You are currently browsing the daily archive for ಜುಲೈ 31, 2014.

parvaಪರ್ವ, ಎಸ್.ಎಲ್.ಭೈರಪ್ಪನವರ ಬಹುಚರ್ಚಿತ ಕಾದಂಬರಿ. ಈಗಾಗಲೇ ನಮಗೆಲ್ಲರಿಗೂ ಗೊತ್ತಿರುವ ಮಹಾಭಾರತದ ಕಥೆಯೇ ಆದರೂ, ಅದರ ಮೇಲೊಂದು ಹೊಸನೋಟವಾದ್ದರಿಂದ ನಮ್ಮ ಮನಸ್ಸಿನಲ್ಲಿ ಇರಬಹುದಾದ ಪಾಂಡವರ ಕೌರವರ ಚಿತ್ರಣವನ್ನು ಬದಲಾಯಿಸುತ್ತೆ ಅನ್ನೋದು ನಿಜವೇ. ಮುಖ್ಯವಾಗಿ ಎಲ್ಲ ಪಾತ್ರಗಳನ್ನು ಮನುಷ್ಯರಂತೆಯೇ ಕಂಡು, ಎಲ್ಲರಲ್ಲಿಯೂ ಅವರವರ ಹೆಚ್ಚುಗಾರಿಕೆ ಮತ್ತೆ ಕೊರತೆ ಎರಡನ್ನೂ ತೋರಿಸುತ್ತಾ ಯಾವ ಪಾತ್ರವೂ ಪೂರ್ತಿ ಕಪ್ಪು-ಅಥವಾ ಬಿಳುಪು ಆಗಿರುವುದಿಲ್ಲ ಅನ್ನುವುದನ್ನ ಮನದಟ್ಟು ಮಾಡುತ್ತದೆ.

ದಿಗ್ವಿಜಯಕ್ಕೆ ಹೋದ ಪಾಂಡವರು (ಅಥವಾ ಕೌರವರು) ಇಡೀ ದೇಶವನ್ನೇ ಗೆದ್ದರೇ? ಇಲ್ಲವೇ? ನಿಜವಾಗಿಯೂ ಕುರು ಸಾಮ್ರಾಜ್ಯ ಅಷ್ಟು ವಿಶಾಲವಾಗಿತ್ತೇ? ಇವೆಲ್ಲ ನಮಗೆ ಆಯಾ ಊರುಗಳು ಎಲ್ಲಿವೆ ಎನ್ನುವುದನ್ನು ಇಂದಿನ ನೆಲೆಗಟ್ಟಿನಲ್ಲಿ ನೋಡಿದಾಗ ಸ್ಪಷ್ಟವಾಗುತ್ತೆ. ಪಾಂಡವರನ್ನು ಸುಟ್ಟು ಹಾಕಲು ಅರಗಿನ ಮನೆಗೆ ಕಳಿಸಿದ ವಾರಣಾವತ – ರಾಜಧಾನಿ ಹಸ್ತಿನಾಪುರಕ್ಕೆ ಬರೀ ಮೂವತ್ತು ಮೈಲಿ ದೂರ. ರಾಜ್ಯವನ್ನು ಅರ್ದ ಭಾಗ ಮಾಡಿ ಹಸ್ತಿನಾವತಿಯಿಂದ ಇಂದ್ರಪ್ರಸ್ಥಕ್ಕೆ ಕಳಿಸಿದರಲ್ಲವೇ? ಅವೆರಡು ನಡುವೆ ದೂರ ಸುಮಾರು ಐವತ್ತೇ ಮೈಲಿ. ಮತ್ತೆ ದ್ರುಪದ ರಾಜನ ಕಾಂಪಿಲ್ಯ? ಸುಮಾರು ಇನ್ನೂರು ಮೈಲಿ. ಅದೇ ಅಜ್ಝಾತ ವಾಸ ಕಳೆದ ವಿರಾಟ ನಗರವೂ ಹಸ್ತಿನಾವತಿಗೆ ಅಷ್ಟೇ ಹತ್ತಿರವೇ. ಈ ರೀತಿಯ ಚಿಕ್ಕಪುಟ್ಟದಾದರೂ ಕಥೆಯನ್ನು ನಮ್ಮ ಕಣ್ಣಿಗೆ ಕಟ್ಟಿಸಲು ಬೇಕಾದಂತಹ ವಿವರಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಕೊಡುತ್ತ ಭೈರಪ್ಪ ಆ ಕಾಲದ ಚಿತ್ರಣವನ್ನು ಚೆನ್ನಾಗಿ ಮಾಡುತ್ತಾರೆ. ಕೃಷ್ಣನ ದ್ವಾರಕೆಯ ವರ್ಣನೆಗಳು ನಿಮ್ಮನ್ನು ಆ ಕಾಲಕ್ಕೆ ಕರೆದುಕೊಂಡು ಹೋಗುವುದರಲ್ಲಿ ಆಶ್ಚರ್ಯವೇ ಇಲ್ಲ!

