್ಕೆ ಹೊಂದುವ ರಾಗ ಹಾಕಿ ಹಾಡುವುದು ಅವರಿಗೆ ಈಗಲೂ ಅವರಿಗೆ ಇಷ್ಟವಾದ ವಿಷಯ. ದೇವರನಾಮಗಳಿಗೆ, ಕೃತಿಗಳಷ್ಟು ಸಂಗತಿಗಳ ಬಂಧವಿಲ್ಲ – ಬೇರೆಕೆಲಸದಲ್ಲಿ ವ್ಯಸ್ತರಾಗಿದ್ದಾಗ ಹಾಡಲು ಅದೇ ಸಲೀಸು ಎಂದು ಅವರ ಎಣಿಕೆ ಎನಿಸುತ್ತೆ. ತ್ಯಾಗರಾಜರ, ದೀಕ್ಷಿತರ ಕೃತಿಗಳಾದರೆ ತಂಬೂರಿ ಮೀಟುತ್ತಾ ಕುಳಿತು ವಿಸ್ತರಿಸಿ ಹಾಡಿದರೆ ಚೆನ್ನ. ಅವು ಸುಂದರವಾದ ಆಕಾರದಲ್ಲಿ ಅರಳುವ ಗುಲಾಬಿಗಳಂತೆ. ಆದರೆ, ದೇವರನಾಮಗಳು ಸ್ವಭಾವಸುಂದರ ವಾದ ಮಲ್ಲಿಗೆ, ಸಂಪಿಗೆಗಳಂತೆ. ಬಣ್ಣದಲ್ಲಿ ವೈವಿಧ್ಯವಿಲ್ಲದಿದ್ದರೂ, ಸುವಾಸನೆಯಲ್ಲಿ ಕೊರತೆ ಇಲ್ಲ. ನಾನು ನನಗೆ ಬರುವ ಹಾಡುಗಳನ್ನೂ ಹೀಗೆ ಅಮ್ಮ ಹಾಡುವಾಗ ಕೇಳಿ ಕೇಳಿ ಕಲಿತದ್ದೇ ಹೆಚ್ಚು.

ಅದಿರಲಿ – ಎಷ್ಟೋ ದಿನದಿಂದ ಈ ಬ್ಲಾಗ್ ಹೆಸರೂ ಇಲ್ಲದೆ ಖಾಲಿ ಬಿದ್ದಿತ್ತು. ಏನಾದರೊಂದು ಬರೆಯೋಣವೆಂದಾಗ ಇದ್ದಕ್ಕಿದ್ದಂತೆ ಈ ದೇವರನಾಮ ನೆನಪಾಯಿತು. ಸರಿ, ನನ್ನ ಬ್ಲಾಗಿಗೊಂದು ಚಂದವಾದ ಹೆಸರು ಸಿಕ್ಕಿತೆನ್ನಿಸಿತು.ಅದನ್ನೇ ಇಟ್ಟುಬಿಟ್ಟೆ!

ನಮ್ಮಲ್ಲಿ ಹೆಚ್ಚಿನವರು ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ, ಮತ್ತಿಷ್ಟರಾಸೆಯವರೇ. ಅದಕ್ಕೇ ಇರಬೇಕು – ಯಾವಾಗಲೂ ಮುನ್ನುಗ್ಗುವ ಓಟವೇ. ಆದರೆ, ನಿಜವಾಗಿ ನಮಗೆ ನಾವು ಬಯಸುವ ಆಸರೆ ಎಲ್ಲಾದರೂ ಸಿಗುತ್ತದೆಯೇ? ಮನಸ್ಸಿಗೆ ನೆಮ್ಮದಿ ಸಿಗಬೇಕಾದ್ದು ಒಳಗೋ ಹೊರಗೋ? ದೂರಬೆಟ್ಟದಲೊಂದು ಮನೆಯಿರಬೇಕು ಎಂದು ಬಯಸುವ ನಾವು, ಅಲ್ಲೇ ಮನೆ ಮಾಡಿದಾಗಲಾದರೂ ಸುಮ್ಮನಾಗುತ್ತೇವೆಯೇ? ಆಗಲೂ ಅಲ್ಲಿದೆ ನಮ್ಮಮನೆ, ಇಲ್ಲಿರುವುದು ಸುಮ್ಮನೆ ಎನ್ನಬಹುದೇ? ಕನಸಿನಲ್ಲಿ ಕಾಣುವ ನೋಟಗಳು ಕನಸಿನಲ್ಲಿ ಮಾತ್ರವೇ ಚೆನ್ನವೇ? ಪುರಂದರ ದಾಸರಂತಹ ವೈರಾಗ್ಯ ಎಲ್ಲರಿಗೂ ಸಾಧ್ಯವಿಲ್ಲವಲ್ಲ! ಹಾಗೇ, ಈ ಲೋಕದಲ್ಲಿ ಹೇಗೋ ಮುಂದೆ ನಡೆಯಬೇಕಾದ್ದರಿಂದಲೇ ಹೀಗೆ ಏನೇನಾದರೂ ಮನಸ್ಸಿಗೆ ಬಂದಂತೆ ಬರೆಯುತ್ತಿದೇನೆಯೇ ನಾನು? ನಾನು ಗಳಹುವುದನ್ನೂ ಯಾರಾದರೂ ಓದಬೇಕೆಂಬ ಆಸೆಯೇ? ಅಥವಾ ಇನ್ನೆಲ್ಲೋ ಸಾಧಿಸಲಾಗದ್ದನ್ನು, ಸಿಗದ ಹೆಮ್ಮೆಯನ್ನು, ಆರಸಿದ ನೆಮ್ಮದಿಯನ್ನು ಇನ್ನೆಲ್ಲೋ ಅರಸುವ ಚಟವೇ ಇದು? ಉತ್ತರ ಅಷ್ಟೇನೂ ಸುಲಭದ್ದಲ್ಲ. ಏಕೆಂದರೆ, ಈ ಪ್ರಪಂಚದಲ್ಲಿ ಬರೀ ಕಪ್ಪು-ಬಿಳುಪಲ್ಲದೆ ಮಧ್ಯದ ನೂರಾರು ವರ್ಣಛಾಯೆಗಳಿವೆಯಲ್ಲ!

