ಇವತ್ತು ನರಕಚತುರ್ದಶಿ. ಇವತ್ತಿಗೆ, ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದೀಕ್ಷಿತರು ದೇಹತ್ಯಾಗ ಮಾಡಿ ೧೭೨ ವರ್ಷಗಳಾದುವು.

ಮುತ್ತುಸ್ವಾಮಿ ದೀಕ್ಷಿತರು - ಕಲಾವಿದ ಎಸ್.ರಾಜಂ ಅವರ ಕಲ್ಪನೆಯಲ್ಲಿ

ತಮ್ಮ ಅರವತ್ತನೇ ವಯಸ್ಸಿನಲ್ಲಿ ದೀಪಾವಳಿ ಹಬ್ಬದಂದು, ಮುತ್ತುಸ್ವಾಮಿ ದೀಕ್ಷಿತರು ತಮ್ಮ ಶಿಷ್ಯರಿಗೆ, ತಾವೇ ಗಮಕಕ್ರಿಯಾ ರಾಗದಲ್ಲಿ ರಚಿಸಿದ ಮೀನಾಕ್ಷಿ ಮೇ ಮುದಂ ದೇಹಿ ಎಂಬ ಕೃತಿಯನ್ನು ಹಾಡಹೇಳಿದರಂತೆ. ಅನುಪಲ್ಲವಿಯ ಮೀನಲೋಚನಿ-ಪಾಶಮೋಚನಿ ಎಂಬ ಸಾಲನ್ನು ಹಾಡುವಾಗ, ಅದನ್ನೇ ಮರಳಿ ಮರಳಿ ಹಾಡುವಂತೆ ಹೇಳಿ ಆ ಸಮಯದಲ್ಲೇ, ಅವರ ಜೀವ ದೇಹವನ್ನು ಬಿಟ್ಟು ಹೋಯಿತೆಂದು ಐತಿಹ್ಯ.

ದೀಕ್ಷಿತರು ಕರ್ನಾಟಕ ಸಂಗೀತ ಕಂಡ ಅನನ್ಯ ವಾಗ್ಗೇಯಕಾರ. ಅವರ ಶೈಲಿಯನ್ನು ಎಳನೀರಿಗೆ ಹೋಲಿಸಲಾಗುತ್ತೆ. ಹೇಗೆ ಎಳನೀರಿನ ಸವಿಯನ್ನು ಸವಿಯಬೇಕಾದರೆ ಮೊದಲಿಗೆ, ಗಟ್ಟಿಯಾದ ಕರಟವನ್ನು ಛೇದಿಸಬೇಕಾಗುತ್ತೋ, ಹಾಗೆ, ದೀಕ್ಷಿತರ ರಚನೆಗಳು ಮೇಲ್ತೋರಿಕೆಗೆ ಸ್ವಲ್ಪ ಗಡುಸು. ಒಳಹೊಕ್ಕರೆ ಬಹಳ ಸವಿ.

ಇವತ್ತು ಮುತ್ತುಸ್ವಾಮಿ ದೀಕ್ಷಿತರನ್ನು, ನಮ್ಮ ಕಾಲದ ಒಬ್ಬ ಹಿರಿಯ ವಾಗ್ಗೇಯಕಾರರಾದ ಡಾ.ಬಾಲಮುರಳಿಕೃಷ್ಣ ಅವರ ರಚನೆಯೊಂದರಿಂದ ನಾನು ನೆನೆಯುತ್ತೇನೆ. ದೀಕ್ಷಿತರ ಶೈಲಿಯಲ್ಲೇ, ಇರುವ ಈ ಸುಚರಿತ್ರ ರಾಗದ ರಚನೆ ಅವರ ನೆನಪಿಗೆ ಸಾರ್ಥಕ ಎಂದು ನನ್ನೆಣಿಕೆ.

ಈ ಕೃತಿಯ ಸಾಹಿತ್ಯ ಇಲ್ಲಿದೆ:

||ಪಲ್ಲವಿ||

ಚಿಂತಯಾಮಿ ಸಂತತಂ ಶ್ರೀ ಮುತ್ತುಸ್ವಾಮಿ ದೀಕ್ಷಿತಂ

||ಅನುಪಲ್ಲವಿ||

ಅಂತಕಾರಿ ಸುತ ಮಂತ್ರೋಪಾಸನ ತತ್ಪರಂ
ಆನಂದಾಮೃತವರ್ಷಣ ಕಾರಕಂ ವರಂ
ಅಪಾರರಾಗ ಲಯಾಭಿಜ್ಞಂ ರಾಮಸ್ವಾಮಿ ಸುಪುತ್ರಂ
ಪರಮ ಪವಿತ್ರಂ ಸುಚರಿತ್ರಂ

||ಚರಣ||

ಅಪೂರ್ವ ಪಂಚಲಿಂಗ ನವಾವರಣಾದಿ ದೈವಪರ ಕೃತಿಕರ್ತಾರಂ ಮುರಳೀರವಹಿತಂ
ನಿಪುಣಂ ಗಾನನಿಪುಣಂ ದೇಶೀಯಗಾನ ನಿಪುಣಂ ಮಾರ್ಗದೇಶೀಯಗಾನ ನಿಪುಣಂ

ಮುತ್ತುಸ್ವಾಮಿದೀಕ್ಷಿತರು ತಮ್ಮ ಕೃತಿಗಳಲ್ಲಿ ವಿಶೇಷವಾಗಿ ಉಪಯೋಗಿಸಿರುವ ಶ್ರೋತೋವಹಯತಿ (ಪದಕ್ಕೆ ಪದ ಜೋಡಿಸಿ ಅರ್ಥ ವಿಸ್ತಾರ ಮಾಡುವುದು – ಮೇಲಿನ ಕೃತಿಯಲ್ಲಿ ಕೊನೆಯ ಸಾಲನ್ನು ಗಮನಿಸಿ) ಮತ್ತು ರಾಗದ ಹೆಸರನ್ನು ಚಮತ್ಕಾರಿಕವಾಗಿ ಹಾಡಿನೊಳಗೆ ಸೇರಿಸುವುದು (ಪರಮಪವಿತ್ರಂ ಸುಚರಿತ್ರಂ ಎಂಬ ಸಾಲನ್ನು ಗಮನಿಸಿ) – ಈ ಎರಡನ್ನೂ ಬಾಲಮುರಳಿ ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಈ ರಚನೆಯನ್ನು ನೀವು ಇಲ್ಲಿ ಕೇಳಬಹುದು.

ಸೂಸರ್ಲ ಶಿವರಾಮ್ ಅವರ ಕಂಠದಲ್ಲಿ – ಚಿಂತಯಾಮಿ ಸಂತತಂ ಶ್ರೀ ಮುತ್ತುಸ್ವಾಮಿ ದೀಕ್ಷಿತಂ – ಸುಚರಿತ್ರ ರಾಗ

As a tribute to Muttuswamy Dikshita, here is a comparitively rare kriti of Muttuswamy Dikshita in Jyoti rAga, sung by one of my friends:

paranjyOtishmatI pArvatI – sung by H K Shyam Kumar

-ನೀಲಾಂಜನ