ಪರ್ವದಲ್ಲಿ ಬರುವ ಕೆಲವು ಮಾತುಗಳೂ ಅಷ್ಟೇ – ಮರೆಯುವುದೇ ಇಲ್ಲ! “ಹಳೇ ಊರಿಗೆ ಪ್ರಸಿದ್ಧಿ ಇರುತ್ತೆ, ಹೊಸ ಊರಿನಲ್ಲಿ ಅನುಕೂಲ ಇರುತ್ತೆ ” ಎಂದು ಯೋಚಿಸುವ ಭೀಮ, “ಈ ಮನೆಗೆ ಸೊಸೆಯಾಗಿ ಬಂದ ನೀನು ಹೀಗೆ ಹೇಳಬಹುದೇ?” ಎಂದು ದ್ರೌಪದಿ ಕುಂತಿಗೆ ಹಾಕುವ ಪ್ರಶ್ನೆ , “ನಿನಗೆ ನನ್ನ ಮೇಲೆ ಸಿಕ್ಕಾಪಟ್ಟೆ ಹೊಟ್ಟೆಕಿಚ್ಚಿದೆ, ಆದರೆ ನನ್ನ ಮಕ್ಕಳ ಮೇಲೆ ಅಷ್ಟೇ ಪ್ರೀತಿ ಇದೆ” ಎಂದು ಕುಂತಿಗೆ ಮಾದ್ರಿ ಹೇಳುವ ಮಾತು, “ಹಾಗಾದರೆ, ಕುಂತಿ ಕೌರವ ವಂಶದ ಮಗನಲ್ಲವೇ”? ಎಂದು ಕೇಳುವ ಯಾರೋ ಸೈನಿಕೆ, “ದುಃಶಾಸನನಿಂದ ತನ್ನ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವುದಕ್ಕೆ, ಹೊರಗಿನ ಪಾಂಡವರನ್ನು ವೈರಿಗಳನ್ನಾಗಿ ಮಾಡಿಕೊಳ್ಳಬೇಕಾಯ್ತು” ಎನ್ನುವ ದುರ್ಯೋಧನ, “ನೀನು ನಿನ್ನ ಮನಸ್ಸಿನಲ್ಲಿ ನನ್ನ ಬಗ್ಗೆ ಏನು ಭಾವವಿದೆ ಎಂದು ಹೇಳಲಿಲ್ಲ ! ಇಲ್ಲ, ನೀನು ಹೇಳದೇ ಎಲ್ಲವನ್ನೂ ಹೇಳಿದ್ದೀಯ” ಎಂದು ಕುಂತಿಗೆ ಹೇಳುವ ಕರ್ಣ, “ಅಭಿಮನ್ಯು ಸತ್ತಾಗ, ಸುಭದ್ರೆಯನ್ನು ಸಂತಯಿಸಲು ಅರ್ಜುನನಿದ್ದ. ಇವತ್ತು ನನ್ನ ಐದೂ ಮಕ್ಕಳು ಸತ್ತಾಗ ನನ್ನನ್ನು ಸಂತಯಿಸಲು ಒಬ್ಬರೂ ಇಲ್ಲ” ಎಂದು ವ್ಯಥೆ ಪಡುವ ದ್ರೌಪದಿ , “ಕುರುಡಗಂಡನಿಗೆ ನನ್ನನ್ನು ಕಟ್ಟುವುದನ್ನು ವಿರೋಧಿಸಲು ಕಟ್ಟಿಕೊಂಡ ಪಟ್ಟಿ ನನಗೆ ದೇವತೆ ಪಟ್ಟ ಕೊಡಿಸಿಬಿಟ್ಟಿತು” ಎಂದೆನ್ನುವ ಗಾಂಧಾರಿ – ಇಂತಹ ಮಾತುಗಳೆಲ್ಲ ಓದುಗನ ಮನದಲ್ಲಿ ಅಚ್ಚಾಗಿ ನಿಲ್ಲುವುದಲ್ಲದೆ, ಇದು ಹೀಗೇ ನಡೆದಿದ್ದಿರಬಹುದಲ್ಲವೇ? ಅಲ್ಲ! ಇದು ಹೀಗೇ ನಡೆದಿರಬೇಕು! ಎನ್ನುವ ವಿಚಾರಕ್ಕೆ ಹಚ್ಚುತ್ತೆ.