ಅಂದಹಾಗೆ, ಚಿಕ್ಕವನಾಗಿದ್ದಾಗ ನಾನು ದಾಸರ ಪದಗಳು ಎನ್ನುವ ಹೆಸರಿಸುವಿಕೆಯನ್ನು ತಿಳಿದಿರಲಿಲ್ಲ. ದಾಸರು ಬರೆದದ್ದೆಲ್ಲ ನನಗೆ ದೇವರನಾಮವೇ. ನಂತರವೇ ಅದರಲ್ಲಿ ಪದ-ಸುಳಾದಿ-ಉಗಾಭೋಗ ಮೊದಲಾದ ವಿಧಗಳಿರುವುದು ತಿಳಿದದ್ದು ಎನ್ನಿ. ಈ ಮೊದಲು ಬರೆದ ಹಾಡು ಒಂದು ಪದ – ಈ ಹಾಡಿನ ಪಾರಮಾರ್ಥಿಕ ಅರ್ಥಗಳ ಬಹಳ ಆಳಕ್ಕೆ ಹೋಗದೆ ಹೋದರೂ, ಈ ದೇವರನಾಮ ನಮ್ಮ ಮನಸ್ಸಿಗೆ ಹೇಗೋ, ಹಾಗೇ ಇಂತಹ ಬ್ಲಾಗುಗಳಿಗೂ ಒಂದು ಕನ್ನಡಿ ಎನಿಸುತ್ತೆ ನನಗೆ. ಈ ಬ್ಲಾಗ್ ಎಂಬ ಮನೆಗಳಿಗೆ ನಾವು ಸುಮ್ಮನೆ ಬಂದಿರಬಹುದು. ಇದು ನಮ್ಮ ನೆಲೆ ಅಲ್ಲದಿರಬಹುದು. ಆದರೆ ಇದರಲ್ಲಿ ಮುದದಿಂದ ಓಡಾಡುವುದಂತೂ ಖಂಡಿತ! ಹೇಗೆ ಮನಸ್ಸಿನ ಮನೆಯಲ್ಲಿ ನಾವು ಪದುಮನಾಭನನ್ನು ನಿಲ್ಲಿಸಿಕೊಂಡು ನಿಜಮುಕ್ತಿಯನ್ನು ಪಡೆಯಬಹುದೋ, ಇಲ್ಲೂ ಅಂತೆಯೇ ನಮ್ಮ ಮನಸ್ಸಿಗೆ ಬೇಕಾದ ವಿಷಯಗಳನ್ನು ಮಾತಾಡುತ್ತ, ಕೆಲವನ್ನು ತಿಳಿದು, ಕೆಲವನ್ನು ತಿಳಿಸುತ್ತಾ ಮುಂದೆ ಹೋಗುತ್ತಿರಬಹುದಲ್ಲ?

ಈ ಕೊನೆಯ ಸಾಲನ್ನು ಬರೆಯುವಂತೆಯೇ ಇನ್ನೊಂದು ಸೊಗಸಾದ ದೇವರನಾಮ ನೆನಪಾಯಿತು – ಅದು ಇನ್ನೊಂದು ದಿನಕ್ಕಿರಲಿ! ಅತಿಪರಿಚಯಾತ್ ಅನಾದರಂ ಅಲ್ಲವೇ? ಒಟ್ಟಿಗೇ ಕೊಟ್ಟರೆ ಸಿಹಿಯೂ ಕಹಿಯಾದೀತು!

-ನೀಲಾಂಜನ

*ಸಾವಿರಾರು ಜನರನ್ನು ಯಮದೂತರು ಒಟ್ಟಿಗೇ ಕರೆದೊಯ್ದ ಈ ಸೆಪ್ಟೆಂಬರ್ ಹನ್ನೊಂದರ ದಿನ, ಈ ಜೀವನದ ನಶ್ವರತೆಯನ್ನು ಬಿಂಬಿಸುವ ಈ ಹಾಡು ನನಗೆ ನೆನಪಾದದ್ದು ಕಾಕತಾಳೀಯವೋ ನಾನರಿಯೆ. ಅಂದು ಸಲುಗಿದ ಸಾವಿರಾರು ಕುಟುಂಬಗಳು ಈಗಲಾದರೂ ಸ್ವಲ್ಪ ಸಮಾಧಾನವನ್ನು ಹೊಂದಲಿ ಎನ್ನುವುದು ನನ್ನ ಆಸೆ. ಸರ್ವೇ ಜನಾಃ ಸುಖಿನೋ ಭವಂತು.