ಪರ್ವ ಓದುವಾಗ, ಅದರ ಜೊತೆಗೇ ಭೈರಪ್ಪನವರ “ನಾನೇಕೆ ಬರೆಯುತ್ತೇನೆ” ಪುಸ್ತಕದ “ಪರ್ವ ಬರೆದದ್ದು” ಎನ್ನುವ ಪ್ರಬಂಧವನ್ನೂ ಓದಿದರೆ, ಈ ಕಾದಂಬರಿಗೆ ಅವರು ಮಾಡಿದ ಓದು ಬರಹ ಸಂಶೋಧನಾ ಕಾರ್ಯ ಎಲ್ಲವೂ ಸ್ಪಷ್ಟವಾಗಿ ತಿಳಿಯುತ್ತದೆ. ಆ ಕಾಲದ ಜನರ ಊಟ ತಿಂಡಿ ಉಪಚಾರ, ನಂಬಿಕೆಗಳು ಇತ್ಯಾದಿಗಳನ್ನು ಕಾದಂಬರಿ ನಿರೂಪಿಸುವುವರಲ್ಲಿ ಈ ಸಂಶೋಧನೆಯ ಪಾತ್ರ ದೊಡ್ಡದಿದೆ.

ಇಡೀ ಮಹಾಭಾರತದ ಕಥೆ ಪಾತ್ರಗಳ ನೆನಪು ಸ್ವಗತಗ ಎನ್ನುವಂತಹ ನಿರೂಪಣೆಗಳಿಂದಲೇ ಹೆಚ್ಚಾಗಿ ಬರೆಯಲಾಗಿದೆ. ಇದರಲ್ಲಿ ನಮಗೆ ಸುಲಭವಾಗಿ ಮುಖ್ಯ ಪಾತ್ರಗಳೆನ್ನಿಸುವ ಕುಂತಿ , ಕರ್ಣ, ದ್ರೌಪದಿ , ಅರ್ಜುನ, ಭೀಮ , ಭೀಷ್ಮ,  ದ್ರೋಣ, ದುರ್ಯೋಧನ ಇಂತಹವರೂ, ಹಾಗೇ ಅಷ್ಟೇನೂ ಮುಖ್ಯವಲ್ಲ ಎಂದು ನಾವೆಂದುಕೊಳ್ಳಬಹುದಾದ ವೇದ ವ್ಯಾಸ, ಶಲ್ಯ ಮಹಾರಾಜ, ಯುಯುಧಾನ ಸಾತ್ಯಕಿ , ಗಾಂಧಾರಿ ಮೊದಲಾದವರೂ ಈ ನಿರೂಪಣಾ ತಂತ್ರದಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ.

ಯುದ್ಧ ಇನ್ನೇನು ಒಂದೆರಡು ತಿಂಗಳಲ್ಲಿ ಮೊದಲಾಗಬೇಕು ಅನ್ನುವಾಗ ಶುರುವಾಗುವ ಕಥೆ ಹಿಂದೆ ಮುಂದೆ ಎಲ್ಲ ಕಡೆ ಸಾಗಿ, ಯುದ್ಧ ಕಳೆದು ಒಂದೆರಡು ವಾರದಲ್ಲಿ ಯುಧಿಷ್ಟಿರ ಆಸ್ಥಾನದಲ್ಲಿ ತಾವು ಮಾಡಿದ ಯುದ್ಧದಿಂದಾದ ಹಾನೆಯನ್ನು ನೋಡುವಲ್ಲಿಗೆ ಮುಗಿಯುತ್ತೆ. ಕೃಷ್ಣನ ಪಾತ್ರವೊಂದು ಮಾತ್ರ ಪೂರ್ತಿ ಬೇರೆಯವರ ಕಣ್ಣಿಂದಲೇ, ಅಂದರೆ ಅವನನ್ನು ನೆಚ್ಚಿದ ದ್ರೌಪದಿ, ಜೀವದ ಗೆಳೆಯ ಅರ್ಜುನ, ಬಾಲ್ಯದ ಗೆಳೆಯ ಸಾತ್ಯಕಿ, ಹೀಗೆ ಬೇರೆಯವರ ಕಣ್ಣಿಂದಲೇ ಚಿತ್ರಿತವಾಗಿದೆ. ಅದೇ ರೀತಿ ಮತ್ತೊಂದು ಮುಖ್ಯಪಾತ್ರವಾದ ಯುಧಿಷ್ಟಿರ ಕೂಡ ಬೇರೆಯವರ ಹಿನ್ನೋಟದಲ್ಲೇ ಕಾಣಿಸಿಕೊಳ್ಳುತ್ತಾನೆ.

ನನ್ನ ಮಟ್ಟಿಗೆ ಹೇಳುವುದಾದರೆ  ಕಾದಂಬರಿ  ಅತೀ ಹೆಚ್ಚಿನ ಯಶಸ್ಸು ಗಳಿಸುವುದು ಯುದ್ಧದ ವಿವರಗಳಲ್ಲಿ, ಮತ್ತು ಅದು ಎಷ್ಟು ನಿರರ್ಥಕ ಎಂದು ತೋರಿಸುವುದರಲ್ಲಿ . ಏನೂ ಸಂಬಂಧವಿಲ್ಲದವರೂ ಹೇಗೆ ಯುದ್ಧದ ಪಾಲಾಗಿ, ಮನೆ ಮಾರುಗಳು ಮುರಿಯುವುದರಲ್ಲಿ. ಮತ್ತೆ ಮನುಷ್ಯ ಸಂಬಂಧಗಳು ಎಷ್ಟು ಸಂಕೀರ್ಣ ಎಂದು ತೋರಿಸುವುದರಲ್ಲಿ. ಇದೆಲ್ಲಾ ಸೇರಿ, ಪರ್ವ, ನನ್ನ “ಕನ್ನಡ ಟಾಪ್ ಟೆನ್” ಪುಸ್ತಕಗಳ ಪಟ್ಟಿಯಲ್ಲಿ, ಯಾವಾಗಲೂ ಮೊದಲಿಗೇ ನಿಲ್ಲುತ್ತದೆ.

-ನೀಲಾಂಜನ

(ಭೈರಪ್ಪ ಅವರ ಹೊಸ ಕಾದಂಬರಿ ಯಾನ, ಬಿಡುಗಡೆಯಾಗಿ ಬಿಸಿದೋಸೆಗಳಂತೆ ಅಂಗಡಿಗಳಿಂದ ಖಾಲಿಯಾಗುತ್ತಿದೆ ಎಂಬ ಸುದ್ದಿಯ ಹಿಂದೆಯೇ,  ಫೇಸ್ ಬುಕ್ ನಲ್ಲಿ ಗೆಳೆಯರು ಹಾಕಿದ್ದ ಒಂದು ಪ್ರಶ್ನೆಗೆ ನಾನು ಬರೆದ ಟಿಪ್ಪಣಿ ಇದು. ಟಿಪ್ಪಣಿ ಸ್ವಲ್ಪ ದೊಡ್ಡದೇ ಆಗಿದ್ದರಿಂದ ಇಲ್ಲೂ ಹಾಕುತ್ತಿದ್ದೇನೆ. ಇದನ್ನ ವಿಮರ್ಶೆ ಎನ್ನಲಾರೆ – ಪರಿಚಯ ಎಂದು ಹೇಳಬಹುದು ಅಷ್ಟೇ. ಓದದಿದ್ದವರಿಗೆ ಕುತೂಹಲ ಮೂಡಿಸಲು ಬೇಕಾದಷ್ಟು ವಿವರಗಳನ್ನು ಮಾತ್ರ ಬರೆದಿದ್ದೇನೆ! )

Hits

  • 751,997

My book “Hamsanada” for iPad, iPhone or iPod

A Collection of  Samskrta Subhashitas, translated to Kannada

http://www.saarangamedia.com/product/hamsanada

My Book, on Google Play!

My Book Hamsanada, on Google Play

My Book Hamsanada, on Google Play

Enter your email address to follow this blog and receive notifications of new posts by email.

Join 9,609 other subscribers

ಅವಧಿಯಲ್ಲಿ ಹೀಗಂದರು:

"ಅಲ್ಲಿದೆ ನಮ್ಮ ಮನೆ…ಇಲ್ಲಿ ಬಂದೆ ಸುಮ್ಮನೆ… ಎಂಬ ಘೋಷ ವಾಕ್ಯದೊಂದಿಗೆ ಬ್ಲಾಗ್ ಮಂಡಲದಲ್ಲಿ ಕಾಣಿಸಿಕೊಂಡವರು ನೀಲಾಂಜನ. ಅಲ್ಲಿದೆ ನಮ್ಮ ಮನೆ ಕನ್ನಡದ ಪರಿಮಳವನ್ನು ಇಂಗ್ಲಿಷ್ ನಲ್ಲಿ ಹರಡುತ್ತಾ ಇದೆ. ಕನ್ನಡದ ವಚನಗಳು, ಸಂಸ್ಕೃತ ಸುಭಾಷಿತಗಳು ಜೊತೆಯಲ್ಲೇ ಸಂಗೀತ ಹೀಗೆ ಹಲವು ಲೋಕವನ್ನು ಈ ಬ್ಲಾಗ್ ಪರಿಚಯಿಸಿದೆ." ಅವಧಿ, ಮೇ ೧೫, ೨೦೦೮

ಇತ್ತೀಚಿನ ಟಿಪ್ಪಣಿಗಳು

Manjugouda police pa… ರಲ್ಲಿ Ugra Narasimha of Vijayan…
neelanjana ರಲ್ಲಿ Samasya Poornam – Part…
neelanjana ರಲ್ಲಿ Samasya Poornam – Part…
charukesha ರಲ್ಲಿ Where in the World is Mount…
ನೇಸರ್ ರಲ್ಲಿ Samasya Poornam – Part…
ಜುಲೈ 2014
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123456
78910111213
14151617181920
21222324252627
28293031  

ಬಗೆ ಬಗೆ ಬರಹ

ಸಂಗ್ರಹಗಳು